ಪದ್ಯ ೬೩: ಪಾಂಡವರ ಆನಂದವು ಹೇಗಿತ್ತು?

ನೃಪನ ಮುದವನು ಭೀಮಸೇನನ
ವಿಪುಳ ಸಂತೋಷವನು ನಕುಲನ
ಚಪಳ ಮದವನು ಪುಳಕವನು ಸಹದೇವನವಯವದ
ದ್ರುಪದಸುತೆಯುತ್ಸವವ ಮುನಿಜನ
ದಪಗತ ಗ್ಲಾನಿಯನು ಪರಿಜನ
ದುಪಚಿತಾನಂದವನು ಬಣ್ಣಿಸಲರಿಯೆ ನಾನೆಂದ (ಅರಣ್ಯ ಪರ್ವ, ೧೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಧರ್ಮರಾಯನ ಸಂತೋಷ, ಭೀಮನ ಅತಿಶಯ ಮುದ, ನಕುಲನ ಉಬ್ಬು, ಸಹದೇವನ ರೋಮಾಂಚನ, ದ್ರೌಪದಿಯ ಮನಸ್ಸಿನ ಉತ್ಸವ, ಮುನಿಗಳು ಚಿಂತೆಯನ್ನು ಬಿಟ್ಟು ಸಮಚಿತ್ತವನ್ನು ಪಡೆದುದು, ಪರಿಜನರ ಆನಂದಗಳು ಇವನ್ನು ನಾನು ವರ್ಣಿಸಲಾರೆ.

ಅರ್ಥ:
ನೃಪ: ರಾಜ; ಮುದ: ಸಂತಸ; ವಿಪುಳ: ಬಹಳ, ಹೆಚ್ಚು; ಚಪಲ: ಚುರುಕಾದ; ಮದ: ಸೊಕ್ಕು, ಗರ್ವ; ಪುಳಕ: ಮೈನವಿರೇಳುವಿಕೆ; ಅವಯವ: ಅಂಗ; ಸುತೆ: ಮಗಳು; ಉತ್ಸವ: ಸಂಭ್ರಮ; ಮುನಿ: ಋಷಿ; ಪರಿಜನ: ಸಂಬಂಧಿಕರು; ಅಪಗತ: ದೂರ ಸರಿದ; ಗ್ಲಾನಿ: ಬಳಲಿಕೆ, ದಣಿವು; ಉಪಚಿತ: ಯೋಗ್ಯವಾದ; ಬಣ್ಣಿಸು: ವರ್ಣಿಸು; ಅರಿ: ತಿಳಿ;

ಪದವಿಂಗಡಣೆ:
ನೃಪನ +ಮುದವನು +ಭೀಮಸೇನನ
ವಿಪುಳ +ಸಂತೋಷವನು +ನಕುಲನ
ಚಪಳ +ಮದವನು +ಪುಳಕವನು +ಸಹದೇವನ್+ಅವಯವದ
ದ್ರುಪದಸುತೆ+ಉತ್ಸವವ +ಮುನಿಜನದ್
ಅಪಗತ+ ಗ್ಲಾನಿಯನು +ಪರಿಜನದ್
ಉಪಚಿತ್+ಆನಂದವನು +ಬಣ್ಣಿಸಲರಿಯೆ +ನಾನೆಂದ

ಅಚ್ಚರಿ:
(೧) ಚಪಳ, ವಿಪುಳ – ಪ್ರಾಸ ಪದಗಳು
(೨) ಮುದ, ಸಂತೋಷ – ಸಮನಾರ್ಥಕ ಪದ

ಪದ್ಯ ೧೭: ಅರ್ಜುನನು ಇಂದ್ರಕೀಲ ಪರ್ವತಕ್ಕೆ ಹೇಗೆ ಬೀಳ್ಕೊಟ್ಟನು?

