ಪದ್ಯ ೨೭: ಧರ್ಮಜನು ದ್ರೌಪದಿಯನ್ನು ಹೇಗೆ ರಕ್ಷಿಸಿದನು?

ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃ
ಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು
ಧರಣಿಪತಿ ತೆಗೆದೀಕೆಯನು ಕು
ಳ್ಳಿರಿಸಿ ತನ್ನಯ ತೊಡೆಯ ಮೇಲಾ
ದರಿಸಿ ಮಂತ್ರಿಸಿ ನೀರ ತಳಿದನು ರಕ್ಷೆಗಳ ರಚಿಸಿ (ಅರಣ್ಯ ಪರ್ವ, ೧೦ ಸಂಧಿ, ೨೭ ಪದ್ಯ)

ತಾತ್ಪರ್ಯ:
ದಾರಿಯಲ್ಲಿ ಮೂರ್ಛೆಯಿಂದ ಒರಗಿ ಬಿದ್ದಿದ್ದ ದ್ರೌಪದಿಯನ್ನು ಕಂಡು ಭೀಮಾದಿಗಳು ಹಾಯೆಂದು ಬಿದ್ದು ಬಿಟ್ಟರು. ಧರ್ಮಜನು ತನ್ನ ತೊಡೆಯ ಮೇಲೆ ದ್ರೌಪದಿಯನ್ನು ಕುಳ್ಳಿರಿಸಿಕೊಂಡು ಮಂತ್ರಿಸಿದ ನೀರನ್ನು ಪ್ರೋಕ್ಷಿಸಿ ರಕ್ಷೆಯನ್ನು ರಚಿಸಿದನು.

ಅರ್ಥ:
ಬರುತ: ತೆರಳುವಾಗ; ಕಂಡು: ನೋಡು; ಬಟ್ಟೆ: ವಸ್ತ್ರ; ನಿರ್ಭರ: ಬಹಳ, ಅತಿಶಯ; ಮೂರ್ಛೆ: ಜ್ಞಾನವಿಲ್ಲದ ಸ್ಥಿತಿ; ಮೊಹ: ಎಚ್ಚರ ತಪ್ಪುವಿಕೆ; ಅಂತಃಕರಣ: ಚಿತ್ತವೃತ್ತಿ; ಬಿದ್ದು: ಕೆಳಗೆ ಬೀಳು; ಪವನಜ: ಭೀಮ; ಆದಿ: ಮುಂತಾದವರು; ಧರಣಿಪತಿ: ರಾಜ; ತೆಗೆ: ಹೊರತರು; ಕುಳ್ಳಿರಿಸು: ಆಸೀನ; ತೊಡೆ: ಊರು; ಆದರ: ಪ್ರೀತಿ; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನೀರು: ಜಲ; ತಳಿ: ಚಿಮುಕಿಸು, ಸಿಂಪಡಿಸು; ರಕ್ಷೆ: ಕಾಪು, ರಕ್ಷಣೆ; ರಚಿಸು: ನಿರ್ಮಿಸು;

ಪದವಿಂಗಡಣೆ:
ಬರುತ +ಕಂಡರು +ಬಟ್ಟೆಯಲಿ +ನಿ
ರ್ಭರದ +ಮೂರ್ಛಾ +ಮೋಹಿತ+ಅಂತಃ
ಕರಣೆಯನು+ ಹಾಯೆನುತ +ಬಿದ್ದರು +ಪವನಜ+ಆದಿಗಳು
ಧರಣಿಪತಿ +ತೆಗೆದ್+ಈಕೆಯನು +ಕು
ಳ್ಳಿರಿಸಿ+ ತನ್ನಯ +ತೊಡೆಯ +ಮೇಲ್
ಆದರಿಸಿ+ ಮಂತ್ರಿಸಿ +ನೀರ +ತಳಿದನು +ರಕ್ಷೆಗಳ +ರಚಿಸಿ

ಅಚ್ಚರಿ:
(೧) ಪಾಂಡವರ ದುಗುಡವನ್ನು ಚಿತ್ರಿಸುವ ಪರಿ – ಬರುತ ಕಂಡರು ಬಟ್ಟೆಯಲಿ ನಿ
ರ್ಭರದ ಮೂರ್ಛಾ ಮೋಹಿತಾಂತಃಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು

ಪದ್ಯ ೨೦: ಪಾಂಡವರು ಶ್ರಾದ್ಧಕಾರ್ಯವನ್ನು ಹೇಗೆ ಸಂಪನ್ನಗೊಳಿಸಿದರು?

