ಪದ್ಯ ೨೬: ಬಲರಾಮನ ನಡೆಗೆ ಪಾಂಡವರು ಹೇಗೆ ಎಚ್ಚೆತ್ತರು?

ಬಿಲ್ಲ ಮಿಡಿದನು ಪಾರ್ಥ ಭಾರತ
ಮಲ್ಲ ಕೊಂಡನು ಗದೆಯ ನೃಪ ನಿಂ
ದಲ್ಲಿ ಬೆರಗಾದನು ರಣೋತ್ಸವವಾಯ್ತು ಯಮಳರಿಗೆ
ತಲ್ಲಣಿಸಿತುಳಿದರಸುಮಕ್ಕಳು
ಚಲ್ಲಿತಾ ಸುಭಟೌಘ ವಿಜಯದ
ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ (ಗದಾ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನು ಗಾಂಡೀವವನ್ನು ಹಿಡಿದು ಹೆದೆಯನ್ನು ಮಿಡಿದನು. ಭೀಮನು ಗದೆಯನ್ನು ತೆಗೆದುಕೊಂಡನು. ಧರ್ಮಜನು ನಿಂತಲ್ಲಿ ನಿಂತು ಬೆರಗಾದನು. ನಕುಲ ಸಹದೇವರೂ ಯುದ್ಧಕ್ಕೆ ಸಿದ್ಧರಾದರು ಉಳಿದ ರಾಜರು ತಳಮಳಿಸಿದರು. ಸುಭಟರು ದೂರಕ್ಕೆ ಹೋದರು. ಗೆಲುವಿನ ಉತ್ಸಾಹವು ಹೆದರಿಕೆಯಲ್ಲಿ ಭಂಗವಾಯಿತು.

ಅರ್ಥ:
ಬಿಲ್ಲು: ಚಾಪ; ಮಿಡಿ: ಬಿಲ್ಲಿನ ಹೆದೆಯನ್ನು ಮೀಟು; ಮಲ್ಲ: ಬಲಶಾಲಿ, ಗಟ್ಟಿಗ; ಕೊಂಡು: ತೆಗೆದುಕೋ; ಗದೆ: ಮುದ್ಗರ; ನೃಪ: ರಾಜ; ಬೆರಗಾಗು: ಆಶ್ಚರ್ಯಪಡು; ರಣ: ಯುದ್ಧ; ಉತ್ಸವ: ಸಂಭ್ರಮ; ಯಮಳರು: ಅವಳಿ ಮಕ್ಕಳು; ತಲ್ಲಣ: ಅಂಜಿಕೆ, ಭಯ; ಉಳಿದ: ಮಿಕ್ಕ; ಅರಸು: ರಾಜ; ಮಕ್ಕಳು: ಪುತ್ರರು; ಚಲ್ಲು: ಹರಡು; ಸುಭಟ: ಪರಾಕ್ರಮಿ; ಔಘ: ಗುಂಪು, ಸಮೂಹ; ವಿಜಯ: ಗೆಲುವು; ಭುಲ್ಲವಣೆ: ಹರ್ಷ; ಪಲ್ಲಟ: ಬದಲಾವಣೆ, ಮಾರ್ಪಾಟು; ಖೇಡ: ಹೆದರಿದವನು, ಭಯಗ್ರಸ್ತ;

ಪದವಿಂಗಡಣೆ:
ಬಿಲ್ಲ +ಮಿಡಿದನು +ಪಾರ್ಥ +ಭಾರತ
ಮಲ್ಲ+ ಕೊಂಡನು +ಗದೆಯ +ನೃಪ +ನಿಂ
ದಲ್ಲಿ +ಬೆರಗಾದನು +ರಣೋತ್ಸವವಾಯ್ತು +ಯಮಳರಿಗೆ
ತಲ್ಲಣಿಸಿತ್+ಉಳಿದ್+ಅರಸು+ಮಕ್ಕಳು
ಚಲ್ಲಿತಾ+ ಸುಭಟ್+ಔಘ +ವಿಜಯದ
ಭುಲ್ಲವಣೆ+ ಪಲ್ಲಟಿಸಿತವರಿಗೆ +ಖೇಡತನದೊಡನೆ

