ಪದ್ಯ ೪೭: ವೇದವ್ಯಾಸರು ಗಾಂಧಾರಿಗೆ ಯಾವ ಉಪದೇಶವನ್ನು ನೀಡಿದರು?

ದುಗುಡವನು ಬಿಡು ಮೋಹಬಂಧ
ಸ್ಥಗಿತ ಚಿತ್ತದ ಕದಡು ಹಣಿಯಲಿ
ಮಗಳೆ ಮರುಳಾದೌ ವಿಳಾಸದ ವಿಹಿತವಿಹಪರಕೆ
ಅಗಡುಮಕ್ಕಳ ತಾಯ್ಗೆ ತಪ್ಪದು
ಬೆಗಡುಬೇಗೆ ಸುಯೋಧನಾದ್ಯರ
ವಿಗಡತನವನು ನೆನೆದು ನೀ ನೋಡೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ವೇದವ್ಯಾಸರು ಗಾಂಧಾರಿಯನ್ನು ಸಮಾಧಾನ ಪಡಿಸಲು ಮುಂದಾದರು. ಗಾಂಧಾರಿ, ದುಃಖವನ್ನು ಬಿಡು, ಮೋಹದಂದ ಕಟ್ಟುವಡೆದ ಚಿತ್ತದ ಕೊಳೆಯನ್ನು ತೆಗೆದುಹಾಕು. ಇಹ ಪರಗಳಲ್ಲಿ ಸಂಭವಿಸುವ ಇಂತಹದಕ್ಕೆ ನೀನು ಚಿಂತಿಸಬಾರದು. ಇಂತಹ ಮಕ್ಕಳ ತಾಯಿಗೆ ಅಂಜಿಕೆ, ನೋವುಗಳು ಎಂದೂ ತಪ್ಪಲಾರವು. ನಿನ್ನ ಮಕ್ಕಳು ಮಾದಿದ ಅಕಾರ್ಯಗಳನ್ನು ನೆನೆಸಿಕೊಂಡು ವಿಚಾರಿಸು ಎಂದು ನುಡಿದರು.

ಅರ್ಥ:
ದುಗುಡ: ದುಃಖ; ಬಿಡು: ತೊರೆ; ಮೋಹ: ಆಸೆ; ಬಂಧ: ಕಟ್ಟು, ಬಂಧನ, ಪಾಶ; ಸ್ಥಗಿತ: ನಿಂತು ಹೋದುದು; ಚಿತ್ತ: ಮನಸ್ಸು; ಕದಡು: ಕಲಕಿದ ದ್ರವ, ಕಲ್ಕ; ಹಣಿ: ಬಾಗು, ಮಣಿ; ಮಗಳೆ: ಪುತ್ರಿ; ಮರುಳ: ತಿಳಿಗೇಡಿ, ದಡ್ಡ; ಆದೌ: ಹಿಂದೆ; ವಿಲಾಸ: ಕ್ರೀಡೆ, ವಿಹಾರ; ವಿಹಿತ: ಯೋಗ್ಯವಾದುದು; ಇಹಪರ: ಈ ಲೋಕ ಮತ್ತು ಪರಲೋಕ; ಅಗಡು: ತುಂಟತನ; ಮಕ್ಕಳು: ಪುತ್ರರು; ತಾಯಿ: ಮಾತೆ; ತಪ್ಪದು: ಬೇರ್ಪಡಿಸಲಾಗದು; ಬೆಗಡು: ಭಯ, ಅಂಜಿಕೆ; ಬೇಗೆ: ಬೆಂಕಿ, ಕಿಚ್ಚು; ಆದಿ: ಮುಂತಾದ; ವಿಗಡ: ಶೌರ್ಯ, ಪರಾಕ್ರಮ; ನೆನೆ: ಜ್ಞಾಪಿಸು; ನೋಡು: ವೀಕ್ಷಿಸು; ಮುನಿ: ಋಷಿ;

ಪದವಿಂಗಡಣೆ:
ದುಗುಡವನು +ಬಿಡು +ಮೋಹ+ಬಂಧ
ಸ್ಥಗಿತ +ಚಿತ್ತದ +ಕದಡು +ಹಣಿಯಲಿ
ಮಗಳೆ +ಮರುಳ್+ಆದೌ +ವಿಳಾಸದ +ವಿಹಿತವ್+ಇಹಪರಕೆ
ಅಗಡು+ಮಕ್ಕಳ+ ತಾಯ್ಗೆ +ತಪ್ಪದು
ಬೆಗಡು+ಬೇಗೆ +ಸುಯೋಧನಾದ್ಯರ
ವಿಗಡತನವನು +ನೆನೆದು +ನೀ +ನೋಡೆಂದನಾ +ಮುನಿಪ

ಅಚ್ಚರಿ:
(೧) ಲೋಕ ನೀತಿ – ಅಗಡುಮಕ್ಕಳ ತಾಯ್ಗೆ ತಪ್ಪದು ಬೆಗಡುಬೇಗೆ

ಪದ್ಯ ೩೯: ಧೃತರಾಷ್ಟ್ರನ ಅಪ್ಪುಗೆಯಿಂದ ಭೀಮನ ಪ್ರತಿಮೆಯ ಸ್ಥಿತಿ ಏನಾಯಿತು?

