ಪದ್ಯ ೪೪: ಪಾಂಡವರ ಸ್ಥಿತಿ ಹೇಗಾಯಿತು?

ಮುರಿದುದಾಬಲವಿಳೆಯೊಡೆಯೆ ಬೊ
ಬ್ಬಿರಿದುದೀ ಬಲವಪಜಯದ ಮಳೆ
ಗರೆದುದವರಿಗೆ ಹರಿದುದಿವರಿಗೆ ಸರ್ಪರಜ್ಜುಭಯ
ತೆರಳಿತಾಚೆಯ ಥಟ್ಟು ಮುಂದಣಿ
ಗುರವಣಿಸಿತೀಯೊಡ್ಡು ಕೌರವ
ರರಸನುತ್ಸಾಹವನು ಬಣ್ಣಿಸಲಿರಿಯೆನಾನೆಂದ (ದ್ರೋಣ ಪರ್ವ, ೧೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಂಡವರ ಸೈನ್ಯ ಮುರಿಯಿತು. ಭೂಮಿ ಬಿರಿಯುವಂತೆ ಕೌರವ ಬಲ ಬೊಬ್ಬಿರಿಯಿತು. ಅವರಿಗೆ ಅಪಜಯದ ಮಳೆ ವರ್ಷಿಸಿತು ಇವರಿಗೆ ಹಾವು ಹಗ್ಗದ ಭಯ ಬಿಟ್ಟಿತು. ಆಚೆಯ ಸೈನ್ಯ ಓಡಿತು, ಈ ಸೈನ್ಯ ಮುನ್ನುಗ್ಗಿತು. ಕೌರವನ ರಣೋತ್ಸಾಹ ಅವರ್ಣನೀಯವಾಗಿತ್ತು.

ಅರ್ಥ:
ಮುರಿ: ಸೀಳು; ಬಲ: ಸೈನ್ಯ; ಇಳೆ: ಭೂಮಿ; ಒಡೆಯ: ರಾಜ; ಬೊಬ್ಬಿರಿ: ಗರ್ಜಿಸು; ಅಪಜಯ: ಸೋಳು; ಮಳೆ: ವರ್ಷ; ಹರಿ: ಪ್ರವಹಿಸು, ಚಲಿಸು; ಸರ್ಪ: ಉರಗ; ರಜ್ಜು: ಹಗ್ಗ; ತೆರಳು: ಮರಳು; ಥಟ್ಟು: ಗುಂಪು; ಮುಂದಣಿ: ಮುಂಚೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಒಡ್ಡು: ರಾಶಿ, ಸಮೂಹ; ಅರಸ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ಮುರಿದುದ್+ಆ+ಬಲವ್ + ಇಳೆ+ಒಡೆಯೆ+ ಬೊ
ಬ್ಬಿರಿದುದ್+ಈ+ ಬಲವ್+ಅಪಜಯದ +ಮಳೆ
ಗರೆದುದ್+ಅವರಿಗೆ +ಹರಿದುದ್+ಇವರಿಗೆ+ ಸರ್ಪ+ರಜ್ಜು+ಭಯ
ತೆರಳಿತ್+ಆಚೆಯ +ಥಟ್ಟು +ಮುಂದಣಿಗ್
ಉರವಣಿಸಿತ್+ಈ+ ಒಡ್ಡು +ಕೌರವರ್
ಅರಸನ್+ಉತ್ಸಾಹವನು +ಬಣ್ಣಿಸಲ್+ಅರಿಯೆ+ನಾನೆಂದ

ಅಚ್ಚರಿ:
(೧) ಕೌರವರ ಸ್ಥಿತಿಯನ್ನು ಹೇಳುವ ಪರಿ – ಹರಿದುದಿವರಿಗೆ ಸರ್ಪರಜ್ಜುಭಯ
(೨) ರಾಜನನ್ನು ಇಳೆಯೊಡೆಯ ಎಂದು ಕರೆದಿರುವುದು

ಪದ್ಯ ೧೧: ಭೀಷ್ಮನು ಶಿಶುಪಾಲನನ್ನು ಹೇಗೆ ಬಯ್ದನು?

