ಪದ್ಯ ೫೨: ಸುಪ್ರತೀಕ ಗಜವು ಹೇಗೆ ನಿಂತಿತು?

ಇಳುಹಿದನು ಬಲುಗುಳವ ಖಂಡಿಸಿ
ಕಳಚಿದನು ಮೊಗರಂಬವನು ಹೊ
ಮ್ಮಿಳಿಯ ಕುಣಿಕೆಯ ಮುರಿದು ತರಿದನು ಸುತ್ತ ರೆಂಚೆಗಳ
ಹಳವಿಗೆಯನಾ ಛತ್ರ ಚಮರಾ
ವಳಿಯ ಸೀಳಿದು ಬಿಸುಟನಾ ಗಜ
ತಿಲಕ ಮುಂಡಾಸನದಲಿರ್ದುದು ಭೂಪ ಕೇಳೆಂದ (ದ್ರೋಣ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಅರ್ಜುನನು ಆನೆಯ ಗುಳವನ್ನು ಕತ್ತರಿಸಿ, ಮೊಗರಂಬವನ್ನು ಕೆಳಬೀಳಿಸಿ, ಬಂಗಾರದ ಮಿಣಿಯ ಕುಣಿಕೆಯನ್ನು ಕತ್ತರಿಸಿ, ರೆಂಚೆ, ಧ್ವಜ, ಛತ್ರ ಚಾಮರಗಳನ್ನು ಸೀಳಿ ಎಸೆಯಲು ಸುಪ್ರತೀಕವು ಯಾವ ರಕ್ಷಣೆಯೂ ಇಲ್ಲದೆ ನಿಂತಿತು.

ಅರ್ಥ:
ಇಳುಹು: ಇಳಿಸು, ಕತ್ತರಿಸು; ಬಲು: ಬಹಳ; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಖಂಡಿಸು: ಕಡಿ, ಕತ್ತರಿಸು; ಕಳಚು: ಬೇರ್ಪಡಿಸು; ಮೊಗರಂಬ: ಮುಖಕ್ಕೆ ತೊಡಿಸುವ ಅಲಂಕಾರದ ಸಾಧನ; ಹೊಮ್ಮು: ಹುರುಪು, ಉತ್ಸಾಹ; ಕುಣಿಕೆ: ಕೊನೆ, ತುದಿ; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಸುತ್ತ: ಸುತ್ತಲೂ; ರೆಂಚೆ: ಆನೆ, ಕುದುರೆಗಳ ಪಕ್ಕರಕ್ಕೆ; ಹಳವಿಗೆ: ಬಾವುಟ; ಛತ್ರ: ಕೊಡೆ; ಚಮರ: ಚಾಮರ; ಆವಳಿ: ಸಾಲು; ಸೀಳು: ಕತ್ತರಿಸು; ಬಿಸುಟು: ಹೊರಹಾಕು; ಗಜ: ಆನೆ; ತಿಲಕ: ಶ್ರೇಷ್ಠ; ಮುಂಡ: ತಲೆ; ಆಸನ: ಆನೆಯ ಹೆಗಲು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಇಳುಹಿದನು +ಬಲುಗುಳವ +ಖಂಡಿಸಿ
ಕಳಚಿದನು +ಮೊಗರಂಬವನು +ಹೊ
ಮ್ಮಿಳಿಯ +ಕುಣಿಕೆಯ +ಮುರಿದು +ತರಿದನು +ಸುತ್ತ +ರೆಂಚೆಗಳ
ಹಳವಿಗೆಯನಾ +ಛತ್ರ +ಚಮರ
ಆವಳಿಯ +ಸೀಳಿದು +ಬಿಸುಟನ್+ಆ +ಗಜ
ತಿಲಕ +ಮುಂಡಾಸನದಲ್+ಇರ್ದುದು +ಭೂಪ +ಕೇಳೆಂದ

ಅಚ್ಚರಿ:
(೧) ಸುಪ್ರತೀಕವನ್ನು ಗಜತಿಲಕ ಎಂದು ಕರೆದಿರುವುದು
(೨) ಖಂಡಿಸಿ, ಮುರಿ, ತರಿ, ಸೀಳಿ, ಬಿಸುಟು – ಹೋರಾಟವನ್ನು ವಿವರಿಸುವ ಪದಗಳು

ಪದ್ಯ ೪: ಆನೆಯ ಮೊಗದಲ್ಲಿ ಯಾವುದು ರಂಜಿಸುತ್ತಿತ್ತು?

