ಪದ್ಯ ೪೪: ಮಗುವಿನ ಎರಡುಭಾಗವನ್ನು ಯಾರು ನೋಡಿದರು?

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳರೆಡವನು ಹೊರಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡುಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ (ಸಭಾ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಊರ ಹೊರಗೆ ಆ ಮಗುವಿನ ಎರಡು ಭಾಗವನ್ನು ಬಿಸಾಡಿದನಂತರ, ನಡುರಾತ್ರಿಯಲ್ಲಿ ಜರೆ ಎಂಬ ರಾಕ್ಷಸಿ ತನ್ನ ಆಹಾರಕ್ಕಾತಿ ಬರಲು ಅಲ್ಲಿ ಬಿದ್ದಿದ್ದ ದೇಹದ ಎರಡು ತುಂಡುಗಳನ್ನು ನೋಡಿದಳು. ಅವೆರಡನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಈ ಮಗುವನ್ನು ಸೀಳಿ, ತಿನ್ನದೆ ಏಕೆ ಹೀಗೆ ಬಿಟ್ಟರೋ, ಏನು ವಿಚಿತ್ರ, ಒಂದು ಎಡಭಾಗದ್ದು, ಮತ್ತೊಂದು ಬಲಭಾಗದ್ದು, ಎಂದು ಆಶ್ಚರ್ಯದಿಂದ ದಿಟ್ಟಿಸಿ ನೋಡಿದಳು.

ಅರ್ಥ:
ನಡುವಿರುಳು: ಮಧ್ಯರಾತ್ರಿ; ರಕ್ಕಸಿ: ರಾಕ್ಷಸಿ; ಅಡಗು: ಮಾಂಸ; ಅರಸುತ: ಹುಡುಕುತ್ತಾ; ಬಂದು: ಆಗಮಿಸಿ; ಕಂಡು:ನೋಡು; ಮಿಡುಕು:ಅಲುಗಾಟ, ಚಲನೆ; ಸೀಳು: ತುಂಡು; ಹೊಳಲು: ಪಟ್ಟಣ; ಬಾಹೆ: ಹೊರಗೆ; ತುಡುಕು:ಆತುರದಿಂದ ಹಿಡಿ; ಮಡುಗು: ಇಟ್ಟು; ಕೌತುಕ: ಆಶ್ಚರ್ಯ; ಅಸುರೆ: ರಾಕ್ಷಸಿ; ದಿಟ್ಟಿಸು: ಒಂದೇ ಸಮನೆ ನೋಡು; ಶಿಶು: ಮಗು;

ಪದವಿಂಗಡಣೆ:
ನಡುವಿರುಳು +ಜರೆಯೆಂಬ +ರಕ್ಕಸಿ
ಯಡಗನ್+ಅರಸುತ +ಬಂದು +ಕಂಡಳು
ಮಿಡುಕುವೀ +ಸೀಳ್+ಎರೆಡವನು+ ಹೊರಹೊಳಲ+ ಬಾಹೆಯಲಿ
ತುಡುಕಿದಳು+ ಸೀಳ್ದೇಕೆ +ತಿನ್ನದೆ
ಮಡುಗಿದರೊ +ಕೌತುಕವದೇನ್+ಈ
ಯೆಡ+ಬಲನಿದೆಂದ್+ಅಸುರೆ +ದಿಟ್ಟಿಸಿ+ ನೋಡಿದಳು +ಶಿಶುವ

ಅಚ್ಚರಿ:
(೧) ಮಿಡುಕು, ತುಡುಕು – ಪ್ರಾಸ ಪದ
(೨) ಅಸುರೆ, ರಕ್ಕಸಿ; ನೋಡಿದಳು, ಕಂಡಳು – ಸಮನಾರ್ಥಕ ಪದ
(೩) ಸೀಳ್ – ೩, ೪ ಸಾಲಿನ ೨ ಪದ