ಪದ್ಯ ೭: ಗಾಂಧಾರಿಯು ಹೇಗೆ ಸಾಗಿದಳು?

ನಡೆದಳಾ ಗಾಂಧಾರಿ ಶೋಕದ
ಕಡಲೋಳೇಳುತ ಮುಳುಗುತಂಘ್ರಿಯ
ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ
ಅಡಗಿನಲಿ ಕಾಲೂರಿ ಸಿಲುಕಿದ
ರೊಡನೆ ಹರಿ ನೆಗಹುವನು ನರವಿನ
ತೊಡಕ ಬಿಡಿಸುತ ಹೊಕ್ಕಳಂಗನೆ ಹೆಣನ ಮಧ್ಯದಲಿ (ಗದಾ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಗಾಂಧಾರಿಯು ಶೋಕ ಸಮುದ್ರದಲ್ಲಿ ಮುಳುಗುತ್ತಾ ಏಳುತ್ತಾ, ಮೊಣಕಾಲೆತ್ತರದ ರಕ್ತದ ಮಡುವಿನಲ್ಲಿ ಕಾಲಿಟ್ಟು ರಕ್ತವನ್ನು ಕೊಡವಿಕೊಳ್ಳುತ್ತಾ ಮಾಂಸದ ನಡುವೆ ಕಾಲು ಸಿಕ್ಕಿಸಿಕೊಳ್ಳುತ್ತಾ ಬಂದಳು. ಆಗ ಶ್ರೀಕೃಷ್ಣನು ಅವಳನ್ನು ಮೇಲೆತ್ತುವನು. ನರಗಳು ಕಾಲಿಗೆ ಸಿಕ್ಕಿಕೊಂಡಾಗ ತೊಡಕನ್ನು ಬಿಡಿಸಿಕೊಳ್ಳುತ್ತಾ ಗಾಂಧಾರಿಯು ಹೆಣಗಳ ನಡುವೆ ಸಾಗಿದಳು.

ಅರ್ಥ:
ನಡೆ: ಚಲಿಸು; ಶೋಕ: ದುಃಖ; ಕಡಲು: ಸಾಗರ; ಏಳು: ಹತ್ತು; ಮುಳುಗು: ನೀರಿನಲ್ಲಿ ಮೀಯು; ಅಂಘ್ರಿ: ಪಾದ; ಕೊಡಹು: ಒದರು, ಜಾಡಿಸು; ಅರುಣಾಂಬ: ಕೆಂಪನೆಯ ನೀರು (ರಕ್ತ); ಹೊನಲು: ಪ್ರಕಾಶ; ಜಾನು: ಮಂಡಿ, ಮೊಳಕಾಲು; ಜಾನುದಘ್ನ: ಮೊಳಕಾಲಿನವರೆಗೆ ಮುಳುಗಿದವನು; ಅಡಗು: ಮಾಂಸ; ಕಾಲು: ಪಾದ; ಊರು: ಭದ್ರವಾಗಿ ನಿಲ್ಲಿಸು; ಸಿಲುಕು: ಬಂಧನಕ್ಕೊಳಗಾದುದು; ಹರಿ: ವಿಷ್ಣು; ನೆಗಹು: ಮೇಲೆತ್ತು; ನರ: ತಂತು, ಸೆರೆ, ತಂತಿ; ತೊಡಕು: ಸಿಕ್ಕು, ಗೋಜು; ಬಿಡಿಸು: ಸಡಲಿಸು; ಹೊಕ್ಕು: ಸೇರು; ಅಂಗನೆ: ಹೆಣ್ಣು; ಹೆಣ: ಜೀವವಿಲ್ಲದ ಶರೀರ; ಮಧ್ಯ: ನಡುವೆ;

