ಪದ್ಯ ೬೩: ಕೌರವ ವೀರರು ಹೇಗೆ ಹಿಂದಿರುಗಿದರು?

ಉಲಿವ ಭಟ್ಟರ ಬಾಯ ಹೊಯ್ ರಥ
ದೊಳಗೆ ಕೆಡಹಲಿ ಧ್ವಜದ ಕಂಭವ
ನುಲುಕದಂತಿರೆ ರಥವ ಹರಿಸಲಿ ಸೂತಕುನ್ನಿಗಳು
ತಲೆಮುಸುಕನಿಡಿ ಛತ್ರ ಚಮರವ
ನೆಲಕೆ ಬಿಸುಡಲಿ ಹೆಸರುಗೊಂಡರ
ನುಳುಹಲಾಗದು ಬೀಳಗುತ್ತು ವದೆನುತ ತಿರುಗಿದರು (ಭೀಷ್ಮ ಪರ್ವ, ೮ ಸಂಧಿ, ೬೩ ಪದ್ಯ)

ತಾತ್ಪರ್ಯ:
ಬಿರುದನ್ನು ಹೊಗಳುವ ಭಟ್ಟರ ಬಾಯಿಗೆ ಬಡಿಯಿರಿ, ಧ್ವಜಸ್ತಂಭವನ್ನು ರಥದೊಳಗೇ ಇಡಿರಿ, ಚಲಿಸುತ್ತಿರುವುದು ಗೊತ್ತಾಗದಂತೆ ಕುನ್ನಿಗಳಾದ ಸೂತರು ರಥವನ್ನು ಹಿಂದಕ್ಕೆ ಹೊಡೆಯಲಿ, ತಲೆಗೆ ಮುಸುಕು ಹಾಕಿಕೊಳ್ಳಿ, ಛತ್ರ ಚಾಮರಗಳನ್ನು ನೆಲಕ್ಕೆಸೆಯಿರಿ, ಬಿರುದು ಹೊತ್ತವರನ್ನು ಉಳಿಸದೆ ಕೆಳಕ್ಕೆ ಕೆಡಹಿರಿ ಎನ್ನುತ್ತಾ ಕೌರವ ವೀರರು ಹಿಂದಿರುಗಿದರು.

ಅರ್ಥ:
ಉಲಿ: ಶಬ್ದ; ಭಟ್ಟ: ಹೊಗಳುಭಟ್ಟ; ಹೊಯ್: ಹೊಡೆ; ರಥ: ಬಂಡಿ; ಕೆಡಹು: ನಾಶಮಾಡು; ಧ್ವಜ: ಬಾವುಟ, ಪತಾಕೆ; ಕಂಭ: ಕೋಲು, ಆಧಾರ; ಉಲುಕು:ಅಲ್ಲಾಡು; ಹರಿಸು: ಚಲಿಸು; ಸೂತ: ರಥವನ್ನು ನಡೆಸುವವನು; ಕುನ್ನಿ: ನಾಯಿ; ತಲೆ: ಶಿರ; ಮುಸುಕು: ಹೊದಿಕೆ; ಛತ್ರ: ಕೊಡೆ; ಚಮರ: ಚಾಮರ; ನೆಲ: ಭೂಮಿ; ಬಿಸುಡು: ಹೊರಹಾಕು; ಹೆಸರು: ನಾಮ; ಉಳುಹು: ಕಾಪಾಡು; ಬೀಳು: ಕುಸಿ; ತಿರುಗು: ಅಲೆದಾಡು, ಸುತ್ತು; ಕುತ್ತು: ತೊಂದರೆ, ಆಪತ್ತು;

ಪದವಿಂಗಡಣೆ:
ಉಲಿವ +ಭಟ್ಟರ +ಬಾಯ +ಹೊಯ್ +ರಥ
ದೊಳಗೆ +ಕೆಡಹಲಿ +ಧ್ವಜದ +ಕಂಭವನ್
ಉಲುಕದಂತಿರೆ +ರಥವ+ ಹರಿಸಲಿ +ಸೂತ+ಕುನ್ನಿಗಳು
ತಲೆ+ಮುಸುಕನ್+ಇಡಿ +ಛತ್ರ +ಚಮರವ
ನೆಲಕೆ +ಬಿಸುಡಲಿ +ಹೆಸರುಗೊಂಡರನ್
ಉಳುಹಲಾಗದು +ಬೀಳಗುತ್ತುವದ್+ಎನುತ+ ತಿರುಗಿದರು

ಅಚ್ಚರಿ:
(೧) ಹೊಗಳುವುದನ್ನು ನಿಲ್ಲಿಸಿ ಎಂದು ಹೇಳುವ ಪರಿ – ಉಲಿವ ಭಟ್ಟರ ಬಾಯ ಹೊಯ್

ಪದ್ಯ ೭೬: ವಿದುರನು ಧೃತರಾಷ್ಟ್ರನ ಯೋಚನೆಗೆ ಹೇಗೆ ಉತ್ತರಿಸಿದನು?

