ಪದ್ಯ ೩೨: ಘಟೋತ್ಕಚನು ಕರ್ಣನಿಗೆ ಏನು ಹೇಳಿದ?

ಎಲವೊ ನೆರೆ ಗಂಡಹೆ ಕಣಾ ನೀ
ಮಲೆತು ನಿಂದುದು ಸಾಲದೇ ಸುರ
ರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು
ಕಲಿತನಕೆ ಮೆಚ್ಚಿದೆನು ಸತ್ತರೆ
ಮೊಳೆಯದಿಹುದೇ ಕೀರ್ತಿ ರಿಪುಬಲ
ದೊಳಗೆ ದಿಟ್ಟನು ಕರ್ಣ ನೀನೆನುತಸುರ ಮಾರಾಂತ (ದ್ರೋಣ ಪರ್ವ, ೧೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಎಲೋ ಕರ್ಣ, ನೀಣು ಭಾರೀ ಗಂಡಸು. ನನ್ನನ್ನು ಎದುರಿಸಿ ನಿಂತದ್ದೇ ಸಾಕು, ಮಹಾಪರಾಕ್ರಮಿಗಳಾದ ದೇವತೆಗಳನ್ನೂ ಸೀಳಿಹಾಕಬಲ್ಲೆ. ಮನುಷ್ಯರ ಪಾಡೇನು? ನಿನ್ನ ಪರಾಕ್ರಮಕ್ಕೆ ಮೆಚ್ಚಿದೆ, ಯುದ್ಧದಲ್ಲಿ ಸತ್ತರೂ ಕೀರ್ತಿ ಬರುತ್ತದೆ. ವೈರಿಸೈನ್ಯದಲ್ಲಿ ನೀನು ದಿಟ್ಟ ಎಂದು ಇದಿರಾದನು.

ಅರ್ಥ:
ನೆರೆ: ಗುಂಪು; ಗಂಡು: ಗಂಡಸು, ಪರಾಕ್ರಮಿ; ಮಲೆ: ಉದ್ಧಟತನದಿಂದ ಕೂಡಿರು; ಸುರ: ದೇವತೆ; ಸಿತಗ: ಕಾಮುಕ, ಜಾರ; ಸೀಳು: ಚೂರು, ತುಂಡು; ಮಾನವ: ನರ; ಪಾಡು: ರೀತಿ, ಬಗೆ; ಕಲಿ: ಶೂರ; ಮೆಚ್ಚು: ಒಲುಮೆ, ಪ್ರೀತಿ; ಸತ್ತರೆ: ಮರಣ ಹೊಂದಿದರೆ; ಮೊಳೆ: ಚಿಗುರು, ಅಂಕುರಿಸು; ಕೀರ್ತಿ: ಖ್ಯಾತಿ; ರಿಪು: ವೈರಿ; ದಿಟ್ಟ: ಧೈರ್ಯಶಾಲಿ; ಅಸುರ: ರಾಕ್ಷಸ; ಮಾರಾಂತು: ಎದುರಾಗಿ, ಯುದ್ಧಕ್ಕೆ ನಿಂತು;

ಪದವಿಂಗಡಣೆ:
ಎಲವೊ +ನೆರೆ +ಗಂಡಹೆ +ಕಣಾ +ನೀ
ಮಲೆತು +ನಿಂದುದು +ಸಾಲದೇ +ಸುರ
ರೊಳಗೆ +ಸಿತಗರ +ಸೀಳುವೆನು +ಮಾನವರ +ಪಾಡೇನು
ಕಲಿತನಕೆ +ಮೆಚ್ಚಿದೆನು +ಸತ್ತರೆ
ಮೊಳೆಯದಿಹುದೇ +ಕೀರ್ತಿ +ರಿಪುಬಲ
ದೊಳಗೆ +ದಿಟ್ಟನು +ಕರ್ಣ +ನೀನೆನುತ್+ಅಸುರ +ಮಾರಾಂತ

ಅಚ್ಚರಿ:
(೧) ಘಟೋತ್ಕಚನ ಹಿರಿಮೆ – ಸುರರೊಳಗೆ ಸಿತಗರ ಸೀಳುವೆನು ಮಾನವರ ಪಾಡೇನು

ಪದ್ಯ ೮: ಅರ್ಜುನನು ಕೃಷ್ಣನಿಗೆ ಏನು ಕೇಳಿದ?

ಸಹಸವೇನದು ಜೀಯ ನೆರೆದಿ
ರ್ದಹಿತಬಲವೆನಗಾವ ಘನ ಬಿ
ನ್ನಹವ ಕೇಳೈ ಕೃಷ್ಣ ಕೌರವರಾಯರೊಡ್ಡಿನಲಿ
ಬಹಳ ಬಲರಿವರಾರು ಸೇನಾನಿ
ವಹದಲಿ ನಾಯಕರ ವಿವರಿಸ
ಬಹರೆ ಬೆಸನೆನೆ ಕೃಷ್ಣ ನುಡಿದನು ನಗೆಯ ಮೊಳೆ ಮಿನುಗೆ (ಭೀಷ್ಮ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಮಾತನ್ನು ಕೇಳಿ, ಒಡೆಯಾ, ಇವರನ್ನೆದುರಿಸುವುದು ಯಾವ ದೊಡ್ಡಮಾತು! ಕೌರವ ಸೈನ್ಯದಲ್ಲಿ ಮಹಾಬಲಶಾಲಿಗಳಾದ ನಾಯಕರು ಯಾರು? ಅವರನ್ನು ನನಗೆ ವಿವರವಾಗಿ ತಿಳಿಸಬೇಕಿನ್ನಿಸಿದರೆ ದಯವಿಟ್ಟು ತಿಳಿಸು ಎಂದು ಹೇಳಲು, ಕೃಷ್ಣನು ಹಸನ್ಮುಖನಾದನು.

