ಪದ್ಯ ೨೪: ಭೀಷ್ಮನು ಯಾರ ಹಣೆಗೆ ಬಾಣವನ್ನು ಬಿಟ್ಟನು?

ಮತ್ತೆ ರಥವನು ಹರಿಸಿ ಭೀಷ್ಮನ
ಹತ್ತೆ ಬರೆ ಕಟ್ಟಳವಿಯಲಿ ಹಾ
ಮುತ್ತಯನು ಸಿಲುಕಿದನು ಶಿವಶಿವಯೆನುತ ಬಲ ಬೆದರೆ
ಹತ್ತು ಶರದಲಿ ಕೃಷ್ಣರಾಯನ
ಮತ್ತೆ ಮುಸುಕಿದ ಬಹಳ ಭಾರ್ಗವ
ದತ್ತ ಬಾಣವ ತೊಡಚಿ ದೇವನ ನೊಸಲ ಕೀಲಿಸಿದ (ಭೀಷ್ಮ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮತ್ತೆ ರಥವನ್ನು ನಡೆಸಿ ಭೀಷ್ಮನ ಎದುರಿನಲ್ಲೇ ಮುಖಾಮುಖಿ ತಂದು ನಿಲ್ಲಿಸಲು, ಪಿತಾಮಹನು ಅರ್ಜುನನಿಗೆ ಸೆರೆ ಸಿಕ್ಕನೆಂದು ಕೌರವ ಸೈನ್ಯವು ಬೆದರಿ ಉದ್ಗರಿಸಿತು. ಆಗ ಭೀಷ್ಮನು ಹತ್ತು ಬಾಣಗಳಿಂದ ಶ್ರೀಕೃಷ್ಣನನ್ನು ಹೊಡೆದು ಪರಶುರಾಮರು ಕೊಟ್ಟಿದ್ದ ಬಾಣವನ್ನು ಶ್ರೀಕೃಷ್ಣನ ಹಣೆಗೆ ಗುರಿಯಿಟ್ಟು ಬಿಟ್ಟನು.

ಅರ್ಥ:
ರಥ: ಬಂಡಿ; ಹರಿಸು: ಓಡಾಡು; ಹತ್ತೆ: ಹತ್ತಿರ, ಸಮೀಪ; ಬರೆ: ಆಗಮಿಸು; ಅಳವಿ: ಶಕ್ತಿ, ಯುದ್ಧ; ಮುತ್ತಯ: ಮುತ್ತಾತ; ಸಿಲುಕು: ಬಂಧನಕ್ಕೊಳಗಾಗು; ಬಲ: ಶಕ್ತಿ; ಬೆದರು: ಹೆದರು; ಶರ: ಬಾಣ; ಮುಸುಕು: ಹೊದಿಕೆ; ಭಾರ್ಗವ: ಪರಶುರಾಮ; ತೊಡಚು: ಕಟ್ಟು, ಬಂಧಿಸು; ನೊಸಲು: ಹಣೆ; ಕೀಲಿಸು: ಜೋಡಿಸು, ನಾಟು; ದತ್ತ: ನೀಡಿದ;

ಪದವಿಂಗಡಣೆ:
ಮತ್ತೆ +ರಥವನು +ಹರಿಸಿ +ಭೀಷ್ಮನ
ಹತ್ತೆ +ಬರೆ +ಕಟ್ಟಳವಿಯಲಿ +ಹಾ
ಮುತ್ತಯನು +ಸಿಲುಕಿದನು+ ಶಿವಶಿವಯೆನುತ+ ಬಲ+ ಬೆದರೆ
ಹತ್ತು +ಶರದಲಿ +ಕೃಷ್ಣರಾಯನ
ಮತ್ತೆ +ಮುಸುಕಿದ+ ಬಹಳ +ಭಾರ್ಗವ
ದತ್ತ +ಬಾಣವ +ತೊಡಚಿ +ದೇವನ+ ನೊಸಲ+ ಕೀಲಿಸಿದ

ಅಚ್ಚರಿ:
(೧) ಮತ್ತೆ, ಹತ್ತೆ; ಮುತ್ತ, ದತ್ತ – ಪ್ರಾಸ ಪದಗಳು
(೨) ಬ ಕಾರದ ತ್ರಿವಳಿ ಪದ – ಬಹಳ ಭಾರ್ಗವದತ್ತ ಬಾಣವ

ಪದ್ಯ ೨೨: ಶ್ರೀಕೃಷ್ಣನು ಹೇಗೆ ರಥವನ್ನು ನಡೆಸಿದನು?

