ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೭: ದ್ರೋಣನು ಪರಬಲವನ್ನು ಹೇಗೆ ಪೀಡಿಸಿದನು?

ಸಾಲ ಮೇಘದ ಮನೆಗಳಿಗೆ ಬಿರು
ಗಾಳಿ ಬಿದ್ದನನಾಗಿ ಬರಲವ
ರಾಲಯದ ಸಿರಿ ಮೆರೆವುದೇ ಧೃತರಾಷ್ಟ್ರ ಚಿತ್ತಯಿಸು
ಬೀಳಹೊಯ್ದರು ಹೊಕ್ಕು ಭೂಮೀ
ಪಾಲನೆಯನಿವರೊಲ್ಲೆವೆಂಬವೊ
ಲೂಳಿಗವ ಮಾಡಿದನು ಪರಬಲದೊಳಗೆ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೭ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ಮೇಘಗಳ ಸಾಲುಮನೆಗಳಿಗೆ ಬಿರುಗಾಳಿಯು ಅತಿಥಿಯಾಗಿ ಬಂದರೆ ಆ ಮನೆಗಳು ಸಿರಿಯಿಂದ ಮೆರೆಯಲು ಸಾಧ್ಯವೇ? ಪಾಂಡವರ ಕಡೆಯ ರಾಜರು ಮುಂದೆ ಬಂದು , ನಾವು ಭೂಮಿಯನ್ನು ಆಳುವುದಿಲ್ಲ ಎಂದು ನಿಶ್ಚಯಿಸಿದಂತೆ ಮಡಿದರು. ದ್ರೋಣನು ಪರಬಲವನ್ನು ಬಹಳವಾಗಿ ಪೀಡಿಸಿದನು.

ಅರ್ಥ:
ಸಾಲ: ಗುಂಪು, ಆವಳಿ; ಮೇಘ: ಮೋಡ; ಮನೆ: ಆಲಯ; ಬಿರುಗಾಳಿ: ಜೋರಾದ ಗಾಳಿ; ಬಿದ್ದು: ಬೀಳು; ಬರಲು: ಆಗಮಿಸು; ಆಲಯ: ಮನೆ; ಸಿರಿ: ಐಶ್ವರ್ಯ; ಮೆರೆ: ಹೊಳೆ; ಚಿತ್ತಯಿಸು: ಕೇಳು; ಹೊಯ್ದು: ಹೊಡೆ; ಹೊಕ್ಕು: ಸೇರು; ಭೂಮೀಪಾಲ: ರಾಜ; ಒಲ್ಲೆ: ಸಮ್ಮತಿಸದಿರು; ಊಳಿಗ: ಕೆಲಸ, ಕಾರ್ಯ; ಪರಬಲ: ವೈರಿ ಸೈನ್ಯ; ಕಲಿ: ಶೂರ;

ಪದವಿಂಗಡಣೆ:
ಸಾಲ +ಮೇಘದ +ಮನೆಗಳಿಗೆ +ಬಿರು
ಗಾಳಿ +ಬಿದ್ದನನಾಗಿ +ಬರಲ್+ಅವರ್
ಆಲಯದ +ಸಿರಿ +ಮೆರೆವುದೇ +ಧೃತರಾಷ್ಟ್ರ +ಚಿತ್ತಯಿಸು
ಬೀಳ+ಹೊಯ್ದರು +ಹೊಕ್ಕು +ಭೂಮೀ
ಪಾಲನೆಯನ್+ಇವರ್+ಒಲ್ಲೆವೆಂಬವೊಲ್
ಊಳಿಗವ +ಮಾಡಿದನು +ಪರಬಲದೊಳಗೆ +ಕಲಿ+ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಲ ಮೇಘದ ಮನೆಗಳಿಗೆ ಬಿರುಗಾಳಿ ಬಿದ್ದನನಾಗಿ ಬರಲವ
ರಾಲಯದ ಸಿರಿ ಮೆರೆವುದೇ

ಪದ್ಯ ೪೩: ಭೀಮ ಕರ್ಣರ ಯುದ್ಧವನ್ನು ಕವಿಯು ಯಾವುದಕ್ಕೆ ಹೋಲಿಸಿದ್ದಾರೆ?

