ಪದ್ಯ ೪೮: ದ್ರೋಣನು ಪಾಂಚಾಲ ಸೈನ್ಯವನ್ನು ಹೇಗೆ ನಾಶ ಮಾಡಿದನು?

ಆರ ನೆರವಿಯೊಳಂಧಕಾರದ
ಭಾರವನು ರವಿ ಗೆಲುವನಿನ್ನೀ
ವೈರಿಬಲಭಂಜನಕೆ ಗುರು ಹಂಗಹನೆ ಕೆಲಬಲಕೆ
ಭೂರಿ ರಿಪುಚತುರಂಗಬಲಸಂ
ಹಾರದಲಿ ಒರವೆದ್ದ ರಕುತದ
ಪೂರದಲಿ ಮುಳುಗಿದರು ಪಾಂಚಾಲಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೮ ಪದ್ಯ)

ತಾತ್ಪರ್ಯ:
ಸೂರ್ಯನು ಯಾರ ಸಹಾಯದಿಂದ ಕತ್ತಲನ್ನು ಗೆಲ್ಲುತ್ತಾನೆ? ಶತ್ರುಸೈನ್ಯ ಸಂಹಾರಕ್ಕೆ ದ್ರೋಣನು ಇನ್ನೊಬ್ಬರ ಹಂಗಿಗೊಳಗಾಗುವನೇ? ಪಾಂಚಾಲ ಸೈನ್ಯವನ್ನು ದ್ರೋಣನು ಸಂಹರಿಸಲು ರಕ್ತದ ತೊರೆ ಹರಿದು ಪಾಂಚಾಲ ನಾಯಕರು ಮುಳುಗಿ ಹೋದರು.

ಅರ್ಥ:
ನೆರವು: ಸಹಾಯ; ಅಂಧಕಾರ: ಕತ್ತಲೆ; ಭಾರ: ಹೊರೆ; ರವಿ: ಸೂರ್ಯ; ಗೆಲುವು: ಜಯ; ವೈರಿ: ಶತ್ರು; ಬಲ: ಸೈನ್ಯ; ಭಂಜನ: ನಾಶಕಾರಿ, ಒಡೆಯುವುದು; ಗುರು: ಆಚಾರ್ಯ; ಹಂಗು: ದಾಕ್ಷಿಣ್ಯ, ಆಭಾರ; ಕೆಲಬಲ: ಅಕ್ಕಪಕ್ಕ, ಎಡಬಲ; ಭೂರಿ: ಹೆಚ್ಚು, ಅಧಿಕ; ರಿಪು: ವೈರಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಸಂಹಾರ: ನಾಶ, ಕೊನೆ; ಎದ್ದು: ಮೇಲೇಳು; ರಕುತ: ನೆತ್ತರು; ಪೂರ: ಭರ್ತಿ; ಮುಳುಗು: ನೀರಿನಲ್ಲಿ ಮೀಯು, ಕಾಣದಾಗು; ಆದಿ: ಮುಂತಾದ; ನಾಯಕ: ಒಡೆಯ;

ಪದವಿಂಗಡಣೆ:
ಆರ +ನೆರವಿಯೊಳ್+ಅಂಧಕಾರದ
ಭಾರವನು +ರವಿ +ಗೆಲುವನ್+ಇನ್ನೀ
ವೈರಿಬಲ+ಭಂಜನಕೆ +ಗುರು +ಹಂಗಹನೆ+ ಕೆಲಬಲಕೆ
ಭೂರಿ +ರಿಪು+ಚತುರಂಗ+ಬಲ+ಸಂ
ಹಾರದಲಿ +ಒರವೆದ್ದ+ ರಕುತದ
ಪೂರದಲಿ +ಮುಳುಗಿದರು +ಪಾಂಚಾಲಾದಿ +ನಾಯಕರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಆರ ನೆರವಿಯೊಳಂಧಕಾರದ ಭಾರವನು ರವಿ ಗೆಲುವನ್
(೨) ಯುದ್ಧದ ಭೀಕರತೆ – ರಿಪುಚತುರಂಗಬಲಸಂಹಾರದಲಿ ಒರವೆದ್ದ ರಕುತದ ಪೂರದಲಿ ಮುಳುಗಿದರು

ಪದ್ಯ ೧೨: ಬೆಳಗಿನ ಜಾವ ಹೇಗೆ ಕಂಡಿತು?