ಭೀಮನನು ಹಿಂದಿಕ್ಕಿ ಲೋಹದ
ಭೀಮನನು ಮುಂದಿರಿಸಿದಡೆ ಸು
ಪ್ರೇಮನಪ್ಪಿದಡೇನನೆಂಬೆನು ಮೋಹವನು ಮಗನ
ಆ ಮಹಾವಜ್ರಾಯತ ಪ್ರೌ
ದ್ದಾಮದಾಯಸ ಭೀಮತನು ನಿ
ರ್ನಾಮವೆನೆ ನುಗ್ಗಾಗಿ ಬಿದ್ದುದು ನೃಪನ ತೆಕ್ಕೆಯಲಿ (ಗದಾ ಪರ್ವ, ೧೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನನ್ನು ಹಿಂದಿಟ್ಟು ವಿಶ್ವಕರ್ಮನು ನಿರ್ಮಿಸಿದ ಲೋಹದ ಭೀಮನನ್ನು ಧೃತರಾಷ್ಟ್ರನ ಮುಂದಿಟ್ಟರು. ಧೃತರಾಷ್ಟ್ರ ಅತಿಶಯವಾದ ಕೋಪೋದ್ರೇಕದಿಂದ ವಜ್ರ ಸಮಾನವಾದ ತೆಕ್ಕೆಯಿಂದ ಪ್ರತಿಮೆಯನ್ನು ಅಪ್ಪಲು, ಆ ವಿಗ್ರಹವು ಧೃತರಾಷ್ಟ್ರನ ತೆಕ್ಕೆಯಲ್ಲಿ ಪುಡಿಪುಡಿಯಾಯಿತು.

ಅರ್ಥ:
ಹಿಂದಿಕ್ಕು: ಹಿಂದೆ ಸರಿ; ಲೋಹ: ಯಾವುದಾದರೂ ಖನಿಜ ಧಾತು; ಮುಂದೆ: ಎದುರು; ಪ್ರೇಮ: ಒಲವು; ಅಪ್ಪು: ಆಲಂಗಿಸು; ಮೋಹ: ಪ್ರೀತಿ; ಮಗ: ಸುತ; ವಜ್ರ: ಗಟ್ಟಿ; ಆಯಸ: ಕಬ್ಬಿಣದಿಂದ ಮಾಡಿದ; ತನು: ದೇಹ; ನಿರ್ನಾಮ: ನಾಶ; ನುಗ್ಗು: ಪುಡಿ; ಬಿದ್ದು: ಜಾರು; ನೃಪ: ರಾಜ; ತೆಕ್ಕೆ: ಅಪ್ಪುಗೆ, ಆಲಿಂಗನ;

ಪದವಿಂಗಡಣೆ:
ಭೀಮನನು +ಹಿಂದಿಕ್ಕಿ +ಲೋಹದ
ಭೀಮನನು +ಮುಂದಿರಿಸಿದಡೆ +ಸು
ಪ್ರೇಮನ್+ಅಪ್ಪಿದಡ್+ಏನನೆಂಬೆನು +ಮೋಹವನು +ಮಗನ
ಆ +ಮಹಾವಜ್ರಾಯತ +ಪ್ರೌ
ದ್ದಾಮದ್+ಆಯಸ +ಭೀಮ+ತನು +ನಿ
ರ್ನಾಮವೆನೆ +ನುಗ್ಗಾಗಿ +ಬಿದ್ದುದು +ನೃಪನ +ತೆಕ್ಕೆಯಲಿ

ಅಚ್ಚರಿ:
(೧) ಭೀಮನನು – ೧,೨ ಸಾಲಿನ ಮೊದಲ ಪದ

ಪದ್ಯ ೪: ಬಲರಾಮನು ಕೃಷ್ಣನಿಗೆ ಏನು ಹೇಳಿದ?

ಆಹವದಿ ಪಾಂಡವ ಮಮ ಪ್ರಾ
ಣಾಹಿ ಎಂಬೀ ನುಡಿಯ ಸಲಿಸಿದೆ
ಬೇಹವರನುಳುಹಿದೆ ಕುಮಾರರ ನಿನ್ನ ಮೈದುನರ
ಗಾಹುಗತಕದಲೆಮ್ಮ ಶಿಷ್ಯಂ
ಗೀ ಹದನ ವಿರಚಿಸಿದೆ ನಿನ್ನಯ
ಮೋಹದವರೇ ಗೆಲಲಿಯೆಂದನು ಹರಿಗೆ ಬಲರಾಮ (ಗದಾ ಪರ್ವ, ೬ ಸಂಧಿ, ೪ ಪದ್ಯ)

ತಾತ್ಪರ್ಯ:
ಬಲರಾಮನು ಕೃಷ್ಣನಿಗೆ, ಎಲೈ ಕೃಷ್ಣ, ಮಮಪ್ರಾಣಾಹಿ ಪಾಂಡವಾಃ ಎಂಬ ನಿನ್ನ ಪ್ರತಿಜ್ಞೆಯನ್ನು ನೀನು ಉಳಿಸಿಕೊಂಡೆ. ನಿನಗೆ ಬೇಕಾದ ಮೈದುನರನ್ನು ಉಳಿಸಿಕೊಂಡೆ, ಕಪಟದಿಂದ ನನ್ನ ಶಿಷ್ಯನಿಗೆ ಈ ದುರ್ಗತಿಯನ್ನು ತಂದೆ. ನಿನ್ನ ಮೋಹದವರೇ ಗೆಲ್ಲಲಿ ಎಂದನು.