ಸರಳ ಸರಿಸೋನೆಯನು ಪವನಜ
ಗಿರಿಗೆ ಕರೆದುದು ಕರ್ಣ ಮೇಘದ
ಹೊರಳಿಯೇನೆಂಬೆನು ಮಹಾಸಂಗ್ರಾಮ ಸಂಭ್ರಮವ
ಸರಳಿನಲಿ ಧನುವಿನಲಿ ಗದೆಯಲಿ
ಕರಹತಿಯಲಹಿತಾಸ್ತ್ರವನು ಸಂ
ಹರಿಸಿ ಬೀಸಿತು ಭೀಮಮಾರುತ ಕರ್ಣಮೇಘದಲಿ (ದ್ರೋಣ ಪರ್ವ, ೧೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕರ್ಣನೆಂಬುವ ಮೋಡವು ಭೀಮನೆಂಬ ಪರ್ವತದ ಮೇಲೆ ಬಾಣಗಳ ಸೋನೆಯನ್ನು ವರ್ಷಿಸಿತು. ಬಾಣ, ಧಉಸ್ಸು, ಗದೆ, ಬರೀ ಕೈಗಳಿಂದ ಸರ್ಪಾಸ್ತ್ರಗಳನ್ನು ತಪ್ಪಿಸಿ, ಭೀಮ ಮಾರುತವು ಕರ್ಣ ಮೇಘದ ಮೇಲೆ ಬೀಸಿತು.

ಅರ್ಥ:
ಸರಳು: ಬಾಣ; ಸೋನೆ: ಮಳೆ, ವೃಷ್ಟಿ; ಪವನಜ: ಭೀಮ; ಗಿರಿ: ಬೆಟ್ಟ; ಮೇಘ: ಮೋಡ; ಹೊರಳಿ: ಗುಂಪು; ಸಂಗ್ರಾಮ: ಯುದ್ಧ; ಸಂಭ್ರಮ: ಸಡಗರ; ಧನು: ಬಿಲ್ಲು; ಗದೆ: ಮುದ್ಗರ; ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಅಹಿತಾಸ್ತ್ರ: ಸರ್ಪಾಸ್ತ್ರ; ಸಂಹರ: ನಾಶ; ಭೀಸು: ಎಸೆ, ಬಿಸಾಡು; ಮಾರುತ: ಗಾಳಿ, ವಾಯು;

ಪದವಿಂಗಡಣೆ:
ಸರಳ +ಸರಿಸೋನೆಯನು +ಪವನಜ
ಗಿರಿಗೆ +ಕರೆದುದು +ಕರ್ಣ +ಮೇಘದ
ಹೊರಳಿ+ಏನೆಂಬೆನು +ಮಹಾಸಂಗ್ರಾಮ +ಸಂಭ್ರಮವ
ಸರಳಿನಲಿ +ಧನುವಿನಲಿ +ಗದೆಯಲಿ
ಕರಹತಿಯಲ್+ಅಹಿತಾಸ್ತ್ರವನು ಸಂ
ಹರಿಸಿ+ ಬೀಸಿತು +ಭೀಮ+ಮಾರುತ+ ಕರ್ಣ+ಮೇಘದಲಿ

ಅಚ್ಚರಿ:
(೧) ಕವಿಯ ಕಲ್ಪನೆಗೆ ಉತ್ಕೃಷ್ಟ ಉದಾಹರಣೆ – ಭೀಮ ನನ್ನು ಬೆಟ್ಟಕ್ಕೂ, ಕರ್ಣನನ್ನು ಮೇಘಕ್ಕು ಹೋಲಿಸಿದ ಪರಿ

ಪದ್ಯ ೨೨: ಕರ್ಣನು ಭೀಮನೊಡನೆ ಹೇಗೆ ಯುದ್ಧ ಮಾಡಿದನು?

ಸಾರೆಲವೊ ಸಾಯದೆ ವೃಥಾಹಂ
ಕಾರವೇತಕೆ ನುಗ್ಗ ಸದೆದ ಕ
ಠೋರ ಸಾಹಸವಿಲ್ಲಿ ಕೊಳ್ಳದು ಕರ್ಣ ತಾನೆನುತ
ಆರಿದೈದಂಬಿನಲಿ ಪವನಕು
ಮಾರಕನನೆಸೆ ಮೇಘ ಘನಗಂ
ಭೀರರವದಲಿ ಭೀಮ ನುಡಿದನು ಭಾನುನಂದನನ (ದ್ರೋಣ ಪರ್ವ, ೧೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೋ ಭೀಮ, ನುಗ್ಗುನುಸಿಗಳನ್ನು ಬಡಿದು ಬಂಡು ವೃಥ ಅಹಂಕಾರದಿಂದ ಸಾಹಸ ಮಾಡಲು ಬಂದರೆ ಇಲ್ಲಿ ನಡೆಯುವುದಿಲ್ಲ. ನಾನು ಕರ್ಣ, ಎನ್ನುತ್ತಾ ಗರ್ಜಿಸಿ ಭೀಮನನ್ನು ಐದು ಬಾಣಗಳಿಂದ ಹೊಡೆಯಲು ಭೀಮನು ಗಂಭೀರ ಶಬ್ದಗಳಿಂದ ಕರ್ಣನಿಗೆ ಹೀಗೆ ಹೇಳಿದನು.