ಅಚ್ಚರಿ:
(೧) ಹೆದರಿಕೆಯು ಆವರಿಸಿತು ಎಂದು ಹೇಳುವ ಪರಿ – ವಿಜಯದ ಭುಲ್ಲವಣೆ ಪಲ್ಲಟಿಸಿತವರಿಗೆ ಖೇಡತನದೊಡನೆ
(೨) ಭೀಮನನ್ನು ಭಾರತ ಮಲ್ಲ ಎಂದು ಕರೆದಿರುವುದು
(೩) ಬಿಲ್ಲ, ಮಲ್ಲ – ಪ್ರಾಸ ಪದ

ಪದ್ಯ ೨೬: ಸಂಜಯನು ಯಾವ ಪ್ರಶ್ನೆಯನ್ನು ದುರ್ಯೋಧನನಿಗೆ ಕೇಳಿದನು?

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕುಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ (ಗದಾ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಕೌರವೇಶ್ವರ, ನಿನ್ನ ತಾಯಿ ಗಾಂಧಾರಿಯು ನನ್ನನ್ನು ಕಂಡು, ಎಲೈ ಸಂಜಯ ದುರ್ಯೋಧನನು ಏನು ಮಾಡಿದ? ಕುಂತಿಯ ಮಕ್ಕಳಲ್ಲಿ ಯಾರು ಅಳಿದರು, ಯಾರು ಉಳಿದರು? ನಮ್ಮ ಸೇನೆಯಲ್ಲಿ ಯಾರು ಉಳಿದಿದ್ದಾರೆ? ಶಕುನಿಯು ಯುದ್ಧದಲ್ಲಿ ಏನು ಮಾಡಿದೆ ಎಂದು ಕೇಳಿದರೆ ಯುದ್ಧದ ವಾರ್ತೆಯನ್ನು ನಾನು ಏನೆಂದು ಹೇಳಲಿ ಎಂದು ಕೌರವನನ್ನು ಪ್ರಶ್ನಿಸಿದ.

ಅರ್ಥ:
ಸೂನು: ಮಕ್ಕಳು; ಅಳಿ: ಸಾವು; ಉಳಿ: ಜೀವಿಸು; ಥಟ್ಟು: ಗುಂಪು; ಹದ: ಸ್ಥಿತಿ; ರಣ: ಯುದ್ಧ; ಬೆಸ:ಅಪ್ಪಣೆ, ಆದೇಶ; ತಾಯಿ: ಮಾತೆ; ಉತ್ಸವ: ಸಂಭ್ರಮ;

ಪದವಿಂಗಡಣೆ:
ಏನು +ಸಂಜಯ +ಕೌರವೇಶ್ವರನ್
ಏನ+ ಮಾಡಿದನಲ್ಲಿ +ಕುಂತೀ
ಸೂನುಗಳೊಳ್+ಆರ್+ಅಳಿದರ್+ಉಳಿದರು +ನಮ್ಮ ಥಟ್ಟಿನಲಿ
ಏನು +ಹದನೈ+ ಶಕುನಿ+ ರಣದೊಳಗ್
ಏನ +ಮಾಡಿದನೆಂದು +ಬೆಸಗೊಳಲ್
ಏನನೆಂಬೆನು +ತಾಯಿ +ಗಾಂಧಾರಿಗೆ +ರಣೋತ್ಸವವ

ಅಚ್ಚರಿ:
(೧) ಅಳಿ, ಉಳಿ – ವಿರುದ್ಧಾರ್ಥಕ ಪದ
(೨) ಏನು, ಏನ ಪದದ ಬಳಕೆ ಎಲ್ಲಾ ಸಾಲುಗಳ ಮೊದಲ ಪದ (೩ ಸಾಲು ಹೊರತುಪಡಿಸಿ)