ಪದ್ಯ ೧೦: ಅರ್ಜುನನ ನಿಪುಣತೆ ಹೇಗಿತ್ತು?

ಬಾಗಿಸಿದ ಬಿಲ್ಲಿನಲಿ ರಾಯರ
ಮೂಗಕೊಯ್ದನು ಮದುವೆಯಲಿ ನೀ
ನೀಗಳೊದರುವೆ ಕೌರವೇಂದ್ರನನಂದು ಬಿಡಿಸಿದೆಲ
ಆ ಗರುವ ಸೈಂಧವನ ಮುಡಿಯ ವಿ
ಭಾಗಿಸಿದ ಭಟನಾರು ಪಾರ್ಥನ
ಲಾಗುವೇಗವನಾರು ಬಲ್ಲರು ಕರ್ಣ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಸ್ವಯಂವರದಲ್ಲಿ ಸೇರಿದ್ದ ಎಲ್ಲಾ ರಾಜರ ಮೂಗನ್ನು ಮುರಿಯುವಂತೆ ಬಿಲ್ಲನ್ನು ಹೆದೆಯೇರಿಸಲಿಲ್ಲವೇ? ಈಗ ನೀನು ಒದರುತ್ತಿದ್ದೀಯಲ್ಲಾ, ಘೋಷಯಾತ್ರೆಯಲ್ಲಿ ಸೆರೆಸಿಕ್ಕ ಕೌರವನನ್ನು ಬಿಡಿಸಿದವರಾರು ಸೈಂಧವನ ಮುಡಿಯನ್ನು ಕತ್ತರಿಸಿದವರು ಯಾರು? ಅರ್ಜುನನು ಬಾಣ ತೆಗೆಯುವುದನ್ನು, ಅದನ್ನು ಹೂಡಿ, ಬಿಡುವ ಚತುರತೆಯನ್ನು ಯಾರು ಬಲ್ಲರು ಎಂದು ಕೃಪಾಚಾರ್ಯರು ಕರ್ಣನಿಗೆ ಕೇಳಿದನು.

ಅರ್ಥ:
ಬಾಗಿಸು: ಎರಗು; ಬಿಲ್ಲು: ಚಾಪ, ಧನುಸ್ಸು; ರಾಯ: ರಾಜ; ಮೂಗು: ನಾಸಿಕ; ಕೊಯ್ದು: ಸೀಳು; ಮದುವೆ: ವಿವಾಹ; ಒದರು: ಹೇಳು; ಬಿಡಿಸು: ಕಳಚು, ಸಡಿಲಿಸು; ಗರುವ: ಹಿರಿಯ, ಶ್ರೇಷ್ಠ; ಮುಡಿ: ಶಿರ; ವಿಭಾಗಿಸು: ಭಾಗ ಮಾಡು, ವಿಂಗಡಿಸು; ಭಟ: ಸೈನಿಕ; ಲಾಗು:ರಭಸ, ತೀವ್ರತೆ; ವೇಗ: ರಭಸ; ಬಲ್ಲರು: ತಿಳಿಯರು; ಕೇಳು: ಆಲಿಸು;

ಪದವಿಂಗಡಣೆ:
ಬಾಗಿಸಿದ +ಬಿಲ್ಲಿನಲಿ +ರಾಯರ
ಮೂಗಕೊಯ್ದನು +ಮದುವೆಯಲಿ +ನೀನ್
ಈಗಳ್+ಒದರುವೆ +ಕೌರವೇಂದ್ರನನ್+ಅಂದು+ ಬಿಡಿಸಿದೆಲ
ಆ +ಗರುವ +ಸೈಂಧವನ +ಮುಡಿಯ +ವಿ
ಭಾಗಿಸಿದ+ ಭಟನಾರು +ಪಾರ್ಥನ
ಲಾಗುವೇಗವನ್+ಆರು +ಬಲ್ಲರು +ಕರ್ಣ +ಕೇಳೆಂದ

ಅಚ್ಚರಿ:
(೧) ರಾಜರನ್ನು ಅವಮಾನಿಸಿದ ಎಂದು ಹೇಳುವ ಪರಿ – ಬಾಗಿಸಿದ ಬಿಲ್ಲಿನಲಿ ರಾಯರ ಮೂಗಕೊಯ್ದನು ಮದುವೆಯಲಿ

ಪದ್ಯ ೧೫: ಸೈರಂಧ್ರಿಯು ಏಕೆ ಬಿದ್ದಳು?