ಅರ್ಥ:
ಸಾರು: ಪ್ರಕಟಿಸು, ಘೋಷಿಸು; ವೃಥ: ಸುಮ್ಮನೆ; ಅಹಂಕಾರ: ಗರ್ವ; ನುಗ್ಗು: ಳ್ಳಿಕೊಂಡು ಮುಂದೆ ಸರಿ; ಸದೆ: ಹೊಡಿ, ಬಡಿ; ಕಠೋರ: ಬಿರುಸಾದ; ಸಾಹಸ: ಪರಾಕ್ರಮ; ಕೊಳ್ಳು: ಪಡೆ; ಅಂಬು: ಬಾಣ; ಪವನಕುಮರ: ವಾಯುಪುತ್ರ (ಭೀಮ); ಮೇಘ: ಮೋಡ; ಘನ: ಶ್ರೇಷ್ಠ; ಗಂಭೀರ: ಆಳವಾದ; ರವ: ಶಬ್ದ; ನುಡಿ: ಮಾತಾಡಿಸು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಸಾರ್+ಎಲವೊ +ಸಾಯದೆ +ವೃಥ+ಅಹಂ
ಕಾರವ್+ಏತಕೆ +ನುಗ್ಗ +ಸದೆದ +ಕ
ಠೋರ+ ಸಾಹಸವ್+ಇಲ್ಲಿ +ಕೊಳ್ಳದು +ಕರ್ಣ +ತಾನೆನುತ
ಆರಿದ್+ಐದಂಬಿನಲಿ +ಪವನಕು
ಮಾರಕನನ್+ಎಸೆ +ಮೇಘ +ಘನ+ಗಂ
ಭೀರ + ರವದಲಿ +ಭೀಮ +ನುಡಿದನು +ಭಾನುನಂದನನ

ಅಚ್ಚರಿ:
(೧) ಪವನಕುಮಾರ, ಭಾನುನಂದನ – ಕರ್ಣ ಮತ್ತು ಭೀಮರನ್ನು ಕರೆದ ಪರಿ
(೨) ಭೀಮನ ಆರ್ಭಟ – ಮೇಘ ಘನಗಂಭೀರರವದಲಿ ಭೀಮ ನುಡಿದನು

ಪದ್ಯ ೪೪: ದ್ರೋಣನು ಧರ್ಮಜನಿಗೆ ಯಾರನ್ನು ಕೊಂದು ಬರುತ್ತೇನೆಂದನು?

ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ (ದ್ರೋಣ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಬರಿಯ ದೈನ್ಯದಿಂದ ಮೋಡದ ಮರೆಹೊಕ್ಕರೆ ರಾಹುವು ಸೂರ್ಯನನ್ನು ಬಿಡುವನೇ? ಯುದ್ಧಮಾಡಿ ನಿನ್ನ ಮಹಿಮೆಯನ್ನು ತೋರಿಸು, ಯುದ್ಧಚಾತುರ್ಯವನ್ನು ಮರೆಯಬೇಡ. ನಿನ್ನ ಅನ್ನದ ಋಣಕ್ಕಾಗಿ ತಮ್ಮ ದೇಹವನ್ನು ಪಣಕ್ಕಿಟ್ಟು ಯುದ್ಧಮಾಡುವವರು ನನ್ನನ್ನು ಸುತ್ತುವರಿದ ಇವರ ಪ್ರಾಣಗಳನ್ನು ತೆಗೆದು ಬರುತ್ತೇನೆ ಎಂದು ದ್ರೋಣನು ಬಾಣಗಳ ಮಳೆಗರೆದನು.

ಅರ್ಥ:
ಬರಿ: ಕೇವಲ; ಕಾರ್ಪಣ್ಯ: ಬಡತನ, ದೈನ್ಯ; ಮೇಘ: ಮೋಡ; ಮರೆ: ಹಿಂಭಾಗ, ಹಿಂಬದಿ; ಹೊಕ್ಕು: ಸೇರು; ಬಿಡು: ತೊರೆ; ಉರಿ: ಬೆಂಕಿ; ರವಿ: ಸೂರ್ಯ; ಮಂಡಲ:ನಾಡಿನ ಒಂದು ಭಾಗ; ವರ್ತುಲಾಕಾರ; ಇರಿ: ಚುಚ್ಚು; ಮೆರೆ: ಹೊಳೆ, ಪ್ರಕಾಶಿಸು; ಮಹಿಮೆ: ಶ್ರೇಷ್ಠತೆ, ಔನ್ನತ್ಯ; ಮರೆ: ಗುಟ್ಟು, ರಹಸ್ಯ; ಮೈ: ತನು; ಮಾರು: ವಿಕ್ರಯಿಸು; ಮುಕ್ಕುರು: ಕವಿ, ಮುತ್ತು; ಇವದಿರು: ಇಷ್ಟು ಜನ; ತಿದ್ದು: ಸರಿಪಡಿಸು; ಬಹೆ: ಹಿಂದಿರುಗು; ತೆಗೆ: ಹೊರತರು; ಎಚ್ಚ: ಬಾಣ ಪ್ರಯೋಗ;

