ಪದ್ಯ ೭: ಧರ್ಮರಾಯನು ಭೀಷ್ಮರಲ್ಲಿ ಏನೆಂದು ಬೇಡಿದನು?

ಕಾದುವರೆ ನಮ್ಮುತ್ಸವಕೆ ನೆರ
ವಾದವರು ಸೈರಿಸುವರಗ್ಗದ
ಯಾದವೇಂದ್ರನ ನಿಂದೆ ಮೇಲಧ್ವರ ವಿಸಂಘಟನ
ಈ ದುರಂತದ ಚಿಂತೆಯಲಿ ಬೇ
ಳಾದುದೆನ್ನಯ ಚಿತ್ತವದ್ದೆನು
ಖೇದ ಪಂಕದೊಳೆನ್ನನುದ್ಧರಿಸೆಂದನಾ ಭೂಪ (ಸಭಾ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಷ್ಮ ಪಿತಾಮಹರೇ, ಯುದ್ಧವಾದರೆ ನಾವು ನಮ್ಮ ಮಿತ್ರರೊಡನೆ ಯುದ್ಧವನ್ನು ಎದುರಿಸಬಲ್ಲೆವು, ಆದರೆ ಶ್ರೀಕೃಷ್ಣನಿಗೆ ಅಪಮಾನ, ಯಜ್ಞಧ್ವಂಸ ಇಂತಹ ದುರಂತವನ್ನು ನೆನೆದು ನನ್ನ ಮನಸ್ಸು ಕಳವಳಗೊಂಡಿದೆ. ದುಃಖದ ಕೆಸರಿನಲ್ಲಿ ಹೊರಳುತ್ತಿರುವ ನನ್ನನ್ನು ಮೇಲಕ್ಕೆತ್ತಿ ಎಂದು ಯುಧಿಷ್ಠಿರನು ಭೀಷ್ಮರನ್ನು ಬೇಡಿಕೊಂಡನು.

ಅರ್ಥ:
ಕಾದು: ಹೋರಾಡು; ಉತ್ಸವ: ಸಮಾರಂಭ; ನೆರವು: ಸಹಾಯ; ಸೈರಿಸು: ಸಮಾಧಾನಪಡು; ಅಗ್ಗ: ಶ್ರೇಷ್ಠ; ಯಾದವೇಂದ್ರ: ಕೃಷ್ಣ; ನಿಂದೆ: ತೆಗಳು, ಬಯ್ಯು; ಅಧ್ವರ: ಯಜ್ಞ; ಸಂಘಟ: ಘರ್ಷಣೆ, ಯುದ್ಧ; ದುರಂತ: ದುರ್ಘಟನೆ; ಚಿಂತೆ: ಯೋಚನೆ; ಬೇಳಾಗು: ತಳಮಳಗೊಳ್ಳು; ಚಿತ್ತ: ಮನಸ್ಸು; ಖೇದ: ದುಃಖ; ಪಂಕ: ಕೆಸರು; ಉದ್ಧರಿಸು: ಮೇಲಕ್ಕೆ ಎತ್ತುವುದು; ಭೂಪ: ರಾಜ; ಅದ್ದು: ಮುಳುಗು;

ಪದವಿಂಗಡಣೆ:
ಕಾದುವರೆ +ನಮ್ಮ್+ಉತ್ಸವಕೆ +ನೆರ
ವಾದವರು +ಸೈರಿಸುವರ್+ಅಗ್ಗದ
ಯಾದವೇಂದ್ರನ +ನಿಂದೆ ಮೇಲ್+ಅಧ್ವರ +ವಿಸಂಘಟನ
ಈ +ದುರಂತದ +ಚಿಂತೆಯಲಿ +ಬೇ
ಳಾದುದ್+ಎನ್ನಯ +ಚಿತ್ತವ್+ಅದ್ದೆನು
ಖೇದ +ಪಂಕದೊಳ್+ಎನ್ನನ್+ಉದ್ಧರಿಸೆಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚಿತ್ತವದ್ದೆನು ಖೇದ ಪಂಕದೊಳ್
(೨) ಕೃಷ್ಣನನ್ನು ಯಾದವೇಂದ್ರ ಎಂದು ಕರೆದಿರುವುದು

ಪದ್ಯ ೨೩: ಪಕ್ಷಿಗಳು ಕೃಷ್ಣನನ್ನು ಹೇಗೆ ಸ್ವಾಗತಿಸಿದವು?