ಅರ್ಥ:
ಆಹವ: ಯುದ್ಧ; ಪ್ರಾಣ: ಜೀವ; ನುಡಿ: ಮಾತು; ಸಲಿಸು: ದೊರಕಿಸಿ ಕೊಡು; ಬೇಹ:ಬೇಕಾದ; ಉಳುಹು: ಕಾಪಾಡು; ಮೈದುನ: ತಂಗಿಯ ಗಂಡ; ಗಾಹುಗತಕ: ಮೋಸ, ಭ್ರಾಂತಿ; ಶಿಷ್ಯ: ಅಭ್ಯಾಸಿ; ಹದ: ರೀತಿ; ವಿರಚಿಸು: ಕಟ್ಟು, ನಿರ್ಮಿಸು; ಮೋಹ: ಆಸೆ; ಗೆಲಲಿ: ವಿಜಯಿಯಾಗಲಿ; ಹರಿ: ಕೃಷ್ಣ;

ಪದವಿಂಗಡಣೆ:
ಆಹವದಿ +ಪಾಂಡವ +ಮಮ +ಪ್ರಾ
ಣಾಹಿ +ಎಂಬೀ +ನುಡಿಯ +ಸಲಿಸಿದೆ
ಬೇಹವರನ್+ಉಳುಹಿದೆ +ಕುಮಾರರ +ನಿನ್ನ+ ಮೈದುನರ
ಗಾಹುಗತಕದಲ್+ಎಮ್ಮ+ ಶಿಷ್ಯಂಗ್
ಈ+ ಹದನ +ವಿರಚಿಸಿದೆ +ನಿನ್ನಯ
ಮೋಹದವರೇ +ಗೆಲಲಿಯೆಂದನು+ ಹರಿಗೆ +ಬಲರಾಮ

ಅಚ್ಚರಿ:
(೧) ಕೃಷ್ಣನ ಮಾತು – ಪಾಂಡವ ಮಮ ಪ್ರಾಣಾಹಿ – ಸಂಸ್ಕೃತದ ಪದಗಳನ್ನು ಸೇರಿಸುವ ಪರಿ

ಪದ್ಯ ೧೩: ಸೈನಿಕರು ಹೇಗೆ ಎದ್ದರು?

ತಣಿದುದಂತಃಕರಣ ನಿದ್ರಾ
ಗಣಿಕೆಯರ ರತಿಯಲ್ಲಿ ರಿಂಗಣ
ಗುಣಿವ ಮನ ಹದುಳಿಸಿತು ತಿಳಿದುದು ಝೊಮ್ಮಿನುಮೋಹ
ರಣವನೀಗಳೆ ಕಾಣಬಹುದೆಂ
ಬಣಕಿಗರನೆಬ್ಬಿಸುವವೊಲು ಸುಳಿ
ದಣೆದು ಹೊದುರೆದ್ದುದು ಸುಧಾದೀಧಿತಿಯ ಕರ ನಿಕರ (ದ್ರೋಣ ಪರ್ವ, ೧೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ನಿದ್ರಾ ಗಣಿಕೆಯ ರತಿಯಲ್ಲಿ ಸೈನಿಕರ ಮನಸ್ಸು ತೃಪ್ತವಾಯಿತು. ಮನಸ್ಸು ನಿದ್ದೆಯ ಝೊಮ್ಮಿನಿಂದ ಹೊರಬಂತು. ಇನ್ನು ಯುದ್ಧವನ್ನು ಈಗಲೇ ಕಾಣಬಹುದು ಎನ್ನುವವರನ್ನು ಎಚ್ಚರಿಸುವಂತೆ ಚಂದ್ರಕಿರಣಗಳು ಹರಡಿದವು.

ಅರ್ಥ:
ತಣಿ: ತೃಪ್ತಿಹೊಂದು, ಸಮಾಧಾನಗೊಳ್ಳು; ಅಂತಃಕರಣ: ಮನಸ್ಸು; ನಿದ್ರೆ: ಶಯನ; ಗಣಿಕೆ: ವೇಶ್ಯೆ; ರತಿ: ಸಂತೋಷ, ಆನಂದ, ಪ್ರೀತಿ; ರಿಂಗಣ: ಚಟುವಟಿಕೆ, ಚಲನೆ; ಕುಣಿ: ನರ್ತಿಸು; ಮನ: ಮನಸ್ಸು; ಹದುಳ: ಸೌಖ್ಯ, ಕ್ಷೇಮ; ತಿಳಿ: ಶುದ್ಧವಾದ, ನಿರ್ಮಲವಾದ ಝೊಮ್ಮು: ಪುಳುಕಿತಗೊಳ್ಳು; ರಣ: ಯುದ್ಧ; ಅಣಕು: ತುರುಕು, ಗಿಡಿ; ಎಬ್ಬಿಸು: ಮೇಲೇಳು; ಹೊದರು: ಗುಂಪು, ಸಮೂಹ; ದೀಧಿತಿ: ಹೊಳಪು, ಕಾಂತಿ; ಸುಧಾ: ಅಮೃತ; ನಿಕರ: ಗುಂಪು; ಕರ:

ಪದವಿಂಗಡಣೆ:
ತಣಿದುದ್+ಅಂತಃಕರಣ+ ನಿದ್ರಾ
ಗಣಿಕೆಯರ +ರತಿಯಲ್ಲಿ +ರಿಂಗಣ
ಕುಣಿವ +ಮನ +ಹದುಳಿಸಿತು +ತಿಳಿದುದು +ಝೊಮ್ಮಿನು+ಮೋಹ
ರಣವನ್+ಈಗಳೆ +ಕಾಣಬಹುದೆಂಬ್
ಅಣಕಿಗರನ್+ಎಬ್ಬಿಸುವವೊಲು +ಸುಳಿ
ದಣೆದು +ಹೊದುರ್+ಎದ್ದುದು +ಸುಧಾ+ದೀಧಿತಿಯ +ಕರ+ ನಿಕರ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಣವನೀಗಳೆ ಕಾಣಬಹುದೆಂಬಣಕಿಗರನೆಬ್ಬಿಸುವವೊಲು

ಪದ್ಯ ೧೦: ಧರ್ಮಜನು ಹೇಗೆ ದುಃಖಿಸಿದನು?

ಬಂದು ಫಲುಗುಣನೆನ್ನ ಮೋಹದ
ಕಂದನಾವೆಡೆಯೆಂದಡಾನೇ
ನೆಂದು ಮಾರುತ್ತರವ ಕೊಡುವೆನು ವೈರಿನಾಯಕರು
ಕೊಂದರೆಂಬೆನೊ ಮೇಣು ನಾನೇ
ಕೊಂದೆನೆಂಬೆನೊ ಶಿವ ಮಹಾದೇ
ವೆಂದು ಪುತ್ರಸ್ನೇಹಸೌರಂಭದಲಿ ಹಲುಬಿದನು (ದ್ರೋಣ ಪರ್ವ, ೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಅತಿಶಯ ಪುತ್ರಸ್ನೇಹದಿಂದ ಅರ್ಜುನನು ಬಂದು ನನ್ನ ಪ್ರೀತಿಯ ಪುತ್ರನೆಲ್ಲಿ ಎಂದು ಕೇಳಿದರೆ ನಾನೇನು ಉತ್ತರ ಕೊಡಲಿ, ವೈರಿನಾಯಕರು ಕೊಂದರು ಎನ್ನಲೇ ಅಥವಾ ನಾನೇ ಅವನನ್ನು ಯುದ್ಧಕ್ಕೆ ಕಳಿಸಿ ಕೊಲ್ಲಿಸಿದೆ ಎನ್ನಲೇ ಶಿವ ಶಿವಾ ಎಂದು ಪುತ್ರ ಪ್ರೇಮದಿಂದ ದುಃಖಿಸಿದನು.

ಅರ್ಥ:
ಬಂದು: ಆಗಮಿಸು; ಮೊಹ: ಇಚ್ಛೆ; ಕಂದ: ಮಗ; ಆವೆಡೆ: ಯಾವ ಕಡೆ; ಉತ್ತರ: ಬಿನ್ನಹ; ಕೊಡು: ನೀಡು; ವೈರಿ: ಶತ್ರು; ನಾಯಕ: ಒಡೆಯ; ಕೊಂದು: ಸಾಯಿಸು; ಮೇಣ್: ಅಥವ; ಶಿವ: ಶಂಕರ; ಪುತ್ರ: ಮಗ; ಸ್ನೇಹ: ಮಿತ್ರ; ಸೌರಂಭ: ಸಂಭ್ರಮ; ಹಲುಬು: ದುಃಖಪಡು;

ಪದವಿಂಗಡಣೆ:
ಬಂದು +ಫಲುಗುಣನ್+ಎನ್ನ +ಮೋಹದ
ಕಂದನ್+ಆವೆಡೆ+ಎಂದಡ್+ಆನ್
ಏನೆಂದು +ಮಾರುತ್ತರವ+ ಕೊಡುವೆನು +ವೈರಿನಾಯಕರು
ಕೊಂದರೆಂಬೆನೊ +ಮೇಣು +ನಾನೇ
ಕೊಂದೆನೆಂಬೆನೊ +ಶಿವ +ಮಹಾದೇ
ವೆಂದು +ಪುತ್ರ+ಸ್ನೇಹ+ಸೌರಂಭದಲಿ +ಹಲುಬಿದನು

ಅಚ್ಚರಿ:
(೧) ಧರ್ಮಜನ ದುಃಖದ ಕಾರಣ – ಪುತ್ರಸ್ನೇಹಸೌರಂಭದಲಿ ಹಲುಬಿದನು

ಪದ್ಯ ೨೮: ಪಾಂಡವ ವೀರರು ಸ್ಥಿತಿ ಏನಾಯಿತು?

