ಪದ್ಯ ೨೯: ಕರ್ಣನು ಕೌರವರ ಸ್ಥಿತಿಯನ್ನು ಹೇಗೆ ವರ್ಣಿಸಿದನು?

ಆಲವಟ್ಟದ ಗಾಳಿಯಲಿ ಮೇ
ಘಾಳಿ ಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ (ದ್ರೋಣ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಟ್ಟೆಯ ಬೀಸಣಿಕೆಯಿಂದ ಬೀಸಿದರೆ ಕಾರ್ಮೋಡಗಳು ಹಾರಿ ಹೋದಾವೇ? ಮಿಂಚುಹುಳದ ಬೆಳಕಿಗೆ ಕತ್ತಲೆ ಸೋತೀತೇ? ಸೀಸದ ಉಳಿಯಿಂದ ಬೆಟ್ಟವನ್ನು ಕತ್ತರಿಸಲು ಸಾಧ್ಯವೇ ಶ್ರೀಕೃಷ್ಣನು ಒಲಿದ ಮನುಷ್ಯರ ಮೇಲೆ ಉಳಿದವರು ಸಿಟ್ಟಾಗಿ ಏನು ಮಾಡಲು ಸಾಧ್ಯ? ಭೀಷ್ಮ ಇದ್ ನಾವಿರುವ ಸ್ಥಿತಿ ಎಂದು ಕರ್ಣನು ಹೇಳಿದನು.

ಅರ್ಥ:
ಆಲವಟ್ಟ: ಬಟ್ಟೆಯಿಂದ ಮಾಡಿದ ಬೀಸಣಿಕೆ; ಗಾಳಿ: ವಾಯು; ಮೇಘಾಳಿ: ಮೋಡಗಳ ಸಮೂಹ; ಮುರಿ: ಸೀಳು; ಮಿಂಚು: ಹೊಳಪು, ಕಾಂತಿ; ಬುಳು: ಹುಳು; ಸೋಲು: ಪರಾಭವ; ಕತ್ತಲೆ: ಅಂಧಕಾರ; ಕಟಕ: ಗುಂಪು; ಜೀಯ: ಒಡೆಯ; ಚಿತ್ತೈಸು: ಗಮನವಿಡು; ಸೀಳು: ಚೂರು, ತುಂಡು; ಸೀಸ: ತಲೆ, ಶಿರ; ಉಳಿ: ಲೋಹವನ್ನು ಕತ್ತರಿಸಲು ಉಪಯೋಗಿಸುವ ಒಂದು ಉಪಕರಣ; ಶೈಲ: ಬೆಟ್ಟ; ಹರಿ: ಸೀಳು; ಒಲಿ: ಒಪ್ಪು; ಮನುಜ: ಮನುಷ್ಯ; ಮುನಿ: ಕೋಪ; ಏಗು: ಸಾಗಿಸು, ನಿಭಾಯಿಸು; ಕೆಲ: ಸ್ವಲ್ಪ; ಹೇಳು: ತಿಳಿಸು;

ಪದವಿಂಗಡಣೆ:
ಆಲವಟ್ಟದ+ ಗಾಳಿಯಲಿ +ಮೇ
ಘಾಳಿ +ಮುರಿವುದೆ +ಮಿಂಚುಬುಳುವಿಗೆ
ಸೋಲುವುದೆ +ಕತ್ತಲೆಯ +ಕಟಕವು +ಜೀಯ +ಚಿತ್ತೈಸು
ಸೀಳಬಹುದೇ +ಸೀಸದ್+ಉಳಿಯಲಿ
ಶೈಲವನು +ಹರಿಯೊಲಿದ+ ಮನುಜರ
ಮೇಲೆ +ಮುನಿದ್+ಏಗುವರು +ಕೆಲಬರು +ಭೀಷ್ಮ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಲವಟ್ಟದ ಗಾಳಿಯಲಿ ಮೇಘಾಳಿ ಮುರಿವುದೆ; ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು; ಸೀಳಬಹುದೇ ಸೀಸದುಳಿಯಲಿ ಶೈಲವನು

ಪದ್ಯ ೮೭: ಭೂಮ್ಯಾಕಾಶಗಳಿಗೆ ಯಾವುದು ಕತ್ತಲನ್ನು ಆವರಿಸಿತು?

ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ (ಭೀಷ್ಮ ಪರ್ವ, ೪ ಸಂಧಿ, ೮೭ ಪದ್ಯ)

ತಾತ್ಪರ್ಯ:
ನೀಲಗಿರಿಗೆ ಆತು ಮಹಾಮೇಘಗಳು ಮಳೆಯನ್ನು ಸುರಿಸುವಂತೆ ಜೋದರು ಬಾಣಗಳ ಮಳೆಗರೆಯಲು ಭೂಮಿಗೂ ಆಗಸಕ್ಕೂ ನಡುವೆ ಕತ್ತಲು ಕವಿಯಿತು. ದೇವತೆಗಳ ಕಣ್ಣುಗಳು ಚಲಿಸಿದವು. ಬಾಣಗಳು ಭೂಮ್ಯಾಕಾಶಗಳಿಗೆ ಕತ್ತಲನ್ನು ಕವಿಸಿದವು.

ಅರ್ಥ:
ಗಿರಿ: ಬೆಟ್ಟ; ನೆಮ್ಮು: ಒರಗು, ಆತುಕೊಳ್ಳು, ಆಸರೆ; ಘನ: ದೊಡ್ಡ; ಮೇಘಾಳಿ: ಮೋಡಗಳ ಸಮೂಹ; ಸುರಿ: ವರ್ಷಿಸು; ಮಳೆ: ವರ್ಷ; ಬಿರುಗೋಲು: ವೇಗವಾಗಿ ಬಿಟ್ಟ ಬಾಣಗಳು; ಸೈವಳೆ: ರಭಸವಾದ ಮಳೆ; ಉಭಯ: ಎರಡು; ಜೋಧ: ಯೋಧ; ಅವಗಡಿಸು: ಕಡೆಗಣಿಸು; ತೊಳಲು: ಬವಣೆ, ಸಂಕಟ; ಖಚರ: ಗಂಧರ್ವ, ಆಕಾಶದಲ್ಲಿ ಸಂಚರಿಸುವ; ನಿಚಯ: ಗುಂಪು; ಆಲಿ: ಕಣ್ಣು; ಧರೆ: ಭೂಮಿ; ಗಗನ: ಭೂಮಿ; ಕಾಳಿಕೆ: ಕೊಳಕು; ಪಸರಿಸು: ಹರಡು; ಜೋಧ: ಯೋಧ; ಕೋದು: ಸೇರಿಸು; ಶರಜಾಲ: ಬಾಣಗಳ ಗುಂಪು;

ಪದವಿಂಗಡಣೆ:
ನೀಲಗಿರಿಗಳ +ನೆಮ್ಮಿ +ಘನ+ಮೇ
ಘಾಳಿ +ಸುರಿದವೊ +ಮಳೆಯನ್+ಎನೆ+ ಬಿರು
ಗೋಲ +ಸೈವಳೆಗರೆದರ್+ಉಭಯದ +ಜೋದರ್+ಅವಗಡಿಸಿ
ಮೇಲೆ +ತೊಳಲುವ+ ಖಚರ +ನಿಚಯಗಳ್
ಆಲಿ+ಒಲೆದವು +ಧರೆಗೆ +ಗಗನಕೆ
ಕಾಳಿಕೆಯ+ ಪಸರಿಸಿತು +ಜೋದರ +ಕೋದ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಗಿರಿಗಳ ನೆಮ್ಮಿ ಘನಮೇಘಾಳಿ ಸುರಿದವೊ ಮಳೆಯನೆನೆ

ಪದ್ಯ ೧೦: ಅರ್ಜುನನ ತಪಸ್ಸಿನ ಪ್ರಭೆ ಹೇಗಿತ್ತು?

