ಪದ್ಯ ೬೪: ಯಾರು ಬ್ರಾಹ್ಮಣರಲ್ಲಿ ಸಮರ್ಥರು?

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ (ಉದ್ಯೋಗ ಪರ್ವ, ೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಯಾವ ಬ್ರಾಹ್ಮಣನು ಯಜ್ಞವನು ಮಾಡುವನೋ, ತನ್ನ ಶಿಷ್ಯರಿಗೆ ಮಾಡುವ ವೇದಾಧ್ಯಯನದಿಂದ ಯೋಗ್ಯರಾದ ಶಿಷ್ಯರನ್ನು ತಯಾರಿಸಿ ಕಾಪಾಡುವನೋ, ದಾನ ನಿರತನೋ, ಇತರರು ಕೊಟ್ಟ ದಾನವನ್ನು ಸ್ವೀಕರಿಸಬಲ್ಲನೋ ಅಂತಹವನು ಬ್ರಾಹ್ಮಣರಲ್ಲಿ ಸಮರ್ಥನಾದವನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಾಡು: ನಿರ್ವಹಿಸು, ರಚಿಸು, ತಯಾರಿಸು; ಯಜ್ಞ: ಅರ್ಧ್ವ; ಪರರು: ಇತರರು; ವೇದ: ಶೃತಿ; ಅಧ್ಯಯನ: ಓದು, ಕಲಿ; ವಿಷಯ: ವಿಚಾರ, ಸಂಗತಿ; ಯೋಗ್ಯ: ಸಮರ್ಥ; ದಾನ: ಪರರಿಗೆ ಕೊಡುವ ವಸ್ತು; ಲೋಗರು: ಜನರು; ನೀಡು: ಕೊಡು; ಒಳಕೊಂಬ: ತೆಗೆದುಕೊಳ್ಳು; ಗುಣ: ನಡತೆ, ಸ್ವಭಾವ; ಕೂಡಿಕೊಂಡಿಹ: ಹೊಂದಿಸಿಕೊಂಡಿರುವ; ಸಮರ್ಥ: ಯೋಗ್ಯವಾದ, ತಕ್ಕ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಮಾಡುತಿಹ +ಯಜ್ಞವನು +ಪರರಿಗೆ
ಮಾಡಿಸುವ +ವೇದ+ಅಧ್ಯಯನವನು
ಮಾಡುತಿಹ +ತದ್ವಿಷಯದಲಿ +ಯೋಗ್ಯರನು +ಮಾಡಿಸುವ
ಮಾಡುತಿಹ+ ದಾನವನು +ಲೋಗರು
ನೀಡುತಿರಲ್+ಒಳಕೊಂಬ +ಗುಣವನು
ಕೂಡಿಕೊಂಡಿಹನೇ +ಸಮರ್ಥನು +ವಿಪ್ರರೊಳಗೆಂದ

ಅಚ್ಚರಿ:
(೧) ಮಾಡುತಿಹ – ೧, ೩, ೪ ಸಾಲಿನ ಮೊದಲ ಪದ
(೨) ಯೋಗ್ಯ, ಸಮರ್ಥ – ಸಮಾನಾರ್ಥಕ ಪದ