ಪದ್ಯ ೨೬: ಋಷಿಮುನಿಗಳು ಯಾವ ಅಭಿಪ್ರಾಯಕ್ಕೆ ಬಂದರು?

ಅರಸನಪಗತನಾದನಾ ನೃಪ
ನರಸಿ ಬಾಲಕಿ ಮಕ್ಕಳೈವರು
ಭರತ ಕುಲಜರು ನಾವು ತಪಸಿಗಳಿರ್ಪುದಾರಣ್ಯ
ಅರಿಗಳಾ ರಾಕ್ಷಸರು ನಾವಿ
ನ್ನಿರಿಸುವುದು ಮತವಲ್ಲ ಹಸ್ತಿನ
ಪುರದೊಳೊಪ್ಪಿಸಿ ಬಹುದು ಮತವೆಂದುದು ಮುನಿಸ್ತೋಮ (ಆದಿ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಆಶ್ರಮದಲ್ಲಿದ್ದ ಋಷಿಗಳು, ಅರಸನು ಸ್ವರ್ಗಸ್ಥನಾದನು. ಅವನ ಪತ್ನಿಯು ಇನ್ನೂ ಬಾಲಕಿ, ಐವರು ಮಕ್ಕಳು ಭರತಕುಲದವರು, ನಾವು ನೋಡಿದರೆ ತಪಸ್ವಿಗಳು. ಇರುವ ಜಾಗವು ಅರಣ್ಯ. ರಾಕ್ಷಸರು ನಮ್ಮ ಶತ್ರುಗಳು, ಆದುದರಿಂದ ಇವರನ್ನು ಇಲ್ಲಿಟ್ಟುಕೊಳ್ಳುವುದು ಸರಿಯಲ್ಲ. ಇವರನ್ನು ಹಸ್ತಿನಾಪುರಕ್ಕೆ ಕರೆದೊಯ್ದು ಒಪ್ಪಿಸಿಬರುವುದು ಸರಿ ಎಂಬ ಅಭಿಪ್ರಾಯಕ್ಕೆ ಬಂದರು.

ಅರ್ಥ:
ಅರಸ: ರಾಜ; ಅಪಗತ: ಮರಣ ಹೊಂದು, ಸ್ವರ್ಗಸ್ಥನಾಗು; ನೃಪ: ರಾಜ; ಅರಸಿ: ರಾಣಿ; ಬಾಲಕಿ: ಚಿಕ್ಕ ಹುಡುಗಿ; ಕುಲ: ವಂಶ; ತಪಸಿ: ಋಷಿ; ಅರಣ್ಯ: ಕಾಡು;ಅರಿ: ವೈರಿ; ರಾಕ್ಷಸ: ಅಸುರ; ಇರಿಸು: ನೆಲೆಸು; ಮತ: ವಿಚಾರ; ಒಪ್ಪು: ಸಮ್ಮತಿ; ಮತ: ವಿಚಾರ; ಮುನಿ: ಋಷಿ; ಸ್ತೋಮ: ಗುಂಪು;

ಪದವಿಂಗಡಣೆ:
ಅರಸನ್+ಅಪಗತನಾದನ್+ಆ+ ನೃಪನ್
ಅರಸಿ +ಬಾಲಕಿ +ಮಕ್ಕಳೈವರು
ಭರತ +ಕುಲಜರು +ನಾವು +ತಪಸಿಗಳ್+ಇರ್ಪುದ್+ಅರಣ್ಯ
ಅರಿಗಳಾ +ರಾಕ್ಷಸರು+ ನಾವಿನ್
ಇರಿಸುವುದು +ಮತವಲ್ಲ+ ಹಸ್ತಿನ
ಪುರದೊಳ್+ಒಪ್ಪಿಸಿ +ಬಹುದು +ಮತವೆಂದುದು +ಮುನಿಸ್ತೋಮ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಅಪಗತನಾದ ಪದದ ಪ್ರಯೊಗ
(೨) ಅರಸ, ನೃಪ – ಸಮಾನಾರ್ಥಕ ಪದ – ೧ ಸಾಲಿನ ಮೊದಲ ಹಾಗು ಕೊನೆ ಪದ
(೩) ಅರಸ, ಅರಸಿ – ಜೋಡಿ ಪದಗಳು