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆಂದ (ಅರಣ್ಯ ಪರ್ವ, ೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನ ತಪಸ್ಸಿನ ಅಗ್ನಿ ಜ್ವಾಲೆಯು ಆಗಸದಲ್ಲಿ ಚರಿಸುವ ಸೂರ್ಯ ಚಂದ್ರರ ಪ್ರಭೆಯನ್ನು ತಡೆಯಿತು. ಮೇಲೆದ್ದು ಕಾಣುವ ಮೌನದ ಕರಾಳಗರ್ಭದಲ್ಲಿದ್ದ ತೇಜಸ್ಸಿನ ಹೊಗೆಯಿಂದ ಆಕಾಶದ ಮೋಡಗಳೂ ಕಪ್ಪಾದವು ಎಂದು ವೈಶಂಪಾಯನರು ಜನಮೇಜಯ ರಾಜನಿಗೆ ಹೇಳಿದರು.

ಅರ್ಥ:
ಮೇಲೆ: ಹೆಚ್ಚು; ತಪ: ತಪಸ್ಸು; ಅಗ್ನಿ: ಬೆಂಕಿ; ಜ್ವಾಲೆ: ಅಗ್ನಿಯ ನಾಲಗೆ; ಜಡಿ: ಹೊಡೆತ; ತಡೆ: ನಿಲ್ಲಿಸು; ಅಭ್ರ: ಆಗಸ; ಸ್ಥಾಳಿ: ಲೋಹದ ದುಂಡನೆಯ ಪಾತ್ರೆ; ಸೈವರಿ: ಮುಂದಕ್ಕೆ ಹೋಗು; ಸೂರ್ಯ: ರವಿ, ಭಾನು; ಚಂದ್ರ: ಶಶಿ; ಪ್ರಭೆ: ಪ್ರಕಾಶ; ಢಾಳಿಸು: ಕಾಂತಿಗೊಳ್ಳು; ಧೌತ: ಬಿಳಿ, ಶುಭ್ರ; ಮೌನ: ನಿಶ್ಯಬ್ದ; ಕರಾಳ: ಭಯಂಕರ; ತೇಜ: ಕಾಂತಿ; ಗರ್ಭ: ಒಳಭಾಗ; ಧೂಮ: ಹೊಗೆ, ಮೋಡ; ಆಳಿ: ಗುಂಪು; ಮೇಘಾಳಿ: ಮೋಡಗಳ ಗುಂಪು; ಮಸಗು: ಹರಡು; ಕೆರಳು; ಅರಸ: ರಾಜ;

ಪದವಿಂಗಡಣೆ:
ಮೇಲೆ +ಮೇಲ್+ಈತನ +ತಪೋಗ್ನಿ
ಜ್ವಾಲೆ+ ಜಡಿದುದು +ತಡೆದುದ್+ಅಭ್ರ
ಸ್ಥಾಳಿಯಲಿ +ಸೈವರಿವ+ ಸೂರ್ಯನ +ಚಂದ್ರಮ+ಪ್ರಭೆಯ
ಢಾಳಿಸುವ +ಪರಿಧೌತ +ಮೌನ +ಕ
ರಾಳ +ತೇಜೋ+ಗರ್ಭ+ ತಪ+ಧೂ
ಮಾಳಿಯಲಿ +ಮೇಘಾಳಿ +ಮಸಗಿದುದ್+ಅರಸ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆಗಸವನ್ನು ದುಂಡನೆಯ ಪಾತ್ರೆಗೆ ಹೋಲಿಸಿರುವ ಪರಿ – ಅಭ್ರ
ಸ್ಥಾಳಿಯಲಿ ಸೈವರಿವ ಸೂರ್ಯನ ಚಂದ್ರಮಪ್ರಭೆಯ
(೨) ಅಭ್ರಸ್ಥಾಳಿ, ಡಾಳಿ, ಧೂಮಾಳಿ, ಮೇಘಾಳಿ – ಪ್ರಾಸ ಪದ
(೩) ಮೇಘಾಳಿ ಮಸಗಿದುದು, ಸೈವರಿವ ಸೂರ್ಯನ – ಜೋಡಿ ಅಕ್ಷರದ ಪದಗಳು

ಪದ್ಯ ೨೩: ಕರ್ಣನ ಆಕ್ರಮಣ ಹೇಗಿತ್ತು?