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು (ವಿರಾಟ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಓಡುವುದನ್ನು ನೋಡಿ, ಕೀಚಕನು ಅವಳ ಹಿಂದೆಯೇ ಬೆನ್ನು ಹತ್ತಿ ಓಡಿದನು. ಅವಳ ತಲೆಗೂದಲನ್ನು ಹಿಡಿದು ಏ ದಾಸಿಯ ಮಗಳೇ, ಓಡಿ ಹೋದರೆ ಬಿಟ್ಟು ಬಿಡುವೆನೇ ಎಂದು ಕೋಪದಿಂದ ಕೂಗುತ್ತಾ ಕಾಲಿನಿಂದ ಅವಳನ್ನು ಒದೆದು ಅವಳನ್ನು ಮೆಟ್ಟಿ ಹೊಡೆದನು. ಆ ಹೊಡೆತಕ್ಕೆ ಕೆಳಕ್ಕೆ ಉರುಳಿದ ಸೈರಂಧ್ರಿಯು ರಕ್ತವನ್ನು ಕಾರಿ, ಕೇಶರಾಶಿಯ ಹುಡಿಮಣ್ಣಿನಲ್ಲಿ ಹೊರಳುತ್ತಿದ್ದಳು, ಬಿರುಗಾಳಿಗೆ ಮುರಿದು ಬಿದ್ದ ಬಾಳೆಯ ಮರದಂತೆ ದ್ರೌಪದಿಯು ನೆಲದಲ್ಲಿ ಹೊರಳಿದಳು.

ಅರ್ಥ:
ಒಡನೆ: ಕೂಡಲೆ; ಬೆಂಬತ್ತು: ಹಿಂಬಾಲಿಸು; ತುರುಬು: ತಲೆಗೂದಲು; ಹಿಡಿ: ಗ್ರಹಿಸು; ತೊತ್ತು: ದಾಸಿ; ಮಗಳು: ಸುತೆ; ಹಾಯ್ದು: ಓಡು, ಚೆಲ್ಲು; ಬಿಡು: ತೊರೆ; ಫಡ: ಬಯ್ಯುವ ಒಂದು ಪದ; ಹೊಯ್ದು: ಹೊಡೆ; ಕಾಲು: ಪಾದ; ಮೆಟ್ಟು: ತುಳಿದು ನಿಲ್ಲು; ಕೆಡೆ: ಬೀಳು, ಕುಸಿ; ರಕುತ: ನೆತ್ತರು; ಕಾರು: ಕೆಸರು; ಹುಡಿ: ಮಣ್ಣು; ಹೊರಳು: ಉರುಳಾಡು, ಉರುಳು; ಬಿರುಗಾಳಿ: ಜೋರಾದ ಗಾಳಿ; ಸೈಗೆಡೆ: ಅಡ್ಡಬೀಳು; ಕದಳಿ: ಬಾಳೆ; ಕಂಬ: ಉದ್ದನೆಯ ಕೋಲು, ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಕಾಂತೆ: ಹೆಣ್ಣು; ಹೊರಳು: ಉರುಳು;

ಪದವಿಂಗಡಣೆ:
ಒಡನೆ +ಬೆಂಬತ್ತಿದನು +ತುರುಬನು
ಹಿಡಿದು +ತೊತ್ತಿನ +ಮಗಳೆ +ಹಾಯ್ದರೆ
ಬಿಡುವೆನೇ +ಫಡ+ಎನುತ +ಹೊಯ್ದನು +ಕಾಲಲ್+ಒಡೆಮೆಟ್ಟಿ
ಕೆಡೆದು+ ರಕುತವ +ಕಾರಿ +ಹುಡಿಯಲಿ
ಮುಡಿ +ಹೊರಳಿ +ಬಿರುಗಾಳಿಯಲಿ+ ಸೈ
ಗೆಡೆದ +ಕದಳಿಯ+ ಕಂಬದಂತಿರೆ +ಕಾಂತೆ +ಹೊರಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು

ಪದ್ಯ ೩೧: ಯಾವ ಮಾರ್ಗದಲ್ಲಿ ನಡೆಯಲು ವ್ಯಾಸರು ಉಪದೇಶಿಸಿದರು?

ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ದೊಡೆ ಸತ್ಯವೊಂದನೆ ನಂಬು ನೀನೆಂದ (ಸಭಾ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ವೇದವ್ಯಾಸರು ಧರ್ಮಜನನ್ನು ಎಚ್ಚರಿಸುತ್ತಾ, ಅಸತ್ಯವನ್ನು ಎಂದಿಗೂ ಆಡಬೇಡ, ರಾಜ್ಯವನ್ನು ಕಳೆದುಕೊಳ್ಲಲು ಹೆದರಬೇಡ. ದ್ರೌಪದಿಯ ಮುಡಿಯನ್ನು ಹಿಡಿದೆಳೆದರೂ ನೀನು ಅಧರ್ಮಕ್ಕೆ ಮನಸ್ಸು ಕೊಡಬೇಡ. ಸಮಸ್ತ ಐಶ್ವರ್ಯವೂ ದೇಹವೂ ನಾಶವಾಗುವಂತಹವು. ಮೋಕ್ಷಲಕ್ಷ್ಮಿಯನ್ನು ಪಡೆಯಲು ಸತ್ಯವೊಂದೇ ಮಾರ್ಗ ಅದರ ಆಶ್ರಯವನ್ನು ಪಡೆ ಎಂದು ವ್ಯಾಸರು ತಿಳಿಸಿದರು.

ಅರ್ಥ:
ಅಸತ್ಯ: ಸುಳ್ಳು; ನುಡಿ: ಮಾತು; ರಾಜ್ಯ: ರಾಷ್ಟ್ರ; ಬಿಡು: ತೊರೆ; ವಿಭಾಡ: ನಾಶಮಾಡುವವನು, ಸೋಲಿಸುವವನು; ವಧು: ಹೆಣ್ಣು, ಹೆಂಡತಿ; ಮುಡಿ: ತಲೆ; ಹಾಯ್ಕು: ಹಾಕು; ಅಧರ್ಮ: ಧರ್ಮಕ್ಕೆ ವಿರುದ್ಧವಾದುದು, ನ್ಯಾಯವಲ್ಲದುದು; ತಡಿ:ದಡ, ತಟ, ದಂಡೆ; ಅಡರು: ಆಸರೆ; ಒಡಲು: ದೇಹ; ಸಮಸ್ತ: ಎಲ್ಲಾ; ಧನ: ಐಶ್ವರ್ಯ; ಕೆಡು: ಹಾಳಾಗು; ಅಗ್ಗ: ಶ್ರೇಷ್ಠ; ಮೋಕ್ಷ: ಬಿಡುಗಡೆ, ಮುಕ್ತಿ, ನಿರ್ವಾಣ; ಮುಡಿ: ಶಿರ, ತಲೆ; ಸತ್ಯ: ದಿಟ; ನಂಬು: ವಿಶ್ವಾಸವಿಡು;

ಪದವಿಂಗಡಣೆ:
ನುಡಿಯದಿರ್+ಅಸತ್ಯವನು +ರಾಜ್ಯವ
ಬಿಡು +ವಿಭಾಡಿಸಿ+ ನಿನ್ನ+ ವಧುವಿನ
ಮುಡಿಗೆ +ಹಾಯ್ದರೆ +ನೀನ್+ಅಧರ್ಮದ +ತಡಿಯನ್+ಅಡರದಿರು
ಒಡಲುಗೂಡಿ +ಸಮಸ್ತ +ಧನವಿದು
ಕೆಡುವುದ್+ಅಗ್ಗದ +ಮೋಕ್ಷಲಕ್ಷ್ಮಿಯ
ಮುಡಿಗೆ +ಹಾಯ್ದೊಡೆ +ಸತ್ಯವೊಂದನೆ+ ನಂಬು +ನೀನೆಂದ

ಅಚ್ಚರಿ:
(೧) ಅಸತ್ಯ, ಸತ್ಯ – ವಿರುದ್ಧ ಪದಗಳು
(೨) ವಧುವಿನ ಮುಡಿಗೆ, ಮೋಕ್ಷಲಕ್ಷ್ಮಿಯ ಮುಡಿಗೆ – ಪದಗಳ ಬಳಕೆ

ಪದ್ಯ ೮೩: ಭೀಮನು ದ್ರೌಪದಿಯನ್ನು ಹೇಗೆ ಸಿಂಗರಿಸಿದನು?

