ಪದ್ಯ ೧೬: ಪಾಂಡವರು ಯಾರ ಬಳಿ ರಕ್ಷಣೆ ಪಡೆಯುತ್ತಿದ್ದರು?

ಒಳಗೆ ಬೆಳೆದುದು ವೈರಶಿಖಿ ಕಡೆ
ಗಳಕೆ ಹಾಯ್ದುದು ಜನನಿ ಜನಕರ
ಬಲು ನುಡಿಗಳಲಿ ನೂರ್ವರಿರ್ದರು ಶಕುನಿ ಮತವಿಡಿದು
ಬಲುಹುಗುಂದದೆ ಭೀಷ್ಮ ವಿದುರರ
ಬಳಕೆಯಲಿ ತಾವಡಗಿ ಗುಣದಲಿ
ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು (ಆದಿ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕೌರವ ಪಾಂಡವರಿಗೆ ವೈರದ ಅಗ್ನಿಯು ಒಳೆಗೆ ಉರಿದು, ಗಂಟಲಿನವರೆಗೂ ಧಗಧಗಿಸಿತು. ನೂರು ಜನ ಕೌರವರೂ, ತಂದೆ ತಾಯಿಗಳ ಬೆಂಬಲದ ಮಾತುಗಳ ಬಲದಿಂದ, ಶಕುನಿಯ ಅಭಿಪ್ರಾಯದಮ್ತೆ ನಡೆದುಕೊಳ್ಳುತ್ತಿದ್ದರು. ಯುಧಿಷ್ಠಿರ ಮತ್ತು ಉಳಿದ ಪಾಂಡವರು ಕುಗ್ಗದೇ, ಭೀಷ್ಮ ವಿದುರರ ಸಹವಾಸದಲ್ಲಿ ರಕ್ಷಣೆ ಪಡೆದು ಸುತ್ತಮುತ್ತಲಿನ ಜನಗಳು ಮೆಚ್ಚುವಂತೆ ನಡೆದುಕೊಳ್ಳುತ್ತಿದ್ದರು.

ಅರ್ಥ:
ಒಳಗೆ: ಅಂತರ್ಯದಲಿ; ಬೆಳೆ: ಹೆಚ್ಚಾಗು; ವೈರ: ಶತ್ರು; ಶಿಖಿ: ಬೆಂಕಿ; ಕಡೆಗಳ: ಗಂಟಲು; ಹಾಯ್ದು: ಹತ್ತು, ಹೋಗು; ಜನನಿ: ಮಾತೆ; ಜನಕ: ತಂದೆ; ಬಲು: ಬೆಂಬಲ; ನುಡಿ: ಮಾತು; ಮತ: ವಿಚಾರ; ಬಲುಹು: ಶಕ್ತಿ; ಕುಂದು: ಕಡಿಮೆಯಾಗು; ಬಳಕೆ: ಉಪಯೋಗಿಸು; ಅಡಗು: ಅವಿತುಕೊಳ್ಳು; ಗುಣ: ನಡತೆ; ಕೆಲ: ಸುತ್ತಮುತ್ತಲು; ಮೆಚ್ಚಿಸು: ಪ್ರಶಂಶಿಸು; ನಡೆ: ಚಲಿಸು; ಆದಿ: ಮುಂತಾದ;

ಪದವಿಂಗಡಣೆ:
ಒಳಗೆ +ಬೆಳೆದುದು +ವೈರಶಿಖಿ +ಕಡೆ
ಗಳಕೆ +ಹಾಯ್ದುದು +ಜನನಿ +ಜನಕರ
ಬಲು +ನುಡಿಗಳಲಿ +ನೂರ್ವರಿರ್ದರು +ಶಕುನಿ +ಮತವಿಡಿದು
ಬಲುಹು+ಕುಂದದೆ +ಭೀಷ್ಮ +ವಿದುರರ
ಬಳಕೆಯಲಿ +ತಾವಡಗಿ +ಗುಣದಲಿ
ಕೆಲನ +ಮೆಚ್ಚಿಸಿ +ನಡೆದರ್+ಇವರು +ಯುಧಿಷ್ಠಿರಾದಿಗಳು

ಅಚ್ಚರಿ:
(೧) ಜನನಿ ಜನಕ – ಜೋಡಿ ಪದಗಳು
(೨) ಬಲು, ಬಲುಹು – ಪದದ ಬಳಕೆ

ಪದ್ಯ ೪: ಸಾತ್ಯಕಿ ಭೂರಿಶ್ರವರ ಯುದ್ಧವನ್ನು ಯಾರು ಪ್ರಶಂಶಿಸಿದರು?

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ (ದ್ರೋಣ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಹಾಗಾದರೆ ಈ ಬಾಣಗಳ ರುಚಿಯನ್ನು ನೋಡು ಎನ್ನುತ್ತಾ ಸಾತ್ಯಕಿಯು ಆಕಾಶದ ತುಂಬ ಬಾಣಗಳನ್ನು ಬಿಟ್ಟನು. ಸೋಮದತ್ತನ ಮಗನಾದ ಭೂರಿಶ್ರವನು ಓಹೋ ಬಲಿತಿದ್ದಾನೆ, ಉಳಿದುಕೋ ಎನ್ನುತ್ತಾ ಬಾಣಗಲನ್ನು ಬಿಟ್ಟನು. ಬಾಣಗಳ ಓಡಾಟ ಹೆಚ್ಚಾಯಿತು. ಕೋಪದಿಂದ ಕಾದಾಡುತ್ತಿದ್ದ ಇಬ್ಬರ ಕಾಳಗವನ್ನು ದೇವ ದಾನವರಿಬ್ಬರ ಗುಂಪುಗಳು ಮೆಚ್ಚಿದವು.

ಅರ್ಥ:
ಕೊಳ್ಳು: ತೆಗೆದುಕೋ; ಅಭ್ರ: ಆಗಸ; ಕೋದು: ಸೇರಿಸು, ಪೋಣಿಸು; ಅಂಬು: ಬಾಣ; ಬಲು: ಬಹಳ; ಹಾಯ್ದು: ಮೇಲೆಬಿದ್ದು; ಮಝ: ಭಲೇ; ಕಡಿ: ಸೀಳು; ಸುತ: ಮಗ; ಕಾದು: ರಕ್ಷಣೆ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬೀದಿವರಿ: ಸುತ್ತಾಡು, ಅಲೆದಾಡು; ಬಲುಹು: ಬಹಳ; ಖತಿ: ಕೋಪ; ಕೈದು: ಆಯುಧ, ಶಸ್ತ್ರ; ಕೈದುಕಾರ: ಆಯುಧವನ್ನು ಧರಿಸಿದವ; ಮೆಚ್ಚಿಸು: ಪ್ರಶಂಶಿಸು; ಅಮರ: ದೇವತೆ: ಅಸುರ: ದಾನವ; ಆವಳಿ: ಗುಂಪು;

ಪದವಿಂಗಡಣೆ:
ಆದಡ್+ಇದ +ಕೊಳ್ಳೆನುತ +ಸಾತ್ಯಕಿ
ಕೋದನ್+ಅಭ್ರವನ್+ಅಂಬಿನಲಿ +ಬಲು
ಹಾದನೈ +ಮಝ +ಎನುತ +ಕಡಿದನು +ಸೋಮದತ್ತಸುತ
ಕಾದುಕೊಳ್ಳ್+ಎನುತ್+ಎಚ್ಚನ್+ಅಂಬಿನ
ಬೀದಿವರಿ +ಬಲುಹಾಯ್ತು +ಖತಿಯಲಿ
ಕೈದುಕಾರರು +ಮೆಚ್ಚಿಸಿದರ್+ಅಮರ+ಅಸುರ+ಆವಳಿಯ

ಅಚ್ಚರಿ:
(೧) ಭೂರಿಶ್ರವನ ಪರಿಚಯ – ಸೋಮದತ್ತಸುತ
(೨) ಅ ಕಾರದ ಪದಜೋಡಣೆ – ಮೆಚ್ಚಿಸಿದರಮರಾಸುರಾವಳಿಯ

ಪದ್ಯ ೨೮: ವಿದುರನು ಸಂಧಿಯನ್ನು ಹೇಗೆ ಮಾಡಿದನು?

ಮುರಹರನನಹುದೆನಿಸಿ ಭೂಮೀ
ಶ್ವರನ ಮೆಚ್ಚಿಸಿ ಭೀಮನನು ಮನ
ಬರಿಸಿ ಪಾರ್ಥನನೊಲಿಸಿ ಮಾದ್ರೀಸುತನನೊಡಬಡಿಸಿ
ಅರಸಿಗಭಿಮತವೆನಿಸಿ ಪಾಂಚಾ
ಲರಿಗೆ ಕಾರ್ಯವಿದೆನಿಸಿ ಕುಂತಿಗೆ
ಪರಮ ಹರುಷವ ರಚಿಸಿ ನುಡಿದನು ಸಂಧಿಯನು ವಿದುರ (ಆದಿ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ವಿದುರನು ಕೃಷ್ಣನ್ನೊಪ್ಪಿಸಿ, ಧರ್ಮರಾಯನನ್ನು ಮೆಚ್ಚಿಸಿ, ಭೀಮನ ಮನಸ್ಸನ್ನು ಒಲಿಸಿ, ಅರ್ಜುನನ್ನು ಒಲಿಸಿ, ನಕುಲ ಸಹದೇವರನ್ನು ಒಪ್ಪಿಸಿ, ದ್ರೌಪದಿಯ ಸಮ್ಮತಿಯನ್ನು ಪಡೆದು, ದ್ರುಪದಾದಿಗಳಿಗೆ ಇದು ತನ್ನ ಕಾರ್ಯವೆಂದು ಒಪ್ಪಿಸಿ, ಕುಂತಿಗೆ ಅತೀವ ಸಂತೋಷವನ್ನುಂಟುಮಾಡಿ, ವಿದುರನು ಕೌರವ ಪಾಂಡವರಿಗೆ ಸಂಧಿಯನ್ನು ಮಾಡಿಸಿದನು.

ಅರ್ಥ:
ಮುರಹರ: ಕೃಷ್ಣ; ಅಹುದು: ಒಪ್ಪಿಸು; ಭೂಮೀಶ್ವರ: ರಾಜ; ಮೆಚ್ಚಿಸು: ಒಪ್ಪಿಸು, ಒಡಂಬಡಿಸು; ಮನಬರಿಸು: ಮನಸ್ಸನ್ನು ಒಪ್ಪಿಸು, ಒಲಿಸು: ಒಲಿಯುವಂತೆ ಮಾಡು, ಮನವೊಲಿಸು; ಒಡಬಡಿಸು: ಒಪ್ಪಿಸು; ಅರಸಿ: ರಾಣಿ (ದ್ರೌಪದಿ); ಅಭಿಮತ: ಸಮ್ಮತಿ; ಪರಮ: ತುಂಬ; ಹರುಷ: ಸಂತೋಷ; ರಚಿಸಿ: ನಿರ್ಮಿಸು; ನುಡಿ: ಹೇಳು; ಸಂಧಿ: ಸಂಯೋಗ, ಸೇರಿಕೆ;

ಪದವಿಂಗಡಣೆ:
ಮುರಹರನನ್+ಅಹುದೆನಿಸಿ +ಭೂಮೀ
ಶ್ವರನ+ ಮೆಚ್ಚಿಸಿ +ಭೀಮನನು +ಮನ
ಬರಿಸಿ +ಪಾರ್ಥನನ್+ಒಲಿಸಿ +ಮಾದ್ರೀಸುತನನ್+ಒಡಬಡಿಸಿ
ಅರಸಿಗ್+ಅಭಿಮತವೆನಿಸಿ +ಪಾಂಚಾ
ಲರಿಗೆ +ಕಾರ್ಯವಿದೆನಿಸಿ+ ಕುಂತಿಗೆ
ಪರಮ +ಹರುಷವ +ರಚಿಸಿ +ನುಡಿದನು +ಸಂಧಿಯನು +ವಿದುರ

ಅಚ್ಚರಿ:
(೧) “ಸಿ” ಇಂದ್ ಕೊನೆಗೊಳ್ಳುವ “ಒಪ್ಪಿಸು” ಎಂಬ ಅರ್ಥವನ್ನು ನೀಡುವ ಪದಗಳು – ಅಹುದೆನಿಸಿ, ಮೆಚ್ಚಿಸಿ, ಮನಬರಿಸಿ, ಒಲಿಸಿ, ಒಡಬಡಿಸಿ, ಅಭಿಮತವೆನಿಸಿ, ಕಾರ್ಯವಿದೆನಿಸಿ, ರಚಿಸಿ