ಪದ್ಯ ೫: ಶೌನಕಾದಿಮುನಿಗಳು ಏಕೆ ಧನ್ಯರಾದೆವೆಂದು ಹೇಳಿದರು?

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ (ಆದಿ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ಶೌನಕಾದಿಮುನಿಗಳು, ಶಿವ ಶಿವಾ ಇದೆಂತಹ ಸುಕೃತ! ರೋಮಹರ್ಷಣಿಯೇ ಈ ಹಿಂದೆ ನಾವು ಮಾಡಿದ ಸೋಮಯಾಗವೇ ಮೊದಲಾದವುಗಳಲ್ಲಿ ಸೋಮಪಾನವನ್ನು ಮಾಡಿ ಬೆಳೆಸಿದ ಪುಣ್ಯವೃಕ್ಷಕ್ಕೆ ಮಹಾಭಾರತ ಕಥಾಮೃತವು ರಮಣೀಯವಾದ ಫಲವೇ ಸರಿ, ನಮ್ಮ ಪುಣ್ಯಕ್ಕೆ ಎಲ್ಲೆಯಿಲ್ಲ. ನಾವು ಧನ್ಯರಾದೆವೆಂದು ಮುನಿಗಳು ಹೇಳಿದರು.

ಅರ್ಥ:
ಪಾನ: ಕುಡಿಯುವಿಕೆ, ಕುಡಿತ; ಫಲ: ಪ್ರಯೋಜನ; ಅಮೃತ: ಸುಧೆ; ನಿಸ್ಸೀಮ: ಪರಿ ಮಿತಿಯಿಲ್ಲದುದು; ಪುಣ್ಯ: ಸದಾಚಾರ; ಧನ್ಯ: ಪುಣ್ಯವಂತ; ಸ್ತೋಮ: ಗುಂಪು; ಮುನಿ: ಋಷಿ;

ಪದವಿಂಗಡಣೆ:
ಹಾ +ಮಹಾದೇವ+ಆಯಿದೆಂತೈ
ರೋಮಹರ್ಷಣಿ+ ನಾವು +ಮಾಡಿದ
ಸೋಮಪಾನಾದಿಗಳ+ ಪುಣ್ಯಸ್ತೋಮ +ತರುಗಳಿಗೆ
ಈ +ಮಹಾಭಾರತ +ಕಥಾಮೃತ
ರಾಮಣೀಯಕ +ಫಲವಲಾ +ನಿ
ಸ್ಸೀಮ +ಪುಣ್ಯರು+ ಧನ್ಯರಾವ್+ಎಂದುದು +ಮುನಿಸ್ತೋಮ

ಅಚ್ಚರಿ:
(೧) ಪುಣ್ಯಸ್ತೋಮ, ಮುನಿಸ್ತೋಮ – ಸ್ತೋಮ ಪದದ ಬಳಕೆ

ಪದ್ಯ ೫೬: ಯುದ್ಧವನ್ನು ನೋಡಲು ಯಾರು ಬಂದರು?