ಅರ್ಥ:
ಸಹಸ: ಸಾಹಸ, ಪರಾಕ್ರಮ; ಜೀಯ: ಒಡೆಯ; ನೆರೆದ: ಸೇರಿದ; ಅಹಿತ: ವೈರಿ; ಬಲ: ಸೇನೆ; ಘನ: ದೊಡ್ಡದು; ಬಿನ್ನಹ: ಬೇಡು, ಕೇಳು; ರಾಯ: ರಾಜ; ಒಡ್ಡು: ಸೈನ್ಯ; ಬಹಳ: ತುಂಬ; ಬಲ: ಸೈನ್ಯ; ನಿವಹ: ಗುಂಪು; ನಾಯಕ: ಒಡೆಯ; ವಿವರಿಸು: ಹೇಳು; ಬೆಸ: ಕೆಲಸ, ಕಾರ್ಯ; ನುಡಿ: ಮಾತಾಡು; ನಗೆ: ಹರ್ಷ; ಮೊಳೆ: ಅಂಕುರಿಸು; ಮಿನುಗು: ಹೊಳಪು, ಕಾಂತಿ;

ಪದವಿಂಗಡಣೆ:
ಸಹಸವೇನದು+ ಜೀಯ +ನೆರೆದಿರ್ದ್
ಅಹಿತಬಲವ್+ಎನಗಾವ+ ಘನ +ಬಿ
ನ್ನಹವ +ಕೇಳೈ +ಕೃಷ್ಣ +ಕೌರವರಾಯರ್+ಒಡ್ಡಿನಲಿ
ಬಹಳ +ಬಲರ್+ಇವರಾರು+ ಸೇನಾ+ನಿ
ವಹದಲಿ+ ನಾಯಕರ +ವಿವರಿಸ
ಬಹರೆ+ ಬೆಸನ್+ಎನೆ +ಕೃಷ್ಣ +ನುಡಿದನು +ನಗೆಯ+ ಮೊಳೆ +ಮಿನುಗೆ

ಅಚ್ಚರಿ:
(೧) ಅರ್ಜುನನ ಅತಿಯಾದ ಆತ್ಮವಿಶ್ವಾಸದ ನುಡಿ – ಸಹಸವೇನದು ಜೀಯ ನೆರೆದಿರ್ದಹಿತಬಲವೆನಗಾವ ಘನ

ಪದ್ಯ ೬೩: ಸೂರ್ಯನ ದಾರಿ ಯಾವುದು?

ಹರಿವ ಗಾಲಿಯ ನಾಭಿ ಮೂಲ
ಕ್ಕುರುವ ಚಾತುರ್ಮಾಸಗಳು ಘನ
ತರದ ಷಡುರುತುವಯನ ಚಕ್ರವು ಚಾರುಚತುರಯುಗ
ತರವಿಡಿದ ಸಂವತ್ಸರವು ಘನ
ತರದ ಪರಿವತ್ಸರ ವಿಡಾವ
ತ್ಸರವು ವಿದ್ವತ್ಸರವು ವತ್ಸರವೆಂದು ಮೊಳೆಯಾಯ್ತು (ಅರಣ್ಯ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಸೂರ್ಯನ ರಥದ ಚಕ್ರವೆಂದರೆ ನಾಲ್ಕು ಯುಗಗಳು. ಅದರ ಗುಂಬವು ಚಾತುರ್ಮಾಸಗಳು, ಆರು ಋತುಗಳೇ ಅದರ ದರಿ, ಸಂವತ್ಸರ, ಪರಿವತ್ಸರ, ಇಡಾವತ್ಸರ, ವಿದ್ವತ್ಸರ, ವತ್ಸರಗಳೆಂಬುವು ಮೊಳೆಗಳು.

ಅರ್ಥ:
ಹರಿ: ಚಲಿಸು; ಗಾಲಿ: ಚಕ್ರ; ನಾಭಿ: ಹೊಕ್ಕಳು; ಮೂಲ: ಬುಡ; ಉರುವ: ಶ್ರೇಷ್ಠ; ಮಾಸ: ತಿಂಗಳು; ಘನ: ಗಟ್ಟಿ, ಭಾರ ಷಡುರುತು: ೬ ಋತುಗಳು; ಚಕ್ರ: ಗಾಲಿ; ಚಾರು: ಸುಂದರ; ಚತುರ: ನಾಲ್ಕು; ಯುಗ: ದೀರ್ಘವಾದ ಕಾಲಾವಧಿ; ತರ: ಸಾಲು; ಸಂವತ್ಸರ: ವರ್ಷ; ಮೊಳೆ: ಕುಡಿ, ಮೊಳಕೆ;

ಪದವಿಂಗಡಣೆ:
ಹರಿವ +ಗಾಲಿಯ +ನಾಭಿ +ಮೂಲ
ಕ್ಕುರುವ +ಚಾತುರ್ಮಾಸಗಳು +ಘನ
ತರದ +ಷಡುರುತುವಯನ +ಚಕ್ರವು +ಚಾರು+ಚತುರಯುಗ
ತರವಿಡಿದ +ಸಂವತ್ಸರವು +ಘನ
ತರದ+ ಪರಿವತ್ಸರ +ವಿಡಾವ
ತ್ಸರವು +ವಿದ್ವತ್ಸರವು +ವತ್ಸರವೆಂದು +ಮೊಳೆಯಾಯ್ತು

ಅಚ್ಚರಿ:
(೧) ಸಂವತ್ಸರ, ಪರಿವತ್ಸರ, ವತ್ಸರ – ಸಮನಾರ್ಥಕ ಪದಗಳು