ಗಾಳಿಯೆತ್ತಲು ಘಾಡಿಸುವ ಮೇ
ಘಾಳಿಯೆತ್ತಲು ವೈರಿಸೇನೆಯ
ನಾಳೆಗಡಿತದ ನೊರೆಯ ರಕುತದ ನೂಕು ಧಾರೆಗಳ
ಏಳೆಗೆಯಲಾ ಛತ್ರ ಚಮರೀ
ಜಾಳ ನನೆದವು ಕರ್ಣನಂಬಿನ
ಕೋಲ ಕಡಿದೊಡನೊಡನೆ ಕೊಂದನು ಕೋಟಿ ಸಂಖ್ಯೆಗಳ (ಕರ್ಣ ಪರ್ವ, ೧೦ ಸಂಧಿ, ಪದ್ಯ)

ತಾತ್ಪರ್ಯ:
ವರಿಸೈನ್ಯದ ಮೋಡಗಳಿಗೆ ಕರ್ಣನ ಬಾಣಗಳು ಬಿರುಗಳಿಯಾದವು. ಬಾಣಗಳೆಲ್ಲಾ ತುಂಡಾಗಿ ಪಾಂಚಾಲ ಯೋಧರ ಕತ್ತುಗಳು ಕಡಿದುಬಿದ್ದು, ರಕ್ತಧಾರೆ ಚಿಮ್ಮಿ ಹರಿಯಿತು. ಅ ರಕ್ತಧಾರೆಗಳಿಗೆ ರಥಿಕರ ಛತ್ರಚಾಮರಗಳು ನೆನೆದು ಹೋದವು. ಕರ್ಣನು ವೈರಿಗಳ ಬಾಣಗಳನ್ನು ಕಡಿದು ಲೆಕ್ಕವಿಲ್ಲದಷ್ಟು ಸೈನಿಕರನ್ನು ಕೊಂದನು.

ಅರ್ಥ:
ಗಾಳಿ: ವಾಯು; ಘಾಡಿಸು: ವ್ಯಾಪಿಸು; ಮೇಘಾಳಿ: ಮೋಡಗಳ ಸಾಲು; ವೈರಿಸೇನೆ: ಶತ್ರುಸೈನ್ಯ; ನಾಳ: ಕೊಳವೆ; ಕಡಿತ: ಮುರಿ, ಸೀಳು; ರಕುತ: ನೆತ್ತರು; ನೂಕು: ತಳ್ಳು; ಧಾರೆ: ರಭಸ; ಛತ್ರ: ಕೊಡೆ; ಚಮರಿ: ಚಾಮರ, ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಜಾಳ: ಗುಂಪು; ನನೆದು: ತೊಯ್ದು; ಅಂಬು: ಬಾಣ; ಕೋಲ: ಮುಖವಾಡ; ಕಡಿ: ಸೀಳು; ಕೊಂದನು: ಸಾಯಿಸು, ಮರಣ; ಕೋಟಿ: ಲೆಕ್ಕವಿಲ್ಲದಷ್ಟು;

ಪದವಿಂಗಡಣೆ:
ಗಾಳಿಯೆತ್ತಲು+ ಘಾಡಿಸುವ +ಮೇ
ಘಾಳಿಯೆತ್ತಲು+ ವೈರಿಸೇನೆಯ
ನಾಳೆಗಡಿತದ+ ನೊರೆಯ +ರಕುತದ+ ನೂಕು+ ಧಾರೆಗಳ
ಏಳೆಗೆಯಲಾ +ಛತ್ರ+ ಚಮರೀ
ಜಾಳ +ನನೆದವು+ ಕರ್ಣನ್+ಅಂಬಿನ
ಕೋಲ +ಕಡಿದೊಡನೊಡನೆ+ ಕೊಂದನು +ಕೋಟಿ +ಸಂಖ್ಯೆಗಳ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕರ್ಣನಂಬಿನ ಕೋಲ ಕಡಿದೊಡನೊಡನೆ ಕೊಂದನು ಕೋಟಿ ಸಂಖ್ಯೆಗಳ
(೨) ಗಾಳಿ, ಮೇಘಾಳಿ – ಪ್ರಾಸ ಪದ