ಎಲೆ ಮಿಡುಕದೆರಡೊಡ್ಡು ಲೆಪ್ಪದ
ಬಲದವೊಲು ನಿದ್ರಾಸಮುದ್ರವ
ಮುಳುಗಿ ಝೊಮ್ಮಿನ ಝಾಡಿಯಲಿ ಝೊಂಪಿಸಿದುದರೆ ಜಾವ
ತಳಿತ ಮರವೆಯ ಪಾಳೆಯದ ಕ
ಗ್ಗೊಲೆಗೆ ಕವಿವ ಗುರೂಪದೇಶಾ
ವಳಿಯವೊಲು ಮೈದೋರುದುವು ಹಿಮರುಚಿಯ ರಶ್ಮಿಗಳು (ದ್ರೋಣ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರ್ಧಯಾಮದ ಕಾಲ, ಎರಡೂ ಪಡೆಗಳು ಗೊಂಬೆಗಳಂತೆ ನಿದ್ದೆಯಲ್ಲಿ ಮುಳುಗಿದ್ದವು. ತಾನಾರೆಂಬ ಅಜ್ಞಾನದ ಪಾಳೆಯಕ್ಕೆ ಗುರೂಪದೇಶದ ದಾಳಿ ಕವಿಯುವಂತೆ ಬೆಳದಿಂಗಳು ಮೈದೋರಿತು.

ಅರ್ಥ:
ಲೆಪ್ಪ: ಬಳಿಯುವ ವಸ್ತು, ಲೇಪನ, ಎರಕ; ಬಲ: ಬಿಗಿ, ಗಟ್ಟಿ; ನಿದ್ರೆ: ಶಯನ; ಸಮುದ್ರ: ಸಾಗರ; ಮುಳುಗು: ಮಿಂದು; ಝೊಮ್ಮು:ಪುಳುಕ; ಝಾಡಿ: ಕಾಂತಿ; ಝೊಂಪಿಸು: ನಿದ್ರಿಸು; ಜಾವ: ಗಳಿಗೆ, ಸಮಯ; ತಳಿತ: ಚಿಗುರಿದ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಪಾಳೆಯ: ಬೀಡು, ಶಿಬಿರ; ಕಗ್ಗೊಲೆ: ಹತ್ಯೆ; ಕವಿ: ಆವರಿಸು; ಗುರು: ಆಚಾರ್ಯ; ಉಪದೇಶ: ಬೋಧಿಸುವುದು; ಆವಳಿ: ಸಾಲು; ಮೈದೋರು: ಕಾಣಿಸು; ಹಿಮ: ಮಂಜಿನ ಹನಿ; ರಶ್ಮಿ: ಕಿರಣ;

ಪದವಿಂಗಡಣೆ:
ಎಲೆ +ಮಿಡುಕದ್+ಎರಡ್+ಒಡ್ಡು +ಲೆಪ್ಪದ
ಬಲದವೊಲು +ನಿದ್ರಾ+ಸಮುದ್ರವ
ಮುಳುಗಿ +ಝೊಮ್ಮಿನ +ಝಾಡಿಯಲಿ +ಝೊಂಪಿಸಿದುದರೆ+ ಜಾವ
ತಳಿತ +ಮರವೆಯ +ಪಾಳೆಯದ +ಕ
ಗ್ಗೊಲೆಗೆ +ಕವಿವ +ಗುರು+ಉಪದೇಶ
ಆವಳಿಯವೊಲು +ಮೈದೋರುದುವು +ಹಿಮರುಚಿಯ +ರಶ್ಮಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಲೆ ಮಿಡುಕದೆರಡೊಡ್ಡು ಲೆಪ್ಪದ ಬಲದವೊಲು; ತಳಿತ ಮರವೆಯ ಪಾಳೆಯದ ಕಗ್ಗೊಲೆಗೆ ಕವಿವ ಗುರೂಪದೇಶಾವಳಿಯವೊಲು

ಪದ್ಯ ೧೦: ದುರ್ಯೋಧನನು ರೋಮಾಂಚನಗೊಂಡು ಏನು ಹೇಳಿದ?

ಮೂಡಿಗೆಯೊಳಂಬುಗಿದು ತಿರುವಿಗೆ
ಹೂಡಲೀ ಹದನಾಯ್ತು ಚಾಪದೊ
ಳೋಡಿಸಿದಡೇನಹುದು ಹರಹರ ಹರ ಮಹಾಸ್ತ್ರವಲೆ
ನೋಡಿರೈ ಗುರುಸುತಕೃಪಾದಿಗ
ಳೋಡದಿರಿ ನೀವೆನುತ ಪುಳಕದ
ಬೀಡಿನಲಿ ಮೈ ಮುಳುಗಿ ತೂಗಾಡಿದನು ಕುರುರಾಯ (ಕರ್ಣ ಪರ್ವ, ೨೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಬತ್ತಳಿಕೆಯಿಂದ ಬಾಣವನ್ನು ತೆಗೆದು ಬಿಲ್ಲಿನಲ್ಲಿ ಹೂಡುವಷ್ಟರಲ್ಲಿ ಇದೇನು ಸ್ಥಿತಿಯಾಯಿತು, ಈ ಬಾಣವನ್ನು ಎಳೆದು ಬಿಟ್ಟರೆ ಏನಾಗುವುದೋ ಇದು ಮಹಾಸ್ತ್ರವಲ್ಲವೇ ಶಿವ ಶಿವಾ ಎನ್ನುತ್ತಾ ದುರ್ಯೋಧನನು ಕೃಪಚಾರ್ಯರು, ಅಶ್ವತ್ಥಾಮರನ್ನು ಓಡಬೇಡಿ ಇದನ್ನು ನೋಡಿರಿ ಎಂದು ರೋಮಾಂಚನಗೊಂಡು ಪುಳಕಜಲದಲ್ಲಿ ಮುಳುಗಿ ಹೇಳಿದನು.