ಮುಗಿಲ ಹೊದರಿನೊಳೆಳೆಯ ರವಿ ರ
ಶ್ಮಿಗಳು ಪಸರಿಸುವಂತೆ ಸುತ್ತಲು
ಬಿಗಿದ ಗುಳದಲಿ ಹೊಳೆಯೆ ಹೊಂಗೆಲಸದ ಸುರೇಖೆಗಳು
ಗಗನ ಗಂಗಾನದಿಯ ಕಾಲುವೆ
ತೆಗೆದರೆನೆ ಠೆಕ್ಕೆಯದ ಪಲ್ಲವ
ವಗಿಯೆ ಮೆರೆದುದು ಬಿಗಿದ ಮೊಗರಂಬದ ವಿಳಾಸದಲಿ (ದ್ರೋಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಆನೆಯ ಸುತ್ತಲೂ ಬಿಗಿದ ಗುಳದಲ್ಲಿದ್ದ ಬಂಗಾರದ ರೇಖೆಗಳು ಆಗಸದಲ್ಲಿ ಹರಡುವ ಸೂರ್ಯ ರಶ್ಮಿಯಂತಿದ್ದವು. ಆಕಾಶ ಗಂಗೆಯ ಕಾಲುವೆಯಂತೆ ಅಳವಡಿಸಿದ್ದ ಧ್ವಜದಂಡವು ಆನೆಯ ಮೊಗರಂಬದಲ್ಲಿ ರಂಜಿಸುತ್ತಿತ್ತು.

ಅರ್ಥ:
ಮುಗಿಲು: ಆಗಸ; ಹೊದರು: ಗುಂಪು, ಸಮೂಹ; ಎಳೆ: ನೂಲಿನ ಎಳೆ, ಸೂತ್ರ; ರವಿ: ಸೂರ್ಯ; ರಶ್ಮಿ: ಕಿರಣ; ಪಸರಿಸು: ಹರಡು; ಸುತ್ತ: ಎಲ್ಲಾ ಕಡೆ; ಬಿಗಿ: ಬಂಧಿಸು; ಗುಳ: ಆನೆ ಕುದುರೆಗಳ ಪಕ್ಷರಕ್ಷೆ; ಹೊಳೆ: ಪ್ರಕಾಶ; ಹೊಂಗೆಲಸ: ಚಿನ್ನದ ಕಾರ್ಯದ; ಸುರೇಖೆ: ಚೆಲುವಾದ ಸಾಲು; ಗಗನ: ಆಗಸ; ಕಾಲುವೆ: ನೀರು ಹರಿಯುವುದಕ್ಕಾಗಿ ಮಾಡಿದ ತಗ್ಗು; ಠೆಕ್ಕೆಯ: ಬಾವುಟ; ಪಲ್ಲವ:ಚಿಗುರು; ಅಗಿ: ಜಗಿ, ಆವರಿಸು; ಮೆರೆ: ಹೊಳೆ; ಬಿಗಿ: ಭದ್ರವಾಗಿರುವುದು; ಮೊಗ: ಮುಖ; ವಿಳಾಸ: ವಿಹಾರ, ಚೆಲುವು; ಮೊಗರಂಬ: ಮೊಗಮುಟ್ಟು;

ಪದವಿಂಗಡಣೆ:
ಮುಗಿಲ +ಹೊದರಿನೊಳ್+ಎಳೆಯ +ರವಿ +ರ
ಶ್ಮಿಗಳು +ಪಸರಿಸುವಂತೆ +ಸುತ್ತಲು
ಬಿಗಿದ +ಗುಳದಲಿ +ಹೊಳೆಯೆ +ಹೊಂಗೆಲಸದ+ ಸುರೇಖೆಗಳು
ಗಗನ+ ಗಂಗಾನದಿಯ +ಕಾಲುವೆ
ತೆಗೆದರ್+ಎನೆ+ ಠೆಕ್ಕೆಯದ +ಪಲ್ಲವವ್
ಅಗಿಯೆ+ ಮೆರೆದುದು+ ಬಿಗಿದ +ಮೊಗರಂಬದ +ವಿಳಾಸದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಗನ ಗಂಗಾನದಿಯ ಕಾಲುವೆತೆಗೆದರೆನೆ

ಪದ್ಯ ೪: ದುರ್ಯೋಧನನ ತನು ಮನಸ್ಸನ್ನು ಯಾವುದು ಆವರಿಸಿತು?

