ಪದ್ಯ ೧೦: ಸಂಜಯನು ಯಾರ ನಡಿಗೆಯನ್ನು ನೋಡಿದನು – ೩?

ಓಡದಿಹ ನರಿ ಹದ್ದು ಕಾಗೆಗೆ
ಕೂಡೆ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತಪಾನದ ಶಾಕಿನೀಜನವ (ಗದಾ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಓಡಿ ಹೋಗದಿರುವ ಹದ್ದು, ಕಾಗೆ, ನರಿಗಳಿಗೆ ಅವನು ಗದೆಯನ್ನು ಬೀಸಿ ಓಡಿಸುತ್ತಿದ್ದನು. ಹೆಣಗಳನ್ನು ತಿನ್ನುವ ರಾಕ್ಷಸರನ್ನು ನೋಡುತ್ತಿದ್ದನು. ಅಲ್ಲಿ ಶಾಕಿನಿಯರು ಕೈಗಳಿಂದ ತೋಡಿ ಮಿದುಳುಗಳನ್ನು ಬಾಯಲ್ಲಿಟ್ಟುಕೊಳ್ಳುತ್ತಿದ್ದರು. ಕರುಳುಗಳನ್ನು ತಿಂದು ಚೀತ್ಕರಿಸುತ್ತಿದ್ದರು. ತಲೆ ಬುರುಡೆಗಳಲ್ಲಿ ರಕ್ತಪಾನವನ್ನು ಮಾಡುತ್ತಿದ್ದರು.

ಅರ್ಥ:
ಓಡು: ಧಾವಿಸು; ಹದ್ದು: ಗರುಡ ಜಾತಿಗೆ ಸೇರಿದ ಹಕ್ಕಿ; ಕಾಗೆ: ಕಾಕ; ಕೂಡೆ: ಜೊತೆ; ಗದೆ: ಮುದ್ಗರ; ಬೀಸು: ಒಗೆ, ಎಸೆ; ಬಿಡೆ: ತೊರೆದು; ನೋಡು: ವೀಕ್ಷಿಸು; ಹೆಣ: ಜೀವವಿಲ್ಲದ ಶರೀರ; ತಿನಿಹಿ: ತಿನ್ನುವ; ಹೇರಾಳ: ಬಹಳ; ರಕ್ಕಸ: ರಾಕ್ಷಸ; ತೋಡು: ಹಳ್ಳ; ಕೈ: ಹಸ್ತ; ಮಿದುಳ: ಮಸ್ತಿಷ್ಕ; ಬಾಡು: ಕಳೆಗುಂದು; ಕರುಳು: ಪಚನಾಂಗ; ಚೀತ್ಕೃತಿ: ಕೂಗು, ಗರ್ಜಿಸು; ತಲೆ: ಶಿರ; ತನಿ: ಹೆಚ್ಚಾಗು; ರಕುತ: ನೆತ್ತರು; ಪಾನ: ಕುಡಿ; ಶಾಕಿನಿ: ರಾಕ್ಷಸಿ; ಜನ: ಗುಂಪು;

ಪದವಿಂಗಡಣೆ:
ಓಡದಿಹ +ನರಿ +ಹದ್ದು +ಕಾಗೆಗೆ
ಕೂಡೆ +ಗದೆಯನು +ಬೀಸುವನು +ಬಿಡೆ
ನೋಡುವನು +ಹೆಣ+ತಿನಿಹಿಗಳ +ಹೇರಾಳ +ರಕ್ಕಸರ
ತೋಡು+ಕೈಗಳ +ಮಿದುಳ +ಬಾಯ್ಗಳ
ಬಾಡು+ಕರುಳಿನ +ಚೀತ್ಕೃತಿಯ +ತಲೆ
ಯೋಡುಗಳ+ ತನಿ+ರಕುತ+ಪಾನದ +ಶಾಕಿನೀಜನವ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಓಡದಿಹ ನರಿ ಹದ್ದು ಕಾಗೆಗೆಕೂಡೆ ಗದೆಯನು ಬೀಸುವನು

ಪದ್ಯ ೧೫: ಅತಿರಥರೇಕೆ ಹಿಮ್ಮೆಟ್ಟಿದರು?

