ಪದ್ಯ ೨೩: ಮಗುವಿನ ಬಳಿ ಯಾರು ಬಂದರು?

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ (ಆದಿ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ಮಗುವು ನದಿಯ ದಡದ ಮೇಲೆ ಮರಳಿನ ರಾಶಿಯನ್ನು ಕಾಲಲ್ಲಿ ಹೊಡೆಯುತ್ತಾ ಕೈಗಲನ್ನು ಕೊಡವುತ್ತಾ ಸೂರ್ಯನನ್ನೇ ನೋಡುತ್ತಾ ಜೊರಾಗಿ ಅಳುತ್ತಿತ್ತು. ಇದನ್ನು ನೋಡಿದ ಸಾರತಿಯನೊಬ್ಬನು ಸಂತೋಷಾತಿರೇಕದಿಂದ ಮೈಮರೆತು ಉಬ್ಬಿ, ಶಿವಶಿವಾ ಇದು ಎಲ್ಲಿಂದ ದೊರಕಿದ ನಿಧಿಯೆನ್ನುತ್ತಾ ಮಗುವಿನ ಬಳಿ ಬಂದನು.

ಅರ್ಥ:
ಕೆದರು: ಹರಡು; ಕಾಲು: ಪಾದ; ಮಳಲು: ಮರಳು; ರಾಶಿ: ಗುಂಪು; ಒದೆ: ನೂಕು; ಕೈ: ಹಸ್ತ; ಕೊಡಹು: ಅಲ್ಲಾಡಿಸು, ಕೊಡವು, ಜಾಡಿಸು ; ಒದರು: ಕಿರುಚು, ಗರ್ಜಿಸು; ಶಿಶು: ಮಗು; ಅರಸ: ರಾಜ; ರವಿ: ಸೂರ್ಯ; ಈಕ್ಷಿಸು: ನೋಡು; ಕಂಡು: ನೋಡು; ಸೂತ: ಸಾರಥಿ; ಮುದ: ಸಮ್ತಸ; ಮದ: ದರ್ಪ; ಮರೆ: ಎಚ್ಚರತಪ್ಪು; ಉಬ್ಬು: ಹಿಗ್ಗು, ಗರ್ವಿಸು; ನಿಧಿ: ಐಶ್ವರ್ಯ; ನಡೆ: ಚಲಿಸು;

ಪದವಿಂಗಡಣೆ:
ಕೆದರಿ +ಕಾಲಲಿ +ಮಳಲ +ರಾಶಿಯನ್
ಒದೆದು +ಕೈಗಳ +ಕೊಡಹಿ +ಭೋಯೆಂದ್
ಒದರುತಿರ್ದನು +ಶಿಶುಗಳ್+ಅರಸನು +ರವಿಯನ್+ಈಕ್ಷಿಸುತ
ಇದನು +ಕಂಡನು +ಸೂತನೊಬ್ಬನು
ಮುದದ +ಮದದಲಿ +ತನ್ನ+ ಮರೆದ್
ಉಬ್ಬಿದನ್+ಇದೆತ್ತಣ+ ನಿಧಿಯೊ +ಶಿವಶಿವಯೆಂದು +ನಡೆತಂದ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ಶಿಶುಗಳರಸನು, ಎತ್ತಣ ನಿಧಿಯೊ;

ಪದ್ಯ ೩೫: ಕೌರವನನ್ನು ಕಂಡ ಪಾಂಡವರ ಸ್ಥಿತಿ ಹೇಗಾಯಿತು?

ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ (ಗದಾ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನನ್ನು ಕಂಡು ಧರ್ಮಜನ ಮುಖವರಳಿತು, ಭೀಮನಿಗೆ ಹರ್ಷವುಕ್ಕಿತು, ಅರ್ಜುನ, ನಕುಲ, ಸಹದೇವರು ಅತೀವ ಸಂತಸಗೊಂಡರು. ಉಪಪಾಂಡವರು, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿಗಳು ಹರಕೆ ಕಟ್ಟಿಕೋಂಡಕ್ಕೆ ದೇವತೆಗಳು ವರವನ್ನು ಕೊಟ್ಟರು ಎಂದುಕೊಂಡರು.

ಅರ್ಥ:
ಅರಳು: ವಿಕಸಿಸು; ಅರಸ: ರಾಜ; ವದನ: ಮುಖ; ಹರುಷ: ಸಮ್ತಸ; ಉಕ್ಕು: ಹೆಚ್ಚಾಗು; ಉಬ್ಬು: ಹಿಗ್ಗು; ಉರು: ಎದೆ; ಮುದ: ಸಂತಸ; ಉಬ್ಬರಿಸು: ಉತ್ಸಾಹಿತನಾಗು; ಹರಕೆ: ಮೀಸಲು, ಮುಡಿಪು, ಸಂಕಲ್ಪ; ದೈವ: ಭಗವಂತ; ವರ: ಆಶೀರ್ವಾದ; ಸುತ: ಮಗ; ಒಲವು: ಪ್ರೀತಿ; ಉರೆ: ಅತಿಶಯವಾಗಿ; ಉರು: ವಿಶೇಷವಾದ;

