ಪದ್ಯ ೨೪: ಕೀಚಕನು ದ್ರೌಪದಿಯನ್ನು ಏನು ಬೇಡಿದನು?

ಎಳನಗೆಯ ಬೆಳದಿಂಗಳನು ನೀ
ತಳೆದು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮೆಲುನಗೆಯ ಬೆಳದಿಂಗಳನ್ನು ಬೀರಿ ನನ್ನ ತಾಪವನ್ನು ಹೋಗಲಾಡಿಸು, ನನ್ನ ದಾಹವನ್ನು ಮೆಲುಮಾತಿನ ಅಮೃತದಿಂದ ಕಳೆ, ಬಯಸಿ ಅಳುಕಿರುವ ಮನಸ್ಸಿನ ಬಡತನವನ್ನು ಕಳಶೋಪಮವಾದ ಕುಚಲಕ್ಷ್ಮಿಯಿಂದ ಹೋಗಲಾಡಿಸು, ನಿನ್ನ ಒಲವನ್ನು ನನ್ನ ಕಡೆಗೆ ತಿರುಗಿಸು ಎಂದು ಕೀಚಕನು ಹೇಳಿದನು.

ಅರ್ಥ:
ಎಳನಗೆ: ಮಂದಸ್ಮಿತ; ಬೆಳದಿಂಗಳು: ಪೂರ್ಣ ಚಂದ್ರದ ದಿನ; ತಳೆ: ಪಡೆ, ಹೊಂದು; ತಾಪ: ಬಿಸಿ, ಸೆಕೆ; ಕೆಡಿಸು: ಹಾಳುಮಾಡು; ಮಧುರ: ಸಿಹಿ; ಮೆಲುನುಡಿ: ಮಧುರವಾದ ಮಾತು; ಸುಧೆ: ಅಮೃತ; ತೃಷ್ಣೆ: ನೀರಡಿಕೆ; ಅಕಟ: ಅಯ್ಯೋ; ಪರಿಹರಿಸು: ನಿವಾರಿಸು; ಅಳಿ: ನಾಶವಾಗು; ಮನ: ಮನಸ್ಸು; ಬಡತನ: ದಾರಿದ್ರ; ಕಳಶ: ಕುಂಭ; ಕುಚ: ಸ್ತನ; ಲಕ್ಷ್ಮಿ: ಐಶ್ವರ್ಯ; ಕಳೆ: ನಿವಾರಿಸು; ಒಲವು: ಪ್ರೀತಿ; ತಿದ್ದು: ಸರಿಪಡಿಸು; ಕಾಂತೆ: ಬಾಲೆ, ಚೆಲುವೆ; ಕೇಳು: ಆಲಿಸು;

ಪದವಿಂಗಡಣೆ:
ಎಳ+ನಗೆಯ +ಬೆಳದಿಂಗಳನು +ನೀ
ತಳೆದು +ತಾಪವ +ಕೆಡಿಸು +ಮಧುರದ
ಮೆಲುನುಡಿಯ +ಸುಧೆಯಿಂದ +ತೃಷ್ಣೆಯನ್+ಅಕಟ +ಪರಿಹರಿಸು
ಅಳಿಮನದ+ ಬಡತನವ+ ನಿನ್ನಯ
ಕಳಶ +ಕುಚಲಕ್ಷ್ಮಿಯಲಿ +ಕಳೆ +ಮನದ್
ಒಲವನಿತ್ತಲು +ತಿದ್ದಬೇಹುದು +ಕಾಂತೆ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳನಗೆಯ ಬೆಳದಿಂಗಳನು ನೀತಳೆದು ತಾಪವ ಕೆಡಿಸು; ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು

ಪದ್ಯ ೮: ಸಾತ್ಯಕಿಯ ಪ್ರಕಾರ ಯಾವ ರೀತಿಯಿಂದ ರಾಜ್ಯವನ್ನು ಪಡೆಯಬೇಕು?