ಹಾಯಿಕಲಿ ಟೇಕ್ಕೆಯವ ಭಟ್ಟರ
ಬಾಯ ಹೊಯ್ ಗಡಬಡೆಯ ಹೊತ್ತ
ಲ್ಲಾಯುಧವನೀಡಾಡು ಕೊಯ್ ಕೊಯ್ ಜೋಡು ಹೊಲಿಗೆಗಳ
ರಾಯ ಕೊಂದರೆ ಕೊಲಲಿ ಸುಕೃತವು
ಬೀಯವಾಗಲಿ ನಾವು ರಕ್ಕಸ
ನಾಯ ಕಯ್ಯಲಿ ಸಾಯೆವೆನುತೊಡೆಮುರಿದರತಿರಥರು (ದ್ರೋಣ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧ್ವಜವನ್ನಿಳಿಸಿರಿ, ಹೊಗಳುಭಟ್ಟರ ಬಾಯಿಗಳನ್ನು ಬಡಿಯಿರಿ, ಇದು ಯುದ್ಧದಲ್ಲಿ ತೊಡಗುವ ಸಮಯವಲ್ಲ. ಆಯುಧವನ್ನು ಎಸೆಯಿರಿ. ಕವಚಗಳನ್ನು ಬಿಚ್ಚಿರಿ. ನಮ್ಮನ್ನು ರಾಜನೇ ಕೊಲ್ಲಲಿ, ನಮ್ಮ ಪುಣ್ಯ ಹಾಳಾಗಲಿ, ಈ ರಾಕ್ಷಸ ನಾಯಿಯಿಂದ ನಾವು ಸಯುವುದಿಲ್ಲ ಎನ್ನುತ್ತಾ ಅತಿರಥರು ಹಿಮ್ಮೆಟ್ಟಿದರು.

ಅರ್ಥ:
ಹಾಯಿಕು: ಹಾಕು; ಟೆಕ್ಕೆ: ಬಾವುಟ; ಭಟ್ಟ: ಸೈನಿಕ; ಗಡಬಡ: ಗಟ್ಟಿಯಾದ ಶಬ್ದ; ಹೊತ್ತು: ಹೊರು; ಆಯುಧ: ಶಸ್ತ್ರ; ಈಡಾಡು: ಕಿತ್ತು, ಒಗೆ; ಜೋಡು: ಜೊತೆ, ಜೋಡಿ; ಹೊಲಿಗೆ: ಹೊಲಿಯುವಿಕೆ; ರಾಯ: ರಾಜ; ಕೊಂದು: ಸಾಯಿಸು; ಸುಕೃತ: ಒಳ್ಳೆಯ ಕೆಲಸ; ಬೀಯ: ತೌಡನ್ನು ತೆಗೆದ ಅಕ್ಕಿ ; ರಕ್ಕಸ: ರಾಕ್ಷಸ; ನಾಯ: ನಾಯಿ; ಮುರಿ: ಸೀಳು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಹಾಯಿಕಲಿ +ಟೆಕ್ಕೆಯವ +ಭಟ್ಟರ
ಬಾಯ +ಹೊಯ್ +ಗಡಬಡೆಯ +ಹೊತ್ತಲ್
ಆಯುಧವನ್+ಈಡಾಡು +ಕೊಯ್ +ಕೊಯ್ +ಜೋಡು +ಹೊಲಿಗೆಗಳ
ರಾಯ +ಕೊಂದರೆ +ಕೊಲಲಿ +ಸುಕೃತವು
ಬೀಯವಾಗಲಿ +ನಾವು +ರಕ್ಕಸ
ನಾಯ +ಕಯ್ಯಲಿ +ಸಾಯೆವೆನುತ್+ಒಡೆ+ಮುರಿದರ್+ಅತಿರಥರು

ಅಚ್ಚರಿ:
(೧) ರಾಯ, ಬಾಯ, ನಾಯ – ಪದಗಳ ಬಳಕೆ

ಪದ್ಯ ೬೧: ಘಟೋತ್ಕಚನು ತನ್ನ ಪರಾಕ್ರಮವನ್ನು ಹೇಗೆ ತೋರಿಸಿದನು?