ಪದವಿಂಗಡಣೆ:
ಬರಿಯ +ಕಾರ್ಪಣ್ಯದಲಿ +ಮೇಘದ
ಮರೆಯ +ಹೊಕ್ಕರೆ +ರಾಹು +ಬಿಡುವನೆ
ಉರಿವ +ರವಿಮಂಡಲವನ್+ಎಲೆ +ಕುಂತೀ +ಕುಮಾರಕನೆ
ಇರಿದು +ಮೆರೆವುದು +ಮಹಿಮೆಯನು +ಕೈ
ಮರೆಯದಿರು +ಮೈಮಾರಿಗಳ+ ಮು
ಕ್ಕುರಿಕಿದ್+ಇವದಿರ +ತಿದ್ದಿ +ಬಹೆನಿದೆ+ಎನುತ +ತೆಗೆದ್+ಎಚ್ಚ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬರಿಯ ಕಾರ್ಪಣ್ಯದಲಿ ಮೇಘದ ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆ

ಪದ್ಯ ೪೦: ಉತ್ತರ ದಿಕ್ಕಿನ ಕುಲಾದ್ರಿಗಳಾವುವು?

ನಾಗ ಕಾಲಾಂಜನವು ಹಂಸನು
ಮೇಘಪುಷ್ಪಕ ಶಂಕಕೂಟವ
ನೀಗಲೀಕ್ಷಿಸು ಬಡಗದಿಕ್ಕಿನಲಿಹಕುಲಾದ್ರಿಗಳು
ಮೇಗೆ ಕೇಳೀರೈದು ದೆಸೆಗಳ
ಲಾ ಗಿರಿಯ ಹೊರಗಿಹರು ಸುರಜನ
ಯೋಗಿಸಿದ್ಧ ನಿಷೇವಿತರು ತಾವಾಗಿ ವಿಭವದಲಿ (ಅರಣ್ಯ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ನಾಗ, ಕಾಲಾಂಜಲ, ಹಂಸ, ಮೇಘ, ಪುಷ್ಪಕ, ಶಂಕ, ಕೂಟ ಗಿರಿಗಳು ಉತ್ತರದಿಕ್ಕಿನ ಕುಲಾದ್ರಿಗಳು. ಈ ಪರ್ವತಗಳ ಹತ್ತು ದಿಕ್ಕಿನಲ್ಲೂ ಯೋಗಿಗಳಿಂದಲೂ ಸಿದ್ಧರಿಂದಲೂ ಸೇವಿಸಲ್ಪಡುವ ದೇವತೆಗಳಿದ್ದಾರೆ.

ಅರ್ಥ:
ಈಕ್ಷಿಸು: ನೋಡು; ಬಡಗದಿಕ್ಕು: ಉತ್ತರ ದಿಕ್ಕು; ಅದ್ರಿ: ಬೆಟ್ಟ; ಮೇಗೆ: ಮೇಲಕ್ಕೆ; ಕೇಳು: ಆಲಿಸು; ದೆಸೆ: ದಿಕ್ಕು; ಗಿರಿ: ಬೆಟ್ಟ; ಹೊರಗೆ: ಆಚೆ; ಸುರಜನ: ದೇವತೆಗಳು; ನಿಷೇವಿತ: ಪೂಜಿಸಲ್ಪಟ್ಟ; ವಿಭವ: ವೈಭವ, ಘನತೆ;

ಪದವಿಂಗಡಣೆ:
ನಾಗ +ಕಾಲಾಂಜನವು +ಹಂಸನು
ಮೇಘಪುಷ್ಪಕ +ಶಂಕಕೂಟವ
ನೀಗಲ್+ಈಕ್ಷಿಸು+ ಬಡಗದಿಕ್ಕಿನಲಿಹ+ಕುಲಾದ್ರಿಗಳು
ಮೇಗೆ +ಕೇಳೀರ್+ಐದು +ದೆಸೆಗಳಲ್
ಆ+ ಗಿರಿಯ +ಹೊರಗಿಹರು+ ಸುರಜನ
ಯೋಗಿಸಿದ್ಧ+ ನಿಷೇವಿತರು +ತಾವಾಗಿ +ವಿಭವದಲಿ

ಅಚ್ಚರಿ:
(೧) ಗಿರಿಗಳ ಹೆಸರು: ನಾಗ, ಕಾಲಾಂಜಲ, ಹಂಸ, ಮೇಘ, ಪುಷ್ಪಕ, ಶಂಕ, ಕೂಟ

ಪದ್ಯ ೩೩: ವರುಣಾಸ್ತ್ರದ ಬಳಿಕ ಅರ್ಜುನನು ಯಾವ ಅಸ್ತ್ರವನ್ನು ಹೂಡಿದನು?

