ಪದ್ಯ ೩೮: ಅಶ್ವತ್ಥಾಮನು ತನ್ನ ಪರಾಕ್ರಮದ ಬಗ್ಗೆ ಏನು ಹೇಳಿದನು?

ರಣದೊಳಾ ಗಾಂಗೇಯಗಿಮ್ಮಡಿ
ಗುಣವ ತೋರುವೆನಪ್ಪನವರಿಂ
ದೆಣಿಸಿಕೊಳು ಮೂವಡಿಯನಗ್ಗದ ಸೂತನಂದನನ
ರಣಕೆ ನಾಲ್ವಡಿ ಮಾದ್ರರಾಜನ
ಹೊಣಕೆಗೈದು ಸುಶರ್ಮ ಶಕುನಿಗ
ಳೆಣಿಸುವಡೆ ಪಾಡಲ್ಲ ನೋಡೇಳೆಂದನಾ ದ್ರೌಣಿ (ಗದಾ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ನುಡಿಯುತ್ತಾ, ಭೀಷ್ಮನ ಯುದ್ಧ ಕೌಶಲ್ಯದ ಇಮ್ಮಡಿ ಕುಶಲತೆಯನ್ನೂ, ನನ್ನ ತಂದೆ ದ್ರೋಣನ, ಮೂರರಷ್ಟನ್ನೂ, ಕರ್ಣನ ಪರಾಕ್ರಮದ ನಾಲ್ಕರಷ್ಟನ್ನೂ, ಶಲ್ಯನ ಐದರಷ್ಟು ಚಾತುರ್ಯತೆಯನ್ನೂ ತೋರಿಸುತ್ತೇನೆ. ಸುಶರ್ಮ ಶಕುನಿಗಳಿಗೆ ಹೋಲಿಸಲಾಗದಂತಹ ರಣಕೌಶಲ ನನ್ನನು, ನೀನು ನೀರಿನಿಂದ ಹೊರಬಂದು ನೋಡು ಎಂದು ಅಶ್ವತ್ಥಾಮನು ಬೇಡಿದನು.

ಅರ್ಥ:
ರಣ: ಯುದ್ಧಭೂಮಿ; ಇಮ್ಮಡಿ: ಎರಡು ಪಟ್ಟು; ಗುಣ: ನಡತೆ; ತೋರು: ಪ್ರದರ್ಶಿಸು; ಅಪ್ಪ: ತಂದೆ; ಎಣಿಸು: ಲೆಕ್ಕ ಹಾಕು; ಮೂವಡಿ: ಮೂರ್ಪಟ್ಟು; ಅಗ್ಗ: ಶ್ರೇಷ್ಠ; ನಂದನ: ಮಗ; ನಾಲ್ವಡಿ: ನಾಲ್ಕರಷ್ಟು; ಹೊಣಕೆ: ಯುದ್ಧ; ಶೌರ್ಯ; ಪಾಡು: ಸಮಾನ, ಸಾಟಿ; ದ್ರೌಣಿ: ಅಶ್ವತ್ಥಾಮ;

ಪದವಿಂಗಡಣೆ:
ರಣದೊಳಾ +ಗಾಂಗೇಯಗ್+ಇಮ್ಮಡಿ
ಗುಣವ +ತೋರುವ್+ಎನಪ್ಪನ್+ಅವರಿಂದ್
ಎಣಿಸಿಕೊಳು +ಮೂವಡಿಯನ್+ಅಗ್ಗದ +ಸೂತ+ನಂದನನ
ರಣಕೆ +ನಾಲ್ವಡಿ +ಮಾದ್ರರಾಜನ
ಹೊಣಕೆಗ್+ಐದು +ಸುಶರ್ಮ+ ಶಕುನಿಗಳ್
ಎಣಿಸುವಡೆ+ ಪಾಡಲ್ಲ +ನೋಡ್+ಏಳ್+ಎಂದನಾ +ದ್ರೌಣಿ

