ಪದ್ಯ ೨೧: ಧೃತರಾಷ್ಟ್ರನು ಸಂಜಯನಿಗೆ ಯಾವ ಪ್ರಶ್ನೆಗಳನ್ನಿಟ್ಟನು?

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ (ಗದಾ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಾತನಾಡುತ್ತಾ, ಸಂಜಯ ಹೋದವನು ಬಹಳ ತಡವಾಗಿ ಬಂದೆ. ಜಯಲಕ್ಷ್ಮಿಯು ಕೌರವನನ್ನು ತ್ಯಜಿಸಿ ಹೋದಳೇ? ಪಾಂಡವರ ಆಗುಹೋಗುಗಳೇನು? ಶಕುನಿಯ ಕುದುರೆಗಳ ದಳವನ್ನು ಭೀಮನು ಆಕ್ರಮಿಸಿ ಮುರಿದನೇ? ಕೌರವನ ಗತಿಯೇನು ಎಂದು ಪ್ರಶ್ನಿಸಿದನು.

ಅರ್ಥ:
ಹೋಗು: ತೆರಳು; ತಳುವು: ನಿಧಾನಿಸು; ನೀಗು: ನಿವಾರಿಸಿಕೊಳ್ಳು, ಪರಿಹರಿಸು; ಜಯಲಕ್ಷ್ಮಿ: ವಿಜಯಲಕ್ಷ್ಮಿ; ಆಗುಹೋಗು: ವಿಚಾರ; ಹಯ: ಕುದುರೆ; ಮೋಹರ: ಯುದ್ಧ; ತಾಗು: ಮುಟ್ಟು; ಮುರಿ: ಸೀಳು; ಆಹವ: ಯುದ್ಧ; ರಾಯ: ರಾಜ; ಥಟ್ಟು: ಗುಂಪು; ಹೇಳು: ಗೊತ್ತುಮಾಡು;

ಪದವಿಂಗಡಣೆ:
ಹೋಗಿ+ ತಳುವಿದೆ +ಕೌರವೇಂದ್ರನ
ನೀಗಿದಳೆ +ಜಯಲಕ್ಷ್ಮಿ+ ಪಾಂಡವರ್
ಆಗುಹೋಗೇನಾಯ್ತು +ಶಕುನಿಯ +ಹಯದ +ಮೋಹರವ
ತಾಗಿ +ಮುರಿದನೆ +ಭೀಮನೀ +ಮೇ
ಲ್ಪೋಗಿನ್+ಆಹವವೇನು +ರಾಯನ
ತಾಗು +ಥಟ್ಟೇನಾಯ್ತು +ಸಂಜಯ +ತಿಳಿಯ+ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ಕೌರವನು ಜಯಿಸನು ಎಂದು ಯೋಚಿಸಿದ ಎಂದು ಹೇಳುವ ಪರಿ – ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ
(೨) ಮೋಹರ, ಆಹವ – ಸಮಾನಾರ್ಥಕ ಪದ