ಪದ್ಯ ೧೦೪: ಭೀಷ್ಮಾದಿಗಳ ಅಸಹಾಯಕತೆ ಹೇಗಿತ್ತು?

ಮುರುಹಿದರು ಮುಸುಡುಗಳ ಮಿಗೆ ನೀ
ರೊರೆವ ಕಂಗಳಲಕಟಕಟ ನಿ
ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ
ಕರಗಿದರು ಕಂದಿದರು ಮಮ್ಮಲ
ಮರುಗಿದರು ಭೀಷ್ಮಾದಿಗಳು ಜ
ರ್ಝರಿತರಾದರು ತಡೆಯಲಾರದೆ ಖಳನ ದುಷ್ಕೃತವ (ಸಭಾ ಪರ್ವ, ೧೫ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಈ ದುಷ್ಕೃತ್ಯವನ್ನು ನೋಡಲಾರದೆ ಭೀಷ್ಮಾದಿಗಳು ಮುಖವನ್ನು ಬೇರೆಯಡೆಗೆ ತಿರುಗಿಸಿದರು, ಅವರ ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತಿತ್ತು, ಅಯ್ಯಯ್ಯೋ ಈ ನಿಷ್ಠೂರ ಇದರಿಂದ ಬರುವ ಅಪಕೀರ್ತಿ, ಅಪಯಶಸ್ಸು, ಅನುಚಿತ ಕೃತ್ಯಗಳು ಏಕೆ ಎಂದು ಕೊರಗಿ, ಕಳಾಹೀನರಾಗಿ, ಬಹಳ ಮರುಗಿದರು.

ಅರ್ಥ:
ಮುರುಹು: ತಿರುಗಿಸು; ಮುಸುಡು: ಮುಖ; ಮಿಗೆ: ಮತ್ತು, ಅಧಿಕ; ನೀರು: ಜಲ; ಒರೆ: ಬಳಿ, ಸವರು; ಕಂಗಳು: ನಯನ; ಅಕಟಕಟ: ಅಯ್ಯಯ್ಯೋ; ನಿಷ್ಠುರ: ಕಠಿಣವಾದ; ಅಪಕೀರ್ತಿ: ಅಪಯಶಸ್ಸು, ಅಪಖ್ಯಾತಿ; ಅನುಚಿತ: ಸರಿಯಲ್ಲದ; ಕರಗು: ಕನಿಕರ ಪಡು; ಕಂದು:ಕಳಾಹೀನ; ಮಮ್ಮಲ: ಅತಿಶಯವಾಗಿ, ವಿಶೇಷವಾಗಿ; ಮರುಗು: ತಳಮಳ, ಸಂಕಟ; ಆದಿ: ಮುಂತಾದ; ಜರ್ಝರಿತ: ಭಗ್ನ, ಚೂರು; ತಡೆ: ನಿಲ್ಲಿಸು; ಖಳ: ದುಷ್ಟ; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಮುರುಹಿದರು+ ಮುಸುಡುಗಳ +ಮಿಗೆ +ನೀರ್
ಒರೆವ +ಕಂಗಳಲ್+ಅಕಟಕಟ +ನಿ
ಷ್ಠುರವ್+ಇದೇಕ್+ಅಪಕೀರ್ತಿ+ಏಕ್+ಅನುಚಿತವ್+ಇದೇದ್+ಎನುತ
ಕರಗಿದರು+ ಕಂದಿದರು +ಮಮ್ಮಲ
ಮರುಗಿದರು +ಭೀಷ್ಮಾದಿಗಳು +ಜ
ರ್ಝರಿತರಾದರು +ತಡೆಯಲಾರದೆ+ ಖಳನ +ದುಷ್ಕೃತವ

ಅಚ್ಚರಿ:
(೧) ಭೀಷ್ಮಾದಿಗಳ ನೋವಿನ ಚಿತ್ರಣ – ಕರಗಿದರು ಕಂದಿದರು ಮಮ್ಮಲಮರುಗಿದರು ಭೀಷ್ಮಾದಿಗಳು ಜರ್ಝರಿತರಾದರು
(೨) ಮ ಕಾರದ ತ್ರಿವಳಿ ಪದ – ಮುರುಹಿದರು ಮುಸುಡುಗಳ ಮಿಗೆ
(೩) ಮೂರನೇ ಸಾಲು ಒಂದೇ ಪದವಾಗಿ ರಚಿಸಿರುವುದು – ಷ್ಠುರವಿದೇಕಪಕೀರ್ತಿಯೇಕನುಚಿತವಿದೇಕೆನುತ