ಹಡಗು ಜಲಧಿಯೊಳೋಡಿ ಗಿರಿಗಳ
ನೆಡಹಿ ನುಗ್ಗಾದಂತೆ ಸುಭಟರ
ಗಡಣ ಗಜವನು ತಾಗಿ ತಾಗಿ ವಿಘಾತಿಯಲಿ ನೊಂದು
ಒಡಲ ಮೇಲೆಳ್ಳನಿತು ಮೋಹವ
ಹಿಡಿಯದಿವರೌಕಿದರು ಹಾವಿನ
ಕೊಡನು ದೋಷಿಗೆ ಸುಲಭವೇ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ ಹಡಗು ವೇಗವಾಗಿ ಚಲಿಸಿ, ಬೆಟ್ಟಕ್ಕೆ ಡಿಕ್ಕಿ ಹೊಡೆದು ಪುಡಿಯಾದಂತೆ, ಪಾಂಡವ ವೀರರು ಸುಪ್ರತೀಕವನ್ನು ಎದುರಿಸಿ ಹೊಡೆತದಿಂದ ನೊಂದು. ದೇಹದ ಮೇಲಿನ ಮೋಹವನ್ನು ಬಿಟ್ಟು ಆನೆಯ ಮೇಲೆ ಕವಿದರು. ಆದರೆ ಹಾವಿನ ಕೊಡದೊಳಗೆ ಕೈಯಿಡುವುದು ಕಳ್ಳನಿಗೆ ಸುಲಭವೇ?

ಅರ್ಥ:
ಹಡಗು: ಸಮುದ್ರದ ಮೇಲೆ ಪ್ರಯಾಣಿಸಲು ಉಪಯೋಗಿಸುವ ತೇಲುವ ಸಾಧನ; ಜಲಧಿ: ಸಾಗರ; ಓಡು: ಧಾವಿಸು; ಗಿರಿ: ಬೆಟ್ಟ; ನೂಕು: ನೂಕಾಟ, ನೂಕುನುಗ್ಗಲು; ಸುಭಟ: ಪರಾಕ್ರಮಿ; ಗಡಣ: ಸಮೂಹ; ಗಜ: ಆನೆ; ತಾಗು: ಸೇರು, ಸೋಕು; ವಿಘಾತ: ನಾಶ, ಧ್ವಂಸ; ನೊಂದು: ನೋವು; ಒಡಲು: ದೇಹ; ಮೋಹ: ಆಕರ್ಷಣೆ; ಹಿಡಿ: ಗ್ರಹಿಸು; ಔಕು: ತಳ್ಳು; ಹಾವು: ಉರಗ; ಕೊಡ: ಗಡಿಗೆ, ಕುಂಭ; ದೋಷಿ: ದುರಾಚಾರಿ; ಸುಲಭ: ಸರಾಗ; ಕೇಳು: ಆಲಿಸು;

ಪದವಿಂಗಡಣೆ:
ಹಡಗು +ಜಲಧಿಯೊಳ್+ಓಡಿ +ಗಿರಿಗಳನ್
ಎಡಹಿ +ನುಗ್ಗಾದಂತೆ +ಸುಭಟರ
ಗಡಣ+ ಗಜವನು +ತಾಗಿ +ತಾಗಿ +ವಿಘಾತಿಯಲಿ+ ನೊಂದು
ಒಡಲ+ ಮೇಲೆಳ್ಳನಿತು +ಮೋಹವ
ಹಿಡಿಯದ್+ಇವರ್+ಔಕಿದರು +ಹಾವಿನ
ಕೊಡನು +ದೋಷಿಗೆ +ಸುಲಭವೇ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಡಗು ಜಲಧಿಯೊಳೋಡಿ ಗಿರಿಗಳನೆಡಹಿ ನುಗ್ಗಾದಂತೆ
(೨) ರೂಪಕದ ಪ್ರಯೋಗ – ಹಾವಿನ ಕೊಡನು ದೋಷಿಗೆ ಸುಲಭವೇ

ಪದ್ಯ ೩೪: ದ್ರೋಣನು ಅರ್ಜುನನನ್ನು ಹೇಗೆ ಹೊಗಳಿದನು?

ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಸಲೆ ಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ (ವಿರಾಟ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನ, ನನ್ನ ವಿಷಯಲಂಪಟತನದಿಂದ ಅಶ್ವತ್ಥಾಮನು ಹುಟ್ಟಿದನು. ನೀನು ನಮಗೆ ಮೋಹದ ಮಗ, ಯಾವ ಬಿಲ್ಲುಗಾರನಿಗೆ ಹೀಗೆ ಬಾಣ ಪ್ರಯೋಗ ಮಾಡಲು ಬರುತ್ತದೆ. ಅಸಮಾನವೀರನಾದ ನಿನ್ನ ಕೈಚಳಕವು ಯಾರಿಗೆ ಇದೆ ಎಂದು ದ್ರೋಣನು ಅರ್ಜುನನನ್ನು ಹೊಗಳಿದನು.

