ಪದ್ಯ ೧೨: ಭೀಷ್ಮನ ಸಾವಿಗೆ ಯಾರು ದುಃಖಿತರಾದರು?

ಒರಲಿ ಕೆಡೆದರು ಹಡಪಿಗರು ಸೀ
ಗುರಿಯವರು ಸತ್ತಿಗೆಯವರು ತ
ನ್ನರಮನೆಯ ವಿಶ್ವಾಸಿಗಳು ಬಿಲುಸರಳ ನೀಡುವರು
ಗುರುವಲಾ ಮುತ್ತಯ್ಯ ನಮ್ಮನು
ಹೊರೆದ ತಂದೆಗೆ ತಪ್ಪಿದರು ಕಡು
ನರಕಿಗಳು ಪಾಂಡವರು ಸುಡು ಸುಡೆನುತ್ತ ಹೊರಳಿದರು (ಭೀಷ್ಮ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಭೀಷ್ಮನ ಜೊತೆಯಲ್ಲಿದ್ದ ಸೇವಕರು, ಚಾಮರ ಛತ್ರ ಧಾರರು, ಅವನ ಮನೆಯ ವಿಶ್ವಾಸಿಕರು, ಅವನಿಗೆ ಬಿಲ್ಲು ಬಾಣಗಳನ್ನು ಕೊಡುವವರು ಚೀರಿ ಕೆಳಗೆ ಬಿದ್ದು ಹೊರಳಾಡಿ, ಭೀಷ್ಮನು ಪಿತಾಮಹನಲ್ಲವೇ? ಪಾಂಡವರನ್ನು ಸಾಕಿ ಬೆಳಸಿದನಲ್ಲವೇ? ಅವನಿಗೆ ಕೇಡು ಬಗೆದು ಪಾಂಡವರು ನಾರಕಿಗಳು, ಅವರನ್ನು ಸುಡು ಸುಡು ಎಂದು ಆಕ್ರಂದಿಸಿದರು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಕೆಡೆ: ಬೀಳು, ಕುಸಿ; ಹಡಪಿಗ: ತನ್ನ ಒಡೆಯನಿಗೆ ಅಡಕೆ ಎಲೆಯ ಚೀಲವನ್ನು ಹಿಡಿದು ಸೇವೆ ಮಾಡುವವನು; ಸೀಗುರಿ: ಚಾಮರ; ಸತ್ತಿಗೆ: ಕೊಡೆ, ಛತ್ರಿ; ಅರಮನೆ: ರಾಜರ ಆಲಯ; ವಿಶ್ವಾಸಿ: ನಂಬಿಕೆಗೆ ಪಾತ್ರವಾದುದು; ಬಿಲು: ಬಿಲ್ಲು, ಚಾಪ; ಸರಳ: ಬಾಣ; ಗುರು: ಆಚಾರ್ಯ; ಮುತ್ತಯ್ಯ: ಮುತ್ತಾತ; ಹೊರೆ:ರಕ್ಷಣೆ, ಆಶ್ರಯ; ತಂದೆ: ಪಿತ; ತಪ್ಪಿದ: ಕೈಬಿಡು; ಕಡು: ತುಂಬ, ಬಲು; ನರಕ: ಅಧೋಲೋಕ; ಸುಡು: ದಹಿಸು; ಹೊರಳು: ತಿರುವು, ಬಾಗು;

ಪದವಿಂಗಡಣೆ:
ಒರಲಿ +ಕೆಡೆದರು +ಹಡಪಿಗರು +ಸೀ
ಗುರಿಯವರು +ಸತ್ತಿಗೆಯವರು+ ತ
ನ್ನರಮನೆಯ +ವಿಶ್ವಾಸಿಗಳು+ ಬಿಲು+ಸರಳ +ನೀಡುವರು
ಗುರುವಲಾ +ಮುತ್ತಯ್ಯ +ನಮ್ಮನು
ಹೊರೆದ +ತಂದೆಗೆ +ತಪ್ಪಿದರು +ಕಡು
ನರಕಿಗಳು+ ಪಾಂಡವರು+ ಸುಡು +ಸುಡೆನುತ್ತ +ಹೊರಳಿದರು

ಅಚ್ಚರಿ:
(೧) ಭೀಷ್ಮನ ಸಾವಿಗೆ ನೊಂದವರು – ಹಡಪಿಗರು, ಸೀಗುರಿಯವರು, ಸತ್ತಿಗೆಯವರು, ವಿಶ್ವಾಸಿಗಳು

ಪದ್ಯ ೨೭: ಊರ್ವಶಿಯು ತನ್ನ ಹಿರಿಮೆಯನ್ನು ಹೇಗೆ ಹೇಳಿದಳು?

