ಪದ್ಯ ೩೫: ಕರ್ಣನು ಭೀಷ್ಮರನ್ನು ಹೇಗೆ ವರ್ಣಿಸಿದನು?

ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನ ಕಾದ ಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ (ಭೀಷ್ಮ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹಲ್ಲದ ಚರ್ಮ ಸಡಿಲಿದೆ, ಭುಜ ಬತ್ತಿ ಹೋಗಿದೆ, ಮೀಸೆ ಬೆಳ್ಳಗಾಗಿದೆ, ಹಲ್ಲುಗಳು ಉದುರಿ ಹೋಗಿವೆ, ಮೈಯಲ್ಲಿ ಮೂಳೆಗಳು ಸೋತಿವೆ, ದೇಹದ ಅಂಗಾಗಳು ಶಕ್ತಿಹೀನವಾಗಿವೆ, ಜಗಿದರೆ ತಲೆ ಅಲುಗಾಡುತ್ತದೆ, ಮುದುಕನಾದ ಈ ಮುಗ್ಧನು ಹೋರಾಟಮಾಡಲು ಅಶಕ್ತನು, ಇವನನ್ನು ಸೇನಾಧಿಪತಿಯಾಗಿ ಮಾಡಿ ಹೋರಾಡು ಎಂದು ಹೇಳಿದ್ದು ಹಾಸ್ಯಾಸ್ಪದವಲ್ಲವೇ ಎಂದು ಕರ್ಣನು ಹೇಳಿದನು.

ಅರ್ಥ:
ತೊಗಲು: ಚರ್ಮ; ಸಡಿಲ: ಬಿಗಿಯಿಲ್ಲದಿರುವುದು, ಶಿಥಿಲವಾದುದು; ಗಲ್ಲ: ಕದಪು, ಕೆನ್ನೆ; ಬತ್ತು: ಒಣಕಲು, ಒಣಗಿದುದು; ಹೆಗಲು: ಭುಜ; ನರುಕು: ತಗ್ಗಿಹೋಗು, ಜಜ್ಜಿಹೋಗು; ನರೆ: ಬೆಳ್ಳಗಾದ ಕೂದಲು; ಜಗುಳು: ಜಾರು, ಸಡಿಲವಾಗು; ಹಲು: ದಂತ; ಹಾಯಿ: ಚಾಚು; ಎಲುಬು: ಮೂಳೆ; ನೆಗ್ಗು: ಕುಗ್ಗು, ಕುಸಿ; ಅವಯವ: ಅಂಗ; ಅಗಿ: ಅಲುಗಾಡು, ಜಗಿ; ಅಲುಗು: ಅಲ್ಲಾಡು; ತಲೆ: ಶಿರ; ಹೇಳು: ತಿಳಿಸು; ಮುಗುದ: ಮುಗ್ಧ; ಕಾದು: ಹೋರಾಡು; ಮುಪ್ಪು: ಮುದುಕ; ನಗೆ: ಹಾಸ್ಯಾಸ್ಪದ; ಸುರಿ: ಚೆಲ್ಲು; ರಾಯ: ರಾಜ; ಕಟಕ: ಯುದ್ಧ;

ಪದವಿಂಗಡಣೆ:
ತೊಗಲು +ಸಡಿಲಿದ +ಗಲ್ಲ +ಬತ್ತಿದ
ಹೆಗಲು +ನರುಕಿದ+ ನರೆತ+ ಮೀಸೆಯ
ಜಗುಳ್ದ+ ಹಲುಗಳ +ಹಾಯಿದ್+ಎಲುಗಳ +ನೆಗ್ಗಿದ್+ಅವಯವದ
ಅಗಿಯಲ್+ಅಲುಗುವ +ತಲೆಯ +ಮುಪ್ಪಿನ
ಮುಗುದನ್+ಈತನ +ಕಾದ +ಹೇಳಿದು
ನಗೆಯ +ಸುರಿದೈ +ರಾಯ +ಕಟಕದೊಳ್+ಎಂದನಾ +ಕರ್ಣ

ಅಚ್ಚರಿ:
(೧) ಭೀಷ್ಮರನ್ನು ವರ್ಣಿಸುವ ಪರಿ – ಅಗಿಯಲಲುಗುವ ತಲೆಯ ಮುಪ್ಪಿನ ಮುಗುದನ್

ಪದ್ಯ ೬೧: ದ್ರೌಪದಿಯು ಪಾಂಡವರನ್ನು ಯಾರಿಗೆ ಹೋಲಿಸಿದಳು?