ಅರ್ಥ:
ವಿಷಯ: ಭೋಗಾಭಿಲಾಷೆ; ಲಂಪಟ: ವಿಷಯಾಸಕ್ತ, ಕಾಮುಕ; ನಿರ್ಮಿಸು: ರಚಿಸು; ಮೋಹ: ಆಕರ್ಷಣೆ, ಪ್ರೀತಿ; ಕಂದ: ಮಗ; ಎಸು: ಬಾಣ ಪ್ರಯೋಗ; ಶರ: ಬಾಣ; ಸಂಭವಿಸು: ಉಂಟಾಗು; ವಿಷಮ: ಪ್ರತಿಕೂಲ, ಏರುಪೇರು; ವೀರ: ಪರಾಕ್ರಮಿ; ಚಳಕ: ಕೌಶಲ್ಯ; ವಿಸರ: ವ್ಯಾಪ್ತಿ;

ಪದವಿಂಗಡಣೆ:
ವಿಷಯ +ಲಂಪಟತನದಲ್+ಆವ್+ ನಿ
ರ್ಮಿಸಿದೆವ್+ಅಶ್ವತ್ಥಾಮನನು +ನ
ಮ್ಮೆಸೆವ +ಮೋಹದ +ಕಂದನ್+ಐಸಲೆ +ಪಾರ್ಥ +ನೀನೆಮಗೆ
ಎಸುಗೆಗಾರರದ್+ಆರಿಗೀ +ಶರ
ವಿಸರ+ ಸಂಭವಿಸುವುದ್+ಇದಾರಿಗೆ
ವಿಷಮ+ ವೀರನ +ಕೈಯ +ಚಳಕವಿದೆಂದನಾ +ದ್ರೋಣ

ಅಚ್ಚರಿ:
(೧) ಅರ್ಜುನನ ಮೇಲಿನ ಪ್ರೀತಿಯನ್ನು ಹೇಳುವ ಪರಿ – ನಮ್ಮೆಸೆವ ಮೋಹದ ಕಂದನೈಸಲೆ ಪಾರ್ಥ ನೀನೆಮಗೆ
(೨) ಅಶ್ವತ್ಥಾಮನ ಜನನದ ಬಗ್ಗೆ – ವಿಷಯ ಲಂಪಟತನದಲಾವ್ ನಿರ್ಮಿಸಿದೆವಶ್ವತ್ಥಾಮನನು

ಪದ್ಯ ೧: ಹಸ್ತಿನಾಪುರಕ್ಕೆ ನಡುರಾತ್ರಿಯಲ್ಲಿ ಯಾರು ಬಂದರು?

ಇರುತಿರುತ ರವಿಸೂನು ಗಂಧ
ರ್ವರಲಿ ತನ್ನಯ ಕೀರ್ತಿಲತೆ ಪೈ
ಸರಿಸಿದಂದವನೈದೆ ಚಿಂತಿಸುತಿರಲು ಇರುಳಿನಲಿ
ತರಣಿ ಕಂದನ ಮೋಹದಿಂದವೆ
ಧರೆಗೆ ಬಂದನು ನಾಗನಗರಿಯ
ನಿರದೆ ಹೊಕ್ಕನು ಅರ್ಧ ರಾತ್ರಿಯೊಳರಸ ಕೇಳೆಂದ (ಅರಣ್ಯ ಪರ್ವ, ೨೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಗಂಧರ್ವರಿಂದ ಸೋತ ಕರ್ಣನು ತನ್ನ ಕೀರ್ತಿಲತೆ ಬಾಡಿದುದನ್ನು ಚಿಂತಿಸುತ್ತಾ ನಿದ್ರೆಯಿಲ್ಲದ ಮಲಗಿರಲು, ಮಗನ ಮೇಲಿನ ಮೋಹದಿಂದ ನಡುರಾತ್ರಿಯಲ್ಲಿ ಸೂರ್ಯನು ಹಸ್ತಿನಾಪುರಕ್ಕೆ ಬಂದನು.

ಅರ್ಥ:
ರವಿಸೂನು: ಸೂರ್ಯನ ಮಗ; ಗಂಧರ್ವ: ಖಚರ; ಕೀರ್ತಿ: ಖ್ಯಾತಿ, ಯಶಸ್ಸು; ಲತೆ: ಬಳ್ಳಿ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಐದು: ಬಂದು ಸೇರು; ಚಿಂತಿಸು: ಯೋಚಿಸು; ಇರುಳು: ರಾತ್ರಿ; ತರಣಿ: ಸೂರ್ಯ; ಕಂದ: ಮಗ; ಮೋಹ: ಆಸೆ; ಧರೆ: ಭೂಮಿ; ಬಂದು: ಆಗಮಿಸು; ನಾಗನಗರಿ: ಹಸ್ತಿನಾಪುರ; ನಾಗ: ಆನೆ; ಹೊಕ್ಕು: ಸೇರು; ಅರ್ಧ: ನಡು; ರಾತ್ರಿ: ಇರಳು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇರುತಿರುತ+ ರವಿಸೂನು +ಗಂಧ
ರ್ವರಲಿ +ತನ್ನಯ +ಕೀರ್ತಿಲತೆ+ ಪೈ
ಸರಿಸಿದಂದವನ್+ಐದೆ +ಚಿಂತಿಸುತಿರಲು +ಇರುಳಿನಲಿ
ತರಣಿ +ಕಂದನ +ಮೋಹದಿಂದವೆ
ಧರೆಗೆ +ಬಂದನು +ನಾಗನಗರಿಯನ್
ಇರದೆ +ಹೊಕ್ಕನು +ಅರ್ಧ +ರಾತ್ರಿಯೊಳ್+ಅರಸ +ಕೇಳೆಂದ

