ಪದ್ಯ ೪೭: ಉಪಪ್ಲಾವ್ಯ ನಗರವು ಹೇಗೆ ಅಲಂಕೃತಗೊಂಡಿತ್ತು?

ದೇವ ನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾವಿಳಾಸದೊಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿಕೇರಿಗಳು (ವಿರಾಟ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಕುದುರೆ ಆನೆಯ ಲಾಯಗಳ ಸಿದ್ಧತೆಯಿಂದ ಸೈನ್ಯವು ಮುಂದುವರಿದು ಬಂದುದನ್ನು ಖಚಿತಪಡಿಸಿಕೊಂಡು ದೂತರು, ಶ್ರೀಕೃಷ್ಣನು ಇಗೋ ಬಂದನು ಎಂದು ಹೇಳಿದರು. ಉಪಪ್ಲಾವ್ಯ ನಗರಿಯನ್ನು ಉತ್ತಮವಾಗಿ ಅಲಂಕರಿಸಿದ್ದರು, ಬೀದಿಗಳಲ್ಲಿ ಪುಷ್ಪಾಲಂಕಾರ, ನವರತ್ನಗಲ ಕುಚ್ಚುಗಳು, ಅಲಂಕೃತವಾದ ಛಾವಣಿಯ ಮುಂಭಾಗಗಳು, ಉಪಪ್ಲಾವ್ಯದ ಬೀದಿ ಬೀದಿಗಳಲ್ಲೂ ಕಂಡು ಬಂದವು.

ಅರ್ಥ:
ದೇವ: ಭಗವಂತ; ಬಹನೆಂದು: ಬರುವೆಯೆಂದು; ಬಂದು: ಆಗಮಿಸು; ದಾವಣಿ: ಗುಂಪು, ಸಮೂಹ; ಹವಣ: ಸಿದ್ಧತೆ, ಪ್ರಯತ್ನ; ಅರಿ: ತಿಳಿದು; ಬಳಿಕ: ನಂತರ; ವಿಲಾಸ: ಅಂದ, ಸೊಬಗು; ನಗರ: ಪಟ್ಟಣ; ಹೂವಲಿ: ರಂಗವಲ್ಲಿಯಂತೆ ರಚಿಸಿದ ಹೂವುಗಳ ಅಲಂಕಾರ; ವೀಧಿ: ಬೀದಿ, ರಸ್ತೆ; ನವ: ಹೊಸ; ರತ್ನಾವಳಿ: ವಜ್ರ, ಮಾಣಿಕ್ಯಗಳ ಗುಂಪು; ಸೂಸಕ: ಒಂದು ಬಗೆಯ ಆಭರಣ, ಬೈತಲೆ ಬೊಟ್ಟು; ಭದ್ರ: ಮಂಗಳಕರವಾದ, ಶುಭಕರವಾದ; ಲೋವೆ: ಛಾವಣಿಯ ಚೌಕಟ್ಟು; ಲಂಬಳ: ತೂಗಾಡುವ; ಎಸೆ: ತೋರು; ಕೇರಿ: ಬೀದಿ;

ಪದವಿಂಗಡಣೆ:
ದೇವ+ ನೀ +ಬಹನೆಂದು+ ಬಂದರು
ದಾವಣಿಯ+ ಹವಣರಿದು+ ಬಳಿಕ+ ಮ
ಹಾ+ವಿಳಾಸದೊಳ್+ ಒಪ್ಪವಿಟ್ಟರು +ತಮ್ಮ +ನಗರಿಗಳ
ಹೂವಲಿಯ +ವೀಧಿಗಳ+ ನವ +ರ
ತ್ನಾವಳಿಯ +ಸೂಸಕದ +ಭದ್ರದ
ಲೋವೆಗಳ +ಲಂಬಳದಲ್+ಎಸೆದವು+ ಕೇರಿ+ಕೇರಿಗಳು

ಅಚ್ಚರಿ:
(೧) ನಗರವನ್ನು ಸಿಂಗರಿಸಿದ ಪರಿ – ಹೂವಲಿಯ ವೀಧಿಗಳ ನವ ರತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು

ಪದ್ಯ ೨೯: ಧರ್ಮಜನೇಕೆ ದುಃಖಿಸಿದ?

ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ
ತುಳಿಯ ಮೇಲ್ವಾಸಿನಲಿ ಪವಡಿಸುವೀಕೆಯಿಂದೀಗ
ಹಳುವದಲಿ ಘೋರಾಂಧಕಾರದ
ಮಳೆಯಲೊಬ್ಬಳೆ ನಡೆದು ನೆನೆದೀ
ಕಲುನೆಲದೊಳೊರಗಿದಳೆನುತ ಮರುಗಿದನು ಧರಣೀಶ (ಅರಣ್ಯ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಉಪ್ಪರಿಗೆಯ ಮೇಲುಮನೆಯಲ್ಲಿ ನವರತ್ನಗಳ ಮೆಲು ಬೆಳಕಿನಲ್ಲಿ ಹಂಸತೂಲಿಕಾ ಹಾಸಿಗೆಯಲ್ಲಿ ಮಲ್ಗುತ್ತಿದ್ದ ಇವಳು ಇಂದು ಈಗ ಕಾಡಿನ ನಡುವೆ ಭಯಂಕರವದ ಕತ್ತಲಿನಲ್ಲಿ ಮಳೆಯಲ್ಲಿ ನೆನೆದು ಕಲ್ಲು ನೆಲದಲ್ಲಿ ಬಿದ್ದು ಬಿಟ್ಟಿದ್ದಳು ಎಂದು ಧರ್ಮಜನು ದ್ರೌಪದಿಗೊದಗಿದ ದುರವಸ್ಥೆಯನ್ನು ಕಂಡು ಮರುಗಿದನು.

