ಪದ್ಯ ೨೭: ದುರ್ಯೋಧನ ಭೀಮರ ರಣರಸವು ಹೇಗಿತ್ತು?

ಮರಹ ಪಡೆಯರು ಘಾಯ ಖಂಡಿಗೆ
ತೆರಹುಗಾಣರು ಹೊಯ್ಲ ಹೋರಟೆ
ಹೊರಗೆ ಬಿದ್ದವು ಕದ್ದವಿಬ್ಬರ ದೃಷ್ಟಿ ಮನಮನವ
ಇರಿವ ಗದೆ ನೆಗ್ಗಿದವು ರೋಷದಿ
ಜರೆವ ನುಡಿ ತಾಗಿದವು ಹೊಗಳುವ
ಡರಿಯೆನಗ್ಗದ ಭೀಮ ದುರಿಯೋಧನರ ರಣರಸವ (ಗದಾ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಒಂದು ಕ್ಷಣವೂ ಎಚ್ಚರವನ್ನು ಕಳೆದುಕೊಳ್ಳಲಿಲ್ಲ. ಹೊಡೆದು ಗಾಯಗೊಳಿಸಲು ಒಂದು ಕ್ಷಣವೂ ತಪ್ಪಲಿಲ್ಲ. ಗದೆಗದೆಗಳು ತಾಕಿ ಹಿಂದಕ್ಕೆ ಸರಿದವು. ಅವರಿಬ್ಬರ ನೋಟಗಳು ಪರಸ್ಪರರ ಮನಸ್ಸನ್ನು ಕದ್ದು ಕಂಡು ಹಿಡಿದು ಬಿಡುತ್ತಿದ್ದವು. ಗದೆಗಳು ನೆಗ್ಗಿದವು. ಮೂದಲಿಕೆಗಳು ಗಾಯಗೊಳಿಸಿದವು. ಅವರ ಕದನವನ್ನು ಸಾರವನ್ನು ವರ್ಣಿಸಲಾರೆ.

ಅರ್ಥ:
ಮರಹ: ಮರೆತುಹೋಗು, ಜ್ಞಾಪಕವಿಲ್ಲದ ಸ್ಥಿತಿ; ಪಡೆ: ದೊರಕಿಸು; ಘಾಯ: ಪೆಟ್ಟು; ಖಂಡಿಗಳೆ: ಭೇದಿಸು; ತೆರಹು: ಬಿಚ್ಚು, ತೆರೆ; ಕಾಣು: ತೋರು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಹೊರಗೆ: ಆಚೆ; ಬಿದ್ದು: ಬೀಳು, ಜಾರು; ಕದ್ದು: ಕಳ್ಳತನ; ದೃಷ್ಟಿ: ನೋಟ; ಮನ: ಮನಸ್ಸು; ಇರಿ: ಚುಚ್ಚು; ಗದೆ: ಮುದ್ಗರ; ನೆಗ್ಗು:ಕುಗ್ಗು, ಕುಸಿ; ರೋಷ: ಕೋಪ; ಜರೆ: ಬಯ್ಯು; ನುಡಿ: ಮಾತು; ತಾಗು: ಮುಟ್ಟು; ಹೊಗಳು: ಪ್ರಶಂಶಿಸು; ಅಗ್ಗ: ಶ್ರೇಷ್ಠ; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಮರಹ +ಪಡೆಯರು +ಘಾಯ +ಖಂಡಿಗೆ
ತೆರಹುಗಾಣರು +ಹೊಯ್ಲ+ ಹೋರಟೆ
ಹೊರಗೆ +ಬಿದ್ದವು+ ಕದ್ದವಿಬ್ಬರ+ ದೃಷ್ಟಿ+ ಮನಮನವ
ಇರಿವ +ಗದೆ +ನೆಗ್ಗಿದವು+ ರೋಷದಿ
ಜರೆವ+ ನುಡಿ +ತಾಗಿದವು +ಹೊಗಳುವ
ಡರಿಯೆನ್+ಅಗ್ಗದ+ ಭೀಮ +ದುರಿಯೋಧನರ +ರಣ+ರಸವ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಯ್ಲ ಹೋರಟೆ ಹೊರಗೆ

ಪದ್ಯ ೨೨: ಸಂಜಯನು ರಣರಸವನ್ನು ಹೇಗೆ ವಿವರಿಸಿದನು?

