ಪದ್ಯ ೭: ಕೃಷ್ಣನ ಮಾತು ಕೇಳಿ ಆಸ್ಥಾನವು ಹೇಗಾಯಿತು?

ವಿದುರನುತ್ಸವ ಕೃಪನ ಸಮ್ಮುದ
ನದಿಯ ಮಗನೊಲವಂಧನೃಪನ
ಭ್ಯುದಯ ಕೇಳೆಂದಸುರರಿಪು ನಯ ನುಡಿಯ ಗಡಣಿಸಲು
ಮದದ ಮೈಗಾಣಿಕೆಯ ಮನ ಲೇ
ಪದ ಮಹಾಖಳನಡ್ಡ ಮೊಗವಿಡ
ಲುದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ (ಉದ್ಯೋಗ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಪಾಂಡವರಿಗೆ ರಾಜ್ಯವನ್ನು ನೀಡಿದರೆ ವಿದುರನಿಗೆ ಸಂಭ್ರಮ, ಕೃಪಾಚಾರ್ಯರಿಗೆ ಸಂತೋಷ, ಭೀಷ್ಮರಿಗೆ ಪ್ರೀತಿ, ಧೃತರಾಷ್ಟ್ರನ ಅಭ್ಯುದಯದ ಮಾರ್ಗ ಎಂದು ನೀತಿಸಮ್ಮತವಾದ ಮಾತುಗಳನ್ನು ಕೃಷ್ಣನು ಹೇಳಲು, ಅಹಂಕಾರವನ್ನೇ ತನ್ನೊಳು ಪ್ರದರ್ಶಿಸುತ್ತಾ, ಮನಸ್ಸಿನಲ್ಲೂ ಅದನ್ನೇ ಲೇಪಿಸಿಕೊಂಡಿದ್ದ ದುಷ್ಟಬುದ್ಧಿಯುಳ್ಳ ದುರ್ಯೋಧನನು ಈ ಮಾತಿಗೆ ತನ್ನ ಅಸಮ್ಮತಿಯನ್ನು ಸೂಚಿಸುವಂತೆ ಮುಖವನ್ನು ತಿರುಗಿಸಿದನು. ಆಸ್ಥಾನವು ನಿಶ್ಯಬ್ದವಾಗಿ ಸಾಗರದಲ್ಲಿ ಮುಳುಗಿದಂತೆ ತೋರಿತು.

ಅರ್ಥ:
ಉತ್ಸವ: ಸಂಭ್ರಮ, ಸಡಗರ; ಸಮ್ಮುದ:ಅತಿಯಾದ ಆನಂದ; ಒಲವು: ಪ್ರೀತಿ; ಅಭ್ಯುದಯ: ಅಭಿವೃದ್ಧಿ, ಗೌರವ; ಅಸುರರಿಪು: ಕೃಷ್ಣ; ನಯ: ನೀತಿ; ನುಡಿ: ಮಾತು; ಗಡಣ: ಕೂಟ, ಸಹವಾಸ; ಮದ: ಅಹಂಕಾರ; ಮೈ: ತನು; ಗಾಣಿಕೆ:ತೋರಿಕೆ; ಮನ: ಮನಸ್ಸು; ಲೇಪ: ಹಚ್ಚು; ಮಹಾ: ಅತಿ; ಖಳ: ದುಷ್ಟ; ಅಡ್ಡ: ಚಿಕ್ಕದು; ಮೊಗ: ಮುಖ; ಉದಧಿ: ಸಮುದ್ರ; ಅದ್ದು: ಮಿಂದು; ಮೌನ: ನಿಶ್ಯಬ್ದತೆ; ಆಸ್ಥಾನ: ದರ್ಬಾರು;

ಪದವಿಂಗಡಣೆ:
ವಿದುರನ್+ಉತ್ಸವ +ಕೃಪನ +ಸಮ್ಮುದ
ನದಿಯ +ಮಗನ್+ಒಲವ್+ಅಂಧ+ನೃಪನ್
ಅಭ್ಯುದಯ +ಕೇಳ್+ಎಂದ್+ಅಸುರರಿಪು+ ನಯ +ನುಡಿಯ +ಗಡಣಿಸಲು
ಮದದ+ ಮೈಗಾಣಿಕೆಯ +ಮನ +ಲೇ
ಪದ +ಮಹಾಖಳನ್+ಅಡ್ಡ +ಮೊಗವಿಡಲ್
ಉದಧಿಯೊಳಗ್+ಅದ್ದಂತೆ +ಮೌನದೊಳಿದ್ದುದ್+ಆಸ್ಥಾನ

ಅಚ್ಚರಿ:
(೧) ದುರ್ಯೋಧನನ ಚಿತ್ರಣ (‘ಮ’ಕಾರದ ಸಾಲು ಪದಗಳು) – ಮದದ ಮೈಗಾಣಿಕೆಯ ಮನ ಲೇಪದ ಮಹಾಖಳನಡ್ಡ ಮೊಗವಿಡಲ್
(೨) ಉಪಮಾನದ ಪ್ರಯೋಗ – ಉದಧಿಯೊಳಗದ್ದಂತೆ ಮೌನದೊಳಿದ್ದುದಾಸ್ಥಾನ