ಖಳನ ತೆಳುದೊಗಲುಗಿದು ವಾಸ
ಚ್ಛಲವ ಸಲಿಸಿದನವನ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಚೀಚಕವೈರಿ ನೋಡಿದನೊಲಿದು ನಿಜಸತಿಯ (ಕರ್ಣ ಪರ್ವ, ೧೯ ಸಂಧಿ, ೮೩ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನ ತೆಳು ಚರ್ಮವನ್ನು ಸುಲಿದು ಅವಳ ಬಟ್ಟೆಗೆ ಅಂಟಿಸಿದನು. ಹೊಟ್ಟೆಯೊಳಗಿನಿಂದ ಕರುಳನ್ನು ಕಿತ್ತು ಅವಳ ಮುಡಿಗೆ ಮುಡಿಸಿದನು. ಖಳನ ಎದೆಯ ರಕ್ತವನ್ನು ಸೆಳೆದು ಅವಳಿಗೆ ತಿಲಕವನ್ನಿಟ್ಟನು. ಹರ್ಷೋದ್ಗಾರ ಮಾಡುತ್ತಾ ಭೀಮನು ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡಿದನು.

ಅರ್ಥ:
ಖಳ: ದುಷ್ಟ; ತೆಳು:ಸಣ್ಣ, ಮೆದು; ತೊಗಲು: ಚರ್ಮ; ವಾಸಚ್ಛಲ: ಬಟ್ಟೆಯ ವ್ಯಾಜ, ನೆಪ; ಸಲಿಸು: ದೊರಕಿಸಿ ಕೊಡು; ಜಠರ: ಹೊಟ್ಟೆ; ಒಳ: ಆಂತರ್ಯದ; ಕರುಳು: ಪಚನಾಂಗ; ಉಗಿ: ಹೊರಕ್ಕೆ ತೆಗೆ; ಅಬುಜವದನೆ: ಕಮಲ ಮುಖಿ; ಮುಡಿ: ಶಿರ, ತಲೆ; ಮುಡಿಸು: ತೊಡಿಸು; ತಳುಕು: ಚಲಿಸು, ಅಲ್ಲಾಡು; ಉರ: ಎದೆ, ವಕ್ಷಸ್ಥಳ; ರಕ್ತ: ನೆತ್ತರು; ತಿಳಕ: ಹಣೆಯಲ್ಲಿಡುವ ಬೊಟ್ಟು; ರಚಿಸು: ನಿರ್ಮಿಸು, ಕಟ್ಟು; ಹರುಷ: ಸಂತೋಷ; ಉಲಿ: ಧ್ವನಿಮಾಡು; ಕೀಚಕವೈರಿ: ಭೀಮ; ಒಲಿ: ಸಮ್ಮತಿಸು, ಬಯಸು; ಸತಿ: ಹೆಂಡತಿ;

ಪದವಿಂಗಡಣೆ:
ಖಳನ +ತೆಳು+ ತೊಗಲುಗಿದು+ ವಾಸ
ಚ್ಛಲವ+ ಸಲಿಸಿದನ್+ಅವನ +ಜಠರದೊಳ್
ಒಳ+ಕರುಳನ್+ಉಗಿದ್+ಅಬುಜವದನೆಯ +ಮುಡಿಗೆ +ಮುಡಿಸಿದನು
ತಳುಕಿದನು +ಖಳನುರದ+ ರಕ್ತದ
ತಿಳಕವನು+ ರಚಿಸಿದನು +ಹರುಷದೊಳ್
ಉಲಿದು+ ಕೀಚಕವೈರಿ+ ನೋಡಿದನ್+ಒಲಿದು +ನಿಜ+ಸತಿಯ

ಅಚ್ಚರಿ:
(೧) ದ್ರೌಪದಿಯನ್ನು ಸಿಂಗರಿಸುವ ಪರಿ – ಖಳನುರದ ರಕ್ತದತಿಳಕವನು ರಚಿಸಿದನು; ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು

ಪದ್ಯ ೮೨:ಭೀಮನು ದ್ರೌಪದಿಯನ್ನು ಏನು ಕೇಳಿದನು?

