ಪದ್ಯ ೨: ಧೃತರಾಷ್ಟ್ರನು ಯಾರ ಬಗ್ಗೆ ವಿಚಾರಿಸಿದನು?

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ (ಶಲ್ಯ ಪರ್ವ, ೧ ಸಂಧಿ, ೨ ಪದ್ಯ)

ತಾತ್ಪರ್ಯ:
ಅಯ್ಯೋ ಸಂಜಯ ನೀನು ಹುಚ್ಚ, ಬಿರುಗಾಳಿ ಬೀಸಿದಾಗ ಕುಲಪರ್ವತಗಳ ಬ್ಸುಗೆ ಕಿತ್ತು ಅವು ಹಾರಿಹೋದವು, ಇನ್ನು ಕ್ಷುಲ್ಲಕವಾದ ದಿಬ್ಬಗಳ ಪಾಡೇನು? ಕರ್ಣನ ಸನ್ನಾಹವೇ ನಾಶವಾಗಿ ಹೋಯಿತು, ಇನ್ನು ಕೌರವನ ಪಾಡೇನು? ಶಲ್ಯನ ಗತಿಯೇನು? ಅದು ಹಾಗಿರಲಿ ಕೌರವಕುಲವನ್ನು ನಾಶಮಾಡಿದರೇ ಎಂದು ಧೃತರಾಷ್ಟ್ರನು ಕೇಳಿದನು.

ಅರ್ಥ:
ಮರುಳ: ಮೂಢ; ಗಾಳಿ: ಅನಿಲ, ವಾಯು; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಮಂಡಿಯೂರಿ ಕುಳಿತುಕೊಳ್ಳುವುದು; ಬಿಚ್ಚು: ಹೊರತರು; ಹುಲು: ಕ್ಷುಲ್ಲ; ಮೊರಡಿ: ದಿಣ್ಣೆ, ಗುಡ್ಡ; ಬಿಗು: ಗಟ್ಟಿ; ಬೀತುದು: ಮುಗಿಯಿತು; ಒಡ್ಡವಣೆ: ಗುಂಪು, ಸನ್ನಾಹ; ಪಾಡು: ಸ್ಥಿತಿ; ಮತ್ಸರ: ಹೊಟ್ಟೆಕಿಚ್ಚು; ಸಾಕು: ನಿಲ್ಲಿಸು; ಸವರು: ನಾಶ; ಅನ್ವಯ: ವಂಶ; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಮರುಳೆ +ಸಂಜಯ +ಗಾಳಿಯಲಿ +ಕುಲ
ಗಿರಿಯ +ಬೈಸಿಕೆ +ಬಿಚ್ಚಿದಡೆ +ಹುಲು
ಮೊರಡಿಗಳ +ಬಿಗುಹೇನು +ಬೀತುದು +ಕರ್ಣನ್+ಒಡ್ಡವಣೆ
ಕುರುಪತಿಯ +ಪಾಡೇನು +ಮಾದ್ರೇ
ಶ್ವರನ +ಮತ್ಸರವೇನು +ಸಾಕಂ
ತಿರಲಿ+ ಸವರಿತೆ+ ಕೌರವ+ಅನ್ವಯವ್+ಎಂದನ್+ಅಂಧನೃಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯಲಿ ಕುಲಗಿರಿಯ ಬೈಸಿಕೆ ಬಿಚ್ಚಿದಡೆ ಹುಲುಮೊರಡಿಗಳ ಬಿಗುಹೇನು

ಪದ್ಯ ೧೬: ಯಾರು ಕೂಳನ್ನು ತಿಂದನೆಂದು ಶಿಶುಪಾಲ ಕೃಷ್ಣನನ್ನು ಹಂಗಿಸಿದನು?