ಎತ್ತಲೊಲೆದನದೆತ್ತ ಸರಿದನ
ದೆತ್ತ ಜಾರಿದನೆತ್ತ ತಿರುಗಿದ
ನೆತ್ತ ಹಿಂಗಿದನೆತ್ತಲೌಕಿದನೆತ್ತಲುರುಬಿದನು
ಅತ್ತಲತ್ತಲು ರಥಹಯವ ಬಿಡ
ದೊತ್ತಿ ಬೀದಿಗೆ ನೂಕಿ ಪಾರ್ಥನ
ಮುತ್ತಯನ ಸಂಮ್ಮುಖಕೆ ಬಿಡದೌಕಿದನು ಮುರವೈರಿ (ಭೀಷ್ಮ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಷ್ಮನು ಎತ್ತ ತಿರುಗಿದನೋ, ಸರಿದನೋ, ಜಾರಿದನೋ, ಹಿಮ್ಮೆಟ್ಟಿದನೋ, ಮುಂದೆ ಬಂದನೋ ತಡೆಯಲೆತ್ನಿಸಿದನೋ ಅತ್ತಲತ್ತಲೇ ಶ್ರೀಕೃಷ್ಣನು ಅರ್ಜುನನ ರಥದ ಕುದುರೆಗಳನ್ನು ನಡೆಸಿ ಭೀಷ್ಮನ ಸಮ್ಮುಖಕ್ಕೆ ರಥವನ್ನೊಯ್ಯಲಾರಂಭಿಸಿದನು.

ಅರ್ಥ:
ಸರಿ: ಹೋಗು, ಗಮಿಸು, ಓಡಿಹೋಗು; ಜಾರು: ನುಣುಚಿಕೊಳ್ಳು; ತಿರುಗು: ಅಲೆದಾಡು; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಔಕು: ಒತ್ತು; ಉರುಬು:ಮೇಲೆ ಬೀಳು; ರಥ: ಬಂಡಿ; ಹಯ: ಕುದುರೆ; ಬೀದಿ: ದಾರಿ; ನೂಕು: ತಳ್ಳು; ಮುತ್ತಯ್ಯ: ತಾತ; ಸಮ್ಮುಖ: ಎದುರು; ಮುರವೈರಿ: ಕೃಷ್ಣ;

ಪದವಿಂಗಡಣೆ:
ಎತ್ತಲ್+ಒಲೆದನದ್+ಎತ್ತ +ಸರಿದನದ್
ಎತ್ತ +ಜಾರಿದನ್+ಎತ್ತ +ತಿರುಗಿದನ್
ಎತ್ತ +ಹಿಂಗಿದನ್+ಎತ್ತಲ್+ಔಕಿದನ್+ಎತ್ತಲ್+ಉರುಬಿದನು
ಅತ್ತಲತ್ತಲು +ರಥ+ಹಯವ +ಬಿಡದ್
ಒತ್ತಿ +ಬೀದಿಗೆ +ನೂಕಿ +ಪಾರ್ಥನ
ಮುತ್ತಯನ +ಸಂಮ್ಮುಖಕೆ+ ಬಿಡದ್+ಔಕಿದನು +ಮುರವೈರಿ

ಅಚ್ಚರಿ:
(೧) ಭೀಷ್ಮನನ್ನು ಪಾರ್ಥನ ಮುತ್ತಯ ಎಂದು ಕರೆದಿರುವುದು

ಪದ್ಯ ೨೯: ಅರ್ಜುನನೇಕೆ ದುಃಖಿಸಿದ?

