ಪದ್ಯ ೨೯: ಧೃತರಾಷ್ಟ್ರನು ಸಂಜಯನನ್ನು ಯಾರ ಬಗ್ಗೆ ವಿಚಾರಿಸಿದನು?

ತಂದೆನಿಲ್ಲಿಗೆ ಸಕಲ ನಾರೀ
ವೃಂದವನು ಕುರುಪತಿಯ ನೇಮದ
ಲಿಂದಿನೀ ವೃತ್ತಾಂತ ಅರ್ತಿಸಿತಿಲ್ಲಿ ಪರಿಯಂತ
ಮುಂದೆ ಹೇಳುವುದೇನು ನೀ ಬೆಸ
ಸೆಂದಡವನೀಪತಿಯ ಹೊರೆಗೈ
ತಂದನೇ ಗುರುಸೂನು ಮೇಲಣ ಹದನ ಹೇಳೆಂದ (ಗದಾ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ದೊರೆಯ ಅಪ್ಪಣೆಯಂತೆ ಸ್ತ್ರೀವೃಂದವನ್ನು ಇಲ್ಲಿಗೆ ಕರೆತಂದೆನು. ಈ ವೃತ್ತಾಂತವಉ ಇಲ್ಲಿಯವರೆಗೆ ನಡೆಯಿತು. ಇನ್ನೇನು ಹೇಳಲಿ ಎಂದು ಹೇಳಲು, ಧೃತರಾಷ್ಟ್ರನು, ಅಶ್ವತ್ಥಾಮನು ಕೌರವನ ರಕ್ಷಣೆಗೆ ಹೋದನೇ, ಮುಂದೇನಾಯಿತು ಎಂದು ಕುತೂಹಲದಿಂದ ಕೇಳಿದನು.

ಅರ್ಥ:
ತಂದೆ: ಬಂದೆ, ಆಗಮಿಸು; ಸಕಲ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ನೇಮ: ಅಪ್ಪಣೆ; ವೃತ್ತಾಂತ: ವಿವರಣೆ; ವರ್ತಿಸು: ನಡೆದುದು; ಪರಿ: ರೀತಿ, ಕ್ರಮ; ಹೇಳು: ತಿಳಿಸು; ಬೆಸಸು: ಹೇಳು, ಆಜ್ಞಾಪಿಸು; ಅವನೀಪತಿ: ರಾಜ; ಹೊರೆ: ರಕ್ಷಣೆ; ಐತಂದು: ಬಂದು ಸೇರು; ಸೂನು: ಮಗ; ಹದ: ಸ್ಥಿತಿ;

ಪದವಿಂಗಡಣೆ:
ತಂದೆನ್+ಇಲ್ಲಿಗೆ +ಸಕಲ+ ನಾರೀ
ವೃಂದವನು +ಕುರುಪತಿಯ +ನೇಮದಲ್
ಇಂದಿನೀ +ವೃತ್ತಾಂತ + ವರ್ತಿಸಿತಿಲ್ಲಿ +ಪರಿಯಂತ
ಮುಂದೆ +ಹೇಳುವುದೇನು +ನೀ +ಬೆಸ
ಸೆಂದಡ್+ಅವನೀಪತಿಯ+ ಹೊರೆಗ್
ಐತಂದನೇ +ಗುರುಸೂನು +ಮೇಲಣ+ ಹದನ+ ಹೇಳೆಂದ

ಅಚ್ಚರಿ:
(೧) ತಂದೆನಿಲ್ಲಿಗೆ, ಹೊರೆಗೈತಂದನೇ – ಪದಗಳ ಬಳಕೆ

ಪದ್ಯ ೬೯: ಸಂಜಯನು ಯಾರನ್ನು ನೋಡಲು ಅಪ್ಪಣೆ ಪಡೆದನು?

ಧರಣಿಪತಿ ಕೇಳಿನ್ನು ಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ
ಗುರುಸುತನು ಕೃಪ ಭೋಜ ಶಕುನಿಗ
ಲರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ (ಗದಾ ಪರ್ವ, ೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಎಲೈ ರಾಜ ಕೇಳು, ಮುಂದೆ ನಡೆದ ಯುದ್ಧದ ವೃತ್ತಾಂತವನ್ನು ಕೇಳು. ಆದರೆ ದುರ್ಯೋಧನನು ರಣರಂಗದಲ್ಲಿ ಕಾಣಿಸುತ್ತಿಲ್ಲ. ಅವನನ್ನು ನೋಡಿಕೊಂಡು ಬರಲು ಅಪ್ಪಣೆಯೇ? ಕೃಪ, ಅಶ್ವತ್ಥಾಮ, ಭೋಜ, ಶಕುನಿಗಳು ಅವನೊಡನಿರುವರೇ? ಅದನ್ನು ತಿಳಿದುಕೊಂಡು ಬರುತ್ತೇನೆ ಎಂದು ಸಂಜಯನು ಕೇಳಲು, ಧೃತರಾಷ್ಟ್ರನು ಸಂಜಯನನ್ನು ಕಳುಹಿಸಿದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಮೇಲಣ: ಮುಂದೆ; ಧುರ: ಯುದ್ಧ; ವೃತ್ತಾಂತ: ಘಟನೆ, ಸಂಗತಿ, ಸಮಾಚಾರ; ಅರಿ: ತಿಳಿ; ಕಂಡು: ನೋಡು; ನೇಮ: ನಿಯಮ; ಸುತ: ಮಗ; ಅರಸ: ರಾಜ; ಪರಿವೇಷ್ಟಿ: ಸುತ್ತುವರಿ; ಬಹೆ: ಆಗಮಿಸು; ಕಳುಹಿದ: ತೆರಳು;