ಪದವಿಂಗಡಣೆ:
ನಡೆದಳಾ+ ಗಾಂಧಾರಿ +ಶೋಕದ
ಕಡಲೋಳ್+ಏಳುತ +ಮುಳುಗುತ್+ಅಂಘ್ರಿಯ
ಕೊಡಹುತ್+ಅರುಣಾಂಬುಗಳ +ಹೊನಲಿನ +ಜಾನುದಘ್ನಗಳ
ಅಡಗಿನಲಿ+ ಕಾಲೂರಿ +ಸಿಲುಕಿದರ್
ಒಡನೆ +ಹರಿ +ನೆಗಹುವನು +ನರವಿನ
ತೊಡಕ +ಬಿಡಿಸುತ +ಹೊಕ್ಕಳ್+ಅಂಗನೆ +ಹೆಣನ +ಮಧ್ಯದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಶೋಕದಕಡಲೋಳೇಳುತ ಮುಳುಗುತಂಘ್ರಿಯ ಕೊಡಹುತರುಣಾಂಬುಗಳ ಹೊನಲಿನ ಜಾನುದಘ್ನಗಳ

ಪದ್ಯ ೨೫: ಮೃತ್ಯುವು ಮಾರ್ಕಂಡೆಯ ಮುನಿಯನ್ನು ಹೇಗೆ ಬಿಟ್ಟಿತು?

ನೀರು ಹೊಕ್ಕುದು ನೂಕಿ ವಿವಿಧ
ದ್ವಾರದಲಿ ಬೆಂಡೇಳ್ವೆನೊಮ್ಮೆ ಸು
ದೂರ ಮುಳುಗುವೆನಡ್ಡಬೀಳ್ವೆನು ತೆರೆಯ ಹೊಯ್ಲಿನಲಿ
ಯಾರಿಗುಬ್ಬಸವೆನ್ನ ಮರಣವ
ನಾರು ಕಂಡರು ಹೇಸಿ ತನ್ನನು
ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ (ಅರಣ್ಯ ಪರ್ವ, ೧೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ನನ್ನ ದೇಹದ ನವದ್ವಾರಗಳಲ್ಲೂ ನೀರು ತುಂಬಿತು, ಒಮ್ಮೆ ಬೆಂಡಿನಂತೆ ನೀರ ಮೇಲೆ ಬರುತ್ತಿದ್ದೆ, ಇನ್ನೊಮ್ಮೆ ಆಳವಾಗಿ ಮುಳುಗುತ್ತಿದ್ದೆ, ಮಗದೊಮ್ಮೆ ತೆರೆಯಮೇಲೆ ಅಡ್ಡವಾಗಿ ತೇಲುತ್ತಿದ್ದೆ, ನನ್ನ ಸಂಕಟವನ್ನು ಕಂಡು ಯಾರು ಸಂಕಟ ಪಡುವವರಿದ್ದರು? ನಾನು ಸತ್ತರೆ ನೋಡುವವರಾರು? ಆದರೆ ಮೃತ್ಯುವು ನನ್ನನ್ನು ಅಸಹ್ಯ ಪಟ್ಟು ದೂರಕ್ಕೆಸೆದಳು, ಹೀಗೆ ಹಲವು ಕಾಲ ನಾನು ಬಳಲಿದೆ.

ಅರ್ಥ:
ನೀರು: ಜಲ; ಹೊಕ್ಕು: ಸೇರು; ನೂಕು: ತಳ್ಳು; ವಿವಿಧ: ಹಲವಾರು; ದ್ವಾರ: ಬಾಗಿಲು; ಬೆಂಡು: ಜೋಳ್ಳು, ಪೋಲು; ಏಳು: ಮೇಲೆ ಬಾ; ದೂರ: ಅಂತರ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ತೆರೆ: ಅಲೆ; ಹೊಯ್ಲು: ಏಟು, ಹೊಡೆತ; ಉಬ್ಬಸ: ಮೇಲುಸಿರು; ಮರಣ: ಸಾವು; ಕಂಡು: ನೋಡು; ಹೇಸು:ಅಸಹ್ಯ; ಬಿಸುಟು: ಹೊರಹಾಕು; ಬಳಲು: ಆಯಾಸ; ಹಲಕಾಲ: ಬಹಳ ಸಮಯ;