ಅರ್ಥ:
ಮೂಡಿಗೆ: ಬಾಣಗಳನ್ನಿಡುವ ಚೀಲ, ಬತ್ತಳಿಕೆ; ಅಂಬು: ಬಾಣ; ಉಗಿದು: ಹೊರಹಾಕು; ತಿರುಗು: ಬಾಗು, ಅಲೆದಾಡು, ಸುತ್ತು; ಹೂಡು: ಅಣಿಗೊಳಿಸು; ಹದ: ಸರಿಯಾದ ಸ್ಥಿತಿ; ಚಾಪ: ಬಿಲ್ಲು; ಓಡಿಸು: ಬಿಡು; ಹರಹರ: ಮಹಾದೇವ; ಮಹಾಸ್ತ್ರ: ದೊಡ್ಡ/ಶ್ರೇಷ್ಠವಾದ ಆಯುಧ; ನೋಡು: ವೀಕ್ಷಿಸು; ಗುರುಸುತ: ಅಶ್ವತ್ಥಾಮ; ಆದಿ: ಮುಂತಾದ; ಸುತ: ಮಗ; ಓಡು: ಪಲಾಯನ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಬೀಡು: ವಸತಿ, ವಾಸ್ತವ್ಯ; ಮೈ: ತನು; ಮುಳುಗು: ಅದ್ದು, ತೋಯ್ದು; ತೂಗಾಡು: ಅಲ್ಲಾಡು; ರಾಯ: ರಾಜ;

ಪದವಿಂಗಡಣೆ:
ಮೂಡಿಗೆಯೊಳ್+ಅಂಬ್+ಉಗಿದು +ತಿರುವಿಗೆ
ಹೂಡಲೀ+ ಹದನಾಯ್ತು+ ಚಾಪದೊಳ್
ಓಡಿಸಿದಡ್+ಏನಹುದು +ಹರಹರ +ಹರ+ ಮಹಾಸ್ತ್ರವಲೆ
ನೋಡಿರೈ +ಗುರುಸುತ+ಕೃಪಾದಿಗಳ್
ಓಡದಿರಿ +ನೀವ್+ಎನುತ +ಪುಳಕದ
ಬೀಡಿನಲಿ+ ಮೈ +ಮುಳುಗಿ+ ತೂಗಾಡಿದನು +ಕುರುರಾಯ

ಅಚ್ಚರಿ:
(೧) ರೋಮಾಂಚನಗೊಂಡ ಸ್ಥಿತಿಯ ವರ್ಣನೆ – ಪುಳಕದ ಬೀಡಿನಲಿ ಮೈ ಮುಳುಗಿ ತೂಗಾಡಿದನು ಕುರುರಾಯ

ಪದ್ಯ ೩೪: ದ್ರೌಪದಿಯು ಅರ್ಜುನನ ಬಳಿ ಬಂದಾಗ ಅವಳಿಲ್ಲಿ ಮೂಡಿದ ಭಾವನೆಗಳಾವುವು?

ಲಲಿತ ಮಧುರಾಪಾಂಗದಲಿ ಮು
ಕ್ಕುಳಿಸಿ ತಣಿಯವು ಕಂಗಳುಬ್ಬಿದ
ಪುಳಕ ಜಲದಲಿ ಮುಳುಗಿ ಮೂಡಿತು ಮೈ ನಿತಂಬಿನಿಯ
ತಳಿತ ಲಜ್ಜಾಭರಕೆ ಕುಸಿದ
ವ್ವಳಿಸಿತಂತಃಕರಣವಾಂಗಿಕ
ಲುಳಿತ ಸಾತ್ವಿಕ ಭಾವವವಗಡಿಸಿತ್ತು ಮಾನಿನಿಯ (ಆದಿ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸುಂದರವಾದ ಮಧುರಭಾವದಿಂದ ಕೂಡಿದ ಕಡೆಗಣ್ಣಿನನೋಟದಿಂದ ಅರ್ಜುನನನ್ನು ಎಷ್ಟು ಬಾರಿ ನೋಡಿದರು ಆ ಕಣ್ಣುಗಳಿಗೆ ಅದು ತಣಿಯಲೇಯಿಲ್ಲ. ರೋಮಾಂಚನಗೊಂಡ ಅವಳ ಸ್ವೇದಗಳಿಂದ ಆಕೆಯ ಮೈ ಒದ್ದೆಯಾಯಿತು. ನಾಚಿಕೆಯ ಭಾರಕ್ಕೆ ಅವಳ ಮನಸ್ಸು ಕುಗ್ಗಿತು, ಮನಸ್ಸು ಒಳ್ಳೆಯ ಭಾವನೆಗಳಿಂದ ಆವೃತಗೊಂಡಿತು.

