ಪದ್ಯ ೪೪: ಕೌರವ ಪಾಳೆಯ ಸ್ಥಿತಿ ಏನಾಯಿತು?

ಪಾಳೆಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ದೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಭಾರಿ ಗಲಭೆಯಾಯಿತು, ನೊಮ್ದ ಯೋಧರು ಸೇರಿ, ಮುಳ್ಳು ಬೇಲಿಯ ಬಳಿ ರಕ್ಷಣೆಗೆ ನಿಂತರು. ವಿಷಯವನ್ನು ತಿಳಿಯಲು ಬೇಹುಗಾರರನ್ನು ದಿಕ್ಕು ದಿಕ್ಕಿಗೆ ಅಟ್ಟಿದರು. ಕುದುರೆಗಳು ಮುಂದೆ ಬಂದು ನಿಂತವು. ತಲೆಕೆದರಿದ ರಾಜರು ಈ ಸದ್ದನ್ನು ಕೇಳಿ ಬೀಡಿನಿಂದ ಹೊರಬಂದರು. ಕೌರವ ಪಾಳೆಯು ಅಸ್ತವ್ಯಸ್ತವಾಯಿತು.

ಅರ್ಥ:
ಪಾಳೆ: ಬಿಡಾರ; ಗಜಬಜ: ಗೊಂದಲ; ತೊಳಲು: ಬವಣೆ, ಸಂಕಟ; ಆಳು: ಯೋಧ; ನೆರೆ: ಗುಂಪು; ಕೋರಡಿ: ಸಾರವಿಲ್ಲದಿರುವಿಕೆ; ಮುಳುವೇಲಿ: ಮುಳ್ಳಿನ ಬೇಲಿ; ದೇಹ: ತನು; ಹರಿಸು: ಚೆಲ್ಲು; ಅಖಿಳ: ಎಲ್ಲಾ; ದೆಸೆ: ದಿಕ್ಕು; ಮೇಲು: ಮುಂದೆ; ಕುದುರೆ: ಅಶ್ವ; ಒದಗು: ಲಭ್ಯ, ದೊರೆತುದು; ಭೂಪಾಲಕ: ರಾಜ; ತಲೆ: ಶಿರ; ಕೆದರು: ಹರಡು; ಹುಯ್ಯಲು: ಪೆಟ್ಟು, ಹೊಡೆತ; ಆಲಿಸು: ಕೇಳು; ಹೊರವಂಟು: ತೆರಳು; ತಳಕೆಳ: ಮೇಲೆ ಕೆಳಗೆ; ನೃಪ: ರಾಜ; ಕಟಕ: ಸೈನ್ಯ, ಗುಂಪು;

ಪದವಿಂಗಡಣೆ:
ಪಾಳೆಯವು +ಗಜಬಜಿಸೆ +ತೊಳಲಿಕೆ
ಆಳು +ನೆರೆದುದು +ಕೋರಡಿಯ +ಮುಳು
ವೇಲಿಗಾಂತರು +ದೇಹ +ಹರಿಸಿದರ್+ಅಖಿಳ+ ದೆಸೆದೆಸೆಗೆ
ಮೇಲು+ಕುದುರೆಗಳ್+ಒದಗಿದವು +ಭೂ
ಪಾಲಕರು +ತಲೆಗೆದರಿ +ಹುಯ್ಯಲನ್
ಆಲಿಸುತ +ಹೊರವಂಟು +ತಳಕೆಳಕಾಯ್ತು+ ನೃಪ+ಕಟಕ

ಅಚ್ಚರಿ:
(೧) ಗಜಬಜಿಸೆ, ದೆಸೆದೆಸೆಗೆ, ತಳಕೆಳ – ಪದಗಳ ಬಳಕೆ

ಪದ್ಯ ೫೨: ಕೌರವನ ಸೈನ್ಯವು ಹೇಗೆ ಹಬ್ಬಿತ್ತು?

