ಪದ್ಯ ೬: ಶೌನಕಾದಿ ಮುನಿಗಳಿಗೆ ಸೂತನು ಯಾವ ಕಥೆಯನ್ನು ಹೇಳಿದನು?

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ (ಆದಿ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಸೂತನೆ, ಕರ್ಮಗಳಲ್ಲಿ ಇರಬಹುದಾದ ಪಾಪವೆಂಬ ಸರ್ಪವಿಷಕ್ಕೆ ಚಿಕಿತ್ಸೆಯಂತಿರುವ ಮಹಾಭಾರವನ್ನು ಜನಮೇಜಯನ ಯಾಗದಲ್ಲಿ ನೀನು ಕೇಳಿದಂತೆಯೇ ನಮಗೆ ಹೇಳು. ನಿನ್ನ ಮಾತುಗಳನ್ನು ನಾವು ತಲೆಯ ಮೇಲೆ ಹೊತ್ತುಕೊಳ್ಳುತ್ತೇವೆ ಎಂದು ಶೌನಕಾದಿಗಳು ಹೇಳಲು ಸೂತನು ಅವರಿಗೆ ವಂದಿಸಿ ನಿಮ್ಮ ಅಪ್ಪಣೆಯಂತೆ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದನು.

ಅರ್ಥ:
ಹೇಳು: ತಿಳಿಸು; ಸೂತ: ಪುರಾಣಗಳನ್ನು ಬೋಧಿಸಿದ ಒಬ್ಬ ಋಷಿಯ ಹೆಸರು; ದುರಿತ: ಪಾಪ, ಪಾತಕ; ವ್ಯಾಳ: ಹಾವು; ವಿಷ: ಗರಳ; ಯಾಗ: ಕ್ರತು; ಮೌಳಿ: ತಲೆ; ನಿಖಿಳ: ಎಲ್ಲಾ; ಮುನಿ: ಋಷಿ; ಅನುಜ್ಞೆ: ಒಪ್ಪಿಗೆ; ಕೈಮುಗಿ: ನಮಸ್ಕರಿಸು; ಓಲಗಿಸು: ಸೇವೆ ಮಾಡು; ಗುಳಿಕ: ಔಷಧಿ;

ಪದವಿಂಗಡಣೆ:
ಹೇಳು +ಸಾಕ್+ಎಲೆ +ಸೂತ +ದುರಿತ
ವ್ಯಾಳ +ವಿಷಜಾಂಗುಳಿಕವನು+ ನೀ
ಕೇಳಿದಂದದೊಳ್+ಅಂದು +ಜನಮೇಜಯನ+ ಯಾಗದಲಿ
ಮೌಳಿಗಳಲ್+ಆನುವೆವು +ನಿನ್ನಯ
ಹೇಳಿಕೆಯನ್+ಎನೆ +ನಿಖಿಳ +ಮುನಿಗಳನ್
ಓಲಗಿಸುವೆನು +ನಿಮ್ಮ್+ಅನುಜ್ಞೆಯಲೆಂದು +ಕೈಮುಗಿದ

ಅಚ್ಚರಿ:
(೧) ರೂಪಕದ ಪ್ರಯೋಗ – ದುರಿತವ್ಯಾಳ ವಿಷಜಾಂಗುಳಿಕವನು

ಪದ್ಯ ೧೭: ಸಹದೇವನು ಅಗ್ನಿಗೆ ನಗುತ್ತಾ ಏನು ಹೇಳಿದನು?

