ಪದ್ಯ ೩೪: ಕಮಲಗಳೇಕೆ ಸಂತಸಗೊಂಡವು?

ಬಗೆಯಲರಿದಿದು ಗರ್ಭ ಬಲಿಯದೆ
ಹಗಲನೀದುದೊ ರಾತ್ರಿ ಕುಡಿಕುಡಿ
ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
ಹೊಗರುಗೆಟ್ಟುದು ಕುಮುದ ಕಮಳದ
ಬಿಗುಹು ಬಿಟ್ಟುದು ಚಕ್ರವಾಕದ
ತಹಗು ಕೆಟ್ಟುದು ಹೇಳೆನಲು ರಂಜಿಸಿತು ದೀಪಾಳಿ (ದ್ರೋಣ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಗರ್ಭ ಬಲಿಯುವ ಮುನ್ನವೇ ರಾತ್ರಿಯು ಹಗಲನ್ನು ಈಯಿತೋ ಎಂಬಮ್ತೆ ಕೈಪಂಜುಗಳು ಬೆಳಕನ್ನು ಬೀರುತ್ತಿದ್ದವು. ಕುಮುದದ ಸಂತೋಷ ಕುಗ್ಗಿತು. ಕಮಲಗಳು ಅರಳಿದವು. ಚಕ್ರವಾಕಗಳ ಬೆದರಿಗೆ ಬಿಟ್ಟಿತು ಎನ್ನುವಂತೆ ದೀಪಗಳು ಹೊಳೆದವು.

ಅರ್ಥ:
ಬಗೆ: ರೀತಿ; ಅರಿ: ತಿಳಿ; ಗರ್ಭ: ಹೊಟ್ಟೆ, ಉದರ; ಬಲಿ: ಗಟ್ಟಿ, ದೃಢ; ಹಗಲು: ದಿನ; ರಾತ್ರಿ: ಇರುಳು; ಕುಡಿ: ಪಾನಮಾಡು; ತಿಮಿರ: ರಾತ್ರಿ; ಕರ: ಹಸ್ತ; ದೀಪ್ತಿ: ಬೆಳಕು, ಕಾಂತಿ; ಉಗುಳು: ಹೊರಹಾಕು; ಹೊಗರು: ಕಾಂತಿ, ಪ್ರಕಾಶ; ಕೆಟ್ಟು: ಹಾಳು; ಕುಮುದ: ಬಿಳಿಯ ನೈದಿಲೆ; ಕಮಳ: ತಾವರೆ; ಬಿಗುಹು: ಬಿಗಿ; ಚಕ್ರವಾಕ: ಕೋಕ ಪಕ್ಷಿ; ತಗಹು: ತಡೆ, ಪ್ರತಿಬಂಧಿಸು; ರಂಜಿಸು: ಶೋಭಿಸು; ದೀಪಾಳಿ: ದೀವಗಳ ಸಾಲು;

ಪದವಿಂಗಡಣೆ:
ಬಗೆಯಲ್+ಅರಿದಿದು +ಗರ್ಭ +ಬಲಿಯದೆ
ಹಗಲನ್+ಈದುದೊ +ರಾತ್ರಿ +ಕುಡಿ+ಕುಡಿದ್
ಉಗುಳುತಿರ್ದುವು +ತಿಮಿರವನು +ಕರ+ದೀಪ್ತಿಕಾಳಿಗಳು
ಹೊಗರು+ಕೆಟ್ಟುದು +ಕುಮುದ +ಕಮಳದ
ಬಿಗುಹು +ಬಿಟ್ಟುದು +ಚಕ್ರವಾಕದ
ತಹಗು +ಕೆಟ್ಟುದು+ ಹೇಳೆನಲು +ರಂಜಿಸಿತು +ದೀಪಾಳಿ

ಅಚ್ಚರಿ:
(೧) ರೂಪಕದ ಪ್ರಯೋಗ – ಗರ್ಭ ಬಲಿಯದೆ ಹಗಲನೀದುದೊ ರಾತ್ರಿ; ಕುಡಿಕುಡಿ ದುಗುಳುತಿರ್ದುವು ತಿಮಿರವನು ಕರದೀಪ್ತಿಕಾಳಿಗಳು
(೨) ರೂಪಕದ ಪ್ರಯೋಗ – ಹೊಗರುಗೆಟ್ಟುದು ಕುಮುದ; ಕಮಳದ ಬಿಗುಹು ಬಿಟ್ಟುದು; ಚಕ್ರವಾಕದ
ತಹಗು ಕೆಟ್ಟುದು

ಪದ್ಯ ೨೩: ದುರ್ಯೋಧನನು ಧೃತರಾಷ್ಟ್ರನನ್ನು ಹೇಗೆ ಒಪ್ಪಿಸಿದರು?

ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು (ಅರಣ್ಯ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾವು ಅವರೊಡನೆ ಶಪಥ, ಕೋಪವನ್ನು ತಾಳುವುದಿಲ್ಲ. ಯುದ್ಧಕ್ಕೆ ಸಾಣೆ ಹಿಡಿಯುವುದಿಲ್ಲ. ಯುದ್ಧವು ನಮ್ಮ ಮನಸ್ಸಿನಲ್ಲೇ ಇಲ್ಲ. ಸ್ತ್ರೀಯರ ಸಂಗೀತಾದಿಗಳಿಂದ ಅವರ ಮನಸ್ಸನ್ನು ರಂಜಿಸಿ ಬರುತ್ತೇವೆ, ನಿಮ್ಮಾಣೆ ಎಂದು ದುರ್ಯೋಧನ, ಕರ್ಣ, ಶಕುನಿಗಳು ಧೃತರಾಷ್ಟ್ರನನ್ನು ಒಪ್ಪಿಸಿದರು.

ಅರ್ಥ:
ಹೂಣೆ: ಪ್ರತಿಜ್ಞೆ; ಹೊಗೆ: ಸಿಟ್ಟಿಗೇಳು; ಸೆಣಸು: ಹೋರಾಡು; ಸಾಣೆ: ಪರೀಕ್ಷಿಸುವ ಕಲ್ಲು; ಮಸೆ: ಉದ್ರೇಕ, ಆವೇಶ; ಕದನ: ಯುದ್ಧ; ಕಾಣೆ: ತೋರು; ಅರಿಕೆ: ವಿಜ್ಞಾಪನೆ; ಸಲುಗೆ: ಸದರ, ಪ್ರೀತಿಯ ನಡವಳಿಕೆ; ಸಾಧು: ಒಳ್ಳೆಯದು, ಸೌಮ್ಯವಾದುದು; ಸಾಮ: ಶಾಂತಗೊಳಿಸುವಿಕೆ; ರಾಣಿ: ಅರಸಿ; ರಹಿ: ಸಡಗರ, ಸಂಭ್ರಮ; ರಂಜಿಸು: ಸಂತೋಷಗೊಳಿಸು; ಜಾಣು: ಬುದ್ಧಿವಂತಿಕೆ; ಬಹೆ: ಬರುವೆವು, ಹಿಂದಿರುಗು; ಅರಸ: ರಾಜ; ನಿಮ್ಮಡಿ: ನಿಮ್ಮ ಚರಣ; ಆಣೆ: ಪ್ರಮಾಣ; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ಹೂಣೆ +ಹೊಗೆವ್+ಅವರೊಡನೆ +ಸೆಣಸಿನ
ಸಾಣೆಯಿಕ್ಕೆವು+ ಮಸೆವ +ಕದನವ
ಕಾಣೆವ್+ಎಮ್ಮರಿಕೆಯಲಿ+ ಸಲುಗೆಯ+ ಸಾಧು +ಸಾಮದಲಿ
ರಾಣಿಯರ +ರಹಿಯಿಂದ +ರಂಜಿಸಿ
ಜಾಣಿನಲಿ +ಬಹೆವ್+ಅರಸ +ನಿಮ್ಮಡಿ
ಆಣೆಯೆಂದ್+ಒಡಬಡಿಸಿದರು +ನೃಪ +ಕರ್ಣ +ಶಕುನಿಗಳು

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಲುಗೆಯ ಸಾಧು ಸಾಮದಲಿ
(೨) ರ ಕಾರದ ತ್ರಿವಳಿ ಪದ – ರಾಣಿಯರ ರಹಿಯಿಂದ ರಂಜಿಸಿ

ಪದ್ಯ ೧: ಯುಧಿಷ್ಠಿರನೇಕೆ ಆಶ್ಚರ್ಯಗೊಂಡನು?

ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
ಕೇಳಿದನಿದೇನೆಂದು ವರವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನಸಂಗತಿಗಳ ಫಲೋತ್ತರವ (ಅರಣ್ಯ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನ ಓಲಗದಲ್ಲಿ ನೂರಕ್ಕೂ ಹೆಚ್ಚು ಉತ್ಪಾತಕಗಳು ಕಾಣಿಸಿಕೊಂಡು ಕಣ್ಣಿಗೆ ಭಯವನ್ನುಂಟುಮಾಡಿ ಅದ್ಭುತವನ್ನು ತೋರ್ಪಡಿಸಿದವು, ಇವುಗಳನ್ನು ನೋಡಿದ ಯುಧಿಷ್ಠಿರನು ಅಲ್ಲಿ ನೆರೆದಿದ್ದ ಬ್ರಾಹ್ಮಣ ಶ್ರೇಷ್ಠರನ್ನು ಕೇಳಲು, ಧೌಮ್ಯಾದಿಗಳು ಆ ಶಕುನಗಳ ಫಲವನ್ನು ತಿಳಿಸಿದರು.

