ಪದ್ಯ ೯: ವೈಶಂಪಾಯನರು ಭಾರತ ಗ್ರಂಥವನ್ನು ಹೇಗೆ ಪೂಜಿಸಿದರು?

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶ್ತಮಖಾದಿ ಸಮಸ್ತ ದೇವ
ಪ್ರತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈ ಮುಗಿದು ವಿಮಲಜ್ಞಾನ ಮುದ್ರೆಯಲಿ (ಆದಿ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ವೈಶಂಪಾಯನ ಮಹರ್ಷಿಯು ಮಹತಾದ ಭಾರತ ಗ್ರಂಥವನ್ನು ಉತ್ತಮ ಗಂಧಾಕ್ಷತೆಗಳಿಂದ ಪೂಜಿಸಿದನು. ಬಳಿಕ ಸೂರ್ಯಚಂದ್ರರು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚಮಹಾಭೂತಗಳಿಗೆ ನಮಸ್ಕರಿಸಿದನು. ಇಂದ್ರನೇ ಮೊದಲಾದ ಸಮಸ್ತದೇವತೆಗಳಿಗೂ, ಬ್ರಹ್ಮ, ಶಿವರಿಗೂ ನಮಸ್ಕರಿಸಿ ಜ್ಞಾನಮುದ್ರೆಯನು ಧರಿಸಿದನು.

ಅರ್ಥ:
ವಿತತ: ವಿಸ್ತಾರವಾದ; ಪುಸ್ತಕ: ಗ್ರಂಥ; ಗಂಧ: ಚಂದನ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರ್ಚಿಸು: ಪೂಜಿಸು; ಸೋಮ: ಚಂದ್ರ; ಸೂರ್ಯ: ರವಿ; ಕ್ಷಿತಿ: ಭೂಮಿ; ಜಲ: ನೀರು; ಅನಲ: ಅಗ್ನಿ; ವಾಯು: ಗಾಳಿ; ಗಗನ: ಆಗಸ; ಆದಿ: ಮೊದಲಾದ; ಅಭಿನಮಿಸು: ನಮಸ್ಕರಿಸು; ಶತ: ನೂರು; ಮಖ: ಯಾಗ, ಯಜ್ಞ; ಆದಿ: ಮೊದಲಾದ; ಸಮಸ್ತ: ಎಲ್ಲಾ; ದೇವ: ಭಗವಂತ; ಪ್ರತತಿ: ಗುಂಪು, ಸಮೂಹ; ಎರಗು: ನಮಸ್ಕರಿಸು; ಸರೋಜಭವ: ಬ್ರಹ್ಮ; ಸರೋಜ: ಕಮಲ; ಪಶುಪತಿ: ಶಿವ; ಕೈಮುಗಿ: ನಮಸ್ಕರಿಸು; ವಿಮಲ: ನಿರ್ಮಲ; ಜ್ಞಾನ: ತಿಳಿವಳಿಕೆ, ಅರಿವು; ಮುದ್ರೆ: ಚಿಹ್ನೆ;

ಪದವಿಂಗಡಣೆ:
ವಿತತ +ಪುಸ್ತಕವನು +ಸುಗಂಧ
ಅಕ್ಷತೆಯೊಳ್+ಅರ್ಚಿಸಿ +ಸೋಮ +ಸೂರ್ಯ
ಕ್ಷಿತಿ+ ಜಲ+ಅನಲ +ವಾಯು +ಗಗನಾದಿಗಳಿಗ್+ಅಭಿನಮಿಸಿ
ಶತ+ಮಖಾದಿ +ಸಮಸ್ತ+ ದೇವ
ಪ್ರತಿಗ್+ಎರಗಿ +ಸರೋಜಭವ +ಪಶು
ಪತಿಗಳಿಗೆ +ಕೈ+ ಮುಗಿದು+ ವಿಮಲ+ಜ್ಞಾನ+ ಮುದ್ರೆಯಲಿ

ಅಚ್ಚರಿ:
(೧) ಕೈಮುಗಿ, ಎರಗ, ಅಭಿನಮಿಸು – ಸಾಮ್ಯಾರ್ಥ ಪದ

ಪದ್ಯ ೨೭: ಗಾಂಧಾರಿಯು ಕೌರವನಿಗೆ ಏನು ಹೇಳಿದಳು?