ಹೆಸರುಗೊಂಡರೆ ಕಿವಿಗಳಿಗೆ ಕ
ರ್ಕಶರು ರಕ್ಕಸರೆಂಬ ಹೆಸರಿದು
ನುಸಿಗಳೊಳಗಾಶ್ರಯಿಸಿ ಕೆಟ್ಟುದು ಶಿವ ಶಿವಾಯೆನುತ
ಹೊಸ ಮಸೆಯ ಹೊಗರಂಬುಗಳನೆ
ಬ್ಬಿಸಿದನುಬ್ಬಿಸಿದನು ವಿರೋಧಿಗ
ಳನು ಸಮೀರಣನಿಂದ ನಿಜಭುಜ ವಿಕ್ರಮಾನಳನ (ದ್ರೋಣ ಪರ್ವ, ೧೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ರಾಕ್ಷಸರೆಂಬ ಹೆಸರೇ ಕಿವಿಗೆ ಕರ್ಕಶ ಎನ್ನುವ ಕೀರ್ತಿ ಈ ನುಸಿಗಳನ್ನಾಶ್ರಯಿಸಿ ಕೆಟ್ಟು ಹೋಯಿತು. ಶಿವ ಶಿವಾ ಎಂದು ಘಟೋತ್ಕಚನು ಹೊಸ ಹರಿತವಾದ ಬಾಣಗಳನ್ನು ಬಿಟ್ಟು ವಿರೋಧಿಗಳ ದೇಹದಿಂದ ಪ್ರಾಣವಾಯುವನ್ನು ಮೇಲಕ್ಕೆಬ್ಬಿಸಿ, ಆ ಗಾಳಿಯಿಂದ ತನ್ನ ವಿಕ್ರಮಾಗ್ನಿಯ ಜ್ವಾಲೆಗಳನ್ನು ಹೆಚ್ಚಿಸಿದನು.

ಅರ್ಥ:
ಹೆಸರು: ನಾಮ; ಕಿವಿ: ಕರ್ಣ; ಕರ್ಕಶ: ಕಠೋರ; ರಕ್ಕಸ: ರಾಕ್ಷಸ; ನುಸಿ: ಹುಡಿ, ಧೂಳು; ಆಶ್ರಯ: ಆಸರೆ, ಅವಲಂಬನ; ಕೆಟ್ಟು: ಹಾಳು; ಹೊಸ: ನವೀನ; ಮಸೆ: ಹರಿತವಾದುದು; ಹೊಗರು: ಕಾಂತಿ, ಪ್ರಕಾಶ; ಅಂಬು: ಬಾಣ; ಎಬ್ಬಿಸು: ಮೇಲೇಳು; ಉಬ್ಬಿಸು: ಹುರಿದು೦ಬಿಸು; ವಿರೋಧಿ: ಶತ್ರು; ಸಮೀರಣ: ವಾಯು; ವಿಕ್ರಮ: ಶೂರ, ಸಾಹಸ; ಆನಳ: ಬೆಂಕಿ;

ಪದವಿಂಗಡಣೆ:
ಹೆಸರುಗೊಂಡರೆ +ಕಿವಿಗಳಿಗೆ +ಕ
ರ್ಕಶರು +ರಕ್ಕಸರೆಂಬ +ಹೆಸರ್+ಇದು
ನುಸಿಗಳೊಳಗ್+ಆಶ್ರಯಿಸಿ +ಕೆಟ್ಟುದು +ಶಿವ +ಶಿವಾಯೆನುತ
ಹೊಸ +ಮಸೆಯ +ಹೊಗರಂಬುಗಳನ್
ಎಬ್ಬಿಸಿದನ್+ಉಬ್ಬಿಸಿದನು +ವಿರೋಧಿಗ
ಳನು +ಸಮೀರಣನಿಂದ +ನಿಜಭುಜ +ವಿಕ್ರಮಾನಳನ

ಅಚ್ಚರಿ:
(೧) ಸಾಯಿಸಿದ ಎಂದು ಹೇಳಲು – ಹೊಸ ಮಸೆಯ ಹೊಗರಂಬುಗಳನೆ ಬ್ಬಿಸಿದನುಬ್ಬಿಸಿದನು ವಿರೋಧಿಗ
ಳನು ಸಮೀರಣನಿಂದ ನಿಜಭುಜ ವಿಕ್ರಮಾನಳನ

ಪದ್ಯ ೩೦: ರಾಕ್ಷಸಿಯರು ಏನನ್ನು ತಂದರು?