ಗಿಳಿಯ ತುಂಬಿಯ ಹಂಸೆಗಳ ಕೋ
ಗಿಲೆಯ ಕೊಳರ್ವಕ್ಕಿಗಳ ಕೊಂಚೆಯ
ಕೊಳಲುವಕ್ಕಿಯ ಜಕ್ಕವಕ್ಕಿಯ ನವಿಲು ಪಾರಿವದ
ಕಲರುಚಿಯ ಕರ್ಣಾಮೃತದ ತನಿ
ವಳೆಯ ಕರೆದುದು ಯಾದವೇಂದ್ರನ
ಬಲದ ಕಿವಿಗಳಲಿಭಪುರಿಯ ಹೊರವಳಯದುದ್ಯಾನ (ಉದ್ಯೋಗ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣನ ಆಗಮನವು ಯಾವ ರೀತಿ ಮನುಷ್ಯರನ್ನು ಪಾವನಗೊಳಿಸಿತೋ ಅದೇ ರೀತಿ ಪಕ್ಷಿಗಳು ಯಾದವೇಂದ್ರನ ಆಗಮನದಿಂದ ಸಂತಸಗೊಂಡು ಇಂಪಾದ ಧ್ವನಿಯಿಂದ ಸ್ವಾಗತಿಸಿದರು. ಗಿಳಿ, ದುಂಬಿ, ಹಂಸ, ಕೋಗಿಲೆ, ಕೊಳರ್ವಕ್ಕಿ, ಕ್ರೌಂಚಪಕ್ಷಿ, ಕೊಳಲುವಕ್ಕಿ, ಜಕ್ಕವಕ್ಕಿ, ನವಿಲು, ಪಾರಿವಾಳ ಹೀಗೆ ಹಲವು ಹಕ್ಕಿಗಳ ನಿನಾದದ ಚೆಲುವು ಹಸ್ತಿನಾಪುರದ ಹೊರವಳಯದಲ್ಲಿ ಕೃಷ್ಣನ ಬಲಕಿವಿಗೆ ಅಮೃತವನ್ನು ಮತ್ತು ಸವಿಯನ್ನು ನೀಡಿದವು.

ಅರ್ಥ:
ಗಿಳಿ: ಶುಕ; ತುಂಬಿ: ದುಂಬಿ; ಹಂಸ: ಬಿಳಿಯ ಬಣ್ಣದ ಪಕ್ಷಿ; ಕೋಗಿಲೆ: ಕೋಕಿಲ, ಪಿಕ; ಕೊಂಚೆ: ಕ್ರೌಂಚಪಕ್ಷಿ; ನವಿಲು: ಮಯ್ಯೂರ; ಪಾರಿವ: ಪಾರಿವಾಳ; ಕಲ: ಮಧುರ ಧ್ವನಿ; ರುಚಿ: ಸವಿ; ಕರ್ಣ: ಕಿವಿ; ಅಮೃತ: ಸುಧೆ; ತನಿ:ಸವಿಯಾದುದು, ಹೊಸತು; ಕರೆ: ಬರೆಮಾಡು; ಇಭಪುರಿ: ಹಸ್ತಿನಾಪುರಿ; ಹೊರವಳಯ: ಹೊರಭಾಗದ; ಉದ್ಯಾನ: ಕೈತೋಟ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಗಿಳಿಯ +ತುಂಬಿಯ +ಹಂಸೆಗಳ+ ಕೋ
ಗಿಲೆಯ +ಕೊಳರ್ವಕ್ಕಿಗಳ+ ಕೊಂಚೆಯ
ಕೊಳಲುವಕ್ಕಿಯ+ ಜಕ್ಕವಕ್ಕಿಯ+ ನವಿಲು +ಪಾರಿವದ
ಕಲರುಚಿಯ +ಕರ್ಣಾಮೃತದ+ ತನಿ
ವಳೆಯ +ಕರೆದುದು +ಯಾದವೇಂದ್ರನ
ಬಲದ +ಕಿವಿಗಳಲ್+ಇಭಪುರಿಯ +ಹೊರವಳಯದ್+ಉದ್ಯಾನ

ಅಚ್ಚರಿ:
(೧) ಪಕ್ಷಿಗಳ ಹೆಸರನ್ನು ತಿಳಿಸುವ ಪದ್ಯ
(೨) ಪಕ್ಷಿಗಳು ಕೃಷ್ಣನನ್ನು ಕರೆದ ಬಗೆ – ಕಲರುಚಿಯ ಕರ್ಣಾಮೃತದ ತನಿವಳೆಯ ಕರೆದುದು ಯಾದವೇಂದ್ರನ