ಸರಳ ಝಳ ಝಾಡಿಸಿತು ಕಬ್ಬೊಗೆ
ಪರೆದುದಲ್ಲಿಯದಲ್ಲಿ ತಂಪಿನ
ಸರಳಮೊನೆಯಲಿ ಸಿಂಪಿಸುವ ತುಂತುರ ತುಷಾರದಲಿ
ಅರಿಬಲದ ಬೊಬ್ಬಾಟದಲಿ ಧರೆ
ಬಿರಿಯಲರ್ಜುನ ಹೂಡಿದನು ಹೂಂ
ಕರಣ ಮಾನಿತಮಂತ್ರಮಂಡಿತ ಮೇಘಮಾರ್ಗಣವ (ಕರ್ಣ ಪರ್ವ, ೨೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಆಗ್ನೇಯಾಸ್ತ್ರದ ಪ್ರಭಾವವು ತಣ್ಣಗಾಗಲು, ಅಲ್ಲಲ್ಲಿ ಕಪ್ಪುಹೊಗೆ ಇಲ್ಲವಾಯಿತು. ವರುಣಾಸ್ತ್ರದ ತುಂತುರು ಹನಿಗಳಿಂದ ತಂಪು ಎಲ್ಲೆಲ್ಲೂ ಆವರಿಸಿತು. ಆಗ ಅರ್ಜುನನು ಹೂಂ ಎಂಬ ಬೀಜಾಕ್ಷರದಿಂದಾರಂಭವಾಗುವ ಮೇಘಾಸ್ತ್ರವನ್ನು ಹೂಡಿದನು.

ಅರ್ಥ:
ಸರಳು: ಬಾಣ; ಝಳ: ಕಾಂತಿ, ಪ್ರಕಾಶ; ಝಾಡಿಸು: ಹೊಡೆ; ಕಬ್ಬೊಗೆ: ಕಪ್ಪಾದ ಹೊಗೆ; ಪರೆದು: ವ್ಯಾಪಿಸು; ತಂಪು: ತಣಿವು, ಶೈತ್ಯ; ಸರಳ: ಬಾಣ; ಮೊನೆ: ತುದಿ, ತೀಕ್ಷ್ಣವಾದ; ಸಿಂಪಿಸು: ಚಿಮುಕಿಸು; ತುಂತುರ: ಹನಿ ಹನಿ; ತುಷಾರ: ಹಿಮ, ಮಂಜು; ಅರಿ: ವೈರಿ; ಬಲ: ಸೈನ್ಯ; ಬೊಬ್ಬಾಟ: ಗರ್ಜನೆ; ಧರೆ: ಭೂಮಿ; ಬಿರಿ: ಸೀಳು; ಹೂಡು: ತೊಡು; ಹೂಂಕರ: ಹೂಂ ಎಂಬ ಬೀಜಾಕ್ಷರವನ್ನು ಕೂಗು; ಮಾನಿತ: ಪೂಜ್ಯವಾಗಿರುವ; ಮಂತ್ರ:ಪವಿತ್ರವಾದ ದೇವತಾಸ್ತುತಿ; ಮಂಡಿತ: ಅಲಂಕೃತವಾದ, ಶೋಭೆಗೊಂಡ; ಮೇಘ: ಮೋಡ, ಮುಗಿಲು; ಮಾರ್ಗಣ: ಬಾಣ;

ಪದವಿಂಗಡಣೆ:
ಸರಳ +ಝಳ +ಝಾಡಿಸಿತು +ಕಬ್ಬೊಗೆ
ಪರೆದುದ್+ಅಲ್ಲಿಯದಲ್ಲಿ +ತಂಪಿನ
ಸರಳ+ಮೊನೆಯಲಿ +ಸಿಂಪಿಸುವ +ತುಂತುರ +ತುಷಾರದಲಿ
ಅರಿ+ಬಲದ+ ಬೊಬ್ಬಾಟದಲಿ +ಧರೆ
ಬಿರಿಯಲ್+ಅರ್ಜುನ +ಹೂಡಿದನು +ಹೂಂ
ಕರಣ +ಮಾನಿತ+ಮಂತ್ರಮಂಡಿತ+ ಮೇಘ+ಮಾರ್ಗಣವ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಾನಿತ ಮಂತ್ರಮಂಡಿತ ಮೇಘಮಾರ್ಗಣವ
(೨) ಜೋಡಿ ಪದಗಳು – ಝಳ ಝಾಡಿಸಿತು; ತುಂತುರ ತುಷಾರದಲಿ; ಹೂಡಿದನು ಹೂಂಕರಣ