ಅಚ್ಚರಿ:
(೧) ರಣ, ಗುಣ – ಪ್ರಾಸ ಪದಗಳು
(೨) ರಣ – ೧, ೪ ಸಾಲಿನ ಮೊದಲ ಪದ

ಪದ್ಯ ೨: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ (ಅರಣ್ಯ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಸ್ಥಿತಿಯನ್ನು ನೋಡಿ, ಒಡೆಯಾ, ಇದಕ್ಕೇಕೆ ದುಃಖ, ದೇವೇಂದ್ರ, ಅಗ್ನಿ, ಯಮ, ನಿರುಋತಿ, ವರುಣ, ವಾಯು, ಕುಬೇರ, ಈಶಾನರ ಸಾಹಸಕ್ಕೆ ಮುರು ಪಟ್ತು ಹೆಚ್ಚಿನ ಸಾಹಸಿಗರು ನಿನ್ನ ಸೈನ್ಯದಲ್ಲಿದ್ದಾರೆ. ಅವರಿಗೆ ಅಪ್ಪಣೆ ಕೊಡು, ಅಮರಾವತಿಯ ಹಾಡುಗರ ಸಾಹಸಕ್ಕೆ ಇಷ್ಟೇಕೆ ಚಿಂತೆ ಎಂದು ಕೌರವನಿಗೆ ಹೇಳಿದನು.

ಅರ್ಥ:
ಜೀಯ: ಒಡೆಯ; ದುಗುಡ: ದುಃಖ; ದಿವಿಜ: ಸುರರು; ರಾಯ: ರಾಜ; ಶಿಖಿ: ಅಗ್ನಿ; ಯಮ: ಧರ್ಮದೇವತೆ; ನಿರುತಿ: ನೈಋತ್ಯದಿಕ್ಕಿನ ಒಡೆಯ; ರಾಕ್ಷಸ; ಜಲಧಿಪ: ವರುಣ; ಜಲಧಿ: ಸಾಗರ; ಧನದ: ಕುಬೇರ; ಧನ: ಐಶ್ವರ್ಯ; ಸಾಹಸ: ಪರಾಕ್ರಮ; ಮೂವಡಿ: ಮೂರು ಪಟ್ಟು; ಭಟ: ಸೈನಿಕ; ನೇಮಿ: ನಿಯಮವನ್ನು ಹೊಂದಿರುವವನು; ಸುರರಾಯ: ಇಂದ್ರ; ಊರು: ಪಟ್ಟಣ; ಹಾಡುಗರು: ಗಂಧರ್ವರು; ಹುಲು:ಕ್ಷುಲ್ಲ; ನಾಯಕ: ಒಡೆಯ; ಖತಿ: ಕೋಪ, ದುಃಖ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ದುಗುಡವಿದೇಕೆ +ದಿವಿಜರ
ರಾಯ +ಶಿಖಿ +ಯಮ +ನಿರುತಿ+ ಜಲಧಿಪ
ವಾಯು +ಧನದ+ ಶಿವಾದಿಗಳ+ ಸಾಹಸಕೆ +ಮೂವಡಿಯ
ರಾಯ +ಭಟರಿದೆ +ನೇಮಿಸ್+ಆ+ ಸುರ
ರಾಯನ್+ಊರಿನ +ಹಾಡುಗರ +ಹುಲು
ನಾಯಕರಿಗಿನಿತ್+ಏಕೆ+ ಖತಿ+ ಬೆಸಸೆಂದನಾ +ಕರ್ಣ

ಅಚ್ಚರಿ:
(೧) ಅಗ್ನಿ, ವರುಣ, ಕುಬೇರನನ್ನು ಕರೆದ ಪರಿ – ಶಿಖಿ, ಜಲಧಿಪ, ಧನದ
(೨) ಅಮರಾವತಿ ಎಂದು ಕರೆಯಲು – ಸುರರಾಯನೂರು
(೩) ಗಂಧರ್ವರೆಂದು ಹೇಳಲು – ಹಾಡುಗರು ಪದದ ಬಳಕೆ