ಪದ್ಯ ೩೨: ಕೃಷ್ಣನನ್ನು ಕಂಡು ಪಾಂಡವರು ಏನು ಮಾಡಿದರು?

ಮುಗುಳು ನಗೆಗಳ ಹೊಂಗುವಂಗದ
ನಗೆ ಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ (ಅರಣ್ಯ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮುಖಗಳು ಮ್ಗುಳು ನಗೆಯಿಂದ ಅರಳಿದವು, ದೇಹವು ಉತ್ಸಾಹ ಭರಿತವಾದವು, ಕಣ್ಣುಗಳಲ್ಲಿ ಆನಂದಬಾಷ್ಪಗಳು ಉದುರಿದವು. ಹರ್ಷವು ಮೈದುಂಬಿತು. ಭಕ್ತಿ ಪರವಶರಾದರು, ಅವರು ಮುಗ್ಧಭಾವದಿಂದ ಧೌಮ್ಯನೇ ಮೊದಲಾದವರೊಡನೆ ಶ್ರೀಕೃಷ್ಣನಿಗೆ ನಮಿಸಿದರು.

ಅರ್ಥ:
ಮುಗುಳು ನಗೆ: ಮಂದಸ್ಮಿತ; ಹೊಂಗು: ಉತ್ಸಾಹ, ಹುರುಪು; ಅಂಗ: ಅವಯವ; ನಗೆ: ಸಂತಸ; ಮೊಗ: ಮುಖ; ಆನಂದ: ಹರ್ಷ; ಬಿಂದು: ಹನಿ, ತೊಟ್ಟು; ಒಗು: ಹೊರಹೊಮ್ಮುವಿಕೆ; ಕಂಗಳು: ನಯನ; ಹರುಷ: ಆನಂದ; ಸ್ಪಂದ: ಮಿಡಿಯುವಿಕೆ; ಸಂಪುಟ: ಭರಣಿ, ಕರಂಡಕ; ಬಗೆ: ಆಲೋಚನೆ, ಯೋಚನೆ; ಬೆರಸು: ಕೂಡಿರುವಿಕೆ; ಪರವಶ: ಬೇರೆಯವರಿಗೆ ಅಧೀನವಾಗಿರುವಿಕೆ; ಎಡೆಗೊಳ್ಳು: ಅವಕಾಶಮಾಡಿಕೊಡು; ಅಮಳ: ನಿರ್ಮಲ; ಜನ್ಮ: ಹುಟ್ಟು; ಮುಗುದ: ಕಪಟವನ್ನು ತಿಳಿಯದವನು; ಎರಗು: ನಮಸ್ಕರಿಸು; ಆದಿ: ಮುಂತಾದ; ಸಹಿತ: ಜೊತೆ;

ಪದವಿಂಗಡಣೆ:
ಮುಗುಳು +ನಗೆಗಳ +ಹೊಂಗುವ್+ಅಂಗದ
ನಗೆ +ಮೊಗದೊಳ್+ಆನಂದ +ಬಿಂದುಗಳ್
ಒಗುವ +ಕಂಗಳ +ಹೊತ್ತ +ಹರುಷಸ್ಪಂದ +ಸಂಪುಟದ
ಬಗೆಯ+ ಬೆರಸದ+ ಪರವಶದೊಳ್+ಆ
ನಗೆಯೊಳ್+ಎಡಗೊಂಡ್+ಅಮಳ +ಜನ್ಮದ
ಮುಗುದ +ಪಾಂಡವರ್+ಎರಗಿದರು +ಧೌಮ್ಯಾದಿಗಳು +ಸಹಿತ

ಅಚ್ಚರಿ:
(೧) ನಗೆಗಳ ವಿವರಣೆ – ಮುಗುಳು ನಗೆ, ಹೊಂಗುವಂಗದ ನಗೆ, ಮೊಗದೊಳಾನಂದ, ಹೊತ್ತ ಹರುಷಸ್ಪಂದ

ಪದ್ಯ ೨೨: ವಿಶೋಕನು ಮತ್ತೆಷ್ಟು ಬಾಣಗಳ ಲೆಕ್ಕವನ್ನು ಭೀಮನಿಗೆ ನೀಡಿದನು?