ಪದ್ಯ ೬: ಕರ್ಣನ ಆಕ್ರಮಣ ಪಾಂಡವ ಸೈನ್ಯಕ್ಕೆ ಆಶ್ಚರ್ಯವೆಂದು ಏಕೆ ಕಾಣಲಿಲ್ಲ?

ರಾಯರಥ ಮಡಮುರಿಯೆ ಮುರಿದುದು
ನಾಯಕರು ಪಾಂಚಾಲಕರು ವಾ
ನಾಯುಜರು ಮತ್ಸ್ಯ ಪ್ರಬುದ್ಧಕ ಸೋಮಕಾದಿಗಳು
ವಾಯುಹತಿಯಲಿ ಮೇಘದೊಡ್ಡಿಂ
ಗಾಯಸವು ಕರ್ಣಾಸ್ತ್ರಹತಿಯಲ
ಪಾಯವರಿ ರಾಯರಿಗಪೂರ್ವವೆ ಭೂಪ ಕೇಳೆಂದ (ಕರ್ಣ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ಅರಸನ ರಥವು ಮರಳಲು ಸೇನಾ ನಾಯಕರೆಲ್ಲರೂ ಅವನನ್ನು ಹಿಂಬಾಲಿಸಿದರು. ಪಾಂಚಾಲ ಮತ್ಸ್ಯ ಪ್ರಬುದ್ಧಕ ಸೋಮಕ ರಾವುತರೆಲ್ಲರೂ ಹಿಂದಿರುಗಿದರು. ಕರ್ಣನ ಅಸ್ತ್ರಗಳಿಂದ ಬಿರುಗಾಳಿಗೊಡ್ಡಿದ ಮೇಘಗಳಂತೆ ಚದುರಿ ಹೋಗುವುದು ಪಾಂಡವ ಸೇನೆಯವರಿಗೆ ಅಭ್ಯಾಸವಾಗಿದ್ದರಿಂದ ವಿಶೇಷವೆನಿಸಲಿಲ್ಲ.

ಅರ್ಥ:
ರಾಯ: ರಾಜ, ದೊರೆ; ರಥ: ಬಂಡಿ; ಮಡ:ಪಾದದ ಹಿಂಭಾಗ, ಹರಡು, ಹಿಮ್ಮಡಿ, ರಥದ ಚೌಕಟ್ಟು; ಮುರಿ: ಸೀಳು; ನಾಯಕ: ಒಡೆಯ; ಆದಿ: ಮುಂತಾದ; ವಾಯು: ಗಾಳಿ; ಹತಿ: ಹೊಡೆತ; ಮೇಘ: ಮೋಡ; ಆಯಸ: ಆಯಾಸ, ಬಳಲಿಕೆ; ಅಸ್ತ್ರ: ಶಸ್ತ್ರ, ಆಯುಧ; ಅಪಾಯ: ಕೇಡು, ತೊಂದರೆ; ಅರಿ: ವೈರಿ; ಅಪೂರ್ವ: ವಿಶೇಷ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ರಾಯರಥ +ಮಡಮುರಿಯೆ +ಮುರಿದುದು
ನಾಯಕರು +ಪಾಂಚಾಲಕರು +ವಾ
ನಾಯುಜರು+ ಮತ್ಸ್ಯ +ಪ್ರಬುದ್ಧಕ +ಸೋಮಕಾದಿಗಳು
ವಾಯುಹತಿಯಲಿ +ಮೇಘದ್+ಒಡ್ಡಿಂಗ್
ಆಯಸವು +ಕರ್ಣಾಸ್ತ್ರ+ಹತಿಯಲ್
ಅಪಾಯವ್+ಅರಿ ರಾಯರಿಗ್+ಅಪೂರ್ವವೆ+ ಭೂಪ+ ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ವಾಯುಹತಿಯಲಿ ಮೇಘದೊಡ್ಡಿಂಗಾಯಸವು
(೨) ಹಿಂದಿರುಗಿದ ನಾಯಕರ ದಂಡು – ಪಾಂಚಾಲಕರು, ವಾನಾಯುಜರು, ಮತ್ಸ್ಯ, ಪ್ರಬುದ್ಧಕ, ಸೋಮಕ

ಪದ್ಯ ೩೭: ಕರ್ಣನ ಯುದ್ಧವು ಯಾರ ಕಣ್ಣಾಮುಚ್ಚಾಲೆಯ ಆಟವನ್ನು ಜ್ಞಾಪಿಸಿತು?