ಹೆಗಲ ಪಕ್ಕಲೆಗಳಲಿ ಕವಿದುದು
ವಿಗಡ ಪೂತನಿವೃಂದ ಜೀರ್ಕೊಳ
ವಿಗಳ ಕೈರಾಟಳದೊಳೈದಿತು ಶಾಕಿನೀ ನಿಕರ
ತೊಗಲ ಕುನಿಕಿಲ ಬಂಡಿಗಳಲಾ
ದರ್ಗಿದು ಹೊಕ್ಕರು ರಕ್ಕಸರು ಬಾ
ಯ್ದೆಗೆದು ಬಂದುದುಲೂಕ ಜಂಬುಕ ಕಾಕ ಸಂದೋಹ (ಭೀಷ್ಮ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಪೂತನಿಗಳು ಹೆಗಲ ಮೇಲೆ ಪಕ್ಕಲೆಗಳನ್ನು ತಂದವು. ಶಾಕಿನಿಯರು ಜೀರ್ಕೊಳವಿಗಳನ್ನು ಹಿಡಿದು ಬಂದರು. ತೊಗಲ ಚೀಳಗಲನ್ನು ಬಂಡಿಗಳಲ್ಲಿ ತಂದು ರಣರಾಕ್ಷಸರು ರಣರಂಗವನ್ನು ಹೊಕ್ಕರು. ಗೂಬೆ, ನರಿ, ಕಾಗೆಗಳು ಬಾಯ್ದೆರೆದುಕೊಂಡು ಬಂದವು.

ಅರ್ಥ:
ಹೆಗಲು: ಭುಜ; ಪಕ್ಕಲೆ: ಕೊಪ್ಪರಿಗೆ; ಕವಿದುದು: ಆವರಿಸು; ವಿಗಡ: ಶೌರ್ಯ; ಪೂತನಿ: ರಾಕ್ಷಸಿ; ವೃಂದ: ಗುಂಪು; ಕೊಳವಿ: ಪೊಳ್ಳಾದ ಬಿದಿರಿನ ನಾಳ; ಕೈರಾಟಣ: ಸಣ್ಣ ಚಕ್ರ; ಐದು: ಬಂದು ಸೇರು; ಶಾಕಿನಿ: ಕ್ಷುದ್ರ ದೇವತೆ; ನಿಕರ: ಗುಂಪು; ತೊಗಲ: ಚರ್ಮ; ಕುನಿಕಿಲ: ಚೀಳ; ಬಂಡಿ: ರಥ; ಹೊಕ್ಕು: ಸೇರು; ರಕ್ಕಸ: ರಾಕ್ಷಸ; ತೆಗೆ: ಬಿಚ್ಚು; ಬಂದು: ಆಗಮಿಸು; ಉಲೂಕ: ಗೂಬೆ; ಜಂಬುಕ: ನರಿ; ಕಾಕ: ಕಾಗೆ; ಸಂದೋಹ: ಗುಂಪು;

ಪದವಿಂಗಡಣೆ:
ಹೆಗಲ +ಪಕ್ಕಲೆಗಳಲಿ +ಕವಿದುದು
ವಿಗಡ +ಪೂತನಿ+ವೃಂದ +ಜೀರ್ಕೊಳ
ವಿಗಳ +ಕೈರಾಟಳದೊಳ್+ಐದಿತು +ಶಾಕಿನೀ +ನಿಕರ
ತೊಗಲ +ಕುನಿಕಿಲ+ ಬಂಡಿಗಳಲಾ
ದರ್ಗಿದು +ಹೊಕ್ಕರು +ರಕ್ಕಸರು +ಬಾ
ಯ್ದೆಗೆದು +ಬಂದುದ್+ಉಲೂಕ+ ಜಂಬುಕ +ಕಾಕ +ಸಂದೋಹ

ಅಚ್ಚರಿ:
(೧) ವೃಂದ, ನಿಕರ, ಸಂದೋಹ – ಸಮನಾರ್ಥಕ ಪದ
(೨) ಪೂತನಿ, ಶಾಕಿನಿ – ರಾಕ್ಷಸಿಯನ್ನು ಹೇಳಲು ಬಳಸಿದ ಪದಗಳು

ಪದ್ಯ ೧೧: ಏಕಚಕ್ರಪುರದ ಅಗ್ರಹಾರದಲ್ಲಿ ಯಾವ ವಾಡಿಕೆ ಇತ್ತು?

ತಾಯೆ ಕೇಳೀ ವಿಪ್ರಪುರದೊಳ
ಗಾಯವುಂಟೆನಗೆಂದು ರಕ್ಕಸ
ನಾಯಿ ನೆಲಸಿಹನೂರಹೊರಗಿನ ಶೈಲ ಶಿಖರದಲಿ
ಆಯಿದೊಬ್ಬನ ಮನೆಮನೆಗೆ ಮೇ
ಲಾಯ ಮಹಿಪದ್ವಯಸಹಿತ ನಿ
ರ್ದಾಯದಲಿ ಹನ್ನೆರಡು ಖಂಡುಗದಕ್ಕಿಯೋಗರವ (ಆದಿ ಪರ್ವ, ೧೦ ಸಂಧಿ, ೧೧ ಪದ್ಯ)