ಕೆಲಬರೊಡಹುಟ್ಟಿದರು ಗುರುಗಳು
ಕೆಲರು ಕೆಲಬರು ಮಾವ ಮೈದುನ
ನಳಿಯ ಮಗ ಹಿರಿಯಯ್ಯ ಮುತ್ತಯ ಮೊಮ್ಮನೆನಿಸುವರು
ಕಳದೊಳಿನಿಬರ ಕೊಂದು ಶಿವಶಿವ
ಕೆಲವು ದಿವಸದ ಸಿರಿಗೆ ಸೋಲಿದು
ಮುಳುಗುವೆನೆ ಭುವಸಿಂಧುವಿನೊಳಾನೆನುತ ಮನಮುರಿದ (ಭೀಷ್ಮ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ನನ್ನೊಡನೆ ಯುದ್ಧಕ್ಕೆ ನಿಂತ ಶತ್ರುಗಳಲ್ಲಿ ಕೆಲವರು ಅಣ್ಣತಮ್ಮಂದಿರು, ಕೆಲವರು ಗುರುಗಳು, ಮಾವ, ಮೈದುನ, ಅಳಿಯ, ಮಗ, ದೊಡ್ಡಪ್ಪ, ಅಜ್ಜ, ಮೊಮ್ಮಗ ಮೊದಲಾದವರು ಕೆಲವರು. ಕೆಲವೇ ದಿನ ಅನುಭವಿಸುವ ಸಿರಿಗಾಗಿ ಇವರನ್ನು ಕೊಂದು ಶಿವಶಿವಾ ಸಂಸಾರ ಸಮುದ್ರದಲ್ಲಿ ಮುಳುಗಬೇಕೆ, ಎಂದು ಯೋಚಿಸಿದ ಅವನ ಮನಸ್ಸು ಮುರಿದುಹೋಯಿತು.

ಅರ್ಥ:
ಕೆಲಬರು: ಕೆಲವರು; ಒಡಹುಟ್ಟು: ಜೊತೆಯಲ್ಲಿ ಜನಿಸಿದವರು; ಗುರು: ಆಚಾರ್ಯ; ಮೈದುನ: ಗಂಡ ಯಾ ಹೆಂಡತಿಯ ತಮ್ಮ; ಅಳಿಯ: ಮಗಳ ಗಂಡ, ಸೋದರಿಯ ಮಗ; ಮಗ: ಸುತ; ಹಿರಿಯಯ್ಯ: ದೊಡ್ಡಪ್ಪ; ಅಯ್ಯ: ತಂದೆ; ಮುತ್ತಯ್ಯ: ಮುತ್ತಜ್ಜ; ಮೊಮ್ಮ: ಮೊಮ್ಮಗ; ಕಳ: ಯುದ್ಧ; ಇನಿಬರು: ಇಷ್ಟು ಜನ; ಕೊಂದು: ಸಾಯಿಸು; ಸಿರಿ: ಐಶ್ವರ್ಯ; ಸೋಲು: ಪರಾಭವ; ಮುಳುಗು: ನೀರಿನಲ್ಲಿ ಮೀಯು, ಮುಚ್ಚಿಹೋಗು; ದಿವಸ: ದಿನ; ಭವ: ಇರುವಿಕೆ, ಅಸ್ತಿತ್ವ; ಸಿಂಧು: ಸಾರಗ; ಮನ: ಮನಸ್ಸು; ಮುರಿ: ಸೀಳು;

ಪದವಿಂಗಡಣೆ:
ಕೆಲಬರ್+ಒಡಹುಟ್ಟಿದರು+ ಗುರುಗಳು
ಕೆಲರು +ಕೆಲಬರು+ ಮಾವ +ಮೈದುನನ್
ಅಳಿಯ +ಮಗ +ಹಿರಿಯಯ್ಯ +ಮುತ್ತಯ ಮೊಮ್ಮನ್+ಎನಿಸುವರು
ಕಳದೊಳ್+ಇನಿಬರ+ ಕೊಂದು +ಶಿವಶಿವ
ಕೆಲವು+ ದಿವಸದ+ ಸಿರಿಗೆ+ ಸೋಲಿದು
ಮುಳುಗುವೆನೆ+ ಭುವಸಿಂಧುವಿನೊಳ್+ಆನ್+ಎನುತ +ಮನಮುರಿದ

ಅಚ್ಚರಿ:
(೧) ಸಂಬಂಧದ ಹೆಸರು – ಮಾವ, ಮೈದುನ, ಅಳಿಯ, ಮಗ, ಹಿರಿಯಯ್ಯ ಮುತ್ತಯ ಮೊಮ್ಮ, ಗುರು, ಒಡಹುಟ್ಟಿದ

ಪದ್ಯ ೧೭: ಕರ್ಣನು ಅರ್ಜುನನಿಗೆ ಹೇಗೆ ಎದುರಾದನು?