ಯಾಗವಿದು ನಿನಗೋಸುಗವೆ ನೃಪ
ಯಾಗ ಸಿದ್ಧಿಗೆ ಬಂದೆವಲ್ಲದೆ
ಮೇಗೆ ತಾನರಿಯದೆ ಧನಾಶೆಯಲಿವನ ಮುರಿಯೆವಲೈ
ಈಗ ನೀನಡ್ಡವಿಸಲೆಮ್ಮಯ
ಯಾಗವುಳಿಯಲಿ ನಿನಗೆ ಮಾಣಲಿ
ಯಾಗ ಪೌರೋಹಿತ್ಯವೆಂದನು ನಗುತ ಸಹದೇವ (ಸಭಾ ಪರ್ವ, ೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಸಹದೇವನು ಅಗ್ನಿಯನ್ನು ಆರಾಧಿಸಿ, “ಅಗ್ನಿದೇವ, ನಾವು ಈ ಯಾಗವನ್ನು ನಿನಗಾಗಿ ಮಾಡುತ್ತಿದ್ದೇವೆ ಹೊರತು, ದುಡ್ಡಿನ ಆಶೆಯಿಂದಲ್ಲ ಮತ್ತು ನೀಲನನ್ನು ನಾಶಮಾಡುವುದಕ್ಕೂ ಅಲ್ಲ. ನೀನೇನಾದರು ಅಡ್ಡಮಾಡಿದರೆ, ಯಾಗವು ಆಗುವುದಿಲ್ಲ, ಆಮೇಲೆ ನಿನಗೆ ಯಾಗದ ಪೌರೋಹಿತ್ಯವೂ ಸಿಗುವುದಿಲ್ಲ” ಎಂದು ನಗುತ ಹೇಳಿದನು.

ಅರ್ಥ:
ಯಾಗ: ಕ್ರತು; ಓಸುಗ: ಓಸ್ಕರ; ನೃಪ: ರಾಜ; ಸಿದ್ಧಿ: ಸಾಫಲ್ಯ, ಸಾಧನೆ; ಮೇಗೆ: ಆಮೇಲೆ; ಅರಿ: ತಿಳಿ; ಧನ: ಐಶ್ವರ್ಯ; ಮುರಿ: ಸೋಲಿಸು; ಅಡ್ಡ: ತಡೆ; ಮಾಣಲಿ: ನಿಲ್ಲಿಸಲಿ, ಬಿಡಲಿ; ಪೌರೋಹಿತ್ಯ:ಪುರೋಹಿತನ ಕೆಲಸ; ನಗು:ಸಂತಸ;

ಪದವಿಂಗಡಣೆ:
ಯಾಗವಿದು +ನಿನಗ್+ಓಸುಗವೆ +ನೃಪ
ಯಾಗ +ಸಿದ್ಧಿಗೆ +ಬಂದೆವ್+ಅಲ್ಲದೆ
ಮೇಗೆ +ತಾನರಿಯದೆ +ಧನಾಶೆಯಲ್+ಇವನ +ಮುರಿಯೆವಲೈ
ಈಗ+ ನೀನಡ್ಡವಿಸಲ್+ಎಮ್ಮಯ
ಯಾಗವುಳಿಯಲಿ +ನಿನಗೆ +ಮಾಣಲಿ
ಯಾಗ +ಪೌರೋಹಿತ್ಯ+ವೆಂದನು +ನಗುತ +ಸಹದೇವ

ಅಚ್ಚರಿ:
(೧) ಯಾಗ – ೧, ೨, ೫, ೬ ಸಾಲಿನ ಮೊದಲ ಪದ

ಪದ್ಯ ೧೮: ದೇವತೆಗಳಿಗೆ ಅಜೀರ್ಣವಾಗಲು ಕಾರಣವೇನು?

ಯಾಗ ವಹ್ನಿಯ ಧೂಮದಲಿ ದಿಗು
ಭಾಗ ವಿವರಣವಡಗಿತು ಹವಿ
ರ್ಭಾಗ ಭೋಜನದಿಂದಲಾದುದಜೀರ್ಣವಮರರಿಗೆ
ಯಾಗ ದಕ್ಷಿಣೆಗಳಲಿ ಬಹಳ
ತ್ಯಾಗ ದಾನಕೆ ಲಟಕಟಿಸಿ ತಾ
ವಾಗಿ ಕೈಯಾನರು ಯುಧಿಷ್ಠಿರ ನೃಪನ ರಾಜ್ಯದಲಿ (ಆದಿ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ರಾಜ್ಯದಲ್ಲಿ ಧರ್ಮದ ಕಾರ್ಯಗಳು ಸಾಂಗೋಪಾಂಗವಾಗಿ ನಡೆಯುತ್ತಿದ್ದವು. ಈ ಕಾರ್ಯಗಳು ಎಷ್ಟು ನಡೆಯುತ್ತಿದ್ದವು ಎಂದರೆ, ಯಜ್ಞ ಯಾಗಾದಿಗಳಿಂದ ಹೊರಬರುವ ಹೊಗೆಯು ಕವಿದು ದಿಕ್ಕುಗಳೇ ತಿಳಿಯದಂತಾಯಿತು. ಹವಿಸ್ಸಿನಿಂದ ದೇವತೆಗಳು ಅಜೀರ್ಣಗೊಂಡರು, ಯಾಗದಲ್ಲಿ ಬಹಳವಾಗಿ ದಕ್ಷಿಣೆಗಳನ್ನು ಪಡೆದು ಬೇಸತ್ತು, ತಾವಾಗಿಯೇ ಯಾರೂ ದಕ್ಷಿಣೆಗಾಗಿ ಕೈಯೆತ್ತುತ್ತಿರಲಿಲ್ಲ.

