ಪದ್ಯ ೫೮: ದುರ್ಯೋಧನನು ಅಶ್ವತ್ಥಾಮನಿಗೆ ಏನು ಹೇಳಿದ?

ಅನಿಮಿಷರು ಗಂಧರ್ವ ಯಕ್ಷರು
ಮುನಿದು ಮಾಡುವುದೇನು ಮಾಯದ
ಮನುಜರಿಗೆ ತಾ ಸಾಧ್ಯವಹನೇ ತನ್ನನರಿಯಿರಲಾ
ವಿನುತ ಸಲಿಲಸ್ತಂಭವಿದ್ಯೆಯೊ
ಳೆನಗಿರವು ಪಾತಾಳದಲಿ ಯಮ
ತನುಜನೇಗುವ ರೂಹುದೋರದೆ ಹೋಗಿ ನೀವೆಂದ (ಗದಾ ಪರ್ವ, ೪ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನುಡಿಯುತ್ತಾ, ದೇವತೆಗಳು, ಗಂಧರ್ವರು, ಯಕ್ಷರು ನನ್ನ ಮೇಲೆ ಮುನಿದು ಏನು ಮಾಡಬಲ್ಲರು? ಈ ಮನುಷ್ಯರ ಮೋಸಕ್ಕೆ ನಾನು ಸಿಲುಕುವವನೇ? ನನ್ನನ್ನು ನೀವು ಅರಿತಿಲ್ಲ. ಜಲಸ್ತಂಭ ವಿದ್ಯೆಯನ್ನವಲಂಬಿಸಿ ನಾನು ಪಾತಾಳಾದಲ್ಲಿರುತ್ತೇನೆ. ಈ ಯುಧಿಷ್ಠಿರನು ಏನು ಮಾಡಿಯಾನು? ನೀವು ಮಾತ್ರ ಅವರಿಗೆ ಕಾಣಿಸಿಕೊಳ್ಳದಂತೆ ದೂರಕ್ಕೆ ಹೋಗಿರಿ.

ಅರ್ಥ:
ಅನಿಮಿಷ: ದೇವತೆ; ಗಂಧರ್ವ: ಒಂದು ದೇವಜಾತಿ; ಯಕ್ಷ:ದೇವತೆಗಳಲ್ಲಿ ಒಂದು ವರ್ಗ; ಮುನಿ: ಋಷಿ; ಮಾಯ:ಗಾರುಡಿ; ಮನುಜ: ನರ; ಸಾಧ್ಯ: ಸಾಧಿಸಬಹುದಾದುದು; ಅರಿ: ತಿಳಿ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ; ವಿದ್ಯೆ: ಜ್ಞಾನ; ಪಾತಾಳ: ಅಧೋ ಲೋಕ; ಯಮ: ಜವ; ತನುಜ: ಮಗ; ರೂಹು: ರೂಪ; ಹೋಗು: ತೆರಳು;

ಪದವಿಂಗಡಣೆ:
ಅನಿಮಿಷರು+ ಗಂಧರ್ವ +ಯಕ್ಷರು
ಮುನಿದು +ಮಾಡುವುದೇನು +ಮಾಯದ
ಮನುಜರಿಗೆ+ ತಾ +ಸಾಧ್ಯವಹನೇ+ ತನ್ನನ್+ಅರಿಯಿರಲಾ
ವಿನುತ +ಸಲಿಲ+ಸ್ತಂಭ+ವಿದ್ಯೆಯೊಳ್
ಎನಗ್+ಇರವು +ಪಾತಾಳದಲಿ+ ಯಮ
ತನುಜನ್+ಏಗುವ +ರೂಹು+ತೋರದೆ+ ಹೋಗಿ +ನೀವೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮುನಿದು ಮಾಡುವುದೇನು ಮಾಯದ ಮನುಜರಿಗೆ

ಪದ್ಯ ೪೬: ಧರ್ಮಜನಿಗೆ ಯಾವ ವರವನ್ನು ಯಕ್ಷನು ನೀಡಿದನು?