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ಕೇಳು, ನಿಮ್ಮ ತಂದೆ, ಅವನ ತಂದೆ, ನಿಮ್ಮ ಮುತ್ತಜ್ಜ, ಅವನ ಭಾವಮೈದುನ, ಅವನ ತಂದೆ, ಅಣ್ಣ, ತಮ್ಮ ಎಂಬ ನಿಮ್ಮ ತಂದೆಯ ಕಡೆಯ ಬಾಂಧವರಿಗೆ, ಯುದ್ಧರಂಗದಲ್ಲಿ ಶತ್ರುಗಳ ಜೊತೆಗೆ ಯುದ್ಧ ಮಾಡಿ ತಲೆಗಳನ್ನು ಚೆಂಡಾಡಿದವರಿಗೆ, ಅಷ್ಟೆ ಅಲ್ಲ, ಯಜ್ಞಗಳನ್ನು ಮಾಡಿದ ಸಂಭಾವಿತರಿಗೆ ಇರುವವಳು ನಾನೊಬ್ಬಳೇ, ಎಂದು ಊರ್ವಶಿಯು ನಗುತ ಅರ್ಜುನನಿಗೆ ತನ್ನ ಹಿರಿಮೆಯನ್ನು ಹೇಳಿಕೊಂಡಳು.

ಅರ್ಥ:
ಅಯ್ಯ: ತಂದೆ; ಮುತ್ತಯ್ಯ: ಮುತ್ತಾತ; ಭಾವಮೈದುನ: ಗಂಡನ ಯಾ ಹೆಂಡತಿಯ ಸಹೋದರ; ಅಗ್ರಜ: ಹಿರ; ಅನುಜ: ಸಹೋದರ; ಜ್ಞಾತಿ: ತಂದೆಯ ಕಡೆಯ ಬಂಧು; ಬಾಂಧವ: ಸಂಬಂಧಿಕರು; ಅರಿ: ಶತ್ರು; ಹೊಯ್ದು: ತೊರೆ; ಶಿರ: ತಲೆ; ಅರಿ: ಕತ್ತರಿಸು; ಮೇಣ್: ಮತ್ತು; ಮಖ: ಯಾಗ; ನಗುತ: ಸಂತಸ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಅಯ್ಯನ್+ಅಯ್ಯನು +ನಿಮ್ಮವರ+ ಮು
ತ್ತಯ್ಯನ್+ಆತನ +ಭಾವ ಮೈದುನನ್
ಅಯ್ಯನ್+ಅಗ್ರಜರ್+ಅನುಜರ್+ಎಂಬೀ +ಜ್ಞಾತಿ +ಬಾಂಧವರ
ಕೈಯಲ್+ಅರಿಗಳ+ಹೊಯ್ದು +ಶಿರನ್+ಅರಿ
ದುಯ್ಯಲ್+ಆಡಿದವರ್ಗೆ+ ಮೇಣ್+ ಮಖದ್
ಅಯ್ಯಗಳಿಗ್+ಆನೊಬ್ಬಳ್+ಎಂದಳು +ನಗುತ +ನಳಿನಾಕ್ಷಿ

ಅಚ್ಚರಿ:
(೧) ಅಯ್ಯ, ಮುತ್ತಯ್ಯ – ಪ್ರಾಸ ಪದಗಳು
(೨) ಅಯ್ಯ, ಮುತ್ತಯ್ಯ, ಭಾವಮೈದುನ, ಅಗ್ರಜ, ಅನುಜ, ಜ್ಞಾತಿ – ಸಂಬಂಧಗಳನ್ನು ವಿವರಿಸುವ ಪದ