ಅಚ್ಚರಿ:
(೧) ರವಿಸೂನು, ತರಣಿ ಕಂದ – ಕರ್ಣನನ್ನು ಕರೆದಿರುವ ಪರಿ
(೨) ಹಸ್ತಿನಾಪುರವನ್ನು ನಾಗನಗರಿ ಪದದ ಬಳಕೆ

ಪದ್ಯ ೨: ಸೈನ್ಯವು ಕರ್ಣನಿಗೆ ಏಕೆ ಋಣಿಯಾಗಿತ್ತು?

ರಣದೊಳೊಪ್ಪಿಸಿಕೊಟ್ಟು ಕರ್ಣನ
ಹಣವ ಹೊಳ್ಳಿಸಿ ಮರೆದೆವೇ ಮ
ನ್ನಣೆಯ ಮೋಹವ ತೋರೆದೆವೇ ಕರ್ಪುರದ ವೀಳೆಯವ
ಗುಣ ಪಸಾಯದ ಕಾಣಿಕೆಯ ಹರಿ
ಯಣದ ಹಂತಿಯ ದಾಯದೂಟಕೆ
ಋಣೀಗಳಾದೆವೆ ಶಿವ ಶಿವಾ ಎಂದೊಳರಿತಖಿಳಬಲ (ಕರ್ಣ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಕರ್ಣನಿಂದ ಧನ ಕನಕವನ್ನು ಪಡೆದು ನಾವು ಯುದ್ಧದಲ್ಲಿ ಕರ್ಣನನ್ನು ವೈರಿಗೊಪ್ಪಿಸಿಬಿಟ್ಟೆವೇ? ಅವನು ನಮಗೆ ಪ್ರೀತಿಯಿಂದ ಮಾಡಿದ ಮನ್ನಣೆಗಳನ್ನು ನಾವು ಮರೆತೆವೆಲಾ! ಅವನು ಕೊಟ್ಟ ತಾಂಬೂಲ, ಕರ್ಪೂರಗಳನ್ನು, ಆಪ್ತರೆಂದು ನಮಗೆ ನೀಡಿದ ಕಾಣಿಕೆಯನ್ನು, ನಮಗೆ ಮಾಡಿದ ಮನ್ನಣೆಯನ್ನು, ಅವನೊಡನೆ ಸಹಪಂಕ್ತಿ ಭೋಜನಗಳನ್ನು ಸ್ವೀಕರಿಸಿ ಅವನಿಗೆ ನಾವು ಋಣಿಯಾಗಿದ್ದೀವಿ ಶಿವ ಶಿವಾ, ಎಂದು ಸೈನ್ಯವು ಜೋರಾಗಿ ಹೇಳಿತು.

ಅರ್ಥ:
ರಣ: ಯುದ್ಧ; ಒಪ್ಪಿಸು: ಸಮ್ಮತಿಸು, ಅಂಗೀಕರಿಸು; ಕೊಟ್ಟ: ನೀಡಿದ; ಹಣ: ಧನ; ಹೊಳ್ಳಿಸು: ಟೊಳ್ಳು ಮಾಡು, ಪೊಳ್ಳಾಗಿಸು; ಮರೆ: ಜ್ಞಾಪಕದಿಂದ ದೂರ ಮಾದು; ಮನ್ನಣೆ: ಗೌರವ, ಮರ್ಯಾದೆ; ಮೋಹ: ಆಸೆ; ತೊರೆ: ಬಿಡು; ಕರ್ಪುರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಗುಣ: ನಡತೆ, ಸ್ವಭಾವ; ಪಸಾಯ: ಉಡುಗೊರೆ, ಬಹುಮಾನ; ಕಾಣಿಕೆ: ಉಡುಗೊರೆ, ದಕ್ಷಿಣೆ; ಹರಿಯಣ: ತಟ್ಟೆ, ಗಂಗಳ; ಹಂತಿ: ಪಂಕ್ತಿ, ಸಾಲು; ದಾಯ: ಪಾಲು; ಊಟ: ಭೋಜನ; ಋಣಿ: ಹಂಗಿಗೆ ಒಳಗಾದವನು; ಒಳರು: ಕರೆ, ಕೂಗು; ಅಖಿಳ: ಎಲ್ಲಾ; ಬಲ: ಸೈನ್ಯ;