ಭ್ರಮೆಯ ಭುಜಗನೆ ರಜ್ಜುವೋ ಜಂ
ಗಮವೊ ಕಲ್ಪಿತ ಪುರುಷನಾತ್ಮನೊ
ವಿಮಲ ಸಂವಿದ್ರೂಪನಾತ್ಮನೊ ಜೀವ ಪರಮನಲಿ
ಕಮಲನಾಭನೆ ನಿಜವೊ ವಿಶ್ವ
ಕ್ರಮವೆ ನಿಜವೋ ಚೈದ್ಯ ಭೂಪತಿ
ಕುಮತಿ ಕಪಿಗೇಕಮಲ ಮಾಣಿಕವೆಂದನಾ ಭೀಷ್ಮ (ಸಭಾ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹಗ್ಗವು ಭ್ರಮೆಯಿಂದ ಹಾವಾಗಿ ಕಂಡಮಾತ್ರಕ್ಕೆ ಅದು ಚಲಿಸುತ್ತದೆಯೇ? ಕಲ್ಪಿತ ಶರೀರವು ಆತ್ಮವೋ? ಅನುಭವಕ್ಕೆ ಗಮ್ಯವಾದ ಶುದ್ಧ ಅರಿವು ಆತ್ಮವೋ? ಜೀವಾತ್ಮ ಪರಮಾತ್ಮ ಎಂಬುವರಲ್ಲಿ ಶ್ರೀಕೃಷ್ಣನೇ ಸತ್ಯವೋ? ಬದಲಾಗುವ ಈ ಮಿಥ್ಯ ಪ್ರಪಂಚವೇ ನಿಜವೋ? ಶಿಶುಪಾಲ, ದುರ್ಬುದ್ಧಿಯವನೇ, ಮಂಗನಿಗೇಕೆ ಮಾಣಿಕ್ಯ ಎಂದು ಭೀಷ್ಮನು ಪ್ರಶ್ನಿಸಿದನು.

ಅರ್ಥ:
ಭ್ರಮೆ: ಭ್ರಾಂತಿ, ಹುಚ್ಚು, ಉನ್ಮಾದ; ಭುಜಗ: ಹಾವು; ರಜ್ಜು: ಹಗ್ಗ, ಪಾಶ; ಜಂಗಮ: ಚಲನೆಯುಳ್ಳದ್ದು; ಕಲ್ಪಿತ: ಸಂಕಲ್ಪ, ಊಹಿಸಿದ; ಪುರುಷ: ಮನುಷ್ಯ, ಮಾನವ; ವಿಮಲ: ನಿರ್ಮಲ; ಸಂವಿದ್ರೂಪ: ಪರಮಜ್ಞಾನಿ, ಸರ್ವಜ್ಞ; ಜೀವ: ಉಸಿರು; ಪರಮ: ಶ್ರೇಷ್ಠವಾದುದು, ಉತ್ಕೃಷ್ಟವಾದುದು; ಕಮಲನಾಭ: ವಿಷ್ಣು; ನಿಜ: ದಿಟ; ವಿಶ್ವ: ಜಗತ್ತು; ಕ್ರಮ: ನಡೆಯುವಿಕೆ, ಅಡಿ; ಭೂಪತಿ: ರಾಜ; ಕುಮತಿ: ದುರ್ಬುದ್ಧಿ; ಕಪಿ: ಮಂಗ; ಕಮಲ: ತಾವರೆ; ಮಾಣಿಕ: ಬೆಲೆಬಾಳುವ ರತ್ನ;

ಪದವಿಂಗಡಣೆ:
ಭ್ರಮೆಯ+ ಭುಜಗನೆ +ರಜ್ಜುವೋ +ಜಂ
ಗಮವೊ +ಕಲ್ಪಿತ +ಪುರುಷನ್+ಆತ್ಮನೊ
ವಿಮಲ +ಸಂವಿದ್ರೂಪನ್+ಆತ್ಮನೊ+ ಜೀವ +ಪರಮನಲಿ
ಕಮಲನಾಭನೆ+ ನಿಜವೊ+ ವಿಶ್ವ
ಕ್ರಮವೆ+ ನಿಜವೋ +ಚೈದ್ಯ +ಭೂಪತಿ
ಕುಮತಿ +ಕಪಿಗೇಕ್+ಅಮಲ +ಮಾಣಿಕವೆಂದನಾ +ಭೀಷ್ಮ

ಅಚ್ಚರಿ:
(೧) ಗಾದೆಯ ಮಾತಿನ ಬಳಕೆ – ಕುಮತಿ ಕಪಿಗೇಕಮಲ ಮಾಣಿಕ
(೨) ಉಪಮಾನದ ಪ್ರಯೋಗ – ಭ್ರಮೆಯ ಭುಜಗನೆ ರಜ್ಜುವೋ ಜಂಗಮವೊ