ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ

ಪದ್ಯ ೨೧: ಅರ್ಜುನನೆದುರು ಎಷ್ಟು ಸೈನ್ಯ ನಾಶವಾಯಿತು?

ಅಳಿದುದೈನೂರರಸುಗಳು ಮು
ಮ್ಮುಳಿತವಾಯ್ತೈವತ್ತು ಸಾವಿರ
ಬಲುಗುದುರೆ ನುಗ್ಗಾದುದೊಬೈನೂರು ಭದ್ರಗಜ
ಅಳಿದುದಕೆ ಕೊಲೆಕೊತ್ತುವಡೆದ
ಗ್ಗಳ ಪದಾತಿಗೆ ಗಣನೆಯೆಲ್ಲೀ
ಬಲದ ಮೈವಶವವರ ಕೈವಶವೇನು ಹೊಸತೆಂದ (ದ್ರೋಣ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಐನೂರು ರಾಜರು, ಐವತ್ತು ಸಾವಿರ ಕುದುರೆಗಳು, ಒಂಬೈನೂರು ಆನೆಗಳು ಪ್ರಾಣ ಬಿಟ್ಟವು, ಸತ್ತ ಪದಾತಿಗಳ, ಗಾಯಗೊಂಡವರ ಲೆಕ್ಕ ಹೇಳುವವರಾರು? ಕೌರವರ ಮೈವಶ, ಪಾಂಡವರ ಕೈಚಳಕ ಹೊಸದಾಗಿ ಹೇಳಬೇಕೇ ಎಂದು ಸಂಜಯನು ಕೇಳಿದನು.

ಅರ್ಥ:
ಅಳಿ: ನಾಶ; ಅರಸು: ರಾಜ; ಮುಮ್ಮುಳಿತ: ರೂಪಗೆಟ್ಟು ನಾಶವಾಗು; ಸಾವಿರ: ಸಹಸ್ರ; ಬಲು: ಶಕ್ತಿ; ಕುದುರೆ: ಅಶ್ವ; ನುಗ್ಗು: ತಳ್ಳು; ಭದ್ರ: ಗಟ್ಟಿ; ಗಜ: ಆನೆ; ಕೊಲೆ: ಸಾವು; ಅಗ್ಗಳ: ಶ್ರೇಷ್ಠ; ಪದಾತಿ: ಸೈನಿಕ; ಗಣನೆ: ಎಣಿಕೆ; ಬಲ: ಸೈನ್ಯ; ಮೈ: ತನು, ದೇಹ; ವಶ: ಅಧೀನ, ಅಂಕೆ; ಕೈ: ಕರ, ಹಸ್ತ; ಹೊಸತು: ನವೀನ;

ಪದವಿಂಗಡಣೆ:
ಅಳಿದುದ್+ಐನೂರ್+ಅರಸುಗಳು+ ಮು
ಮ್ಮುಳಿತವಾಯ್ತ್+ಐವತ್ತು +ಸಾವಿರ
ಬಲು+ಕುದುರೆ +ನುಗ್ಗಾದುದ್+ಒಬೈನೂರು +ಭದ್ರಗಜ
ಅಳಿದುದಕೆ +ಕೊಲೆಕೊತ್ತುವಡೆದ್
ಅಗ್ಗಳ +ಪದಾತಿಗೆ +ಗಣನೆಯೆಲ್ಲೀ
ಬಲದ +ಮೈವಶವ್+ಅವರ+ ಕೈವಶವೇನು+ ಹೊಸತೆಂದ

ಅಚ್ಚರಿ:
(೧) ಮೈವಶ, ಕೈವಶ – ಪದದ ಬಳಕೆ
(೨) ಅಳಿ, ಮುಮ್ಮುಳಿ, ನುಗ್ಗಾದುದು – ನಾಶವಾದವು ಎಂದು ಹೇಳುವ ಪದಗಳು

ಪದ್ಯ ೧೮: ಭೀಮನನ್ನು ಎದುರಿಸಲು ಯಾರು ಎದುರಾದರು?