ತಾತ್ಪರ್ಯ:
ಏನು ನಿಮ್ಮ ತೊಂದರೆ, ಯಾಕೆ ದುಃಖಿತರಾಗಿದ್ದೀರಿ ಎಂದು ಕೇಳಲು, ಆ ಬ್ರಾಹ್ಮಣ ಶ್ರೇಷ್ಠನು, ತಾಯೆ ಕೇಳಿ, ಈ ಅಗ್ರಹಾರದಲ್ಲಿ ತನಗೆ ನಿರ್ಧಿಷ್ಟ ಪಾಲಿದೆ ಎಂದು ಒಬ್ಬ ರಾಕ್ಷಸನು ಊರಹೊರಗಿರುವ ಬೆಟ್ಟದ ಮೇಲೆ ವಾಸಿಸುತಿದ್ದಾನೆ. ಈ ಊರಿನ ಪ್ರತಿಮನೆಯವರೂ, ಪ್ರತಿನಿತ್ಯವು ಅವನಿಗೆ ಹನ್ನೆರಡು ಖಂಡುಗ ಅನ್ನವನ್ನು, ಅದನ್ನು ಹೇರಿಕೊಂಡು ಹೋಗುವ ೨ ಕೋಣಗಳುನ್ನು, ಮತ್ತು ಅದನ್ನು ಹೊಡೆದುಕೊಂಡು ಹೋಗುವ ಆ ಮನುಷ್ಯನನ್ನು ಆ ರಾಕ್ಷಸನಿಗೆ ಕೊಡಬೇಕು.

ಅರ್ಥ:
ತಾಯೆ: ತಾಯಿ, ಅಮ್ಮ; ಕೇಳಿ: ಆಲಿಸಿ; ವಿಪ್ರ: ಬ್ರಾಹ್ಮಣ; ಪುರ: ಊರು; ವಿಪ್ರಪುರ: ಅಗ್ರಹಾರ; ರಕ್ಕಸ: ರಾಕ್ಷಸ, ದಾನವ; ನೆಲಸು: ವಾಸಿಸು; ನಾಯಿ: ಶ್ವಾನ; ಶೈಲ: ಬೆಟ್ಟ; ಶಿಖರ: ತುದಿ; ಆಯಿ: ಆರಿಸು; ಮನೆ: ಆಲಯ; ಮಹಿಷ: ಕೋಣ; ದ್ವಯ: ಎರಡು; ನಿರ್ದಾಯ: ದಯೆ ಇಲ್ಲದೆ, ನಿರ್ದಾಕ್ಷಿಣ್ಯ; ಅಕ್ಕಿ: ಅನ್ನದ ಪೂರ್ವ ಸ್ಥಿತಿ; ಓಗರ: ಬೇಯಿಸಿದ ಆಹಾರ;

ಪದವಿಂಗಡನೆ:
ತಾಯೆ +ಕೇಳ್+ಈ+ ವಿಪ್ರ+ಪುರದೊಳ
ಗಾಯ+ವುಂಟ್+ಎನಗ್+ಎಂದು +ರಕ್ಕಸ
ನಾಯಿ +ನೆಲಸಿಹನ್+ಊರ+ಹೊರಗಿನ+ ಶೈಲ+ ಶಿಖರದಲಿ
ಆಯಿದ್+ಒಬ್ಬನ+ ಮನೆಮನೆಗೆ+ ಮೇ
ಲ್+ಆಯ +ಮಹಿಪ+ದ್ವಯ+ಸಹಿತ+ ನಿರ್
ದಾಯದಲಿ+ ಹನ್ನೆರಡು+ ಖಂಡುಗದ್+ಅಕ್ಕಿಯ್+ಓಗರವ

ಅಚ್ಚರಿ:
(೧) ನಾಯಿ ಎಂದು ಬೈಗುಳ ಪದದ ಬಳಕೆ – ರಕ್ಕಸ ನಾಯಿ – ೨,೩ ಸಾಲು
(೨) “ಮ” ಕಾರದ ಸಾಲು ಪದಗಳು – “ಮನೆಮನೆಗೆ ಮೇಲಾಯ ಮಹಿಪದ್ವಯಸಹಿತ”
(೩) ಲಾಯ, ಗಾಯ, ನಾಯಿ, ತಾಯಿ – ಪ್ರಾಸವಾಗಿ ಜೋಡಿಸಿರುವ ಪದಗಳು