ಮುಡಿಗೆ ಹಾಯ್ದವನುದರರಕ್ತವ
ತೊಡೆದು ಕಬರಿಯ ಕಟ್ಟೆ ಕಟ್ಟುವೆ
ನುಡಿಗೆಯಳಿದನ ಚರ್ಮವನು ನೀನುಡಿಸಲುಟ್ಟಪೆನು
ಎಡೆಯಲೊಯ್ಯಾರದಲಿ ಕಟ್ಟೆನು
ಮುಡಿಯ ಮಡಿಯುಡೆನೆಂಬ ತೇಜದ
ನುಡಿದ ನುಡಿ ಸಲೆ ಸಂದುದೇ ತನ್ನಾಣೆ ಹೇಳೆಂದ (ಕರ್ಣ ಪರ್ವ, ೧೯ ಸಂಧಿ, ೮೨ ಪದ್ಯ)

ತಾತ್ಪರ್ಯ:
ನಿನ್ನ ತಲೆಗೂದಲಿಗೆ ಕೈ ಬಾಚಿದವನ ರಕ್ತವನ್ನು ಲೇಪಿಸಿ ಮುಡಿಯನ್ನು ಕಟ್ಟುತ್ತೇನೆ. ನನ್ನ ವಸ್ತ್ರವನ್ನೆಳೆದವನ ಚರ್ಮವನ್ನು ನೀನು ಉಡಿಸಿದರೆ ಉಡುತ್ತೇನೆ ಎಂದು ನೀನು ಘಂತಾಘ್ಷವಾಗಿ ಹೇಳಿದ ಮಾತು ಪೂರ್ಣವಾಯಿತೇ? ದ್ರೌಪದಿ ನನ್ನಾಣೆಯಾಗಿ ಹೇಳು, ಎಂದು ಭೀಮನು ದ್ರೌಪದಿಯನ್ನು ಕೇಳಿದನು.

ಅರ್ಥ:
ಮುಡಿ: ಶಿರ; ಹಾಯ್ದು: ಹೊಡೆದ, ಹಾಕಿದ; ಉದರ: ಹೊಟ್ಟೆ, ಜಠರ; ರಕ್ತ: ನೆತ್ತರು; ತೊಡೆ:ಲೇಪಿಸು, ಬಳಿ, ಸವರು; ಕಬರಿ: ಹೆರಳು, ಜಡೆ; ಕಟ್ಟು: ಬಂಧಿಸು; ನುಡಿ: ಮಾತು; ಅಳಿ: ಸಾವು; ಚರ್ಮ: ತೊಗಲು; ಉಡಿಸು: ತೊಡು; ಎಡೆ:ಬಹಳವಾಗಿ; ಒಯ್ಯಾರ: ಬೆಡಗು, ಬಿನ್ನಾಣ; ಮಡಿ: ಶುಭ್ರ, ನೈರ್ಮಲ್ಯ; ಉಡು: ತೊಡು; ತೇಜ: ಪ್ರಕಾಶ; ನುಡಿ: ಮಾತು; ಸಂದು: ಅವಕಾಶ, ಸಂದರ್ಭ; ಆಣೆ: ಪ್ರಮಾಣ; ಹೇಳು: ತಿಳಿಸು;

ಪದವಿಂಗಡಣೆ:
ಮುಡಿಗೆ +ಹಾಯ್ದವನ್+ಉದರ+ರಕ್ತವ
ತೊಡೆದು +ಕಬರಿಯ +ಕಟ್ಟೆ +ಕಟ್ಟುವೆ
ನುಡಿಗೆ+ಅಳಿದನ +ಚರ್ಮವನು +ನೀನ್+ಉಡಿಸಲ್+ಉಟ್ಟಪೆನು
ಎಡೆಯಲ್+ಒಯ್ಯಾರದಲಿ +ಕಟ್ಟೆನು
ಮುಡಿಯ +ಮಡಿಯುಡೆನೆಂಬ+ ತೇಜದ
ನುಡಿದ+ ನುಡಿ+ ಸಲೆ+ ಸಂದುದೇ +ತನ್ನಾಣೆ+ ಹೇಳೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಬರಿಯ ಕಟ್ಟೆ ಕಟ್ಟುವೆ

ಪದ್ಯ ೫೧: ಭೀಮನು ದುಶ್ಯಾಸನನನ್ನು ಹೇಗೆ ಮೂದಲಿಸಿದನು?