ಅರ್ಥ:
ಕೇಳು: ಆಲಿಸು; ಓಲಗ: ದರ್ಬಾರು; ಉತ್ಪಾತ: ಆಕಸ್ಮಿಕವಾದ ಘಟನೆ; ಶತ: ನೂರು; ಆಲಿ: ಕಣ್ಣು; ಅಂಜಿಸು: ಹೆದರು; ಅತಿ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ಅದ್ಭುತ: ಆಶ್ಚರ್ಯ; ವರ: ಶ್ರೇಷ್ಠ; ವಿಪ್ರಾಳಿ: ಬ್ರಹ್ಮಣರ ಸಮೂಹ; ಆದಿ: ಮುಂತಾದ; ಋಷಿ: ಮುನಿ; ಹೇಳು: ತಿಳಿಸು; ಸಂಗತಿ: ವಿವರ; ಫಲ: ಪ್ರಯೋಜನ; ಉತ್ತರ: ಅಭಿವೃದ್ಧಿ;

ಪದವಿಂಗಡಣೆ:
ಕೇಳು +ಜನಮೇಜಯ +ಯುಧಿಷ್ಠಿರನ್
ಓಲಗದೊಳ್+ಉತ್ಪಾತ +ಶತವ್+ಇವರ್
ಆಲಿಗಳ್+ಅಂಜಿಸಿದುವ್+ಅತಿ+ರಂಜಿಸಿದುವ್+ಅದ್ಭುತವ
ಕೇಳಿದನ್+ಇದೇನೆಂದು +ವರ+ವಿ
ಪ್ರಾಳಿಯನು +ಧೌಮ್ಯಾದಿ +ಋಷಿಗಳು
ಹೇಳಿದರು +ತತ್ ಶಕುನ+ಸಂಗತಿಗಳ +ಫಲೋತ್ತರವ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿಸಿದುದು – ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
(೨) ಕೇಳಿ, ವಿಪ್ರಾಳಿ, ಹೇಳಿ – ಪ್ರಾಸ ಪದಗಳು

ಪದ್ಯ ೪೯: ಧನಂಜಯನ ಕಣ್ಣುಗಳು ಯಾವ ರಸದಲ್ಲಿ ಮುಳುಗಿದವು?

ಮತ್ತೆ ಕಂಡನು ಖಂಡಪರುಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದವು ಕೌತುಕವ ರಂಜಿಸಿ
ಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ (ಅರಣ್ಯ ಪರ್ವ, ೭ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಿರಾತನ ತಲೆಯ ಮೇಲೆ ತಾನು ಪೂಜಿಸಿದ ಹೂಗಳನ್ನು ಮತ್ತೆ ನೋಡಿದನು. ಇತ್ತ ತಿರುಗಿದರೆ ಆ ಹೂಗಳು ಲಿಂಗದ ಮೇಲಿರಲಿಲ್ಲ. ಅರ್ಜುನನ ಕಣ್ಣುಗಳು ಕೌತುಕಗೊಂಡು, ಇದು ಅದ್ಭುತವೆಂದುಕೊಳ್ಳುತ್ತಿದ್ದಂತೆಯೇ, ಅವನ ಕಣ್ಣುಗಳು ಭಯಾನಕ ರಸದಲ್ಲಿ ಮುಳುಗಿದವು.

ಅರ್ಥ:
ಕಂಡು: ನೋಡು; ಖಂಡಪರುಶು: ಶಿವ;ಉತ್ತಮಾಂಗ: ಶಿರ; ಲಿಂಗ: ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಕಾಣು: ತೋರು; ಕುಸುಮ: ಹೂವು; ಮಂಜರಿ: ಗೊಂಚಲು; ತುತ್ತು: ಅನುಭವ, ಅಡಗಿಸು; ಕೌತುಕ: ಆಶ್ಚರ್ಯ; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಅದುಭುತ: ಆಶ್ಚರ್ಯ; ಭಯಾನಕ: ಭಯಂಕರ, ಘೋರ; ರಸ: ಸಾರ; ಮುಳುಗು: ತೋಯು; ಕಂಗಳು: ಕಣ್ಣು;

ಪದವಿಂಗಡಣೆ:
ಮತ್ತೆ+ ಕಂಡನು +ಖಂಡಪರುಶುವಿನ್
ಉತ್ತಮಾಂಗದಲ್+ಈಚೆಯಲಿ +ಲಿಂಗ
ಉತ್ತಮಾಂಗದ+ ಮೇಲೆ +ಕಾಣನು +ಕುಸುಮ +ಮಂಜರಿಯ
ತುತ್ತಿದವು +ಕೌತುಕವ +ರಂಜಿಸಿ
ಹೊತ್ತವ್+ಅದುಭುತವನು +ಭಯಾನಕ
ವೆತ್ತ+ರಸದಲಿ +ಮುಳುಗಿದವು+ ಕಂಗಳು +ಧನಂಜಯನ

ಅಚ್ಚರಿ:
(೧) ಅರ್ಜುನನಿಗಾದ ಭಾವನೆ: ತುತ್ತಿದವು ಕೌತುಕವ ರಂಜಿಸಿಹೊತ್ತವದುಭುತವನು ಭಯಾನಕ
ವೆತ್ತರಸದಲಿ ಮುಳುಗಿದವು ಕಂಗಳು ಧನಂಜಯನ