ಪದ್ಯ ೨೨: ದ್ರೌಪದಿಯು ಹೇಗೆ ಉತ್ತರಿಸಿದಳು?

ದೇವಿಯೆಂದಳು ಸತ್ಯಭಾಮಾ
ದೇವಿಯರು ಮುಗುದೆಯರಲಾ ನಾ
ನಾವ ಮಂತ್ರದ ತಂತ್ರ ತೊಡಕಿನ ತೋಟಿಯುಳ್ಳವಳು
ಭಾವಶುದ್ಧಿಯಲೈವರನು ಸಂ
ಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು ಚತುರತೆಯ ಚಾಳಿಯಲಿ (ಅರಣ್ಯ ಪರ್ವ್, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ರೌಪದಿಯು, ಸತ್ಯಭಾಮೆ, ನೀನು ಮುಗ್ಧೆ! ನನಗೆ ಯಾವ ಮಂತ್ರ, ತಂತ್ರಗಳೂ ಗೊತ್ತಿಲ್ಲ. ಭಾವಶುದ್ಧಿಯಿಂದ ಅವರವರ ಮನಸ್ಸಿನ ಭಾವವನ್ನರಿತು ಉಪಚರಿಸಿ ತೃಪ್ತಿಗೊಳಿಸುತ್ತೇನೆ. ಇದು ಕೇವಲ ಸಹಜ ಚಾತುರ್ಯ ಎಂದು ಚತುರವಾಗಿ ಉತ್ತರಿಸಿದಳು.

ಅರ್ಥ:
ದೇವಿ: ಹೆಣ್ಣು, ಸ್ತ್ರೀ; ಎಂದಳು: ಹೇಳಿದಳು; ಮುಗುದೆ: ಕಪಟವರಿಯದವಳು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ತಂತ್ರ: ಇಂದ್ರಜಾಲ; ತೊಡಕು: ತೊಂದರೆ; ತೋಟಿ: ಕಲಹ, ಜಗಳ; ಭಾವ: ಮನೋಧರ್ಮ; ಶುದ್ಧ: ನಿರ್ಮಲ; ಸಂಭಾವಿಸು: ಧ್ಯಾನ ಮಾಡು, ಯೋಚಿಸು; ಚಿತ್ತ: ಮನಸ್ಸು; ಅರಿ: ತಿಳಿ; ಉಪಚರಿಸು: ಪೋಷಿಸು, ಸೇವೆ, ಶುಶ್ರೂಷೆ; ಚತುರೆ: ಬುದ್ಧಿವಂತೆ; ಚಾಳಿ: ನಡವಳಿಕೆ;

ಪದವಿಂಗಡಣೆ:
ದೇವಿ+ಎಂದಳು +ಸತ್ಯಭಾಮಾ
ದೇವಿಯರು +ಮುಗುದೆಯರಲಾ+ ನಾನ್
ಆವ +ಮಂತ್ರದ +ತಂತ್ರ +ತೊಡಕಿನ+ ತೋಟಿಯುಳ್ಳವಳು
ಭಾವಶುದ್ಧಿಯಲ್+ಐವರನು +ಸಂ
ಭಾವಿಸುವೆನ್+ಅವರವರ +ಚಿತ್ತದ
ಭಾವವ್+ಅರಿದ್+ಉಪಚರಿಸುವೆನು +ಚತುರತೆಯ +ಚಾಳಿಯಲಿ

ಅಚ್ಚರಿ:
(೧) ಸತ್ಯಭಾಮೆಯನ್ನು ಸ್ನೇಹಭಾವದಲ್ಲಿ ಕರೆದ ಪರಿ – ಸತ್ಯಭಾಮಾದೇವಿಯರು ಮುಗುದೆಯರಲಾ
(೨) ಗಂಡನನ್ನು ಸಲಹುವ ಪರಿ – ಭಾವಶುದ್ಧಿಯಲೈವರನು ಸಂಭಾವಿಸುವೆನವರವರ ಚಿತ್ತದ
ಭಾವವರಿದುಪಚರಿಸುವೆನು

ಪದ್ಯ ೬: ಊರ್ವಶಿಯನ್ನು ಯಾರು ಸುತ್ತುವರೆದರು?

ನೆರೆದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ (ಅರಣ್ಯ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ತಮ್ಮ ಅಂಗದ ಪರಿಮಳಕ್ಕೆ ದುಂಬಿಗಳು ಹೂವೆಂದು ಭ್ರಮಿಸಿ ಮುತ್ತುತ್ತಿರಲು, ಕಣ್ಣ ಬೆಳಕು ಕತ್ತಲೆಯನ್ನು ಓಡಿಸುತ್ತಿರಲು, ವಿಧವಿಧವಾದ ಬಂಗಾರದ ಆಭರಣಗಳು, ವಿವಿಧ ವಸ್ತ್ರಗಳ ವಿನ್ಯಾಸ, ವಿವಿಧ ರೀತಿಯ ಮುಡಿಗಳನ್ನು ಧರಿಸಿದ ಅಪ್ಸರೆಯರು ಊರ್ವಶಿಯನ್ನು ಸುತ್ತುವರೆದರು.

ಅರ್ಥ:
ನೆರೆ: ಪಕ್ಕ, ಸಮೀಪ; ಅಬಲೆ: ಹೆಂಗಸು; ಅಂಗ: ದೇಹ, ಶರೀರ; ಅಟ್ಟು: ಅಂಟಿಕೊಳ್ಳು; ಪರಿಮಳ: ಸುಗಂಧ; ಮುತ್ತಿಗೆ: ಆವರಿಸು; ತುಂಬಿ: ದುಂಬಿ, ಜೇನು; ತೆರಳು: ಹೋಗು, ಹೋಗಲಾಡಿಸು; ಕತ್ತಲೆ: ಅಂಧಕಾರ; ಕೆದರು: ಚದುರಿಸು; ಕಣ್ಣು: ನಯನ; ಬೆಳಕು: ಪ್ರಕಾಶ; ಪರಿಪರಿ: ಹಲವಾರು ರೀತಿ; ಹೊಂದು: ಸರಿಯಾಗು; ಒಡಿಗೆ; ಒಡವೆ; ಉಡಿಗೆ: ವಸ್ತ್ರ, ಬಟ್ಟೆ; ದೇಶಿ: ಅಲಂಕಾರ; ಮಿಗೆ: ಅಧಿಕ; ಮುಡಿ: ಶಿರ; ಮುಗುದೆ: ಸುಂದರ ಯುವತಿ; ಬಳಸು: ಆವರಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ನೆರೆದರ್+ಅಬಲೆಯರ್+ಅಂಗವಟ್ಟದ
ಪರಿಮಳದ+ ಮುತ್ತಿಗೆಯ+ ತುಂಬಿಯ
ತೆರಳಿಕೆಯ+ ಕತ್ತಲೆಯ+ ಕೆದರುವ +ಕಣ್ಣಬೆಳಗುಗಳ
ಪರಿಪರಿಯ+ ಹೊಂದ್+ಒಡಿಗೆಗಳ +ಪರಿ
ಪರಿಗಳ್+ಉಡಿಗೆಯ +ದೇಶಿ+ಮಿಗೆ +ಪರಿ
ಪರಿಯ +ಮುಡಿಗಳ +ಮುಗುದೆಯರು +ಬಳಸಿದರು +ಬಾಲಕಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೨) ಕ ಕಾರದ ತ್ರಿವಳಿ ಪದ – ಕತ್ತಲೆಯ ಕೆದರುವ ಕಣ್ಣಬೆಳಗುಗಳ
(೩) ೪-೬ ಸಾಲಿನ ಮೊದಲ ಪದ ಪರಿಪರಿ

ಪದ್ಯ ೩೦: ದ್ರೌಪದಿ ದುರ್ಯೋಧನನಿಗೆ ಏನೆಂದು ಶಪಿಸಿದಳು?

ಎಲೆಗೆ ನಿನ್ನವರೇನ ಮಾಡುವ
ರೊಲೆಯೊಳಡಗಿದ ಕೆಂಡವಿವರ
ಗ್ಗಳಿಕೆ ನಂದಿದುದೆನುತ ಮುಂಜೆರಗೆತ್ತಿ ಮಾನಿನಿಗೆ
ಖಳನು ತೊಡೆಗಳ ತೋರಿಸಿದೊಡತಿ
ಮುಳಿದು ಕೊಟ್ಟಳು ಶಾಪವನು ನಿ
ನ್ನಳಿವು ತೊಡೆಯಲಿ ಮುಗಿವುದೆಂದಳು ಮುಗುದೆ ಖಾತಿಯಲಿ (ಸಭಾ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವಿದುರನು ದ್ರೌಪದಿಗೆ ಧೈರ್ಯವನ್ನು ಹೇಳುತ್ತಿರಲು, ದುರ್ಯೋಧನನು ಎಲೇ ನಿನ್ನ ಪತಿಗಳು ಈಗ ಏನು ಮಾಡಿಯಾರು? ಅವರ ಪರಾಕ್ರಮವೀಗ ಒಲೆಯಲ್ಲೇ ಸುಟ್ಟು ಬೂದಿಯಾದ ಕೆಂಡದಂತೆ, ನಾಶವಾಗಿ ಹೋಗಿದೆ, ಎಂದು ಹೇಳಿ ತನ್ನ ಸೆರಗನ್ನು ಸರಿಸಿ ತನ್ನ ತೊಡೆಗಳನ್ನು ತೋರಿಸಿದನು. ಇದನ್ನು ನೋಡಿದ ದ್ರೌಪದಿಯು ಅತಿಯಾಗಿ ಕೋಪಗೊಂಡು ನಿನ್ನ ಮರಣವು ಆ ತೊಡೆಗಳಿಂದಲೇ ಆಗಲಿ ಎಂದು ಶಪಿಸಿದಳು.