ಮುಸುಕುವುದು ಮುಗಿಲೊಮ್ಮೆ ಸೂರ್ಯನ
ಮಸಕ ಮಿಗಿಲಹುದೊಮ್ಮೆ ಮೇಘ
ಪ್ರಸರಕೊಳಗಹನೊಮ್ಮೆ ರವಿ ತೋರುವನು ಮತ್ತೊಮ್ಮೆ
ಅಸಮ ಸಮರದೊಳೀತನಾ ಪರಿ
ಮಸುಳುವನು ತೋರುವನು ತೊಡೆವನು
ದೆಸೆಗೆಡಿಸುವನು ಬಳಿಕ ಮುಳಿಸಿನಲಾ ಮಹಾರಥರ (ಕರ್ಣ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಒಮ್ಮೆ ಮೋಡ ಮುಸುಕುತ್ತದೆ, ಒಮ್ಮೆ ಬಿಸಿಲು ಪ್ರಖರವಾಗುತ್ತದೆ, ಸೂರ್ಯನು ಒಮ್ಮೆ ಮೋಡದ ಹಿಂದೆ ಮರೆಯಾಗುತ್ತಾನೆ, ಒಮ್ಮೆ ಕಾಣಿಸಿಕೊಳ್ಳುತ್ತಾನೆ, ಹಾಗೆಯೇ, ವಿಷಮ ಯುದ್ಧದಲ್ಲಿ ಕರ್ಣನು ಒಮ್ಮೆ ಮಾಸಿದನು, ಇನ್ನೊಮ್ಮೆ ಮುಂದೆ ಬಂದು ವೈರಿ ಮಹಾರಥರನ್ನು ದಿಕ್ಕುಗೆಡಿಸಿದನು.

ಅರ್ಥ:
ಮುಸುಕು: ಮುಚ್ಚು, ಹೊದಿಕೆ; ಮುಗಿಲು: ಆಗಸ; ಸೂರ್ಯ: ಭಾನು, ರವಿ; ಮಸಕ: ಆಧಿಕ್ಯ, ಹೆಚ್ಚಳ; ಮಿಗಿಲು: ಹೆಚ್ಚು; ಮೇಘ: ಮೋಡ; ಪ್ರಸರ: ಹರಡುವುದು; ತೋರು: ಕಾಣಿಸು; ಅಸಮ: ಸಮವಲ್ಲದ; ಸಮರ: ಯುದ್ಧ; ಪರಿ: ರೀತಿ; ಮಸುಳು: ಕಾಂತಿಹೀನವಾಗು, ಮಂಕಾಗು; ತೊಡೆ:ತೀಡು, ಸೋಕು; ದೆಸೆ: ದಿಕ್ಕು; ಕೆಡಿಸು: ಹಾಳುಮಾದು; ಬಳಿಕ: ನಂತರ; ಮುಳಿ: ಸಿಟ್ಟು, ಕೋಪ; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಮುಸುಕುವುದು +ಮುಗಿಲ್+ಒಮ್ಮೆ +ಸೂರ್ಯನ
ಮಸಕ+ ಮಿಗಿಲಹುದೊಮ್ಮೆ +ಮೇಘ
ಪ್ರಸರಕ್+ಒಳಗಹನೊಮ್ಮೆ+ ರವಿ +ತೋರುವನು +ಮತ್ತೊಮ್ಮೆ
ಅಸಮ+ ಸಮರದೊಳ್+ಈತನ್+ಆ+ ಪರಿ
ಮಸುಳುವನು +ತೋರುವನು +ತೊಡೆವನು
ದೆಸೆಗೆಡಿಸುವನು +ಬಳಿಕ+ ಮುಳಿಸಿನಲಾ+ ಮಹಾರಥರ

ಅಚ್ಚರಿ:
(೧) ಮೋಡ ಸೂರ್ಯರ ಆಟವನ್ನು ಕರ್ಣನ ಯುದ್ಧಕ್ಕೆ ಹೋಲಿಸಿರುವುದು
(೨) ಮ ಕಾರದ ಪದಗಳ ಸಾಲು – ಮಸಕ ಮಿಗಿಲಹುದೊಮ್ಮೆ ಮೇಘ

ಪದ್ಯ ೧೪: ಕರ್ಣನು ಯಾವ ವೇಗದಲ್ಲಿ ಶತ್ರುಗಳನ್ನು ನಾಶಮಾಡಿದನು?