ಏಳುದಿನ ಪರಿಯಂತ ಮೊರಡಿಯ
ಮೇಲುಗೊಡೆಯನು ಹಿಡಿದು ಬಲು ಮಳೆ
ಗಾಲವನು ಮಾಣಿಸಿದ ಗಡ ಹರಹರ ವಿಶೇಷವಲ
ಹೇಳು ಹೇಳಿಂದ್ರಂಗೆ ಮಾಡಿದ
ಕೂಳರಾಶಿಯನೊಬ್ಬನೇ ಕೈ
ಮೇಳವಿಸಿದನೆ ಕಂದನಾಣೆ ವಿಚಿತ್ರವಾಯ್ತೆಂದ (ಸಭಾ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಂದು ಕೆಲಸಕ್ಕೆ ಬಾರದ ಗುಡ್ಡವನ್ನು ಎತ್ತಿ ತನ್ನ ಕೈಯಲ್ಲಿಹಿಡಿದು ಏಳುದಿನಗಳ ಕಾಲ ಮಳೆಯಿಂದ ರಕ್ಷಿಸಿದನಂತೆ, ಶಿವ ಶಿವಾ ಇದು ಹೆಚ್ಚೇ ಸರಿ. ಆದರೊಂದು ಅನುಮಾನ, ಇಂದ್ರನ ಪೂಜೆಗೆಂದು ಸಿದ್ಧವಾದ ಊಟವನ್ನು ಇವನೇ ನುಂಗಿದನೋ ಏನೋ, ಆ ಶಿಶುವಿನಾಣೆ ಇದು ವಿಚಿತ್ರವೇ ಸರಿ ಎಂದು ಹೇಳಿದನು.

ಅರ್ಥ:
ಏಳು: ಸಪ್ತ; ದಿನ: ವಾರ; ಪರಿಯಂತ: ವರೆಗೆ, ತನಕ; ಮೊರಡಿ: ಗುಡ್ಡ; ಮೇಲು: ಮೇಲೆತ್ತು; ಹಿಡಿ: ಗ್ರಹಿಸು, ಕೈಕೊಳ್ಳು; ಬಲು: ಬಹಳ; ಮಳೆ: ವರ್ಷ; ಕಾಲ: ಸಮಯ; ಮಾಣಿಸು: ನಿಲ್ಲುವಂತೆ ಮಾಡು, ನಿಲ್ಲಿಸು; ಗಡ: ಅಲ್ಲವೆ; ಹರಹರ: ಶಿವ ಶಿವ; ವಿಶೇಷ: ಅತಿಶಯತೆ, ವೈಶಿಷ್ಟ್ಯ; ಹೇಳು: ತಿಳಿಸು; ಇಂದ್ರ: ಶಕ್ರ, ಸುರಪತಿ; ಕೂಳು: ಊಟ; ರಾಶಿ: ಗುಂಪು; ಕೈಮೇಳ: ಕೈಕೂಡುವಿಕೆ; ಕಂದ: ಕೂಸು; ಆಣೆ: ಪ್ರಮಾಣ; ವಿಚಿತ್ರ: ಆಶ್ಚರ್ಯಕರ, ಬೆರಗುಗೊಳಿಸು; ಕೊಡೆ: ಛತ್ರಿ;

ಪದವಿಂಗಡಣೆ:
ಏಳುದಿನ+ ಪರಿಯಂತ +ಮೊರಡಿಯ
ಮೇಲು+ಕೊಡೆಯನು +ಹಿಡಿದು+ ಬಲು +ಮಳೆ
ಗಾಲವನು +ಮಾಣಿಸಿದ +ಗಡ +ಹರಹರ+ ವಿಶೇಷವಲ
ಹೇಳು +ಹೇಳ್+ಇಂದ್ರಂಗೆ +ಮಾಡಿದ
ಕೂಳರಾಶಿಯನ್+ಒಬ್ಬನೇ +ಕೈ
ಮೇಳವಿಸಿದನೆ+ ಕಂದನಾಣೆ+ ವಿಚಿತ್ರವಾಯ್ತೆಂದ

ಅಚ್ಚರಿ:
(೧) ಗೋವರ್ಧನ ಗಿರಿಯ ಲೀಲೆ – ಏಳುದಿನ ಪರಿಯಂತ ಮೊರಡಿಯ ಮೇಲುಗೊಡೆಯನು ಹಿಡಿದು ಬಲು ಮಳೆ ಗಾಲವನು ಮಾಣಿಸಿದ
(೨) ತಿಂದನು ಎಂದು ಹೇಳಲು – ಕೂಳರಾಶಿಯನೊಬ್ಬನೇ ಕೈಮೇಳವಿಸಿದನೆ