ಅರ್ಥ:
ಒಲೆ: ಅಶ್ಮಂತಕ, ಅಡುಗೆ ಮಾಡಲು ಬೆಂಕಿಯನ್ನು ಉರಿಸುವ ಸಲಕರಣೆ; ಅಡಗು: ಮುಚ್ಚು; ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಅಗ್ಗಳಿಕೆ: ಹಿರಿಮೆ; ನಂದು: ಆರಿಹೋಗು, ಇಲ್ಲವಾಗು; ಮುಂಜೆರಗು: ಸೆರಗಿನ ಮುಂಭಾಗ; ಮಾನಿನಿ: ಹೆಣ್ಣು; ಖಳ: ದುಷ್ಟ; ತೊಡೆ: ಊರು; ತೋರಿಸು: ಪ್ರದರ್ಶಿಸು; ಅತಿ: ಬಹಳ; ಮುಳಿ: ಕೋಪಗೊಳ್ಳು; ಕೊಡು: ನೀಡು; ಶಾಪ: ನಿಷ್ಠುರದ ನುಡಿ; ಅಳಿ: ನಾಶ; ಮುಗಿವುದು: ಕೊನೆಗೊಳ್ಳು; ಮುಗುದೆ: ಕಪಟವರಿಯದವಳು, ಮುಗ್ಧೆ; ಖಾತಿ: ಕೋಪ;

ಪದವಿಂಗಡಣೆ:
ಎಲೆಗೆ +ನಿನ್ನವರೇನ +ಮಾಡುವರ್
ಒಲೆಯೊಳ್+ಅಡಗಿದ +ಕೆಂಡವ್+ಇವರ್
ಅಗ್ಗಳಿಕೆ+ ನಂದಿದುದ್+ಎನುತ +ಮುಂಜೆರಗ್+ಎತ್ತಿ +ಮಾನಿನಿಗೆ
ಖಳನು +ತೊಡೆಗಳ +ತೋರಿಸಿದೊಡ್+ಅತಿ
ಮುಳಿದು+ ಕೊಟ್ಟಳು +ಶಾಪವನು +ನಿನ್
ಅಳಿವು +ತೊಡೆಯಲಿ +ಮುಗಿವುದ್+ಎಂದಳು +ಮುಗುದೆ +ಖಾತಿಯಲಿ

ಅಚ್ಚರಿ:
(೧) ದ್ರೌಪದಿಯನ್ನು ಮಾನಿನಿ, ಮುಗುದೆ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಒಲೆಯೊಳಡಗಿದ ಕೆಂಡವಿವರಗ್ಗಳಿಕೆ ನಂದಿದುದೆನುತ

ಪದ್ಯ ೨೮: ಗಂಧರ್ವ ಸ್ತ್ರೀಯರ ಜಲಕ್ರೀಡೆ ಹೇಗಿತ್ತು?

ಲಲಿತ ತನುಕಾಂತಿಗಳ ಮೊಗೆದರು
ತಿಳಿಗೊಳನ ಜಲವೆಂದು ಕಂಗಳು
ಹೊಳೆಯ ಮರಿಮೀನೆಂದು ಹೆಕ್ಕಳಿಸಿದರು ಹಿಡುಹಿನಲಿ
ಅಲರಿದಂಬುಜವೆಂದು ವದನಕೆ
ನಿಲುಕಿ ತುಂಬಿಗಳೆಂದು ಕುರುಳಿಂ
ಗಳುಕಿ ಕೈಗಳ ತೆರೆದರತಿ ಮುಗುದೆಯರು ಖಚರಿಯರು (ಆದಿ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಆ ಗಂಧರ್ವ ಸ್ತ್ರೀಯರು ತಮ್ಮ ಗುಂಪಿನಲ್ಲಿದ್ದ ಸಖಿಯರ ದೇಹಕಾಂತಿಯನ್ನು ತಿಳಿಗೊಳದ ನೀರೆಂದು ಕುಡಿಯಲು ಹೋದರು, ಕಣ್ಣುಗಳ ಪ್ರತಿಬಿಂಬವನ್ನು ಮರಿಮೀನೆಂದು ಹಿಡಿಯಲು ರಭಸದಿಂದ ಮುನ್ನುಗ್ಗಿದರು, ಅರಳಿದ ಕಮಲವೆಂದು ಮುಖಗಳನ್ನು ಮುಟ್ಟಿದರು, ದುಂಬಿಗಳು ಬಂದೆವೆಂದು ಕುರುಳುಗಳಿಗೆ ಹೆದರಿ ಕೈತೆರೆದರು. ಎಂತಹ ಮುಗ್ಧರು ಆ ಗಂಧರ್ವ ಸ್ತ್ರೀಯರು!