ಪದವಿಂಗಡಣೆ:
ಧರಣಿಪತಿ +ಕೇಳಿನ್ನು +ಮೇಲಣ
ಧುರದ +ವೃತ್ತಾಂತವನು +ಕುರುಪತಿ
ಇರವನ್+ಅರಿಯೆನು +ಕಂಡುಬಹೆನೇ+ ನೇಮವೇ +ತನಗೆ
ಗುರುಸುತನು +ಕೃಪ+ ಭೋಜ +ಶಕುನಿಗಳ್
ಅರಸನನು +ಪರಿವೇಷ್ಟಿಸಿದರ್+ಅದನ್
ಅರಿದು +ಬಹೆನೆನೆ +ಕಳುಹಿದನು+ ಧೃತರಾಷ್ಟ್ರ +ಸಂಜಯನ

ಅಚ್ಚರಿ:
(೧) ಧರಣಿಪತಿ, ಕುರುಪತಿ – ಪದಗಳ ಬಳಕೆ
(೨) ಕಡುಬಹೆನೆ, ಅರಿದುಬಹೆನೆ – ಪದಗಳ ಬಳಕೆ

ಪದ್ಯ ೧೦೮: ದರ್ಭೆಯಲ್ಲಿ ಯಾರು ನೆಲೆಸಿದ್ದಾರೆ?

ಆದಿಯಲಿ ಕಮಲಾಸನನು ಮಧು
ಸೂದನನು ಮಧ್ಯದಲಿ ಮೇಲಣ
ಹಾದಿಯೊಳು ಗಿರಿಜೇಶನೀ ತ್ರೈಮೂರ್ತಿಮಯವಾಗಿ
ಕಾದುಕೊಂಡಿಹರಖಿಳ ಲೋಕವ
ನೈದೆ ದರ್ಭಾಂಕುರದ ಮಹಿಮೆಯ
ಭೇದವನು ಬಣ್ಣಿಸುವನಾವನು ಭೂಪ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ದರ್ಭೆಯ ಮಹಿಮೆಯನ್ನು ತಿಳಿಸುವ ಪದ್ಯ. ದರ್ಭೆಯ ಆದಿಯಲ್ಲಿ ಬ್ರಹ್ಮನು, ಮಧ್ಯದಲ್ಲಿ ವಿಷ್ಣುವು ಮತ್ತು ತುದಿಯಲ್ಲಿ ಶಿವನು, ಹೀಗೆ ತ್ರಿಮೂರ್ತಿಗಳ ಸಮಾಗಮವಾದ ದರ್ಭೆಯು ತ್ರಿಮೂರ್ತಿಮಯವಾಗಿದೆ. ಅವರು ಲೋಕವನ್ನು ಕಾಯುತ್ತಿದ್ದಾರೆ. ದರ್ಭೆಯ ಮಹಿಮೆಯನ್ನು ವರ್ಣಿಸಲು ಯಾರಿಗೆ ಸಾಧ್ಯವೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಆದಿ: ಮೊದಲು; ಕಮಲಾಸನ: ಬ್ರಹ್ಮ; ಕಮಲ: ಪದ್ಮ; ಆಸನ: ಕುಳಿತುಕೊಳ್ಳುವ; ಮಧುಸೂದನ: ವಿಷ್ಣು; ಮಧ್ಯ: ನಡು; ಮೇಲಣ: ಮೊದಲು; ಹಾದಿ: ಮಾರ್ಗ, ರೀತಿ; ಗಿರಿಜೇಶ: ಶಿವ; ತ್ರೈಮೂರ್ತಿ: ತ್ರಿಮೂರ್ತಿ, ಬ್ರಹ್ಮ ವಿಷ್ಣು ಮಹೇಶ್ವರ; ಮಯ: ವ್ಯಾಪಿಸಿರುವುದು; ಕಾದು: ಕಾಯು; ಅಖಿಳ: ಎಲ್ಲಾ; ಲೋಕ: ಜಗತ್ತು; ಐದೆ: ವಿಶೇಷವಾಗಿ; ಅಂಕುರ: ಮೊಳಕೆ, ಚಿಗುರು, ಹುಟ್ಟು; ಮಹಿಮೆ: ಶ್ರೇಷ್ಠತೆ, ಔನ್ನತ್ಯ, ವೈಶಿಷ್ಟ್ಯ; ಭೇದ: ಗುಟ್ಟನ್ನು ರಟ್ಟು ಮಾಡುವುದು; ಬಣ್ಣಿಸು: ವಿವರಿಸು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆದಿಯಲಿ+ ಕಮಲಾಸನನು +ಮಧು
ಸೂದನನು +ಮಧ್ಯದಲಿ +ಮೇಲಣ
ಹಾದಿಯೊಳು +ಗಿರಿಜೇಶನ್+ಈ+ ತ್ರೈಮೂರ್ತಿ+ಮಯವಾಗಿ
ಕಾದುಕೊಂಡಿಹರ್+ಅಖಿಳ +ಲೋಕವನ್
ಐದೆ+ ದರ್ಭಾಂಕುರದ +ಮಹಿಮೆಯ
ಭೇದವನು +ಬಣ್ಣಿಸುವನಾವನು+ ಭೂಪ +ಕೇಳೆಂದ

ಅಚ್ಚರಿ:
(೧) ಆದಿ, ಮಧ್ಯ, ಮೇಲಣ, ಕಮಲಾಸನ, ಮಧುಸೂದನ, ಗಿರಿಜೇಶನ – ಪದಗಳ ಬಳಕೆ
(೨) ಬ ಕಾರದ ಸಾಲು ಪದಗಳ ಬಳಕೆ – ಭೇದವನು ಬಣ್ಣಿಸುವನಾವನು ಭೂಪ