ಎನುತ ತೇರಿನೊಳೊಂದು ಕಾಲಿ
ಟ್ಟನು ಧನಂಜಯನಿಂದ್ರಕೀಲದ
ವನಕೆ ಕೈಮುಗಿದೆರಗಿ ನುಡಿದನು ಮಧುರ ವಚನದಲಿ
ಮುನಿಜನವೆ ಪರ್ವತವೆ ಪಂಕಜ
ವನವೆ ತರುಲತೆಗುಲ್ಮ ಖಗ ಮೃಗ
ವನಚರರೆ ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ (ಅರಣ್ಯ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ಅರ್ಜುನನು ರಥದಲ್ಲಿ ಒಂದು ಕಾಲಿಟ್ಟನು, ಕೆಳಗಿಳಿದು ಇಂದ್ರನೀಲ ವನಕ್ಕೆ ನಮಸ್ಕಾರವನ್ನು ಮಾಡಿ ಕೈಮುಗಿದು ನಿಂತು, ಓ ಇಂದ್ರಕೀಲದಲ್ಲಿರುವ ಮುನಿಜನರೇ, ಪರ್ವತವೇ, ಕಮಲ ವನಗಳೇ, ಮರ, ಬಳ್ಲಿ, ಪೊದೆಗಳೇ, ಪಕ್ಷಿಗಳೇ, ಮೃಗಗಳೇ, ವನಾರರೇ, ಮುನಿಜನರೇ, ನಾನು ನಿಮ್ಮ ಕರುಣೆಯಿಂದ ಇಷ್ಟು ದಿನ ಇಲ್ಲಿ ಸುಖವಾಗಿದ್ದೆನು, ಈಗ ನೀವು ಅಪ್ಪಣೆನೀಡಿ, ನಾನು ಹೋಗಿ ಬರುವೆ ಎಂದು ಬೇಡಿದನು.

ಅರ್ಥ:
ತೇರು: ರಥ; ಕಾಲು: ಪಾದ; ವನ: ಕಾಡು; ಎರಗು: ನಮಸ್ಕರಿಸು; ನುಡಿ: ಮಾತಾಡು; ಮಧುರ: ಸಿಹಿಯಾದುದು, ಸವಿಯಾದುದು; ವಚನ: ಮಾತು; ಮುನಿ: ಋಷಿ; ಜನ: ಗುಂಪು, ಮನುಷ್ಯ; ಪರ್ವತ: ಗಿರಿ; ಪಂಕಜ: ತಾವರೆ; ವನ: ಕಾಡು; ತರು: ಮರ; ಲತೆ: ಬಳ್ಳಿ; ಗುಲ್ಮ: ಪೊದೆ, ಪೊದರು; ಖಗ: ಪಕ್ಷಿ; ಮೃಗ: ಪ್ರಾಣಿ; ವನಚರರು: ಕಾಡಿನಲ್ಲಿ ಚಲಿಸುವ, ಜೀವಿಸುವ; ಹೋಗಿಬಹೆನೈ: ಹೋಗಿಬರುವೆ; ಅನುಜ್ಞೆ: ಒಪ್ಪಿಗೆ, ಅಪ್ಪಣೆ;

ಪದವಿಂಗಡಣೆ:
ಎನುತ +ತೇರಿನೊಳ್+ಒಂದು +ಕಾಲಿ
ಟ್ಟನು +ಧನಂಜಯನ್+ಇಂದ್ರಕೀಲದ
ವನಕೆ+ ಕೈಮುಗಿದ್+ಎರಗಿ +ನುಡಿದನು +ಮಧುರ +ವಚನದಲಿ
ಮುನಿಜನವೆ+ ಪರ್ವತವೆ+ ಪಂಕಜ
ವನವೆ+ ತರು+ಲತೆ+ಗುಲ್ಮ +ಖಗ +ಮೃಗ
ವನಚರರೆ +ತಾ +ಹೋಗಿ +ಬಹೆನೈ+ ನಿಮ್+ಅನುಜ್ಞೆಯಲಿ

ಅಚ್ಚರಿ:
(೧) ವನಕ್ಕೆ ತನ್ನ ಕೃತಜ್ಞತೆಯನ್ನು ತಿಳಿಸುವ ಪರಿ – ಇಂದ್ರಕೀಲದ ವನಕೆ ಕೈಮುಗಿದೆರಗಿ.. ತಾ ಹೋಗಿ ಬಹೆನೈ ನಿಮ್ಮನುಜ್ಞೆಯಲಿ;