ಇತ್ತಲಿತ್ತಲು ಪಾರ್ಥ ನಿಲುನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ (ವಿರಾಟ ಪರ್ವ, ೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅರ್ಜುನ, ನಿಲ್ಲು ನಿಲ್ಲು, ಮುದುಕರನ್ನು ಬ್ರಾಹ್ಮಣರನ್ನು ಹೆದರಿಸಿ ಕಾಲ ಕಳೆದರೆ ಯುದ್ಧದಲ್ಲಿ ಜಯ ಸಿಕ್ಕ ಹಾಗಲ್ಲ, ಎದುರು ನಿಂತು ನಿನ್ನ ಕೈಚಳಕವನ್ನು ತೋರಿಸು, ನಿನ್ನ ಬಂಧುಗಳನ್ನು ನಂಟರನ್ನು ನಿನ್ನ ಸಹಾಯಕ್ಕೆ ಕರೆದುಕೊ, ಏಕೆಂದರೇ ನಿನ್ನ ಬೇರನ್ನೇ ಕಿತ್ತು ಸಮುದ್ರದಲ್ಲಿ ತೊಳೆಯುವ ಪರಬಲ ಮೃತ್ಯುವಾದ ಕರ್ಣನು ಬಂದಿದ್ದಾನೆ ಎಂದು ಕರ್ಣನು ಅರ್ಜುನನೆದುರು ಯುದ್ಧಕ್ಕೆ ಬಂದನು.

ಅರ್ಥ:
ನಿಲು: ನಿಲ್ಲು, ತಡೆ; ಮುತ್ತಯ್ಯ: ತಾತ, ಮುದುಕ; ಹಾರುವ: ಬ್ರಾಹ್ಮಣ; ಅಂಜಿಸು: ಹೆದರಿಸು; ಹೊತ್ತು: ಸಮಯ; ಕಳೆ: ವ್ಯಯ; ಕೈದೋರು: ಕೈಚಳಕವನ್ನು ಪ್ರದರ್ಶಿಸು; ಮೈದೋರು: ಎದುರು ಬಾ; ತೆತ್ತಿಗ: ಬಂಧು, ನಂಟ; ಕರೆ: ಬರೆಮಾಡು; ಬೇರು: ಬುಡ; ಕಿತ್ತು: ಕೀಳು, ಹೊರಹಾಕು; ಕಡಲು: ಸಾಗರ; ತೊಳೆ: ಸ್ವಚ್ಛಮಾಡು; ರಿಪು: ವೈರಿ; ಭಟ: ಸೈನಿಕ; ಮೃತ್ಯು: ಸಾವು; ಅರಿ: ತಿಳಿ; ಇದಿರು: ಎದುರು; ನಡೆ: ಚಲಿಸು;

ಪದವಿಂಗಡಣೆ:
ಇತ್ತಲಿತ್ತಲು+ ಪಾರ್ಥ +ನಿಲುನಿಲು
ಮುತ್ತಯನ+ ಹಾರುವರನ್+ಅಂಜಿಸಿ
ಹೊತ್ತು+ಕಳೆದಡೆ +ಹೋಹುದೇ +ಕೈದೋರು +ಮೈದೋರು
ತೆತ್ತಿಗರ+ ಕರೆ+ ನಿನ್ನ +ಬೇರನು
ಕಿತ್ತು +ಕಡಲೊಳು +ತೊಳೆವ +ರಿಪುಭಟ
ಮೃತ್ಯುವ್+ಅರಿ+ಆ+ ಕರ್ಣನ್+ಎನುತ್+ಇದಿರಾಗಿ +ನಡೆತಂದ

ಅಚ್ಚರಿ:
(೧) ಕರ್ಣನ ಪ್ರತಾಪದ ಮಾತು – ನಿನ್ನ ಬೇರನು ಕಿತ್ತು ಕಡಲೊಳು ತೊಳೆವ ರಿಪುಭಟ ಮೃತ್ಯುವರಿಯಾ ಕರ್ಣನ್