ಪದ್ಯ ೪೪: ಭುವನಜನ ಏನೆಂದು ಒರಲಿದರು?

ಅರಿಪುರತ್ರಯ ದಹನ ಕರ್ಮ
ಸ್ಫುರಣವಸ್ಮತ್ಕಾರ್ಯವದು ಗೋ
ಚರಿಸಿತಲ್ಲಿಂ ಮೇಲಣುಚಿತಾನುಚಿತ ಕೃತ್ಯವನು
ಕರುಣಿ ನೀವೇ ಬಲ್ಲೆ ಜನ ಸಂ
ಹರಣ ಕಾಲವೊ ಮೇಣು ರಕ್ಷಾ
ಕರಣ ಕಾಲವೊ ದೇವ ಎಂದೊರಲಿದುದು ಭುವನಜನ (ಕರ್ಣ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಲೋಕದ ಜನರು ಶಿವನ ಮುಂದೆ ಬಂದು ದೇವಾ ತ್ರಿಪುರಗಳನ್ನು ದಹಿಸು ಎಂದು ನಾವು ನಿಮ್ಮಲ್ಲಿ ಪ್ರಾರ್ಥಿಸಿದೆವು, ಅದು ಮುಗಿಯಿತು, ಅಲ್ಲಿಂದ ಮುಂದೆ ಇಡೀ ಹದಿನಾಲ್ಕು ಲೋಕಕ್ಕೆ ಬೆಂಕಿಯು ಆವರಿಸಿ ಸುಡುತ್ತಿದೆ ಇದು ಉಚಿತವೋ ಅನುಚಿತವೋ ನೀವೇ ಬಲ್ಲಿರಿ, ಇದು ಜನರನ್ನು ರಕ್ಷಿಸುವ ಕಾಲವೋ, ಸಂಹರಿಸುವ ಕಾಲವೋ ಎಂಬುದನ್ನು ಕರುಣಿಯಾದ ನೀನೇ ಬಲ್ಲೆ ಎಂದು ಜಗತ್ತಿನ ಜನರು ಗೋಳಿಟ್ಟರು.

ಅರ್ಥ:
ಅರಿ: ವೈರಿ; ಪುರ: ಊರು; ತ್ರಯ: ಮೂರು; ದಹನ: ಸುಡು; ಕರ್ಮ: ಕಾರ್ಯ; ಸ್ಫುರಣ: ಡುಗುವುದು, ಕಂಪನ; ಅಸ್ಮತ್: ನನ್ನ; ಕಾರ್ಯ: ಕೆಲಸ; ಗೋಚರಿಸು: ತೋರು; ಮೇಲಣ: ಮುಂದಿನ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಕೃತ್ಯ: ಕೆಲಸ; ಕರುಣಿ: ದಯಾಪರ; ಬಲ್ಲೆ: ತಿಳಿ; ಜನ: ಜೀವರು; ಸಂಹರಣ: ಅಂತ್ಯ; ಕಾಲ: ಸಮಯ; ಮೇಣು: ಅಥವ; ರಕ್ಷಾ: ಕಾಪಾದು; ದೇವ: ಭಗವಂತ; ಒರಲು: ಹೇಳು, ಅರಚು, ಗೋಳಿಡು; ಭುವನಜನ: ಜಗತ್ತಿನ ಜನ;

ಪದವಿಂಗಡಣೆ:
ಅರಿ+ಪುರತ್ರಯ +ದಹನ +ಕರ್ಮ
ಸ್ಫುರಣವ್+ಅಸ್ಮತ್+ಕಾರ್ಯವದು +ಗೋ
ಚರಿಸಿತ್+ಅಲ್ಲಿಂ +ಮೇಲಣ್+ಉಚಿತ+ಅನುಚಿತ +ಕೃತ್ಯವನು
ಕರುಣಿ +ನೀವೇ +ಬಲ್ಲೆ +ಜನ +ಸಂ
ಹರಣ +ಕಾಲವೊ +ಮೇಣು +ರಕ್ಷಾ
ಕರಣ+ ಕಾಲವೊ+ ದೇವ +ಎಂದ್+ಒರಲಿದುದು +ಭುವನಜನ

ಅಚ್ಚರಿ:
(೧) ಹರಣ, ಕರಣ – ಪ್ರಾಸ ಪದ
(೨) ಕರ್ಮ, ಕೃತ್ಯ, ಕಾರ್ಯ – ಸಾಮ್ಯಾರ್ಥದ ಪದಗಳು