ಪದ್ಯ ೯: ಧರ್ಮಜನ ಮನಸ್ಥಿತಿ ಹೇಗಿತ್ತು?

ಹೊಳೆಹೊಳೆದು ತಂಬುಲದ ರಸದಲಿ
ಮುಳುಗಿ ಮೂಡುವ ಢಗೆಯ ತೊಡೆಹದ
ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ
ಹಿಳಿದ ಛಲದ ವಿಡಾಯಿ ಧರಿಯದ
ತಳಿತ ಭೀತಿಗೆ ಕಾಲ್ವೊಳೆಯಾ
ದಳಿಮನದ ಭೂಪಾಲನಿರವನು ಕಂಡನಾ ಪಾರ್ಥ (ದ್ರೋಣ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹಶ್ರಮವನ್ನಾರಿಸಿಕೊಳ್ಳಲು ತಾಂಬೂಲವನ್ನು ಜರೆಯುತ್ತಾ ಅದರ ರಸದಲ್ಲಿ ಸ್ವಲ್ಪ ಸಮಾಧಾನವಾದರೂ ಮೇಲೆದ್ದು ಬರುವ ಆಯಾಸದಿಂದ ನೊಂದ, ನಟನೆಯ ನಗೆಯನ್ನು ಬೀರುವ, ಕಳವಳಗೊಂಡು ಕಣ್ಣುಗಳನ್ನು ತೆರೆದು ಮುಚ್ಚುವ, ಛಲ ಹಿಂಗಿ ಧೈರ್ಯವುಡುಗಿ ಭೀತಿ ತುಂಬಿ ಹರಿಯುತ್ತಿದ್ದ ಚಂಚಲ ಮನಸ್ಸಿನ ಧರ್ಮಜನನ್ನು ಅರ್ಜುನನು ಕಂಡನು.

ಅರ್ಥ:
ಹೊಳೆ: ಪ್ರಕಾಶ; ತಂಬುಲ: ಎಲೆ ಅಡಿಕೆ; ರಸ: ಸಾರ; ಮುಳುಗು: ಮೀಯು, ಕಾಣದಾಗು; ಮೂಡು: ತುಂಬು, ಹುಟ್ಟು; ಢಗೆ: ಕಾವು, ಧಗೆ; ತೊಡಹು: ಸೇರಿಕೆ; ಮೆಲುನಗೆ: ಮಂದಸ್ಮಿತ; ಕಳವಳ: ಗೊಂದಲ; ಮುಕ್ಕುಳಿಸು: ಹೊರಹಾಕು; ಆಲಿ: ಕಣ್ಣು; ಹಿಳಿ: ಹಿಸುಕಿ ರಸವನ್ನು ತೆಗೆ, ಹಿಂಡು; ಛಲ: ನೆಪ, ವ್ಯಾಜ; ವಿಡಾಯಿ: ಶಕ್ತಿ, ಆಡಂಬರ; ಧೈರ್ಯ: ಎದೆಗಾರಿಕೆ, ಕೆಚ್ಚು; ತಳಿತ: ಚಿಗುರು; ಭೀತಿ: ಭಯ; ಕಾಲ: ಸಮ್ಯ; ಅಳಿ: ನಾಶ; ಮನ: ಮನಸ್ಸು; ಭೂಪಾಲ: ರಾಜ; ಕಂಡು: ನೋಡು;

ಪದವಿಂಗಡಣೆ:
ಹೊಳೆಹೊಳೆದು +ತಂಬುಲದ +ರಸದಲಿ
ಮುಳುಗಿ +ಮೂಡುವ +ಢಗೆಯ+ ತೊಡೆಹದ
ಮೆಲುನಗೆಯ +ಕಳವಳವನ್+ಅರೆ+ ಮುಕ್ಕುಳಿಸಿದ್+ಆಲಿಗಳ
ಹಿಳಿದ +ಛಲದ +ವಿಡಾಯಿ +ಧರಿಯದ
ತಳಿತ +ಭೀತಿಗೆ +ಕಾಲವೊಳೆಯಾದ್
ಅಳಿಮನದ +ಭೂಪಾಲನ್+ಇರವನು +ಕಂಡನಾ +ಪಾರ್ಥ

ಅಚ್ಚರಿ:
(೧) ವೈರುಧ್ಯ ಭಾವನೆಗಳನ್ನು ವಿವರಿಸುವ ಪದ್ಯ – ಹೊಳೆಹೊಳೆದು ತಂಬುಲದ ರಸದಲಿ ಮುಳುಗಿ ಮೂಡುವ ಢಗೆಯ ತೊಡೆಹದ ಮೆಲುನಗೆಯ ಕಳವಳವನರೆ ಮುಕ್ಕುಳಿಸಿದಾಲಿಗಳ

ಪದ್ಯ ೩೮: ದುರ್ಯೋಧನನು ಷಡುರಥರನ್ನು ಹೇಗೆ ಹಂಗಿಸಿದನು?

ಗೆಲಿದರಭಿಮನ್ಯುವನು ತನ್ನವ
ರೆಲವೊ ತಾ ವೀಳೆಯವನೆನುತವೆ
ಮೆಲುನಗೆಯಲತಿರಥರ ಜರೆದನು ಕೌರವರ ರಾಯ
ಬಳಿಕ ಎಡಬಲವಂಕದಲಿ ಮಂ
ಡಲಿಸಿ ಮೋಹರಿಸಿತ್ತು ರಿಪುಬಲ
ಜಲಧಿ ವಡಬನೊಳಾಂತು ತಾಗಿದರಂದು ಷಡುರಥರು (ದ್ರೋಣ ಪರ್ವ, ೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ದುರ್ಯೋಧನನು, ಎಲವೋ ಅಭಿಮನ್ಯುವನ್ನು ಆ ಆರು ಪರಾಕ್ರಮಿಗಳು ಗೆದ್ದರಂತೆ, ಅವರಿಗೆ ವಿಜಯದ ತಾಂಬೂಲವನ್ನು ನೀಡೋಣ ಎಂದು ಹಂಗಿಸಿದನು. ಆಗ ಆರು ಪರಾಕ್ರಮಿಗಳು ಎಡಬಲಗಳಲ್ಲಿ ಬಂದು ಸೇರಿ ಅಭಿಮನ್ಯುವಿನ ಮೇಲೆ ಆಕ್ರಮಣ ಮಾಡಿದರು.

ಅರ್ಥ:
ಗೆಲಿದ: ಜಯಿಸಿದ; ವೀಳೆ: ತಾಂಬೂಲ; ಮೆಲುನಗೆ: ಮಂದಸ್ಮಿತ; ಅತಿರಥ: ಪರಾಕ್ರಮಿ; ಜರೆ: ಬಯ್ಯು; ರಾಯ: ರಾಜ; ಬಳಿಕ: ನಂತರ; ಎಡಬಲ: ಅಕ್ಕಪಕ್ಕ; ಮಂಡಲಿ: ಸಮೂಹ, ಗುಂಪು; ಮೋಹರ: ಯುದ್ಧ; ರಿಪು: ವೈರಿ; ಬಲ: ಸೈನ್ಯ; ಜಲಧಿ: ಸಾಗರ; ವಡಬ: ಸಮುದ್ರದೊಳಗಿರುವ ಬೆಂಕಿ; ತಾಗು: ಮುಟ್ಟು;

ಪದವಿಂಗಡಣೆ:
ಗೆಲಿದರ್+ಅಭಿಮನ್ಯುವನು +ತನ್ನವರ್
ಎಲವೊ +ತಾ +ವೀಳೆಯವನ್+ಎನುತವೆ
ಮೆಲುನಗೆಯಲ್+ಅತಿರಥರ+ ಜರೆದನು +ಕೌರವರ +ರಾಯ
ಬಳಿಕ +ಎಡಬಲವಂಕದಲಿ+ ಮಂ
ಡಲಿಸಿ+ ಮೋಹರಿಸಿತ್ತು +ರಿಪುಬಲ
ಜಲಧಿ+ ವಡಬನೊಳಾಂತು +ತಾಗಿದರಂದು +ಷಡುರಥರು

ಅಚ್ಚರಿ:
(೧) ದುರ್ಯೋಧನನು ಹಂಗಿಸುವ ಪರಿ – ಎಲವೊ ತಾ ವೀಳೆಯವನೆನುತವೆ ಮೆಲುನಗೆಯಲತಿರಥರ ಜರೆದನು ಕೌರವರ ರಾಯ

ಪದ್ಯ ೫೩: ಕೃಷ್ಣನ ಮುಖವು ಹೇಗೆ ಕಂಡಿತು?

ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬಿಂದುಗಳ ಲಲಿತ ಕಪೋಲ ಮಂಡಲದ
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ (ವಿರಾಟ ಪರ್ವ, ೧೧ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪ್ರಯಾಣ ಕಾಲದಲ್ಲಿ ಸೈನ್ಯದ ಕಾಲ್ತುಳಿತದಿಂದೆದ್ದ ಕೆಂಪಾದ ಧೂಳಿನ ಕಣಗಳು ಕೃಷ್ಣನ ವಸ್ತ್ರಗಳ ಮೇಲೆ ಕುಳಿತಿತ್ತು. ಮಾರ್ಗವನ್ನು ಕ್ರಮಿಸುವಾಗ ಬಿಸಿಲಿನ ಧಗೆಗೆ ಶ್ರೀಕೃಷ್ಣನ ಕೆನ್ನೆಗಳ ಮೇಲೆ ಬೆವರಿನ ಕಿರುವನಿಗಳು ಕಾಣುತ್ತಿದ್ದವು. ಶ್ರೀಕೃಷ್ಣನ ಹಿರಿಮೆಯನ್ನು ವಂದಿಮಾಗದಹರು ಹೊಗಳುತ್ತಾ ದಾರಿಯನ್ನು ತೋರುತ್ತಿದ್ದರು. ಭಕ್ತರ ಮೇಲಿನ ಕರುಣೆಯಿಂದ ಅವನ ಮುಖವು ಮಂದಹಾಸವನ್ನು ಸೂಸುತ್ತಿತ್ತು. ಪಾಂಡವರ ಸೈನ್ಯವು ಆ ಮಹಾಮಹಿಮನ ದರ್ಶನವನ್ನು ಮಾಡಿತು.

ಅರ್ಥ:
ಬಲ: ಸೈನ್ಯ; ಪದ: ಪಾದ; ಘಟ್ಟಣೆ: ಅಪ್ಪಳಿಸುವಿಕೆ; ರಜ: ಧೂಳು; ಬೆಳುಪು: ಹೊಳಪು; ಅಡಗು: ಮರೆಯಾಗು; ಅಂಬರ: ಬಟ್ಟೆ; ಮಾರ್ಗ: ದಾರಿ; ಝಳ: ತಾಪ; ಕಿರು: ಚಿಕ್ಕ; ಬಿಂದು: ಹನಿ, ಚುಕ್ಕೆ; ಲಲಿತ: ಚೆಲುವು; ಕಪೋಲ: ಕೆನ್ನೆ, ಗಲ್ಲ; ಮಂಡಲ: ವರ್ತುಲಾಕಾರ; ಕೆಲ:ಪಕ್ಕ; ಪಾಯವಧಾರು: ಪಾದಕ್ಕೆ ಎಚ್ಚರಿಕೆ; ಕಳಕಳ: ಗೊಂದಲ;ಕರುಣಾರಸ: ದಯೆ; ಸೂಸು: ಹರಡು, ಹೊರಹೊಮ್ಮು; ಮೆಲುನಗೆ: ಮಂದಸ್ಮಿತ; ಸಿರಿಮೊಗ: ಕಳೆಯುಳ್ಳ ಮುಖ; ಸಿರಿ: ಐಶ್ವರ್ಯ; ಕಂಡು: ನೋಡು; ಸೇನೆ: ಸೈನ್ಯ;

ಪದವಿಂಗಡಣೆ:
ಬಲದ +ಪದಘಟ್ಟಣೆಯ+ ರಜದಿಂ
ಬೆಳುಪ್+ಅಡಗಿದ್+ಅಂಬರದ+ ಮಾರ್ಗದ
ಝಳದ+ ಕಿರುಬಿಂದುಗಳ +ಲಲಿತ +ಕಪೋಲ +ಮಂಡಲದ
ಕೆಲದ +ಪಾಯವಧಾರುಗಳ +ಕಳ
ಕಳದ +ಕರುಣಾರಸವ +ಸೂಸುವ
ಮೆಲುನಗೆಯ +ಸಿರಿಮೊಗದ +ಕೃಷ್ಣನ +ಕಂಡುದಾ +ಸೇನೆ

ಅಚ್ಚರಿ:
(೧) ಕೃಷ್ಣನು ಕಂಡ ಪರಿ – ಕರುಣಾರಸವ ಸೂಸುವ ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ

ಪದ್ಯ ೧೯: ಸುರರು ಶಿವನಿಗೆ ಉಘೇ ಎನಲು ಕಾರಣವೇನು?

ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ (ಅರಣ್ಯ ಪರ್ವ, ೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ಶಿವನು ದಂಡೆಯೊಡ್ಡಿ ಬಿಲ್ಲಿನ ಹೊಡೆತವನ್ನು ತಪ್ಪಿಸಿಕೊಂಡನು. ಇವನು ಹೆದರಿದನೆಂದು ಭಾವಿಸಿ ಶಿವನನ್ನು ಜರೆದು ಮೇಲೆ ಆಕ್ರಮಿಸಿ ಬಿಲ್ಲನ್ನು ತೂಗಿ ಮತ್ತೆ ಅಪ್ಪಳಿಸಿದನು. ಕಿರಾತರೂಪಿಯಾದ ಶಿವನು ನಸುನಗುತ್ತಾ ಗಾಂಡೀವ ಧನಸ್ಸನ್ನು ಸೆಳೆದುಕೊಂಡನು. ಹೀಗೆ ಅರ್ಜುನನು ನಿರಾಯುಧನಾದರೂ ಶಿವನ ಕರುಣೆಗೆ ಪಾತ್ರನಾಗಿ ಅಭಿವೃದ್ಧಿ ಹೊಂದಿದನು. ಇದನ್ನು ನೋಡಿದ ದೇವತೆಗಳು ಉಘೇ ಎಂದು ಶಿವನನ್ನು ಹೊಗಳಿದರು.

ಅರ್ಥ:
ಕಳಚು: ಬೇರ್ಪಡಿಸು, ಬೇರೆಮಾಡು; ದಂಡೆ: ಬಿಲ್ಲನ್ನು ಹಿಡಿಯುವ ಒಂದು ವರಸೆ; ಗಾಯ: ಪೆಟ್ಟು; ಅಳುಕು: ಹೆದರಿಕೆ; ಮಗುಳು: ಮತ್ತೆ; ಅಪ್ಪಳಿಸು: ತಟ್ಟು, ತಾಗು; ಮೇಲೆ: ಹೊಯ್ದು: ಹೊಡೆದು; ಜರೆ: ಬಯ್ಯು; ಝೋಂಪಿಸು: ಭಯಗೊಳ್ಳು; ಮೆಲುನಗೆ: ಮಂದಸ್ಮಿತ; ಚಾಪ: ಬಿಲ್ಲು; ಸೆಳೆ: ಜಗ್ಗು, ಎಳೆ; ಭಕ್ತ: ಆರಾಧಕ; ಬೆಳವು: ಏಳಿಗೆ; ಉಘೇ: ಜೈ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಕಳಚಿದನು +ದಂಡೆಯಲಿ +ಗಾಯದಲ್
ಅಳುಕಿದನಲಾ+ಎನುತ +ಮಗುಳ್
ಅಪ್ಪಳಿಸಿದನು +ಮೇಲ್ವಾಯ್ದು +ಹೊಯ್ದನು +ಜರೆದು +ಝೋಂಪಿಸುತ
ಮೆಲುನಗೆಯಲ್+ಅರ್ಜುನನ +ಚಾಪವ
ಸೆಳೆದುಕೊಂಡನು+ ತನ್ನ+ ಭಕ್ತನ
ಬೆಳವಿಗೆಯ +ಮಾಡಿದನ್+ಉಘೇ+ಎಂದುದು+ ಸುರಸ್ತೋಮ