ಹರಿಯು ತಾ ಕೈಕೊಂಡು ಶ್ರಾದ್ಧದ
ನಿರುತರಕ್ಷೆಯ ಬಳಿಯ ಪಾಂಡವ
ರರಸಿ ಬಡಿಸಿದಳಂದು ದಿವ್ಯರಸಾನ್ನಪಾನಗಳ
ಅರಸ ಕೇಳೈ ಪಾಂಡುಪುತ್ರರು
ಹರಿಸಮರ್ಪಣೆಮಾಡಿ ಪಿತೃಗಳ
ಪೊರೆದರಗ್ನೌಕರಣ ಬ್ರಾಹ್ಮಣ ಭೋಜನಾಂತದಲಿ (ಅರಣ್ಯ ಪರ್ವ, ೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಶ್ರೀಕೃಷ್ಣನು ಶ್ರಾದ್ಧರಕ್ಷಣ ಮಾಡುತ್ತಿದ್ದನು. ದ್ರೌಪದಿಯು ದಿವ್ಯ ಅನ್ನ, ರಸ ಪಾನಗಳನ್ನು ಮಾದಿ ಬ್ರಾಹ್ಮಣರಿಗೆ ಬಡಿಸಿದಳು. ಪಾಂಡವರು ಬ್ರಾಹ್ಮನ ಭೋಜನ ಮಾಡಿಸಿ ಅಗ್ನೌಕರಣ ಮಾಡಿ, ನಂತರ ಕೃಷ್ಣನಿಗೆ ಶ್ರಾದ್ಧ ಕಾರ್ಯದ ಕರ್ಮಫಲವನ್ನು ಸಮರ್ಪಿಸಿದರು.

ಅರ್ಥ:
ಹರಿ: ವಿಷ್ಣು; ಕೈಕೊಂಡು: ಸ್ವೀಕರಿಸು; ಶ್ರಾದ್ಧ: ತಿಥಿ, ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ನಿರುತ: ದಿಟ, ಸತ್ಯ; ರಕ್ಷೆ: ರಕ್ಷಣೆ; ಬಳಿ: ಹತ್ತಿರ; ಅರಸಿ: ರಾಣಿ; ಬಡಿಸು: ನೀಡು; ದಿವ್ಯ: ಶ್ರೇಷ್ಠ; ರಸಾನ್ನ: ಭೋಜನ; ಪಾನ: ಕುಡಿಯುವಿಕೆ; ಅರಸ: ರಾಜ; ಪುತ್ರ: ಮಗ; ಸಮರ್ಪಣೆ: ನೀಡು; ಪಿತೃ:ಸ್ವರ್ಗಸ್ಥನಾದ ಹಿರಿಯ; ಪೊರೆ: ಪಾಲನೆ, ಪೋಷಣೆ; ಬ್ರಾಹ್ಮಣ: ಭೂಸುರ; ಭೋಜನ: ಊಟ: ಅಂತ: ಕೊನೆ;

ಪದವಿಂಗಡಣೆ:
ಹರಿಯು +ತಾ +ಕೈಕೊಂಡು +ಶ್ರಾದ್ಧದ
ನಿರುತ+ರಕ್ಷೆಯ +ಬಳಿಯ +ಪಾಂಡವರ್
ಅರಸಿ +ಬಡಿಸಿದಳ್+ಅಂದು +ದಿವ್ಯ+ರಸ+ಅನ್ನ+ಪಾನಗಳ
ಅರಸ+ ಕೇಳೈ+ ಪಾಂಡುಪುತ್ರರು
ಹರಿ+ಸಮರ್ಪಣೆಮಾಡಿ +ಪಿತೃಗಳ
ಪೊರೆದರ್+ಅಗ್ನೌಕರಣ+ ಬ್ರಾಹ್ಮಣ +ಭೋಜನ+ಅಂತದಲಿ

ಅಚ್ಚರಿ:
(೧) ಅರಸ ಅರಸಿ – ಪದಗಳ ಬಳಕೆ, ೩, ೪ ಸಾಲಿನ ಮೊದಲ ಪದ
(೨) ದ್ರೌಪದಿಯನ್ನು ಪಾಂಡವರರಸಿ ಎಂದು ಕರೆದಿರುವುದು