ಅರ್ಥ:
ನೆಲೆ: ಆಶ್ರಯ, ಆಧಾರ; ರತ್ನಾವಳಿ: ರತ್ನಗಳ ಸಾಲು; ನುಣ್ಪು: ನಯ, ಮೃದು; ಬೆಳಕು: ಕಾಂತಿ, ಪ್ರಕಾಶ; ಹಂಸ: ಮರಾಲ; ತುಳಿ: ಮೆಟ್ಟುವಿಕೆ, ತುಳಿತ; ಮೇಲ್ವಾಸು: ಹಾಸಿಗೆ; ಪವಡಿಸು: ಮಲಗು; ಹಳುವು: ಕಾಡು; ಘೋರ: ಭಯಂಕರ; ಅಂಧಕಾರ: ಕತ್ತಲು; ಮಳೆ: ವರ್ಷ; ನಡೆ: ಚಲಿಸು; ನೆನೆ: ಒದ್ದೆ; ಕಲುನೆಲ: ಕಲ್ಲುಗಳಿಂದ ಕೂಡಿದ ನೆಲ; ಒರಗು: ಮಲಗು; ಮರುಗು: ತಳಮಳ, ಸಂಕಟ; ಧರಣೀಶ: ರಾಜ; ಧರಣಿ: ಭೂಮಿ;

ಪದವಿಂಗಡಣೆ:
ನೆಲೆವನೆಯ +ಮಾಡದಲಿ +ರತ್ನಾ
ವಳಿಯ +ನುಣ್ಬೆಳಗಿನಲಿ +ಹಂಸೆಯ
ತುಳಿಯ +ಮೇಲ್ವಾಸಿನಲಿ+ ಪವಡಿಸುವೀಕೆ+ಇಂದೀಗ
ಹಳುವದಲಿ+ ಘೋರಾಂಧಕಾರದ
ಮಳೆಯಲ್+ಒಬ್ಬಳೆ +ನಡೆದು +ನೆನೆದೀ
ಕಲುನೆಲದೊಳ್+ಒರಗಿದಳೆನುತ +ಮರುಗಿದನು+ ಧರಣೀಶ

ಅಚ್ಚರಿ:
(೧) ದ್ರೌಪದಿಯು ಮಲಗುತ್ತಿದ್ದ ಸ್ಥಳದ ವಿವರ – ನೆಲೆವನೆಯ ಮಾಡದಲಿ ರತ್ನಾ
ವಳಿಯ ನುಣ್ಬೆಳಗಿನಲಿ ಹಂಸೆಯ ತುಳಿಯ ಮೇಲ್ವಾಸಿನಲಿ ಪವಡಿಸುವ್

ಪದ್ಯ ೬: ಯಾವ ಗ್ರಹಗಳು ಕರ್ಣನ ಜೊತೆ ನಿಂತರು?

ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ಚರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೬ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರನೇ, ಹಲವಾರು ಬಗೆಯ ರತ್ನಗಳು, ಶ್ರೇಷ್ಠವಾದ ಸಂಪತ್ತು, ಅರ್ಜುನನ ಕಡೆ ಸೇರಿದರೆ, ಬೆಳ್ಳಿಯೇ ಮೊದಲಾದ ಲೋಹಗಳು ಕರ್ಣನ ಕಡೆ ಸೇರಿದರು. ರವಿ, ಶನಿ, ರಾಹು, ಬುಧ, ಶುಕ್ರಗಳು ಕರ್ಣನ ಬಳಿ ನಿಂತರೆ, ಉಳಿದ ಗ್ರಹಗಳು ಅರ್ಜನನ ಜೊತೆ ನಿಂತರು ಎಂದು ಸಂಜಯನು ತಿಳಿಸಿದನು.

ಅರ್ಥ:
ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ, ವಜ್ರ, ಮಾಣಿಕ್ಯ; ಆವಳಿ: ಸಾಲು; ಮಹಾ: ಶ್ರೇಷ್ಠ; ನಿಧಿ: ಸಂಪತ್ತು; ದೆಸೆ: ಕಡೆ, ದಿಕ್ಕು; ರಜತ: ಬೆಳ್ಳಿ; ಆದಿ: ಮುಂತಾದ; ಲೋಹ: ಖನಿಜ; ಪ್ರವರ: ಪ್ರಧಾನ; ಧಾತು: ಮೂಲವಸ್ತು; ಥಟ್ಟು: ಪಕ್ಕ, ಕಡೆ; ರವಿ: ಭಾನು; ಶನೈಶ್ಚರ: ಶನಿಗ್ರಹ; ಭಾರ್ಗವ: ಶುಕ್ರ; ಮಿಕ್ಕ: ಉಳಿದ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿವಿಧ +ರತ್ನಾವಳಿ +ಮಹಾ+ನಿಧಿ
ಅವರ+ ದೆಸೆ +ರಜತ+ಆದಿ+ ಲೋಹ
ಪ್ರವರ+ ಧಾತುಗಳ್+ಇತ್ತಲ್+ಅತ್ತಲು +ನಿಮ್ಮ +ಥಟ್ಟಿನಲಿ
ರವಿ +ಶನೈಶ್ಚರ+ ರಾಹು +ಬುಧ +ಭಾ
ರ್ಗವರು +ಕರ್ಣನ +ದೆಸೆಯಲ್+ಆ+ ಮಿ
ಕ್ಕವರು +ಪಾರ್ಥನ+ ದೆಸೆಯಲಾಯಿತು+ ರಾಯ +ಕೇಳೆಂದ

ಅಚ್ಚರಿ:
(೧) ಗ್ರಹಗಳ ಹೆಸರಿಸಿದ ೪ನೇ ಸಾಲು