ಅರ್ಥ:
ಯಾಗ:ಯಜ್ಞ; ವಹ್ನಿ:ಅಗ್ನಿ, ಬೆಂಕಿ; ಧೂಮ:ಹೊಗೆ;ದಿಗು: ದಿಕ್ಕು; ವಿವರಣ: ವಿಸ್ತಾರವಾಗಿ ಹೇಳುವುದು; ಅಡಗಿತು: ಮುಚ್ಚು; ಹವಿ: ಹೋಮದಲ್ಲಿ ದೇವತೆಗಳಿಗೆ ಆಹುತಿಯಾಗಿ ಕೊಡುವ ತುಪ್ಪ; ಭಾಗ: ಅಂಶ, ಪಾಲು; ಭೋಜನ: ಊಟ; ಅಜೀರ್ಣ: ಜೀರ್ಣವಾಗದ; ದಕ್ಷಿಣೆ:ಸಂಭಾವನೆ; ತ್ಯಾಗ:ದಾನ, ಕೊಡುಗೆ, ತೊರೆಯುವುದು; ದಾನ:ನೀಡುವುದು, ಚತುರೋಪಾಯದಲ್ಲಿ ಒಂದು; ಲಟಕಟಿಸು: ಬಳಲು, ಆಯಾಸಗೊಳ್ಳು; ತಾವಾಗಿ: ಸ್ವಂತವಾಗಿ; ನೃಪ: ರಾಜ; ರಾಜ್ಯ: ದೇಶ; ಕೈ: ಕರ, ಹಸ್ತ;

ಪದವಿಂಗಡಣೆ:
ಯಾಗ +ವಹ್ನಿಯ +ಧೂಮದಲಿ +ದಿಗು
ಭಾಗ +ವಿವರಣವ್+ಅಡಗಿತು +ಹವಿ
ರ್ಭಾಗ +ಭೋಜನದಿಂದಲ್+ಆದುದ್+ಅಜೀರ್ಣವ್+ಅಮರರಿಗೆ
ಯಾಗ +ದಕ್ಷಿಣೆಗಳಲಿ+ ಬಹಳ
ತ್ಯಾಗ +ದಾನಕೆ +ಲಟಕಟಿಸಿ+ ತಾ
ವಾಗಿ +ಕೈಯಾನರು+ ಯುಧಿಷ್ಠಿರ+ ನೃಪನ+ ರಾಜ್ಯದಲಿ

ಅಚ್ಚರಿ:
(೧) ಯಾಗ – ೧, ೪ ಸಾಲಿನ ಮೊದಲ ಪದ, ಭಾಗ: ೨, ೩ ಸಾಲಿನ ಮೊದಲ ಪದ
(೨) ಅಮೃತವನ್ನು ಕುಡಿದು ಹಸಿವನ್ನೇ ಗೆದ್ದ ದೇವತೆಗಳಿಗೂ ಅಜೀರ್ಣವಾಯಿತು – ಎಷ್ಟರ ಪ್ರಮಾಣದಲ್ಲಿ ಯಜ್ಞ ಯಾಗಾದಿಗಳು ನಡೆಯುತ್ತಿದ್ದವು ಎಂದು ವಿವರಿಸಲು ಬಳಸಿದ ಉಪಮಾನ
(೩) ಸಮೃದ್ಧಿಯ ಸಂಕೇತವನ್ನು ವಿವರಿಸಲು – ತಾವಾಗಿ ಕೈಯಾನರು