ಪದವಿಂಗಡಣೆ:
ನೀರು+ ಹೊಕ್ಕುದು+ ನೂಕಿ +ವಿವಿಧ
ದ್ವಾರದಲಿ +ಬೆಂಡೇಳ್ವೆನ್+ಒಮ್ಮೆ +ಸು
ದೂರ +ಮುಳುಗುವೆನ್+ಅಡ್ಡಬೀಳ್ವೆನು +ತೆರೆಯ +ಹೊಯ್ಲಿನಲಿ
ಯಾರಿಗ್+ಉಬ್ಬಸವೆನ್ನ +ಮರಣವನ್
ಆರು +ಕಂಡರು +ಹೇಸಿ +ತನ್ನನು
ದೂರ +ಬಿಸುಟಳು +ಮೃತ್ಯು +ಬಳಲಿದೆ +ನಿಂತು +ಹಲಕಾಲ

ಅಚ್ಚರಿ:
(೧) ಮೃತ್ಯುವು ಬಿಡುವ ಬಗ್ಗೆ: ಹೇಸಿ ತನ್ನನು ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ

ಪದ್ಯ ೨೩: ಯಾವುದರಲ್ಲಿ ಎಲ್ಲವೂ ಮುಳುಗಿತ್ತು?

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನು ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿರ್ದೆನು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಥಿರ ಕೇಳು, ಈ ಭೂಮಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶಗಳೊಂದೂ ಆ ನೀರಿನ ದೆಸೆಯಿಂದ ಕಾಣಲಿಲ್ಲ. ನನ್ನ ಚಿತ್ತದ ಚಿಂತೆಯನ್ನು ಏನೆಂದು ಹೇಳಲಿ, ಆ ನೀರಿನಲ್ಲಿ ಮುಳುಗುತ್ತಾ ಏಳುತ್ತಾ ನಾನು ಸಂಕಟ ಪದುತ್ತಿದ್ದೆನು ಹಲುಬುತ್ತಿದ್ದೆನು ಎಂದು ಮುನಿಗಳು ತಿಳಿಸಿದರು.

ಅರ್ಥ:
ನೆಲ: ಭೂಮಿ; ಚಂದ್ರ: ಶಶಿ; ಸೂರ್ಯ: ರವಿ; ಕೃಶಾನು: ಅಗ್ನಿ, ಬೆಂಕಿ; ತೇಜ: ಕಾಂತಿ, ಪ್ರಕಾಶ; ಸಮೀರ: ವಾಯು; ಕಾಣು: ತೋರು; ಸಲಿಲ: ಜಲ; ಸೃಷ್ಟಿ: ಉತ್ಪತ್ತಿ, ಹುಟ್ಟು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಲು: ಬಹಳ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಹೊಯ್ಲು: ಏಟು, ಹೊಡೆತ; ಮುಳುಗು: ಮಿಂದು; ಏಳು: ಮೇಲೇಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ನೆಲನನ್+ಈ+ ಚಂದ್ರ +ಸೂರ್ಯ +ಕೃ
ಶಾನು +ತೇಜವನ್+ಈ+ ಸಮೀರಣನ್
ಈ+ನಭವ+ ನಾ+ ಕಾಣೆನ್+ಒಂದೇ +ಸಲಿಲ+ ಸೃಷ್ಟಿಯಲಿ
ಏನು +ಹೇಳುವೆನ್+ಎನ್ನ +ಚಿತ್ತ
ಗ್ಲಾನಿಯನು +ಬಲುತೆರೆಯ+ ಹೊಯ್ಲಿನೊಳ್
ಆನು+ ಮುಳುಗುತ್+ಏಳುತಿರ್ದೆನು+ ಭೂಪ +ಕೇಳೆಂದ

ಅಚ್ಚರಿ:
(೧) ಪಂಚಭೂತಗಳು ನೀರಿನಲ್ಲಿ ಮುಳುಗಿದವು ಎಂದು ಹೇಳುವ ಪರಿ – ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ

ಪದ್ಯ ೧೫: ಯುಧಿಷ್ಠಿರನೇಕೆ ದುಃಖಪಡುತ್ತಿದ್ದನು?