ಅರಸ ಕೇಳಿವರಿಬ್ಬರುಬ್ಬಿನ
ಧುರದ ಥಟ್ಟಣೆ ಪಸರಿಸಿತು ಸುರ
ನರರನಾ ಸಮಯದಲಿ ಪೂರ್ವೋತ್ತರದ ದೆಸೆಯಿಂದ
ವರ ಮುನಿಸ್ತೋಮದ ನಡುವೆ ಕಂ
ಧರದ ಮುಸಲದ ವಿಮಳ ನೀಲಾಂ
ಬರದ ರಾಮನ ಸುಳಿವ ಕಂಡರು ಕೃಷ್ಣ ಪಾಂಡವರು (ಗದಾ ಪರ್ವ, ೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಇಬ್ಬರ ನಡುವೆ ಯುದ್ಧವು ಜೋರಾಯಿತು. ಇವರ ಯುದ್ಧವನು ದೇವತೆಗಳೂ, ಮನುಷ್ಯರೂ ನಿರೀಕ್ಷಿಸುತ್ತಿರುವ ಸಮಯದಲ್ಲಿ ಈಶಾನ್ಯದಿಕ್ಕಿನೀಂದ ಒನಕೆಯನ್ನು ಭುಜದ ಮೇಲಿಟ್ಟು ನೀಲಾಂಬರವನ್ನು ಧರಿಸಿ ಮುನಿಗಳ ಸಮೂಹದ ನಡುವೆ ಬಲರಾಮನು ಬರುತ್ತಿರುವುದನ್ನು ಕೃಷ್ಣನು ಪಾಂಡವರೂ ಕಂಡರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಉಬ್ಬು: ಹೆಚ್ಚಾಗು; ಉಬ್ಬು: ಕಣ್ಣಿನ ಮೇಲಿನ ರೋಮಾಳಿ; ಧುರ: ಯುದ್ಧ, ಕಾಳಗ; ಥಟ್ಟಣೆ: ಗುಂಪು; ಪಸರಿಸು: ಹರಡು; ಸುರ: ಅಮರ; ನರ: ಮನುಷ್ಯ; ಸಮಯ: ಕಾಲ; ಪೂರ್ವೋತ್ತರ: ಹಿಂದೆ ನಡೆದ; ದೆಸೆ: ದಿಕ್ಕು; ವರ: ಶ್ರೇಷ್ಟ; ಮುನಿ: ಋಷಿ; ಸ್ತೋಮ: ಗುಂಪು; ನಡುವೆ: ಮಧ್ಯ; ಕಂಧರ: ಕೊರಳು; ಮುಸಲ: ಗದೆ; ವಿಮಳ: ನಿರ್ಮಲ; ಅಂಬರ: ಬಟ್ಟೆ; ಸುಳಿ: ಕಾಣಿಸಿಕೊಳ್ಳು;

ಪದವಿಂಗಡಣೆ:
ಅರಸ +ಕೇಳ್+ಇವರಿಬ್ಬರ್+ಉಬ್ಬಿನ
ಧುರದ+ ಥಟ್ಟಣೆ+ ಪಸರಿಸಿತು +ಸುರ
ನರರನ್+ಆ+ ಸಮಯದಲಿ+ ಪೂರ್ವೋತ್ತರದ+ ದೆಸೆಯಿಂದ
ವರ +ಮುನಿಸ್ತೋಮದ+ ನಡುವೆ+ ಕಂ
ಧರದ +ಮುಸಲದ +ವಿಮಳ +ನೀಲಾಂ
ಬರದ +ರಾಮನ +ಸುಳಿವ +ಕಂಡರು +ಕೃಷ್ಣ+ ಪಾಂಡವರು

ಅಚ್ಚರಿ:
(೧) ಬಲರಾಮನ ವಿವರಣೆ – ವರ ಮುನಿಸ್ತೋಮದ ನಡುವೆ ಕಂಧರದ ಮುಸಲದ ವಿಮಳ ನೀಲಾಂ
ಬರದ ರಾಮನ

ಪದ್ಯ ೨೪: ಮುನಿಸ್ತೋಮವು ಶಂಕರನಲ್ಲಿ ಏನು ಬೇಡಿದರು?

ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರ ತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ವಿಕಾರಿಯ
ನೆತ್ತಿಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ (ಅರಣ್ಯ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಹೇ ಪರಮಾತ್ಮ, ಕಾರುಣ್ಯನಿಧಿಯೇ, ನಮ್ಮನ್ನು ಮತ್ತೆ ಚಾಡಿಕೋರರು ಎಂದು ಪರಿಗಣಿಸಬೇಡ, ನಮ್ಮ ತಪೋಭೂಮಿಯು ಆ ತಪಸ್ವಿಯ ತಪದಿಂದ ಹೊತ್ತಿ ಉರಿಯುತ್ತಿದೆ, ಆ ತಪಸ್ವಿಯ ತೀವ್ರ ತಪೋಜ್ವಾಲೆ ಭಯಂಕರವಾಗಿದೆ. ತಪಸ್ಸು ಮಾಡಲು ನಮಗಿದ್ದದ್ದು ಒಂದು ತಪೋಭೂಮಿ, ನಮಗೆ ತಪಸ್ಸು ಮಾಡಲು ಇನ್ನೊಂದು ತಪೋಭೂಮಿಯನ್ನು ನೀಡು, ಇಲ್ಲದಿದ್ದರೆ ಆ ವಿಕಾರಿ ತಪಸ್ವಿಯನ್ನು ಅಲ್ಲಿಂದೆಬ್ಬಿಸಿ ಕಳಿಸು ಎಂದು ಮುನಿಗಳ ಗುಂಪು ಶಂಕರನಲ್ಲಿ ಬಿನ್ನವಿಸಿತು.

ಅರ್ಥ:
ಪಿಸುಣ: ಚಾಡಿಕೋರ; ಚಿತ್ತವಿಸು: ಗಮನವಿಡು; ತಪೋವನ: ತಪಸ್ಸುಮಾಡುವ ಕಾಡು; ಹೊತ್ತು: ಬೆಂದು ಹೋಗು, ಉರಿ; ವಿಪರೀತ: ತುಂಬ; ತಪಸಿ: ತಪಸ್ಸು ಮಾಡುವ ವ್ಯಕ್ತಿ; ತೀವ್ರ: ಬಹಳ; ತೇಜ: ಕಾಂತಿ; ಗಿತ್ತು: ನೀಡಿ; ಕರುಣಿಸು: ದಯಮಾಡು; ಮೇಣ್: ಅಥವ; ವಿಕಾರಿ: ದುಷ್ಟ; ಎತ್ತಿಕಳೆ: ಎಬ್ಬಿಸು; ಕಾರುಣ್ಯ: ದಯೆ; ನಿಧಿ: ಐಶ್ವರ್ಯ; ಕಾರುಣ್ಯನಿಧಿ: ಕರುಣೆಯಸಾಗರ; ಸ್ತೋಮ: ಗುಂಪು;

ಪದವಿಂಗಡಣೆ:
ಮತ್ತೆ +ನಮ್ಮನು +ಪಿಸುಣರೆಂದೇ
ಚಿತ್ತವಿಸಲಾಗದು+ ತಪೋವನ
ಹೊತ್ತುತಿದೆ +ವಿಪರೀತ +ತಪಸಿಯ +ತೀವ್ರ +ತೇಜದಲಿ
ಇತ್ತಲೊಂದು+ ತಪೋವನವನ್+ಎಮಗ್
ಇತ್ತು +ಕರುಣಿಸು +ಮೇಣ್+ವಿಕಾರಿಯನ್
ಎತ್ತಿಕಳೆ+ ಕಾರುಣ್ಯನಿಧಿ+ಎಂದುದು +ಮುನಿ+ಸ್ತೋಮ

ಅಚ್ಚರಿ:
(೧) ಅರ್ಜುನನನ್ನು ವಿಕಾರಿ ಎಂದು ಕರೆದಿರುವುದು
(೨) ತ ಕಾರದ ತ್ರಿವಳಿ ಪದ – ತಪಸಿಯ ತೀವ್ರ ತೇಜದಲಿ