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ತಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲನ ನಲಗಿನ ಮೊನೆಯೊಳಲ್ಲದೆ
ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು (ಉದ್ಯೋಗ ಪರ್ವ, ೧ ಸಂಧಿ, ೮ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತನ್ನ ಮಾತನ್ನು ಮುಂದುವರೆಸುತ್ತಾ, ಬಲರಾಮನ ಮಾತುಗಳು ಕೌರವರ ಭಾಗ್ಯಕ್ಕೆ ಮೂಲ ಆಧಾರವೇನೂ ಅಲ್ಲವಲ್ಲ. ಆದರಿಂದೇನು ಆಗುತ್ತದೆ? ಕೌರವರ ನೂರು ತಲೆಗಳನ್ನು ಕಡಿದುಕೊಂಡು ಬಾ ಎಂದು ನನಗೆ ವೀಳೆ ಕೊಡಿ, ಭೂಮಿಯನ್ನು ಶಸ್ತ್ರಧಾರೆಯಿಂದ ಪಡೆಯಬೇಕೆ ಹೊರತು ಸಂಧಾನ, ವಿನಯದ ಮಾತುಗಳಿಗೆ ಒಪ್ಪಿ ಕ್ಷತ್ರಿಯಉ ರಾಜ್ಯವನ್ನು ಕೊಡುವುದಿಲ್ಲ” ಎಂದು ಹೇಳಿದನು.

ಅರ್ಥ:
ಬಲ: ಶೌರ್ಯ; ಮಾತು: ವಾಣಿ; ಭಾಗ್ಯ: ಮಂಗಳ, ಶುಭ; ನೆಲೆ: ಬೀಡು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಶತ: ನೂರು; ತಲೆ: ಶಿರ; ವೀಳೆ:ತಾಂಬೂಲ; ಕುಮಾರ: ಮಗ; ನೆಲ: ಭೂಮಿ; ನಲುಗು: ಬಾಡು, ಮುದುಡು; ಮೊನೆ:ತುದಿ, ಕೊನೆ; ಮೆಲು: ಮೃದು; ನುಡಿ: ಮಾತು; ಸಾಮ: ಶಾಂತಗೊಳಿಸುವಿಕೆ; ಅಳುಕು: ಹೆದರಿಕೆ; ಕೊಡು: ನೀಡು; ಧರೆ: ಭೂಮಿ; ಅಧಿಕ: ಹೆಚ್ಚು; ಆತ್ಮಜ: ಮಗ;

ಪದವಿಂಗಡಣೆ:
ಬಲನ +ಮಾತೇನ್+ಇವರ +ಭಾಗ್ಯದ
ನೆಲೆಯೆ +ಫಡ +ಕೌರವರ+ ಶತಕದ
ತಲೆಗೆ +ತಾ +ವೀಳೆಯವನೆಲೆ+ ಕುಂತೀ +ಕುಮಾರಕನೆ
ನೆಲನ +ನಲಗಿನ +ಮೊನೆಯೊಳ್+ಅಲ್ಲದೆ
ಮೆಲುನುಡಿಯ +ಸಾಮದೊಳು +ನಿಮಗಿನ್
ಅಳುಕಿ+ ಕೊಡುವರೆ+ ಧರೆಯೊಳ್+ಅಧಿಕ+ ಕ್ಷತ್ರಿಯಾತ್ಮಜರು

ಅಚ್ಚರಿ:
(೧) ‘ನ’ ಕಾರದ ಜೋಡಿ ಪದ – ನೆಲನ ನಲಗಿನ
(೨) ಕ್ಷತ್ರಿಯರು ಯಾವುದಕ್ಕೆ ಮಣಿಯುವುದಿಲ್ಲ – ಮೆಲುನುಡಿಯ ಸಾಮದೊಳು ನಿಮಗಿ
ನ್ನಳುಕಿ ಕೊಡುವರೆ ಧರೆಯೊಳಧಿಕ