ಒಲಿದನೊಡಲನು ಧರ್ಮ ಸಂಗತಿ
ಗಲ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿಕೊಡುವೆನೆನೆ ಯಮತನುಜನಿಂತೆಂದ (ಅರಣ್ಯ ಪರ್ವ, ೨೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ಬಾಯಾರಿಕೆಯಿಂದ ಬಳಲಿದವನಾದರೂ ಧರ್ಮಸಂವಾದ ಮಾಡುತ್ತಾ ಹರ್ಷಿತನಾದನು. ಅವನು ರೋಮಾಂಚನಗೊಂಡನು. ಪಾಪಗಳೆಲ್ಲವೂ ಕಳೆದುಹೋದವು. ಆಗ ಯಕ್ಷನು ರಾಜ ನಿನ್ನ ಅರಿವಿಗೆ ಮೆಚ್ಚಿದ್ದೇನೆ, ಸತ್ತುಹೋಗಿರುವ ನಿನ್ನ ತಮ್ಮಂದಿರಲ್ಲಿ ಒಬ್ಬನಿಗೆ ಜೀವವನ್ನು ಕೊಡುತ್ತೇನೆ ಕೇಳು ಎಂದು ವರಪ್ರದಾನ ಮಾಡಿದನು. ಆಗ ಧರ್ಮಜನು ಹೀಗೆ ಉತ್ತರಿಸಿದನು.

ಅರ್ಥ:
ಒಲಿ: ಪ್ರೀತಿ; ಒಡಲು: ದೇಹ; ಸಂಗತಿ: ವಿಚಾರ; ಸಂವಾದ: ವಿಚಾರ; ನಿಜ: ತನ್ನ; ತನು: ದೇಹ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಉಬ್ಬರ: ಹೆಚ್ಚಳ; ಗಬ್ಬರಿಸು: ಬಗಿ, ಆವರಿಸು; ದುಷ್ಕೃತ: ಕೆಟ್ಟ ಕೆಲಸ; ಮಹೀಪತಿ: ರಾಜ; ಮೆಚ್ಚು: ಇಷ್ಟವಾಗು; ಅಳಿ: ಸಾವು; ತಲೆ: ಶಿರ; ಬದುಕಿಸು: ಜೀವಿಸು; ತನುಜ: ಮಗ;

ಪದವಿಂಗಡಣೆ:
ಒಲಿದನ್+ಒಡಲನು+ ಧರ್ಮ +ಸಂಗತಿ
ಗಳ +ಸುಸಂವಾದದಲಿ+ ನಿಜತನು
ಪುಳಕವ್+ಉಬ್ಬರಿಸಿದುದು +ಗಬ್ಬರಿಸಿದುದು +ದುಷ್ಕೃತವ
ಎಲೆ +ಮಹೀಪತಿ +ಮೆಚ್ಚಿದೆನು +ಬೇಡ್
ಅಳಿದ +ತಮ್ಮಂದಿರಲಿ+ಒಬ್ಬನ
ತಲೆಯ +ಬದುಕಿಸಿಕೊಡುವೆನ್+ಎನೆ +ಯಮತನುಜನ್+ಇಂತೆಂದ

ಅಚ್ಚರಿ:
(೧) ಉಬ್ಬರಿಸಿದುದು, ಗಬ್ಬರಿಸಿದುದು – ಪ್ರಾಸ ಪದಗಳು;
(೨) ಯಮತನುಜ, ಮಹೀಪತಿ – ಧರ್ಮಜನನ್ನು ಕರೆದ ಪರಿ

ಪದ್ಯ ೨೦: ಕೃಷ್ಣನು ಪಾಂಡವರ ಬಗ್ಗೆ ಕುಂತಿಗೆ ಏನು ಹೇಳಿದ?