ಪದವಿಂಗಡಣೆ:
ರಣದೊಳ್+ಒಪ್ಪಿಸಿಕೊಟ್ಟು +ಕರ್ಣನ
ಹಣವ +ಹೊಳ್ಳಿಸಿ +ಮರೆದೆವೇ +ಮ
ನ್ನಣೆಯ +ಮೋಹವ +ತೊರೆದೆವೇ+ ಕರ್ಪುರದ+ ವೀಳೆಯವ
ಗುಣ +ಪಸಾಯದ +ಕಾಣಿಕೆಯ +ಹರಿ
ಯಣದ +ಹಂತಿಯ +ದಾಯದ್+ಊಟಕೆ
ಋಣಿಗಳಾದೆವೆ+ ಶಿವ ಶಿವಾ+ ಎಂದ್+ಒಳರಿತ್+ಅಖಿಳಬಲ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮರೆದೆವೇ ಮನ್ನಣೆಯ ಮೋಹವ

ಪದ್ಯ ೧೨೩: ಪರಮಾತ್ಮನು ಹೇಗೆ ಭಕ್ತರನ್ನು ಕಾಪಾಡುತ್ತಾನೆ?

ಸ್ನೇಹ ಪೂರ್ವಕದಿಂದ ಮನದೊಳ
ಗಾಹಿಸಲು ಲಕ್ಷ್ಮೀಶನವರಿಗೆ
ಬೇಹ ಪುರುಷಾರ್ಥಂಗಳಹವೆಲ್ಲಿದ್ದರಲ್ಲಲ್ಲಿ
ಈ ಹದನು ತಪ್ಪುವುದೆ ಕೂರ್ಮನ
ಮೋಹದಲಿ ತತ್ಸಂತತಿಗೆ ನಿ
ರ್ವಾಹವಹವೋಲರಸ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೨೩ ಪದ್ಯ)

ತಾತ್ಪರ್ಯ:
ವಾತ್ಸಲ್ಯ, ಸ್ನೇಹ ಭಾವದಿಂದ ಲಕ್ಷ್ಮೀಕಾಂತನಾದ ಶ್ರೀಹರಿಯನ್ನು ಭಕ್ತಿಯಿಂದ ಮನಸ್ಸಿನಲ್ಲಿ ಧ್ಯಾನಿಸುವವರಿಗೆ ಅವರೆಲ್ಲಿದ್ದರೂ ಅವರು ಬೇಡಿದ ಪುರುಷಾರ್ಥಗಳು ದೊರೆಯುತ್ತಎ. ಯಾವ ರೀತಿ ಆಮೆಯು ತನ್ನ ಮರಿಗಳನ್ನು ಇದ್ದಲ್ಲಿಯೇ ಹೇಗೆ ಸಲಹುವುದೋ ಹಾಗೆ ಪರಮಾತ್ಮನು ಭಕ್ತರನ್ನು ಕಾಪಾಡುತ್ತಾನೆ.

ಅರ್ಥ:
ಸ್ನೇಹ: ಗೆಳೆತನ, ಸಖ್ಯ; ಪೂರ್ವಕ:ತುಂಬುವ, ಸಹಕಾರಕ; ಮನ: ಮನಸ್ಸು; ಲಕ್ಷ್ಮೀಶ: ವಿಷ್ಣು; ಬೇಹ: ಬೇಕಾದ; ಪುರುಷಾರ್ಥ:ಮನುಷ್ಯನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮಧ್ಯೇಯಗಳು, ಯೋಗ್ಯವಾದುದು; ಆಹಿಸು: ಬೇಡು; ಅಹವ: ನೀಡುವ; ಹದ: ಸರಿಯಾದ ಸ್ಥಿತಿ; ತಪ್ಪು: ಸುಳ್ಳಾಗು; ಕೂರ್ಮ: ಆಮೆ; ಮೋಹ: ಆಸೆ; ಸಂತತಿ: ವಂಶ; ನಿರ್ವಾಹ: ನೋಡಿಕೊ, ಪೋಷಿಸು; ಅರಸ: ರಾಜ; ಚಿತ್ತೈಸು: ಮನಸ್ಸಿಟ್ಟು;

ಪದವಿಂಗಡಣೆ:
ಸ್ನೇಹ+ ಪೂರ್ವಕದಿಂದ +ಮನದೊಳಗ್
ಆಹಿಸಲು + ಲಕ್ಷ್ಮೀಶನ್+ಅವರಿಗೆ
ಬೇಹ +ಪುರುಷಾರ್ಥಂಗಳ್+ಅಹವ್+ಎಲ್ಲಿದ್ದರಲ್ಲಲ್ಲಿ
ಈ +ಹದನು +ತಪ್ಪುವುದೆ +ಕೂರ್ಮನ
ಮೋಹದಲಿ +ತತ್+ಸಂತತಿಗೆ +ನಿ
ರ್ವಾಹವಹವೋಲ್+ಅರಸ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೂರ್ಮನ ಮೋಹದಲಿ ತತ್ಸಂತತಿಗೆ ನಿರ್ವಾಹವಹವೊಲ್
(೨) ಸ್ನೇಹ, ಮೋಹ – ಪ್ರಾಸ ಪದಗಳು