ಶಕುನಿ ಬಿದ್ದನು ಜೀಯ ಸಹದೇ
ವಕನ ಕೈಯಲುಳೂಕ ಮಡಿದನು
ನಕುಲನಂಬಿನಲಾ ತ್ರಿಗರ್ತ ಸುಶರ್ಮಕಾದಿಗಳು
ಸಕಲ ಗಜಹಯಸೇನೆ ಸಮಸ
ಪ್ತಕರು ಪಾರ್ಥನ ಶರದಲಮರೀ
ನಿಕರವನು ಸೇರಿದರು ಹೇಳುವುದೇನು ರಣರಸವ (ಗದಾ ಪರ್ವ, ೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನ ಪ್ರಶ್ನೆಯನ್ನು ವಿವರಿಸುತ್ತಾ, ಎಲೈ ರಾಜನೇ ಯುದ್ಧರಂಗದ ಸಾರವನ್ನು ಹೇಳುತ್ತೇನೆ ಕೇಳು. ಸಹದೇವನ ಕೈಯಲ್ಲಿ ಶಕುನಿಯು ಇಹಲೋಕವನ್ನು ತ್ಯಜಿಸಿದನು. ನಕುಲನ ಬಾಣಗಳಿಂದ ಉಲೂಕನು ಮಡಿದನು. ಅರ್ಜುನನ ಬಾಣಗಳಿಂದ ತಮ್ಮ ಸಮಸ್ತ ಸೇನೆಯೊಂದಿಗೆ ತ್ರಿಗರ್ತ ದೇಶಾಧಿಪತಿಗಳಾದ ಸುಶರ್ಮನೇ ಮೊದಲಾದ ಪರಾಕ್ರಮಿಗಳು ಅಪ್ಸರೆಯರ ಗುಂಪನ್ನು ಸೇರಿದರು ಎಂದು ಸಂಜಯನು ವಿವರಿಸಿದನು.

ಅರ್ಥ:
ಬಿದ್ದು: ಬೀಳು, ಕುಸಿ; ಜೀಯ: ಒಡೆಯ; ಮಡಿ: ಸಾಯಿ, ಸಾವನಪ್ಪು; ಅಂಬು: ಬಾಣ; ಆದಿ: ಮುಂತಾದ; ಸಕಲ: ಎಲ್ಲಾ; ಗಜ: ಆನೆ; ಹಯ: ಕುದುರೆ; ಸೇನೆ: ಸೈನ್ಯ; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧ ಮಾಡುವವ; ಶರ: ಬಾಣ; ಅಮರಿ: ಅಪ್ಸರೆ; ನಿಕರ: ಗುಂಪು; ಸೇರು: ಜೊತೆಗೂಡು; ಹೇಳು: ತಿಳಿಸು; ರಣ: ಯುದ್ಧ; ರಸ: ಸಾರ;

ಪದವಿಂಗಡಣೆ:
ಶಕುನಿ +ಬಿದ್ದನು +ಜೀಯ +ಸಹದೇ
ವಕನ +ಕೈಯಲ್+ಉಳೂಕ+ ಮಡಿದನು
ನಕುಲನ್+ಅಂಬಿನಲ್+ಆ ತ್ರಿಗರ್ತ+ ಸುಶರ್ಮಕ+ಆದಿಗಳು
ಸಕಲ+ ಗಜ+ಹಯ+ಸೇನೆ +ಸಮಸ
ಪ್ತಕರು +ಪಾರ್ಥನ +ಶರದಲ್+ಅಮರೀ
ನಿಕರವನು+ ಸೇರಿದರು +ಹೇಳುವುದೇನು+ ರಣರಸವ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಬಿದ್ದನು, ಮಡಿದನು, ಅಮರೀನಿಕರ ಸೇರಿದನು

ಪದ್ಯ ೫: ಧೃಷ್ಟದ್ಯುಮ್ನನು ಸಂಜಯನನ್ನು ಎಲ್ಲಿಗೆ ಕಳಿಸಲು ಹೇಳಿದನು?

ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು (ಗದಾ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಇತ್ತ, ಸಂಜಯನಿಗೆ ಮೃತ್ಯು ಬಂದಿತು. ಧೃಷ್ಟಧ್ಯುಮ್ನನು ಸಾತ್ಯಕಿಯನ್ನು ಕರೆದು ಇವನನ್ನು ಇರಿದು ಕೋಂದರೆ ಸರಿಯಾದೀತು. ಇವನು ಕುರುಡನಿಗೆ ಯುದ್ಧವಾರ್ತೆಯನ್ನು ಹೇಳುತ್ತಾನಂತೆ. ಕೌರವನು ಗೆಲ್ಲಬೇಕೆಂಬುದು ಇವನ ಮನಸ್ಸಿನಲ್ಲಿದೆ. ಈ ದುರಾತ್ಮನನ್ನು ಯಮಲೋಕಕ್ಕೆ ಕಳಿಸು ಎಂದು ಅಪ್ಪಣೆ ಮಾಡಿದನು.

ಅರ್ಥ:
ಮೃತ್ಯು: ಮರಣ; ಕುತ್ತು: ತೊಂದರೆ, ಆಪತ್ತು; ಕೆಡಹು: ನಾಶ; ಕುರುಡ: ಅಂಧ; ರಣ: ಯುದ್ಧ; ರಸ: ಸಾರ; ಬಿತ್ತರಿಸು: ವಿಸ್ತರಿಸು, ತಿಳಿಸು; ಜಯ: ಗೆಲುವು; ದುರಾತ್ಮ: ದುಷ್ಟ; ಕೈವರ್ತಿ: ಕೈಯಿಂದ ಹೊಸೆದು ಮಾಡಿದ ಬತ್ತಿ; ಯಮನಗರಿ: ನರಕ; ಕರೆ: ಆಗಮಿಸು;