ವಾಘೆ ಸರಿಸದ ರಾವುತೋ ದೃಢ
ವಾಘೆಯೆನುತೇರಿದ ಹಯೌಘದ
ಮೇಘಪಟಲದ ಪಾಡೆ ಫಡಯೆನೆ ಹೊಕ್ಕ ಗಜದಳದ
ಲಾಘವದ ಲುಳಿಸಾರತನದ ಶ
ರೌಘರಚನೆಯ ರಥಿಕಯೂಥ
ಶ್ಲಾಘೆಗಳ ನಾ ಕಾಣೆನೊಂದು ವಿಘಳಿಗೆ ಮಾತ್ರದಲಿ (ಕರ್ಣ ಪರ್ವ, ೧೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಸರಿಸಮವಾಗಿ ಲಗಾಮು ಹಿಡಿದು ರಾವುತೋ ಎಂದೊಬ್ಬರೊಬ್ಬರನ್ನು ಪ್ರೋತ್ಸಾಹಿಸುತ್ತಾ ಹೊಕ್ಕ ಕುದುರೆಗಳನ್ನ್ ಗಾಳಿ ಬೀಸಿ ಮೇಘವನ್ನು ಓಡಿಸುವಂತೆ ಓಡಿಸಿ, ಬಳಿಕ ಅತಿವೇಗದಿಂದ ಬಾಣಗಳನ್ನು ಪ್ರಯೋಗಿಸಿ ಗಜ ಸೈನ್ಯ, ರಥಗಳ ಗುಂಪುಗಳನ್ನು ಒಂದೇ ವಿಘಳಿಗೆಯಲ್ಲಿ ಕಾಣದಂತೆ ಕೆಡವಿ ಹಾಕಿದನು.

ಅರ್ಥ:
ವಾಘೆ: ಲಗಾಮು; ಸರಿಸು: ಪಕ್ಕ ತಳ್ಳು; ರಾವುತ: ಕುದುರೆ ಸವಾರ; ದೃಢ: ಗಟ್ಟಿ; ಏರು: ಮೇಳೆ ಹತ್ತು; ಹಯ: ಕುದುರೆ; ಔಘ: ಗುಂಪು, ಸಮೂಹ; ಮೇಘ: ಮೋಡ; ಮೇಘಪಟಲ: ಮೋಡಗಳ ಸಮೂಹ; ಪಾಡು: ಸ್ಥಿತಿ, ಅವಸ್ಥೆ; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಹೊಕ್ಕು: ಸೇರು; ಗಜ: ಆನೆ; ದಳ: ಸೈನ್ಯ; ಲಾಘವ: ಕೌಶಲ, ಚಳಕ ; ಲುಳಿ: ರಭಸ, ವೇಗ; ಸಾರ: ಪರಾಕ್ರಮ; ಶರ: ಬಾಣ; ಔಕು: ಒತ್ತು, ಹಿಚುಕು; ರಚನೆ: ನಿರ್ಮಾಣ, ಸೃಷ್ಟಿ; ರಥಿಕ: ರಥದ ಮೇಲೆ ಹೋರಾಡುವವ; ಯೂಥ: ಗುಂಪು, ಹಿಂಡು; ಶ್ಲಾಘೆ: ಕೊಂಡಾಟ; ಕಾಣೆ: ತೋರದು; ವಿಘಳಿಗೆ: ಗಳಿಗೆಯ ಅರು ವತ್ತನೆಯ ಒಂದು ಭಾಗ; ಮಾತ್ರ: ಪ್ರಮಾಣ;

ಪದವಿಂಗಡಣೆ:
ವಾಘೆ+ ಸರಿಸದ+ ರಾವುತೋ +ದೃಢ
ವಾಘೆಯೆನುತ್+ಏರಿದ+ ಹಯೌಘದ
ಮೇಘಪಟಲದ+ ಪಾಡೆ +ಫಡಯೆನೆ +ಹೊಕ್ಕ +ಗಜದಳದ
ಲಾಘವದ +ಲುಳಿ+ಸಾರತನದ +ಶ
ರೌಘ+ರಚನೆಯ +ರಥಿಕ+ಯೂಥ
ಶ್ಲಾಘೆಗಳ +ನಾ +ಕಾಣೆನೊಂದು +ವಿಘಳಿಗೆ+ ಮಾತ್ರದಲಿ

ಅಚ್ಚರಿ:
(೧) ವಾಘೆ, ಮೇಘ, ಔಘ, ಶ್ಲಾಘೆ, ಲಾಘವ – ೨ನೇ ಅಕ್ಷರ ಘಕಾರದ ಪ್ರಯೋಗ
(೨) ಹಯೌಘ, ಶರೌಘ – ಪ್ರಾಸ ಪದಗಳು