ಸಿಕ್ಕಿದೆಯಲಾ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ ಹಿಂದೆ ಜೂಜಿನ
ಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು
ಚುಕ್ಕಿಗಳಲಾ ನಿನ್ನವರು ಕೈ
ಯಿಕ್ಕ ಹೇಳಾ ನಿನ್ನನೊಬ್ಬನ
ನಿಕ್ಕಿ ನೋಡಿದರಕಟೆನುತ ಮೂದಲಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೫೧ ಪದ್ಯ)

ತಾತ್ಪರ್ಯ:
ಎಲಾ ಸ್ವಾಮಿದ್ರೋಹಿಯೇ ನನಗೆ ಸಿಕ್ಕಿದೆಯಲಾ ಈಗ, ಬಹಳ ಮದದಿಂದ ಬೀಗುತ್ತಿದ್ದೆ! ಹಿಂದೆ ಜೂಜಾಟದಲ್ಲಿ ಹೊಟ್ಟೆಕಿಚ್ಚು ಪಟ್ಟು ದ್ರೌಪದಿಯ ಮುಡಿಗೆ ಕೈಹಾಕಿ ನಿನ್ನ ಕೋಪವನ್ನು ತೋರಿಸಿದೆಯಲ್ಲವೇ? ನಿನ್ನವರು ಕ್ಷುಲ್ಲಕರು, ನಿನ್ನೊಬ್ಬನನ್ನು ಕೈಬಿಟ್ಟು ನೋಡುತ್ತಿದ್ದಾರೆ, ಯುದ್ಧಕ್ಕೆ ಬಾ ಎಂದು ಹೇಳು, ಹೀಗೆ ಹೇಳುತ್ತಾ ಭೀಮನು ದುಶ್ಯಾಸನನನ್ನು ಮೂದಲಿಸಿದನು.

ಅರ್ಥ:
ಸಿಕ್ಕು: ಬಂಧಿಸು; ಸ್ವಾಮಿದ್ರೋಹಿ: ವಿಶ್ವಾಸಘಾತುಕ; ಸ್ವಾಮಿ: ಒಡೆಯ; ದ್ರೋಹಿ: ವಂಚಕ; ಸೊಕ್ಕು: ಅಮಲು, ಮದ; ಹಿಂದೆ: ಮೊದಲು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಅಕ್ಕಜ: ಹೊಟ್ಟೆಕಿಚ್ಚು; ಮಾನಿನಿ: ಹೆಣ್ಣು; ಮುಡಿ: ತಲೆ; ವಿಡಿದು: ಹಿಡಿ, ಬಂಧಿಸು; ಚುಕ್ಕಿಗಳು: ಅಲ್ಪರು; ಅಕಟ: ಅಯ್ಯೋ; ಮೂದಲಿಸು: ಹಂಗಿಸು;

ಪದವಿಂಗಡಣೆ:
ಸಿಕ್ಕಿದೆಯಲಾ+ ಸ್ವಾಮಿದ್ರೋಹಿಯೆ
ಸೊಕ್ಕಿದೆಯಲಾ +ಹಿಂದೆ +ಜೂಜಿನಲ್
ಅಕ್ಕಜವ+ ಮಾಡಿದೆಯಲಾ+ ಮಾನಿನಿಯ+ ಮುಡಿವಿಡಿದು
ಚುಕ್ಕಿಗಳಲಾ+ ನಿನ್ನವರು +ಕೈ
ಯಿಕ್ಕ +ಹೇಳಾ +ನಿನ್ನನೊಬ್ಬನನ್
ಇಕ್ಕಿ+ ನೋಡಿದರ್+ಅಕಟೆನುತ +ಮೂದಲಿಸಿದನು +ಭೀಮ

ಅಚ್ಚರಿ:
(೧) ಸಿಕ್ಕಿ, ಸೊಕ್ಕಿ, ಚುಕ್ಕಿ, ಇಕ್ಕಿ – ಪ್ರಾಸ ಪದಗಳು
(೨) ನಿನ್ನವರು ಹೇಡಿಗಳು ಎಂದು ಹೇಳಲು – ಚುಕ್ಕಿಗಳಲಾ ನಿನ್ನವರು