ಯಮತನುಜನಧಿಕನು ಹಿಡಿಂಬಾ
ರಮಣನತಿ ಬಲ್ಲಿದನು ಪಾರ್ಥನ
ವಿಮಳ ವಿಗ್ರಹ ಲೇಸು ಸಕಲ ಮಹೀಶ ಪರಿವೃತರು
ಯಮಳರಿರವತಿ ಚೆಲುವು ನೇಹದ
ರಮಣಿಯಾಕೆಯ ಸುತರು ಮಹದು
ದ್ಯಮರು ಕೇಳೆಂದಸುರರಿಪು ಕುಂತಿಗೆ ನಿಯಾಮಿಸಿದ (ಉದ್ಯೋಗ ಪರ್ವ, ೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಧರ್ಮರಾಯನು, ಬಲಿಷ್ಠನಾದ ಭೀಮನು, ಅರ್ಜುನನ ನಿರ್ಮಲ ರೂಪವೇ ಸಾಕು ಎಲ್ಲಾ ರಾಜರನ್ನು ಸುತ್ತುವರಿಯಲು, ಅಶ್ವಿನಿ ದೇವತೆಗಳ ಸ್ನೇಹದ ಪ್ರೀತಿಯಿಂದ ಜನಿಸಿದ ನಕುಲ ಸಹದೇವರು ಎಲ್ಲರೂ ಅತಿ ಉದ್ಯಮಶೀಲರಾಗಿರುವರು ಎಂದು ಕೃಷ್ಣನು ಕುಂತಿಗೆ ಹೇಳಿದ.

ಅರ್ಥ:
ಯಮ: ಧರ್ಮದೇವತೆ; ತನುಜ: ಮಗ; ರಮಣ: ನಲ್ಲ, ಪ್ರಿಯಕರ; ಬಲ್ಲಿದ: ಬಲಿಷ್ಠನಾದವನು, ಪರಾಕ್ರಮಿ; ವಿಮಳ: ನಿರ್ಮಲ; ವಿಗ್ರಹ: ರೂಪ; ಲೇಸು: ಒಳ್ಳೆಯದು; ಸಕಲ: ಎಲ್ಲಾ; ಮಹೀಶ: ರಾಜ; ಮಹಿ: ಭೂಮಿ; ಪರಿವೃತ: ಆವರಿಸಿದ, ಸುತ್ತುವರಿದ; ಯಮಳ: ಅಶ್ವಿನಿ ದೇವತೆ; ಚೆಲುವು: ಸುಂದರ; ನೇಹ: ಗೆಳೆತನ, ಸ್ನೇಹ; ರಮಣಿ: ಸುಂದರಿ, ಹೆಂಡತಿ; ಸುತ: ಮಕ್ಕಳ; ಉದ್ಯಮ: ಕೆಲಸ; ಕೇಳು: ಆಲಿಸು; ಅರುರರಿಪು: ವೈರಿ; ನಿಯಾಮಿಸು: ಅಪ್ಪಣೆಮಾಡು;

ಪದವಿಂಗಡಣೆ:
ಯಮ+ತನುಜನ್+ಅಧಿಕನು +ಹಿಡಿಂಬಾ
ರಮಣನ್+ಅತಿ +ಬಲ್ಲಿದನು +ಪಾರ್ಥನ
ವಿಮಳ +ವಿಗ್ರಹ +ಲೇಸು +ಸಕಲ +ಮಹೀಶ +ಪರಿವೃತರು
ಯಮಳರಿರವ್+ಅತಿ+ ಚೆಲುವು +ನೇಹದ
ರಮಣಿ+ಯಾಕೆಯ +ಸುತರು +ಮಹದು
ದ್ಯಮರು +ಕೇಳೆಂದ್+ಅಸುರರಿಪು +ಕುಂತಿಗೆ +ನಿಯಾಮಿಸಿದ

ಅಚ್ಚರಿ:
(೧) ಧರ್ಮರಾಯನನ್ನು ಯಮತನುಜ, ಭೀಮನನ್ನು ಹಿಡಿಂಬಾರಮಣ, ಅರ್ಜುನನನ್ನು ಅತಿ ಬಲ್ಲಿದನೆಂದು, ನಕುಲ ಸಹದೇವರನ್ನು – ಯಮಳರಿರವತಿ ಚೆಲುವು ನೇಹದ ರಮಣಿಯಾಕೆಯ ಸುತರು ಎಂದು ಕರೆದಿರುವುದು