ಬೇಟೆ ನಿಂದುದು ಗಜ ತುರಗದೇ
ರಾಟಮಾದುದು ಖೇಳ ಮೇಳದ
ತೋಟಿಯಲ್ಲಿಯದಲ್ಲಿ ಕವಡಿಕೆ ನೆತ್ತ ಮೊದಲಾದ
ನಾಟಕದ ಮೊಗರಂಬವೆನಿಪ ಕ
ವಾಟ ತೆರೆಯದು ಹೊಕ್ಕಸೂಯದ
ಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ (ಸಭಾ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ವಿಲಾಸ ಕ್ರೀಡೆಗಳೆಲ್ಲವೂ ನಿಂತವು, ಬೇಟೆ, ಆನೆಕುದುರೆಗಳ ಏರಾಟ, ಜೊತೆಗಾರರೊಡನೆ ವಿನೋದ ಕಲಹ ಮೊದಲಾದವನ್ನೆಲ್ಲವನ್ನೂ ದುರ್ಯೋಧನನು ತ್ಯಜಿಸಿದನು. ಕವಡೆ, ಪಗಡೆ ಆಟಗಳು, ನಾಟಕ ಆಡಂಬರವು ಆರಂಭವೇ ಆಗಲಿಲ್ಲ. ಅಸೂಯೆಯು ಮನಸ್ಸಿನಲ್ಲಿ ಹೊಕ್ಕು ಅವನ ದೇಹ ಮನಸ್ಸುಗಳೆರಡನ್ನೂ ಆವರಿಸಿತು.

ಅರ್ಥ:
ಬೇಟೆ: ಮೃಗಗಳನ್ನು ಕೊಲ್ಲುವುದು; ನಿಂದುದು: ನಿಲ್ಲು; ಗಜ: ಆನೆ; ತುರಗ: ಕುದುರೆ; ಏರಾಟ: ಸ್ಪರ್ಧೆ, ಪೈಪೋಟಿ; ಖೇಳ: ಆಟ; ಮೇಳ: ಗುಂಪು; ತೋಟಿ: ಕಲಹ, ಜಗಳ; ಕವಡಿ: ಮೋಸಗಾರ; ನೆತ್ತ: ಪಂದ್ಯ; ಮೊದಲಾದ: ಆದಿ, ಮುಂತಾದ; ನಾಟಕ: ನಟನೆ; ಮೊಗ: ಮುಖ; ಕವಾಟ: ಬಾಗಿಲು; ತೆರೆ: ಬಿಚ್ಚು; ಹೊಕ್ಕು: ಸೇರು; ಅಸೂಯೆ: ಹೊಟ್ಟೆಕಿಚ್ಚು; ಕೋಟಲೆ: ತೊಂದರೆ; ಕಡು: ಹೆಚ್ಚು: ಯೋಜನೆ, ಉಪಾಯ; ಕವರು: ಆವರಿಸು; ನೃಪ: ರಾಜ; ತನು: ದೇಹ; ಮನ: ಮನಸ್ಸು;ಮೊಗರಂಬ: ಮೊಗಮುಟ್ಟು, ಮುಖಕ್ಕೆ ತೊಡಿಸುವ ಅಲಂಕಾರಸಾಧನ;

ಪದವಿಂಗಡಣೆ:
ಬೇಟೆ +ನಿಂದುದು +ಗಜ +ತುರಗದ್
ಏರಾಟ+ಮಾದುದು +ಖೇಳ +ಮೇಳದ
ತೋಟಿಯಲ್ಲಿಯದಲ್ಲಿ+ ಕವಡಿಕೆ+ ನೆತ್ತ+ ಮೊದಲಾದ
ನಾಟಕದ +ಮೊಗರಂಬವೆನಿಪ+ ಕ
ವಾಟ +ತೆರೆಯದು +ಹೊಕ್+ಅಸೂಯದ
ಕೋಟಲೆಯ +ಕಡುಹೂಟ +ಕವರಿತು +ನೃಪನ +ತನು+ಮನವ

ಅಚ್ಚರಿ:
(೧) ಏರಾಟ, ಕವಾಟ – ಪ್ರಾಸ ಪದ
(೨) ದುರ್ಯೋಧನನ ಸ್ಥಿತಿ – ಅಸೂಯದಕೋಟಲೆಯ ಕಡುಹೂಟ ಕವರಿತು ನೃಪನ ತನುಮನವ
(೩) ಕ ಕಾರದ ತ್ರಿವಳಿ ಪದ – ಕೋಟಲೆಯ ಕಡುಹೂಟ ಕವರಿತು

ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು