ಪದ್ಯ ೭: ಗಣಿಕೆಯರು ಯಾವ ಬಲೆಯನ್ನು ಹರಡಿದರು?

ಹೊಕ್ಕರಿವರಾಶ್ರಮದ ತುರುಗಿದ
ತಕ್ಕರಂತಃಕರಣ ತುರಗಕೆ
ದುಕ್ಕುಡಿಯನಿಕ್ಕಿದರು ತಿರುಹಿದರೆರಡು ವಾಘೆಯಲಿ
ಸಿಕ್ಕಿದವು ದಾಳಿಯಲಿ ಧೈರ್ಯದ
ದಕ್ಕಡರ ಮನ ಹರಹಿನಲಿ ಹಾ
ಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ (ಅರಣ್ಯ ಪರ್ವ, ೧೯ ಸಂಧಿ, ೭ ಪದ್ಯ)

ತಾತ್ಪರ್ಯ:
ಗಣಿಕೆಯರು ಋಷ್ಯಾಶ್ರಮಗಳನ್ನು ಹೊಕ್ಕು ಅಲ್ಲಿನ ಆಚಾರವಂತರ ಸಮೂಹದ ಮನಸ್ಸಿನ ಕುದುರೆಗೆ ಕಡಿವಾಣವನ್ನು ಹಾಕಿದರು, ಎರಡೂ ಕಡೆ ಲಗಾಮನ್ನೆಳೆದರು. ಆ ಋಷಿಗಳ ಬಲಶಾಲಿಯಾದ ಧೈರ್ಯಕ್ಕೆ ತಮ್ಮ ಕಣ್ನೋಟಗಳೆಂಬ ಬಲೆಗಳನ್ನು ವಿಸ್ತಾರವಾಗಿ ಹರಡಿದರು.

ಅರ್ಥ:
ಹೊಕ್ಕು: ಸೇರು; ಆಶ್ರಮ: ಕುಟೀರ; ತುರುಗು: ಹೆಚ್ಚಾಗು, ಎದುರಿಸು; ಅಂತಃಕರಣ: ಮನಸ್ಸು; ತುರಗ: ಕುದುರೆ; ದುಕ್ಕುಡಿ: ಕಡಿವಾಣ; ತಿರುಹು: ತಿರುಗಿಸು; ವಾಘೆ: ಲಗಾಮು; ಸಿಕ್ಕು: ಪಡೆ; ದಾಳಿ: ಲಗ್ಗೆ; ಧೈರ್ಯ: ಎದೆಗಾರಿಕೆ, ಕೆಚ್ಚು; ದಕ್ಕಡ: ಸಮರ್ಥ, ಬಲಶಾಲಿ; ಮನ: ಮನಸ್ಸು; ಹರಹು: ಹರಡು; ಹಾಯ್ಕು: ಇಡು, ಇರಿಸು; ಕಡೆಗಣ್ಣು: ಕುಡಿನೋಟ; ಬಲೆ: ಜಾಲ; ಮುನಿ: ಋಷಿ; ಮೃಗ: ಪ್ರಾಣಿ; ಆವಳಿ: ಗುಂಪು;

ಪದವಿಂಗಡಣೆ:
ಹೊಕ್ಕರ್+ಇವರ್+ಆಶ್ರಮದ +ತುರುಗಿದ
ತಕ್ಕರ್+ಅಂತಃಕರಣ +ತುರಗಕೆ
ದುಕ್ಕುಡಿಯನ್+ಇಕ್ಕಿದರು +ತಿರುಹಿದರ್+ಎರಡು +ವಾಘೆಯಲಿ
ಸಿಕ್ಕಿದವು +ದಾಳಿಯಲಿ +ಧೈರ್ಯದ
ದಕ್ಕಡರ +ಮನ +ಹರಹಿನಲಿ +ಹಾ
ಯಿಕ್ಕಿದರು +ಕಡೆಗಣ್ಣ+ ಬಲೆಗಳ+ ಮುನಿ +ಮೃಗಾವಳಿಗೆ

ಅಚ್ಚರಿ:
(೧) ಗಣಿಕೆಯರ ಕುಡಿನೋಟದ ವರ್ಣನೆ: ಹಾಯಿಕ್ಕಿದರು ಕಡೆಗಣ್ಣ ಬಲೆಗಳ ಮುನಿ ಮೃಗಾವಳಿಗೆ

ಪದ್ಯ ೪: ಶಿವನು ಅರ್ಜುನನಿಗೆ ಹೇಗೆ ಉತ್ತರಿಸಿದನು?

ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮ ವೊ
ಲಾವ ಋಷಿ ಶಸ್ತ್ರಜ್ಞನಾತನ ಬಿರುದ ತಡೆಯೆಂದ (ಅರಣ್ಯ ಪರ್ವ, ೭ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನ ಮಾತಿಗೆ ಶಿವನು ಉತ್ತರಿಸುತ್ತಾ, ನಿಮಗೆ ಶಾಸ್ತ್ರ ಗೊತ್ತು,ಬೇಟೆಯಾಡುವ ನಮಗೆ ಶಸ್ತ್ರಗಳು ತಿಳಿದಿವೆ. ಇದು ಜಾತಿ ಧರ್ಮ. ಮಹಾ ಪರಾಕ್ರಮಿಯೆಂದು ಹೇಳಿಕೊಳ್ಳುವ ನಿಮ್ಮ ಜೊತೆಗೆ ನಮಗೆ ಯುದ್ಧ ಮಾಡಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಹಾಗೆ ಇನ್ನಾವ ಋಷಿಯಿದ್ದಾನೆ? ಅವನ ಬಿರುದನ್ನು ಬಿಟ್ಟು ಬಿಡಲು ಹೇಳಿಬಿಡು ಎಂದು ಉತ್ತರಿಸಿದನು.

ಅರ್ಥ:
ಬಲ್ಲಿರಿ: ತಿಳಿದಿರುವಿರಿ; ಶಾಸ್ತ್ರ: ತತ್ವ; ಶಸ್ತ್ರ: ಆಯುಧ; ಆವಳಿ: ಗುಂಪು; ಪಕ್ಷಿ: ಖಗ; ಮೃಗ: ಪ್ರಾಣಿ; ಬೇಂಟೆ: ಪ್ರಾಣಿಗಳನ್ನು ಕೊಲ್ಲವ ಕ್ರೀಡೆ; ಬಲ್ಲೆ: ತಿಳಿ; ಜಾತಿ: ವರ್ಗ; ಧರ್ಮ: ಧಾರಣೆ ಮಾಡಿದುದು; ಬಲುಹು: ಬಲ, ಶಕ್ತಿ; ನಿಮ್ಮೊಡ: ನಿಮ್ಮ ಜೊತೆ; ಸೆಣಸು: ಕಾದು, ಯುದ್ಧ; ವೊಲು: ತರಹ; ಋಷಿ: ಮುನಿ; ಶಸ್ತ್ರಜ್ಞ: ಶಸ್ತ್ರಜ್ಞಾನವನ್ನು ತಿಳಿದವ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು, ಪ್ರಶಸ್ತಿ; ತಡೆ: ನಿಲ್ಲಿಸು;

ಪದವಿಂಗಡಣೆ:
ನೀವು+ ಬಲ್ಲಿರಿ +ಶಾಸ್ತ್ರದಲಿ +ಶ
ಸ್ತ್ರಾವಳಿಯಲಾವ್+ಇಂದು +ಪಕ್ಷಿ +ಮೃ
ಗಾವಳಿಯ +ಬೇಂಟೆಯಲಿ +ಬಲ್ಲೆವು +ಜಾತಿಧರ್ಮವಿದು
ನೀವು +ಬಲುಹುಳ್ಳವರು +ನಿಮ್ಮೊಡ
ನಾವು +ಸೆಣಸುವರಲ್ಲ+ ನಿಮ್ಮವೊಲ್
ಆವ+ ಋಷಿ +ಶಸ್ತ್ರಜ್ಞನ್+ಆತನ+ ಬಿರುದ +ತಡೆಯೆಂದ

ಅಚ್ಚರಿ:
(೧) ನೀವು ನಾವು – ಜೋಡಿ ಪದಗಳು
(೨) ಶಾಸ್ತ್ರ, ಶಸ್ತ್ರ – ಪ್ರಾಸ ಪದಗಳ ಬಳಕೆ