ಅರಸನತಿ ಸಂತೋಷಮಯ ಸಾ
ಗರದಿ ಮುಳುಗುವನೊಮ್ಮೆ ನಿಮಿಷಕೆ
ನರನ ವಿರಹದ ದುಃಖ ಸಾಗರದೊಳಗೆ ಸೈಗೆಡೆವ
ಪರಮ ಋಷಿಗಳ್ ಮಧುರ ವಚನೋ
ತ್ತರಕೆ ತಿಳಿವನದೊಮ್ಮೆ ಪುನರಪಿ
ಮರುಳಹನು ಫಲುಗುಣನ ನೆನೆನೆನೆದರಸ ಕೇಳೆಂದ (ಅರಣ್ಯ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಒಮ್ಮೆ ಸಂತೋಷದ ಸಾಗರದಲ್ಲಿ ಮುಳುಗಿರುತ್ತಿದ್ದನು, ಮತ್ತೊಮ್ಮೆ ಅರ್ಜುನನ ವಿಯೋಗದ ದುಃಖವನ್ನು ತಾಳಲಾರದೆ ದುಗುಡ ಸಾಗರದಲ್ಲಿ ಮುಳುಗಿರುತ್ತಿದ್ದನು. ಋಷಿಗಳ ಬೋಧನೆಯಿಂದ ಒಮ್ಮೆ ಸ್ಥಿರವಾಗಿರುವನು, ಮತ್ತೊಮ್ಮೆ ಅರ್ಜುನನನ್ನು ನೆನೆದು ಹುಚ್ಚನಂತಾಗಿರುತ್ತಿದ್ದನು.

ಅರ್ಥ:
ಅರಸ: ರಾಜ; ಅತಿ: ತುಂಬ; ಸಂತೋಷ: ಸಂತಸ, ಖುಷಿ; ಸಾಗರ: ಸಮುದ್ರ; ಮುಳುಗು: ನೀರಿನಲ್ಲಿ ಮೀಯು, ಮುಚ್ಚಿಹೋಗು; ನಿಮಿಷ: ಕಾಲ ಪ್ರಮಾಣ; ನರ: ಅರ್ಜುನ; ವಿರಹ: ಅಗಲಿಕೆ; ದುಃಖ: ದುಗುಡ; ಸೈಗೆಡೆ:ಅಡ್ಡಬೀಳು, ನಮಸ್ಕರಿಸು; ಪರಮ: ಶ್ರೇಷ್ಠ; ಋಷಿ: ಮುನಿ; ಮಧುರ: ಸಿಹಿ; ವಚನ: ನುಡಿ; ಉತ್ತರ: ಮರುನುಡಿ, ಜವಾಬು; ಪುನರಪಿ: ಮತ್ತೆ; ಮರುಳ: ಹುಚ್ಚ; ಫಲುಗುಣ: ಅರ್ಜುನ; ನೆನೆದು: ಜ್ಞಾಪಿಸಿಕೊಳ್ಳು; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಅತಿ +ಸಂತೋಷಮಯ +ಸಾ
ಗರದಿ+ ಮುಳುಗುವನ್+ಒಮ್ಮೆ +ನಿಮಿಷಕೆ
ನರನ +ವಿರಹದ +ದುಃಖ +ಸಾಗರದೊಳಗೆ +ಸೈಗೆಡೆವ
ಪರಮ+ ಋಷಿಗಳ+ ಮಧುರ +ವಚನೋ
ತ್ತರಕೆ +ತಿಳಿವನದ್+ಒಮ್ಮೆ +ಪುನರಪಿ
ಮರುಳಹನು+ ಫಲುಗುಣನ+ ನೆನೆನೆನೆದ್+ಅರಸ +ಕೇಳೆಂದ

ಅಚ್ಚರಿ:
(೧) ನರ, ಫಲುಗುಣ – ಅರ್ಜುನನ ಹೆಸರುಗಳು