ಆಲಿಸೈ ಮುಗುಳಂಬು ಸಾವಿರ
ವೇಳು ಬಳಿಕೊಂಬತ್ತು ಸಾವಿರ
ಕೋಲು ಮೀಂಟೆಯ ಕವಲುಗಣೆ ಹನ್ನೆರಡುಸಾವಿರವು
ಮೇಲೆ ಸಾವಿರ ನಾಲ್ಕು ಮುಮ್ಮೊನೆ
ಬೋಳೆಯಂಬೀರೈದುಸಾವಿರ
ನಾಳಿಯಂಬುಗಳಾರುಬಂಡಿಯ ಲೆಕ್ಕವಿದೆಯೆಂದ (ಕರ್ಣ ಪರ್ವ, ೧೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಲೈ ರಾಜನೆ ಕೇಳು, ಹೂವಿನ ಆಕಾರದ ತುದಿಯಿವುರ ಏಳು ಸಾವಿರ ಬಾಣಗಳು, ಒಂಬತ್ತು ಸಾವಿರ ಕೋಲು ಬಾಣಗಳು, ಕವಲು ಬಾಣಗಳು ಹನ್ನೆರಡು ಸಾವಿರ, ನಾಲ್ಕುಸಾವಿರ ಮೂರು ತುದಿಯಿರುವ ಬೋಳೆಯ ಬಾಣಗಳು, ಹತ್ತು ಸಾವಿರ ನಾಳಿಯ ಬಾಣಗಳು, ಇವೆಲ್ಲವು ಆರು ಬಂಡಿಗಳಲ್ಲಿರುವ ಬಾಣಗಳ ಲೆಕ್ಕ ಎಂದು ವಿಶೋಕನು ಭೀಮನಿಗೆ ತಿಳಿಸಿದನು.

ಅರ್ಥ:
ಆಲಿಸು: ಕೇಳು; ಮುಗುಳು: ಮೊಗ್ಗು, ಚಿಗುರು; ಅಂಬು: ಬಾಣ; ಸಾವಿರ: ಸಹಸ್ರ; ಕೋಲು: ಬಾಣ; ಮೊನೆ: ತುದಿ, ಕೊನೆ; ಬಂಡಿ: ರಥ; ಲೆಕ್ಕ: ಎಣಿಕೆ; ಮೀಂಟೆ: ಬಾಣ;

ಪದವಿಂಗಡಣೆ:
ಆಲಿಸೈ +ಮುಗುಳ್+ಅಂಬು +ಸಾವಿರವ್
ಏಳು +ಬಳಿಕ್+ಒಂಬತ್ತು +ಸಾವಿರ
ಕೋಲು +ಮೀಂಟೆಯ +ಕವಲುಗಣೆ+ ಹನ್ನೆರಡು+ಸಾವಿರವು
ಮೇಲೆ +ಸಾವಿರ +ನಾಲ್ಕು +ಮುಮ್ಮೊನೆ
ಬೋಳೆ+ಅಂಬೀರ್+ಐದುಸಾವಿರ
ನಾಳಿ+ಅಂಬುಗಳ್+ಆರು+ಬಂಡಿಯ+ ಲೆಕ್ಕವಿದೆಯೆಂದ

ಅಚ್ಚರಿ:
(೧) ಬಾಣಗಳ ಹೆಸರು: ಮುಗುಳು, ಕವಲು, ಕೋಲು, ಮುಮ್ಮೊನೆ ಬೋಳೆ
(೨) ಸಾವಿರ – ೧-೫ಸಾಲಿನಲ್ಲಿ ಉಲ್ಲೇಖಿತವಾಗಿದೆ

ಪದ್ಯ ೩೬: ದೇವತೆಗಳು ಹೇಗೆ ಕಂಡರು?