ಅರ್ಥ:
ಲಲಿತ: ಚೆಲುವು, ಸೌಂದರ್ಯ; ತನು: ದೇಹ; ಕಾಂತಿ: ಹೊಳಪು; ಮೊಗೆ: ಬಾಚು, ಕುಡಿ; ತಿಳಿ: ನಿರ್ಮಲ; ಕೊಳ: ಸರೋವರ; ಜಲ: ನೀರು; ಕಂಗಳು: ಕಣ್ಣು, ನಯನ; ಹೊಳೆ: ಪ್ರಕಾಶಿಸು, ಮಿಂಚು, ಶೋಭಿಸು; ಮೀನು: ಮತ್ಸ್ಯ; ಹೆಕ್ಕಳಿಸು: ಅಧಿಕವಾಗು, ಹೆಚ್ಚಾಗು, ಹಿಗ್ಗು; ಹಿಡಿ: ಗ್ರಹಿಸು, ಹಿಡಿದುಕೊಳ್ಳು; ಅಲರ್: ವಿಕಾಸವಾಗು, ಅರಳು, ಅರಳಿದ ಹೂವು; ಅಂಬುಜ: ತಾವರೆ; ವದನ: ಮುಖ; ನಿಲುಕು: ಕೈಚಾಚಿ ಹಿಡಿ; ತುಂಬಿ: ಭ್ರಮರ; ಕುರುಳು: ಕೂದಲು; ಅಳುಕು: ಹೆದರು; ಕೈ: ಕರ; ತೆರೆ: ತೆಗೆ, ಬಿಚ್ಚು; ಅತಿ: ತುಂಬ; ಮುಗುದೆ: ಸರಳತೆ, ನಿಷ್ಕಪಟತೆ; ಖಚರ: ಗಂಧರ್ವ;

ಪದವಿಂಗಡನೆ:
ಲಲಿತ +ತನು+ಕಾಂತಿಗಳ+ ಮೊಗೆದರು
ತಿಳಿ+ಕೊಳನ+ ಜಲವೆಂದು +ಕಂಗಳು
ಹೊಳೆಯ +ಮರಿ+ಮೀನೆಂದು +ಹೆಕ್ಕಳಿಸಿದರು +ಹಿಡುಹಿನಲಿ
ಅಲರಿದ್+ಅಂಬುಜವೆಂದು+ ವದನಕೆ
ನಿಲುಕಿ+ ತುಂಬಿಗಳೆಂದು +ಕುರುಳಿಂಗ್
ಅಳುಕಿ+ ಕೈಗಳ+ ತೆರೆದರ್+ಅತಿ +ಮುಗುದೆಯರು +ಖಚರಿಯರು

ಅಚ್ಚರಿ:
(೧) ಜಲಕ್ರೀಡೆಯನ್ನು ವರ್ಣಿಸುತ್ತಾ, ಗಂಧರ್ವ ಸ್ತ್ರೀಯರ ಸೌಂದರ್ಯವನ್ನು ವರ್ಣಿಸಿರುವುದು
(೨) ಹೊಳೆಯುವು ತನುಕಾಂತಿ, ಮೀನಿನಂತಹ ಕಣ್ಣು, ಕಮಲದಂತಹ ಮುಖ; ದುಂಬಿಯಂತಹ ಮುಂಗುರುಳು
(೩) ನಿಲುಕಿ, ಅಳುಕಿ – ಪ್ರಾಸ ಪದ
(೪) ಮೊಗೆದರು, ಹೆಕ್ಕಳಿಸಿದರು, ನಿಲುಕಿ, ಅಳುಕಿ – ಕ್ರಿಯಾಪದಗಳ ಬಳಕೆ