ಪದವಿಂಗಡಣೆ:
ಇತ್ತಲೀ+ ಸಂಜಯನ +ತಂದುದು
ಮೃತ್ಯು +ಧೃಷ್ಟದ್ಯುಮ್ನನ್+ಈತನ
ಕುತ್ತಿ +ಕೆಡಹಿದಡ್+ಆಗದೇ+ ಕುರುಡಂಗೆ +ರಣರಸವ
ಬಿತ್ತರಿಸುವನು +ಕೌರವನ +ಜಯ
ದತ್ತಲ್+ಎರಕ +ದುರಾತ್ಮನನು +ಕೈ
ವರ್ತಿಸಾ +ಯಮನಗರಿಗೆಂದನು +ಸಾತ್ಯಕಿಯ +ಕರೆದು

ಅಚ್ಚರಿ:
(೧) ಸಾಯಿಸು ಎಂದು ಹೇಳುವ ಪರಿ – ದುರಾತ್ಮನನು ಕೈವರ್ತಿಸಾ ಯಮನಗರಿಗ್

ಪದ್ಯ ೩೮: ಕರ್ಣನ ಸ್ಥಿತಿ ಹೇಗಾಯಿತು?

ಜೋಡು ಹರಿದುದು ಸೀಸಕದ ದಡಿ
ಬೀಡೆ ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ
ಖೋಡಿ ಖೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ (ಅರಣ್ಯ ಪರ್ವ, ೨೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕರ್ಣನ ಕವಚ ಕಳಚಿತು. ಶಿರಸ್ತ್ರಾಣದ ಅಡಿಯು ಬಿರುಕು ಬಿಟ್ಟಿತು. ನೆತ್ತಿಗೆ ಪೆಟ್ಟು ಬಿದ್ದು ಶಿರಸ್ತ್ರಾಣ ಜಾರಿತು. ಯುದ್ಧದ ಸೊಗಡು ಮನಸ್ಸಿಗೆ ನಾಟಿತು. ಸೋಲಿನ ಸುಳಿವು ದೊರೆಯಿತು. ಕೇಡು ಸನ್ನಿಹಿತವಾಗಿ ಧೈರ್ಯವನ್ನು ದಿಕ್ಕಾಪಾಲಾಗಿ ಓಡಿಸಿತು. ಭಯವು ಹೆಚ್ಚಿತು. ಕರ್ಣನು ಕೈಗುಂದಿದನು.

ಅರ್ಥ:
ಜೋಡು: ಕವಚ; ಹರಿ: ಸೀಳು; ಸೀಸಕ: ಶಿರಸ್ತ್ರಾಣ; ಅಡಿ: ಕೆಳಭಾಗ; ಬೀಡೆ: ಬಿರುಕು; ಬಿರಿ: ಸೀಳು; ತಲೆ: ಶಿರ; ಚಿಪ್ಪು: ತಲೆಯ ಮೇಲುಭಾಗ; ಜರಿ: ಜಾರು; ಮನ: ಮನಸ್ಸು; ಸುರಿ: ಮೇಲಿನಿಂದ ಬೀಳು; ಸೊಗಡು: ಕಂಪು, ವಾಸನೆ; ರಣ: ಯುದ್ಧ; ರಸ: ಸಾರ; ಖೋಡಿ: ದುರುಳತನ, ನೀಚತನ; ಖೊಪ್ಪರಿಸು: ಮೀರು, ಹೆಚ್ಚು; ಧೈರ್ಯ: ಕೆಚ್ಚು, ದಿಟ್ಟತನ; ನೀಡು: ಕೊಡು; ಇರಿ: ಚುಚ್ಚು; ಅಪದೆಸೆ: ಕೆಡುಕು; ವಿಟಾಳ:ಅಪವಿತ್ರತೆ, ಮಾಲಿನ್ಯ; ಖೇಡ: ಹೆದರಿದವನು; ಭುಲ್ಲವಿಸು: ಅತಿಶಯಿಸು, ಅಧಿಕಗೊಳ್ಳು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಜೋಡು +ಹರಿದುದು +ಸೀಸಕದದ್ +ಅಡಿ
ಬೀಡೆ +ಬಿರಿದುದು +ತಲೆಯ +ಚಿಪ್ಪಿನ
ಜೋಡು +ಜರಿದುದು +ಮನಕೆ +ಸುರಿದುದು +ಸೊಗಡು +ರಣರಸದ
ಖೋಡಿ +ಖೊಪ್ಪರಿಸಿದುದು +ಧೈರ್ಯವನ್
ಈಡಿರಿದುದ್+ಅಪದೆಸೆ +ವಿಟಾಳಿಸಿ
ಖೇಡತನ +ಭುಲ್ಲವಿಸುತಿರ್ದುದು +ಭಾನುನಂದನನ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಖೋಡಿ ಖೊಪ್ಪರಿಸಿದುದು; ಭುಲ್ಲವಿಸುತಿರ್ದುದು ಭಾನುನಂದನನ; ಸುರಿದುದು ಸೊಗಡು;