ಅಳವಿ ನಾಲ್ವತ್ತೆಂಟರೊಳಗಿ
ಟ್ಟಳಿಸಿ ಬಿಟ್ಟುದು ಸೇನೆ ಕೋಟಾ
ವಳಯವಗಲಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು
ಕೆಲದೊಳೊಪ್ಪುವ ಭೋಗವತಿ ನಿ
ರ್ಮಲ ಗಭೀರೋದಕದ ನದಿ ಕುರು
ಬಲದ ಪಾಳಯದಂಗವಿದು ಕೇಳೈ ಮಹೀಪಾಲ (ಭೀಷ್ಮ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ನಲವತ್ತೆಂಟು ಕ್ರೋಶ ವಿಸ್ತಾರದಲ್ಲಿ ಸೇನೆ ಬೀಡುಬಿಟ್ಟಿತು. ಅಲ್ಲಲ್ಲಿ ಕೋಟೆಗಳು ಮರದ ದಿಮ್ಮಿ, ಮುಳ್ಳುಗಳ ಬೇಲಿಗಳು, ಕಂದಕಗಳು ಆ ಬೀಡಿನಲ್ಲಿದ್ದವು. ಪಕ್ಕದಲ್ಲಿಯೇ ಭೋಗವತಿ ನದಿಯು ಹರಿಯುತ್ತಿತ್ತು. ಜನಮೇಜಯ ರಾಜ ಕೇಳು ಇದು ಕೌರವನ ಸೈನ್ಯದ ಬೀಡು.

ಅರ್ಥ:
ಅಳವಿ: ಅಳತೆ, ಶಕ್ತಿ, ಯೋಗ್ಯತೆ; ಇಟ್ಟಳಿಸು: ದಟ್ಟವಾಗು; ಸೇನೆ: ಸೈನ್ಯ; ಕೋಟಾವಳಯ: ಕೋಟೆಗಳ ಬಳಸು; ತಳಿ: ಚಿಮುಕಿಸು; ಮುಳುವೇಲಿ: ಮುಳ್ಳಿನ ಬೇಲಿ ಪಡಿ: ಪ್ರತಿಯಾದುದು; ಕೆಲ: ಪಕ್ಕ, ಮಗ್ಗುಲು; ಒಪ್ಪು:ಸಮ್ಮತಿ; ನಿರ್ಮಲ: ಶುದ್ಧ; ಗಭೀರ: ಆಳವಾದುದು; ಉದಕ: ನೀರು; ನದಿ: ಸರೋವರ; ಬಲ: ಸೈನ್ಯ; ಪಾಳಯ: ಶಿಬಿರ, ಬೀಡು; ಅಂಗ: ಭಾಗ; ಮಹೀಪಾಲ: ರಾಜ;

ಪದವಿಂಗಡಣೆ:
ಅಳವಿ+ ನಾಲ್ವತ್ತೆಂಟರೊಳಗ್
ಇಟ್ಟಳಿಸಿ +ಬಿಟ್ಟುದು +ಸೇನೆ +ಕೋಟಾ
ವಳಯವಗಳ್+ಅಲ್ಲಲ್ಲಿ +ತಳಿ +ಮುಳುವೇಲಿ +ಪಡಿಯಗಳು
ಕೆಲದೊಳ್+ಒಪ್ಪುವ +ಭೋಗವತಿ +ನಿ
ರ್ಮಲ +ಗಭೀರ+ಉದಕದ+ ನದಿ +ಕುರು
ಬಲದ +ಪಾಳಯದ್+ಅಂಗವಿದು+ ಕೇಳೈ +ಮಹೀಪಾಲ

ಅಚ್ಚರಿ:
(೧) ಭೋಗವತಿ ನದಿಯ ವರ್ಣನೆ – ಕೆಲದೊಳೊಪ್ಪುವ ಭೋಗವತಿ ನಿರ್ಮಲ ಗಭೀರೋದಕದ ನದಿ