ಪದವಿಂಗಡಣೆ:
ಅರಳಿತ್+ಅರಸನ+ ವದನ+ ಭೀಮನ
ಹರುಷವ್+ಉಕ್ಕಿತು +ಪಾರ್ಥನ್+ಉಬ್ಬಿದನ್
ಉರು+ಮುದದಿನ್+ಉರೆ+ ನಕುಲನ್+ಉಬ್ಬರಿಸಿದನು+ ಸಹದೇವ
ಹರಕೆಯಲಿ +ದೈವಂಗಳ್+ಇತ್ತವು
ವರವನೆಂದರು +ದ್ರೌಪದೀಸುತರ್
ಉರು +ಶಿಖಂಡಿ +ದ್ರುಪದಸುತ +ಸಾತ್ಯಕಿಗಳ್+ಒಲವಿನಲಿ

ಅಚ್ಚರಿ:
(೧) ಉಬ್ಬು, ಉರು, ಉರೆ, ಉಬ್ಬರಿಸು – ಪದಗಳ ಬಳಕೆ
(೨) ಸಂತೋಷಗೊಂಡನು ಎಂದು ಹೇಳಲು – ಅರಳಿತರಸನ ವದನ

ಪದ್ಯ ೬: ದೂರ್ವಾಸನು ದುರ್ಯೋಧನನಿಗೆ ಏನು ಹೇಳಿದ?

ಷಡುರಸಾನ್ನದಲಾದರಣೆಯಿಂ
ದುಡುಗೆಯಿಂದವೆ ತುಷ್ಟಿಬಡಿಸಿದ
ಪೊಡವಿಪಾಲಕ ಮುನಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ (ಅರಣ್ಯ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಷಡ್ರಸಗಳಿಂದ ಕೂಡಿದ ರುಚಿಯಾದ ಊಟವನ್ನು ಮಾಡಿ, ಉತ್ತಮ ಉಡುಗೆಗಳನ್ನು ದುರ್ಯೋಧನನು ನೀಡಿ, ಎಂಬತ್ತೆಂಟು ಸಾವಿರ ಮುನಿಗಳನ್ನು ದುರ್ಯೋಧನನು ತೃಪ್ತಿ ಪಡಿಸಿದನು. ಸಂನ್ಯಾಸಿಯ ವೇಷ ಧರಿಸಿದ ಆನಂದಘನ ಶಿವನು ಸಂತೋಷಿಸಿ, ಕೌರವನ ಮೈದಡವಿ ಮಗನೆ, ನಿನಗೆ ಏನು ಬೇಕೋ ಕೇಳು ಎಂದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಅನ್ನ: ಊಟ, ಭೋಜನ; ಆದರಣೆ: ಗೌರವ; ಉಡುಗೆ: ವಸ್ತ್ರ, ಬಟ್ಟೆ; ತುಷ್ಟಿ: ಸಂತಸ; ಪೊಡವಿ: ಪೃಥ್ವಿ, ಭೂಮಿ; ಪಾಲಕ: ಒಡೆಯ; ಪೊಡವಿಪಾಲಕ: ರಾಜ; ಮುನಿ: ಋಷಿ; ಸಾವಿರ: ಸಹಸ್ರ; ಕಡು:ತುಂಬ; ಸುಖ: ನೆಮ್ಮದಿ; ಸಂನ್ಯಾಸಿ: ಋಷಿ; ವೇಷ: ಉಡುಗೆ ತೊಡುಗೆ; ಮೃಡ: ಶಿವ; ಮುದ: ಸಂತಸ; ಮೈದಡವಿ: ಮೈಯನ್ನು ಸವರಿ; ಮೈ: ತನು; ಮೆಚ್ಚಿ: ಪ್ರಶಂಶಿಸಿ; ಮಗ: ಪುತ್ರ; ಬೇಡು: ಕೇಳು; ಒಲಿದು: ಒಪ್ಪು, ಬಯಸು;

ಪದವಿಂಗಡಣೆ:
ಷಡುರಸಾನ್ನದಲ್+ಆದರಣೆಯಿಂದ್
ಉಡುಗೆಯಿಂದವೆ+ ತುಷ್ಟಿ+ಬಡಿಸಿದ
ಪೊಡವಿಪಾಲಕ+ ಮುನಿಗಳ್+ಅಷ್ಟಾಶೀತಿ +ಸಾವಿರವ
ಕಡು+ಸುಖದ +ಸಂನ್ಯಾಸಿ +ವೇಷದ
ಮೃಡನು +ಮುದದಲಿ +ಕೌರವನ +ಮೈ
ದಡವಿ +ಮೆಚ್ಚಿದೆ +ಮಗನೆ +ಬೇಡ್+ಒಲಿದುದನು+ ನೀನೆಂದ

ಅಚ್ಚರಿ:
(೧) ದೂರ್ವಾಸನನ್ನು ವಿವರಿಸುವ ಪರಿ – ಕಡುಸುಖದ ಸಂನ್ಯಾಸಿ ವೇಷದ ಮೃಡನು ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