ಪದ್ಯ ೨೮: ಧರ್ಮಜನು ದ್ರೌಪದಿಯನ್ನು ಹೇಗೆ ಉಪಚರಿಸಿದನು?

ಉಪಚರಿಸಿ ರಕ್ಷೋಘ್ನಸೂಕ್ತದ
ಜಪವ ಮಾಡಿಸಿ ವಚನ ಮಾತ್ರದ
ರಪಣದಲಿ ರಚಿಸಿದನು ಗೋಧನ ಭೂಮಿದಾನವನು
ನೃಪತಿ ಕೇಳೊಂದೆರಡು ಗಳಿಗೆಯೊ
ಳುಪಹರಿಸಿದುದು ಮೂರ್ಛೆ ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು (ಅರಣ್ಯ ಪರ್ವ, ೧೦ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮರಾಯನು ದ್ರೌಪದಿಗೆ ಉಪಚಾರ ಮಾಡಿ, ಧೌಮ್ಯರಿಂದ ರಕ್ಷೋಘ್ನ ಸೂಕ್ತದ ಜಪವನ್ನು ಮಾಡಿಸಿ, ದ್ರೌಪದಿಯ ಸುಕ್ಷೇಮಕ್ಕಾಗಿ ಗೋದಾನ, ಭೂದಾನಗಳನ್ನು ಸಂಕಲ್ಪಿಸಿದನು. ಒಂದೆರಡು ಗಳಿಗೆಗಳಲ್ಲಿ ದ್ರೌಪದಿಯು ಆಕೆಯ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಳು, ಜನಮೇಜಯ ಕೇಳು, ಸತ್ಯ ಪರಿಪಾಲನೆಗಾಗಿ ಐಶ್ವರ್ಯವನ್ನು ಕಳೆದುಕೊಂಡ ಪಾಂಡವರರನ್ನು ದ್ರೌಪದಿಯು ಕಣ್ತೆರೆದು ನೋಡಿದಳು.

ಅರ್ಥ:
ಉಪಚರಿಸು: ಆರೈಕೆ ಮಾಡು; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ವಚನ: ಮಾತು, ನುಡಿ; ರಪಣ: ಐಶ್ವರ್ಯ; ರಚಿಸು: ನಿರ್ಮಿಸು; ಧನ: ಐಶ್ವರ್ಯ; ಗೋ: ಗೋವು; ಭೂಮಿ: ಇಳೆ; ದಾನ: ಚತುರೋಪಾಯಗಳಲ್ಲಿ ಒಂದು; ನೃಪತಿ: ರಾಜ; ಕೇಳು: ಆಲಿಸು; ಗಳಿಗೆ: ಸಮಯ; ಉಪಹರಿಸು: ನಿವಾರಿಸು; ಮೂರ್ಛೆ: ಜ್ಞಾನತಪ್ಪಿದ ಸ್ಥಿತಿ; ಸತ್ಯ: ದಿಟ; ವ್ಯಪಗತೈಶ್ವರ್ಯ: ನಾಶವಾದ ಐಶ್ವರ್ಯ; ಕಂಡು: ನೋಡು; ಕಾಂತೆ: ಚೆಲುವೆ; ಕಂದೆರೆ: ಕಣ್ಣನ್ನು ಬಿಟ್ಟು, ಅಗಲಿಸು;

ಪದವಿಂಗಡಣೆ:
ಉಪಚರಿಸಿ +ರಕ್ಷೋಘ್ನ+ಸೂಕ್ತದ
ಜಪವ +ಮಾಡಿಸಿ +ವಚನ +ಮಾತ್ರದ
ರಪಣದಲಿ +ರಚಿಸಿದನು +ಗೋಧನ +ಭೂಮಿ+ದಾನವನು
ನೃಪತಿ + ಕೇಳ್+ ಒಂದೆರಡು +ಗಳಿಗೆಯೊಳ್
ಉಪಹರಿಸಿದುದು +ಮೂರ್ಛೆ +ಸತ್ಯ
ವ್ಯಪಗತ್+ಐಶ್ವರ್ಯರನು+ ಕಂಡಳು +ಕಾಂತೆ +ಕಂದೆರೆದು

ಅಚ್ಚರಿ:
(೧) ದ್ರೌಪದಿಯು ಯಾರನ್ನು ನೋಡಿದಳೆಂದು ಹೇಳುವ ಪರಿ – ಸತ್ಯ
ವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು

ಪದ್ಯ ೨೭: ಧೌಮ್ಯ ಮುನಿಗಳು ಯಾವ ರೀತಿ ಅಭಯವನ್ನು ನೀಡಿದರು?

ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷ ಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ (ಅರಣ್ಯ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕಿಮ್ಮೀರನ ಗರ್ಜನೆ ಮತ್ತು ಹಾವಾಭಾವವನ್ನು ಕಂಡು ಬೆದರಿದ ಜನರನ್ನು ನೋಡಿದ ಧೌಮ್ಯ ಮುನಿಗಳು, ರಕ್ಷೋಘ್ನ ಸೂಕ್ತವನ್ನು ಮತ್ತೆ ಮತ್ತೆ ಜಪಿಸಿ ತಮ್ಮವರ ಸುತ್ತಲೂ ದಿಗ್ಬಂಧನವನ್ನು ಮಾಡಿದರು. ಎಲೆಲೆ ರಾಕ್ಷಸರು ಬಂದಿದ್ದಾರೆ ಅದರ ಭೀತಿ ಎಲ್ಲರನ್ನೂ ಆವರಿಸಿದೆ ಆದರೆ ಯಾರು ಓಡಿಹೋಗಬೇಡಿರಿ, ಪಾಂಡವರು ಕ್ಷಣಮಾತ್ರದಲ್ಲಿ ಈ ರಾಕ್ಷಸರನ್ನು ಸಂಹಾರಮಾಡುತ್ತಾದೆ ಎಂದು ಹೇಳಿದರು.

ಅರ್ಥ:
ಎಲೆಲೆ: ಎಲವೋ; ರಾಕ್ಷಸ: ದಾನವ; ಭೀತಿ: ಭಯ, ಹೆದರಿಕೆ; ಹೋಗು: ತೆರಳು; ನಿಲು: ನಿಲ್ಲು, ತಡೆ; ನಿಮಿಷ: ಕ್ಷಣ; ಗೆಲುವ: ಜಯ; ಅರಸು: ರಾಜ; ಮುನಿ: ಋಷಿ; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ವಿಧ: ರೀತಿ; ಹಲವು: ಬಹಳ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ದಿಗು: ದಿಕ್ಕು; ಮಂಡಲ: ನಾಡಿನ ಒಂದು ಭಾಗ; ಬಂಧ: ಕಟ್ಟು, ಬಂಧನ; ರಚಿಸು: ನಿರ್ಮಿಸು; ಜನ: ಮನುಷ್ಯ, ನರ; ಸಂಕುಲ: ಗುಂಪು; ಸಂತೈಸು: ಸಮಾಧಾನಪಡಿಸು, ಸಾಂತ್ವನಗೊಳಿಸು; ಭೂಪತಿ: ರಾಜ;

ಪದವಿಂಗಡಣೆ:
ಎಲೆಲೆ +ರಾಕ್ಷಸ+ ಭೀತಿ +ಹೋಗದೆ
ನಿಲು +ನಿಲ್+ಎಲವೋ +ನಿಮಿಷ +ಮಾತ್ರಕೆ
ಗೆಲುವರ್+ಅರಸುಗಳ್+ಎನುತ +ಮುನಿ +ರಕ್ಷೋಘ್ನ +ಸೂಕ್ತವನು
ಹಲವು+ ವಿಧದಲಿ +ಜಪಿಸಿ+ ದಿಗು+ ಮಂ
ಡಲದ +ಬಂಧವ +ರಚಿಸಿ +ಜನ +ಸಂ
ಕುಲವ+ ಸಂತೈಸಿದನು+ ಧೌಮ್ಯನು +ಮುಂದೆ +ಭೂಪತಿಯ

ಅಚ್ಚರಿ:
(೧) ಮುನಿಗಳ ಅಭಯ: ಮುನಿ ರಕ್ಷೋಘ್ನ ಸೂಕ್ತವನು ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂಕುಲವ ಸಂತೈಸಿದನು