ಅಡಿಗಡಿಗೆ ಚಮ್ಮಟಿಗೆಯಳ್ಳೆಯ
ತುಡುಕೆ ಕುಣಿದವು ವೇದಹಯ ಬಲ
ನೆಡ ಪುರಃಪಶ್ಚಿಮದಲೆರಗುವ ಮಂತ್ರ ಕೋಟಿಗಳ
ನುಡಿಯಲರಿದಾಕಾಶ ಸರಸಿಯೊ
ಳಿಡಿದ ತಾವರೆಮುಗುಳುಗಳೊ ಸುರ
ಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ (ಕರ್ಣ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಬ್ರಹ್ಮನು ಚಾವಟಿಯಿಂದ ಕುದುರೆಗಳ ಹೊಟ್ಟೆಯ ಭಾಗವನ್ನು ತಿವಿಯಲು, ವೇದಹಯಗಳು ಕುಣಿದವು, ಬಲ ಎಡ, ಪೂರ್ವ, ಪಶ್ಚಿಮ (ಎಲ್ಲಾ ದಿಕ್ಕುಗಳಿಂದಲೂ) ಬಂದ ಅಗಣಿತ ಮಂತ್ರಗಳ ಶಬ್ದವನ್ನು ಹೇಳಲು ಸಾಧ್ಯವಿಲ್ಲ, ದೇವತೆಗಳೆಲ್ಲಾ ತೋಳುಗಳನೆತ್ತಿ ಮುಗಿದ ಕೈಗಳು ಆಕಾಶ ಸರೋವರದ ಕಮಲಗಳಂತೆ ಕಾಣಿಸಿಕೊಂಡರು.

ಅರ್ಥ:
ಅಡಿಗಡಿಗೆ: ಹೆಜ್ಜೆಹೆಜ್ಜೆಗೆ; ಚಮ್ಮಟಿಗೆ: ಚಾವಟಿ;ಅಳ್ಳೆ: ಹೊಟ್ಟೆಯ ಒಂದು ಪಕ್ಕ; ತುಡುಕು: ಮುಟ್ಟು, ತಾಗು; ಕುಣಿ: ಎಗರು; ವೇದಹಯ: ವೇದಕುದುರೆ; ಬಲ: ಬಲಭಾಗ, ದಕ್ಷಿಣ; ಎಡ: ವಾಮಭಾಗ; ಪುರಃ: ಪೂರ್ವ; ಪಶ್ಚಿಮ: ಪಡುವಣ; ಎರಗು: ಹೊರಹೊಮ್ಮು; ಮಂತ್ರ: ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕೋಟಿ: ಅಗಣಿತ; ನುಡಿ: ಮಾತು; ಅರಿ: ತಿಳಿ; ಆಕಾಶ: ಗಗನ; ಸರಸಿ: ಸರೋವರ; ತಾವರೆ: ಕಮಲ; ಮುಗುಳು: ಮೊಗ್ಗು; ಸುರಪಡೆ: ದೇವತೆಗಳ ಸೈನ್ಯ; ಒತ್ತು: ಹತ್ತಿರ; ಮುಗಿದ: ಎರಗಿದ; ಕೈ: ಕರ, ಹಸ್ತ; ಚಿತ್ರ: ಆಕೃತಿ;

ಪದವಿಂಗಡಣೆ:
ಅಡಿಗಡಿಗೆ +ಚಮ್ಮಟಿಗೆ+ಯಳ್ಳೆಯ
ತುಡುಕೆ +ಕುಣಿದವು +ವೇದಹಯ +ಬಲನ್
ಎಡ+ ಪುರಃ+ಪಶ್ಚಿಮದಲ್+ಎರಗುವ +ಮಂತ್ರ +ಕೋಟಿಗಳ
ನುಡಿಯಲರಿದ್+ಆಕಾಶ +ಸರಸಿಯೊಳ್
ಇಡಿದ +ತಾವರೆ+ಮುಗುಳುಗಳೊ +ಸುರ
ಪಡೆಯೊಳ್+ಒತ್ತಿದ +ಮುಗಿದ +ಕೈಗಳೊ+ ಚಿತ್ರವಾಯ್ತೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ನುಡಿಯಲರಿದಾಕಾಶ ಸರಸಿಯೊಳಿಡಿದ ತಾವರೆಮುಗುಳುಗಳೊ ಸುರಪಡೆಯೊಳೊತ್ತಿದ ಮುಗಿದ ಕೈಗಳೊ ಚಿತ್ರವಾಯ್ತೆಂದ