ಏನು ದರ್ಭಾಸ್ತರಣ ಶಯನ ವಿ
ದೇನು ಕಾರಣ ನಿರಶನ ವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನ ಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ (ಅರಣ್ಯ ಪರ್ವ, ೨೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಮಗನ ಪಕ್ಕದಲ್ಲಿ ಕುಳಿತು ಗಾಂಧಾರಿಯು ಮಾತಾಡುತ್ತಾ, ದರ್ಭೆಗಳನ್ನು ಹಾಸಿ ಅದರ ಮೇಲೇಕೆ ಮಲಗಿರುವೆ? ನಿರಶನ ವ್ರತವನ್ನು ಕೈಗೊಳ್ಳಲು ಕಾರಣವೇನು? ಪ್ರಾಯೋಪವೇಶದಿಂದ ಏನನ್ನು ಸಾಧಿಸುತ್ತಿರುವೇ? ಇದರಿಂದ ಏನು ಸಿದ್ಧಿಸುತ್ತಿರುವೆ

ಅರ್ಥ:
ದರ್ಭಾಸ್ತರಣ: ದರ್ಭೆಯ ಹಾಸಿಗೆ; ಶಯನ: ಮಲಗು; ಕಾರಣ: ಉದ್ದೇಶ; ನಿರಶನ: ಆಹಾರ ವಿಲ್ಲದಿರುವಿಕೆ; ವ್ರತ: ನಿಯಮ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಪ್ರಾಯೋಪವೇಶ:ಅನ್ನ ನೀರುಗಳನ್ನು ತೊರೆದು ಪ್ರಾಣ ಬಿಡುವುದು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಮೋಹ: ಆಕರ್ಷಣೆ, ಸೆಳೆತ; ಮೌನ: ಮಾತನ್ನಾಡದೆ ಇರುವಿಕೆ; ಮುದ್ರೆ: ಮೊಹರು; ಬಿಸುಟು: ಹೊರಹಾಕು; ಆಣೆ: ಪ್ರಮಾಣ; ಹಣೆ: ಲಲಾಟ; ಚಾಚು: ಹರಡು; ಮಗ: ಪುತ್ರ;

ಪದವಿಂಗಡಣೆ:
ಏನು +ದರ್ಭಾಸ್ತರಣ +ಶಯನ +ವಿ
ದೇನು +ಕಾರಣ +ನಿರಶನ+ ವ್ರತ
ವೇನು +ಸಾಧಿಸಲಾದುದ್+ಈ+ ಪ್ರಾಯೋಪವೇಶದಲಿ
ಏನು+ ಸಿದ್ಧಿಯಿದಕ್ಕೆ+ ಮೋಹಿದ
ಮೌನ+ ಮುದ್ರೆಯ +ಬಿಸುಟು +ಹೇಳೆನ್
ಆಣೆ+ಎನುತವೆ +ಹಣೆಯ +ಹಣೆಯಲಿ +ಚಾಚಿದಳು +ಮಗನ

ಅಚ್ಚರಿ:
(೧) ಮಾತನಾಡು ಎಂದು ಹೇಳುವ ಪರಿ – ಮೋಹಿದ ಮೌನ ಮುದ್ರೆಯ ಬಿಸುಟು
(೨) ಮಗನ ಹತ್ತಿರ ಬಂದಳು ಎಂದು ಹೇಳುವ ಪರಿ – ಹಣೆಯ ಹಣೆಯಲಿ ಚಾಚಿದಳು ಮಗನ