ಅರ್ಥ:
ಲಲಿತ: ಚೆಲುವು, ಸೌಂದರ್ಯ; ಮಧುರ: ಸಿಹಿಯಾದ, ಸವಿ; ಅಪಾಂಗ: ಕಡೆಗಣ್ಣು; ಮುಕ್ಕುಳಿಸಿ: ಹೊರಹೊಮ್ಮು; ತಣಿ:ತೃಪ್ತಿಹೊಂದು, ಸಮಾಧಾನಹೊಂದು; ಕಂಗಳು: ಕಣ್ಣುಗಳು; ಉಬ್ಬಿದ: ಅಗಲವಾದ; ಪುಳಕ: ರೋಮಾಂಚನ; ಜಲ: ನೀರು; ಮುಳುಗು: ಒಳಸೇರು, ಕಾಣದಾಗು; ಮೂಡು: ತೋರು; ಮೈ: ಅಂಗ; ನಿತಂಬಿನಿ: ಚೆಲುವೆ; ತಳಿತ: ಹೊಂದು; ಲಜ್ಜ: ನಾಚಿಕೆ; ಭರ:ತುಂಬ; ಕುಸಿ: ಕೆಳಗೆ ಬೀಳು; ಅವ್ವಳಿಸು: ಅವ್ವಳಿಸು, ನುಗ್ಗು, ಪೀಡಿಸು; ಅಂತಃಕರಣ: ಮನಸ್ಸು, ಚಿತ್ತವೃತ್ತಿ; ಆಂಗಿಕ:ಶರೀರಕ್ಕೆ ಸಂಬಂಧಿಸಿದ; ಉಳಿ:ಬಿಡು; ಸಾತ್ವಿಕ: ಒಳ್ಳೆಯ ಗುಣ; ಭಾವ: ಸಂವೇದನೆ, ಭಾವನೆ; ಅವಗಡಿಸು: ವ್ಯಾಪಿಸು, ಹರಡು; ಮಾನಿನಿ: ಹೆಂಗಸು, ಚೆಲುವೆ;

ಪದವಿಂಗಡಣೆ:
ಲಲಿತ +ಮಧುರ+ಅಪಾಂಗದಲಿ+ ಮು
ಕ್ಕುಳಿಸಿ+ ತಣಿಯವು +ಕಂಗಳ್+ಉಬ್ಬಿದ
ಪುಳಕ+ ಜಲದಲಿ +ಮುಳುಗಿ +ಮೂಡಿತು +ಮೈ +ನಿತಂಬಿನಿಯ
ತಳಿತ+ ಲಜ್ಜಾ+ಭರಕೆ+ ಕುಸಿದ
ವ್ವಳಿಸಿತ್+ಅಂತಃಕರಣವ್+ಆಂಗಿಕಲ್
ಉಳಿತ+ ಸಾತ್ವಿಕ+ ಭಾವವ್+ಅವಗಡಿಸಿತ್ತು +ಮಾನಿನಿಯ

ಅಚ್ಚರಿ:
(೧) ಮಾನಿನಿ, ಲಲಿತ – ಹೆಂಗಸನ್ನು ವರ್ಣಿಸುವ ಪದ, ಪದ್ಯದ ಮೊದಲ ಮತ್ತು ಕೊನೆ ಪದ
(೨) ಪ್ರಿಯನನ್ನು ನೋಡಿದಾಗ ಮೈಯಲ್ಲಿ ಮೂಡುವ ಭಾವನೆಗಳ ಸ್ಪಷ್ಟ ಚಿತ್ರಣ
(೩) ಮುಳುಗಿ, ಅವ್ವಳಿಸಿ, ಮೂಡು, ಮುಕ್ಕುಳಿಸಿ, ತಣಿ,ಅವಗಡಿಸು – ಭಾವನೆಗಳನ್ನು ಇಮ್ಮಡಿಗೊಳಿಸುವ ಪದಗಳ ಬಳಕೆ