ಹಿಂಡೊಡೆದು ಗಜಸೇನೆ ಮುಮ್ಮುಳಿ
ಗೊಂಡು ಮುರಿದುದು ಮುಳಿದು ಭೀಮನ
ಗಂಡುಗೆಡಿಸುವರಿಲ್ಲ ಕೌರವ ದಳದ ಸುಭಟರಲಿ
ಅಂಡುಗೊಂಡುದು ಬಿರುದುಗಿರುದಿನ
ಗಂಡರಕಟಕಟೆನುತ ನಿಜ ಕೋ
ದಂಡವನು ದನಿಮಾಡುತಶ್ವತ್ಥಾಮನಿದಿರಾದ (ಕರ್ಣ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮೂವತ್ತು ಸಾವಿರ ಗಜಪಡೆಯನ್ನು ಸೀಳಿ, ಚೆಲ್ಲಾಪಿಲ್ಲಿಯಾಗುವಂತೆ ಮಾಡಿ ಪರಾಕ್ರಮವನ್ನು ಮೆರೆದ ಭೀಮನನ್ನು ನೋಡಿದ ಅಶ್ವತ್ಥಾಮನು, ಗಜಸೇನೆಯು ಹಿಂಡೊಡೆದು ಮೂರು ಬಾರಿ ತಿರುಗಿ ಮುರಿದುಹೋಯಿತು. ಕೌರವನ ಸೇನೆಯ ಸುಭಟರಲ್ಲಿ ಭೀಮನ ಪರಾಕ್ರಮವನ್ನು ತಗ್ಗಿಸುವವರಾರೂ ಇಲ್ಲ, ಈ ಬಿರುದು ಗಿರುದುಗಳುಳ್ಳ ಪರಾಕ್ರಮಿಗಳು ಬೆನ್ನು ತೋರಿಸಿ ಓಡಿಹೋದರು ಎಂದುಕೊಂಡು ತನ್ನ ಬಿಲ್ಲನ್ನು ಹಿಡಿದು ಅಶ್ವತ್ಥಾಮನು ಭೀಮನಿಗೆ ಎದುರಾದನು.

ಅರ್ಥ:
ಹಿಂಡು: ಗುಂಪು; ಒಡೆದು: ಸೀಳು, ಬಿರುಕು; ಗಜ: ಆನೆ; ಸೇನೆ: ಸೈನ್ಯ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಮುರಿ: ಸೀಳು; ಮುಳಿ: ಸಿಟ್ಟು, ಕೋಪ; ಗಂಡುಗೆಡಿಸು: ಎದುರಿಸು; ದಳ: ಸೈನ್ಯ; ಸುಭಟ: ಶ್ರೇಷ್ಠವಾದ ಸೈನಿಕರು, ಪರಾಕ್ರಮಿ; ಅಂಡುಗೊಂಡು: ಬೆನ್ನುತೋರಿಸು; ಬಿರುದು: ಗೌರವಸೂಚಕ ಪದ; ಗಂಡರು: ಶೂರರು; ಅಕಟ: ಅಯ್ಯೋ; ನಿಜ: ದಿಟ, ನೈಜ; ಕೋದಂಡ: ಬಿಲ್ಲು; ದನಿ: ಶಬ್ದ; ಇದಿರು: ಎದುರು;

ಪದವಿಂಗಡಣೆ:
ಹಿಂಡು+ಒಡೆದು +ಗಜಸೇನೆ+ ಮುಮ್ಮುಳಿ
ಗೊಂಡು +ಮುರಿದುದು +ಮುಳಿದು +ಭೀಮನ
ಗಂಡುಗೆಡಿಸುವರಿಲ್ಲ+ ಕೌರವ+ ದಳದ+ ಸುಭಟರಲಿ
ಅಂಡುಗೊಂಡುದು +ಬಿರುದುಗಿರುದಿನ
ಗಂಡರ್+ಅಕಟಕಟ+ಎನುತ +ನಿಜ +ಕೋ
ದಂಡವನು +ದನಿಮಾಡುತ್+ಅಶ್ವತ್ಥಾಮನ್+ಇದಿರಾದ

ಅಚ್ಚರಿ:
(೧) ಆಡು ಭಾಷೆಯ ಪ್ರಯೋಗ – ಬಿರುದುಗಿರುದು, ಅಂಡುಗೊಂಡು
(೨) ಮ ಕಾರದ ಸಾಲು ಪದಗಳು – ಮುಮ್ಮುಳಿಗೊಂಡು ಮುರಿದುದು ಮುಳಿದು