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ (ಸಭಾ ಪರ್ವ, ೧೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರನು, ನಿನ್ನ ಮಾತು ಹೊಲಸು ವಾಸನೆಯಿಂದ ತುಂಬಿದೆ, ನಿನ್ನ ಪ್ರೀತಿಯ ಮಾತುಗಳನ್ನು ಕೇಳಿ, ನನ್ನ ಮನಸ್ಸು ಭೀತಿಯಲ್ಲಿ ಮುಳುಗಿದೆ, ಮಾರಿಯ ಮುಸುಕನ್ನು ತೆಗೆಯುವುದನ್ನು ನಿನಗೆ ಯಾರು ಹೇಳಿಕೊಟ್ಟರು? ನಿನ್ನ ಮಗನು ಮೋಸದ ಗಣಿ, ಅವನ ಮಾತಿಗೆ ನೀನು ಒಪ್ಪಿದೆಯೋ? ಶಿವ ಶಿವಾ ಸುಖದ್ಯೂತಾ ಹಾಹಹಹ ಎಂದು ತಲೆದೂಗಿದನು ವಿದುರ.

ಅರ್ಥ:
ಮಾತು: ವಾಣಿ; ಹೊಲಸು: ಕೊಳಕು; ಗಂಧ: ವಾಸನೆ; ಭೀತಿ: ಭಯ; ರಸ: ಸಾರ; ಮನ: ಮನಸ್ಸು; ಮುಳುಗು: ಮುಚ್ಚಿಹೋಗು, ತೋಯು; ಪ್ರೀತಿ: ಒಲವು; ಮಾರಿ: ಕ್ಷುದ್ರದೇವತೆ; ಮುಸುಕು: ಆವರಿಸು, ಮುಚ್ಚು; ಉಗಿ: ಹೊರಹಾಕು; ಕಲಿಸು: ಹೇಳಿಕೊಟ್ಟರು; ಕೈತ: ಮೋಸ; ಕಣಿ: ಗಣಿ, ಆಕರ; ಮಗ: ಸುತ; ಸೋತೆ: ಪರಾಭವ ಹೊಂದು; ಸುಖ: ಸಂತಸ; ದ್ಯೂತ: ಜೂಜು, ಪಗಡೆ; ತಲೆ: ಶಿರ; ದೂಗು: ಅಲ್ಲಾಡಿಸು;

ಪದವಿಂಗಡಣೆ:
ಮಾತು +ಹೊಲಸಿನ +ಗಂಧವಾಗಿದೆ
ಭೀತಿ +ರಸದಲಿ +ಮನ +ಮುಳುಗಿತ್+ಈ
ಪ್ರೀತಿ +ಮಾರಿಯ +ಮುಸುಕನ್+ಉಗಿವುದನ್+ಆರು +ಕಲಿಸಿದರು
ಕೈತವದ +ಕಣಿ +ನಿನ್ನ +ಮಗ +ನೀ
ಸೋತೆಲಾ +ಶಿವಶಿವ+ ಸುಖಾಂಗ
ದ್ಯೂತವೇ +ಹಾ +ಹಾ+ಎನುತ +ತಲೆದೂಗಿದನು+ ವಿದುರ

ಅಚ್ಚರಿ:
(೧) ವಿದುರನ ಉತ್ತರವನ್ನು ಚಿತ್ರಿಸಿರುವ ಪದ್ಯ
(೨) ಕೆಟ್ಟ ಮಾತು ಎಂದು ಹೇಳಲು – ಮಾತು ಹೊಲಸಿನ ಗಂಧವಾಗಿದೆ
(೨) ಭಯವನ್ನುಂಟುಮಾಡುತ್ತದೆ ಎಂದು ಹೇಳಲು – ಭೀತಿ ರಸದಲಿ ಮನ ಮುಳುಗಿತೀ
(೪) ದುರ್ಯೋಧನನನ್ನು ಬಯ್ಯುವ ಪರಿ – ಕೈತವದ ಕಣಿ ನಿನ್ನ ಮಗ