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂರು
ರ್ಚಿಗಳದಾರುಂಟೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈರಿಗಳು ಸುಖವಾಗಿರಲೆಂದು ಬಯಸಿ, ಶಾಂತರಾಗಿ ಬದುಕುವ ಮುಗ್ಧರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ, ಎಲ್ಲರೂ ಮೋಸವನ್ನು ದ್ವೇಷಿಸಿದರೆ, ನೀವು ಭಂಗವನ್ನು ಹೆಗಲುಕೊಟ್ಟು ಹೊರುತ್ತೀರಿ, ವೀರರೆಂಬ ಬಿರುದನ್ನು ದೂರಕ್ಕೆಸೆದು ಹೋರಿಗಳಂತೆ ಹೊಡಿಸಿಕೊಂಡು ಮೂಗುದಾರವನ್ನು ಹಾಕಿಕೊಂಡಿರುವವರು ನಿಮ್ಮನ್ನು ಬಿಟ್ಟು ಇನ್ನಾರಿದ್ದಾರೆ ಎಂದು ದ್ರೌಪದಿಯು ಅತೀವ ದುಃಖದಿಂದ ಹೇಳಿದಳು.

ಅರ್ಥ:
ಹಗೆ: ವೈರತ್ವ; ತಂಪು: ತೃಪ್ತಿ, ಸಂತುಷ್ಟಿ; ಬದುಕು: ಜೀವಿಸು; ಮುಗುದ: ಕಪಟವರಿಯದ; ಭಂಗ: ಮೋಸ, ವಂಚನೆ; ಹೆಗಲು: ಭುಜ; ವಿರೋಧಿ: ವೈರಿ; ಲೋಕ: ಜಗತ್ತು; ವಿಗಡ: ಶೌರ್ಯ, ಪರಾಕ್ರಮ; ಬಿರುದು: ಗೌರವಸೂಚಕವಾಗಿ ಕೊಡುವ ಹೆಸರು; ಬಿಸುಟು: ಹೊರಹಾಕು; ಬಡಿ: ಹೊಡೆ, ತಾಡಿಸು; ಬಡಿಹೋರಿ: ಹೋರಿಯಂತೆ ಬಡಿಸಿಕೊಳ್ಳುವವ; ಮೂಗು: ನಾಸಿಕ; ಮೂಗುರ್ಚು: ಮೂಗುದಾರ ಹಾಕಿಸಿಕೊಂಡಿರುವವರು; ಹಿರಿದು: ಹೆಚ್ಚಾಗಿ; ಹಲುಬು: ದುಃಖಪಡು;

ಪದವಿಂಗಡಣೆ:
ಹಗೆಗಳಿಗೆ +ತಂಪಾಗಿ +ಬದುಕುವ
ಮುಗುದರ್+ಇನ್ನಾರುಂಟು +ಭಂಗಕೆ
ಹೆಗಲಕೊಟ್ಟಾನುವ+ ವಿರೋಧಿಗಳುಂಟೆ+ ಲೋಕದಲಿ
ವಿಗಡ+ ಬಿರುದನು +ಬಿಸುಟು +ಬಡಿಹೋ
ರಿಗಳು +ಪಾಂಡವರಂತೆ +ಮೂರು
ರ್ಚಿಗಳದ್+ಆರುಂಟೆಂದು +ದ್ರೌಪದಿ+ ಹಿರಿದು +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಗಡ ಬಿರುದನು ಬಿಸುಟು ಬಡಿಹೋರಿಗಳು ಪಾಂಡವರಂತೆ

ಪದ್ಯ ೧೧: ಕೀಚಕನ ಮೇಲೆ ಯಾರು ಆಕ್ರಮಣ ಮಾಡಿದರು?

ಜಗವ ಕೆಡಹಲು ಜಲಜ ವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗೋ
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ (ವಿರಾಟ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಜಗತ್ತನ್ನು ಕೆಡವಲು ಕಾಮನು ಕಟ್ಟಿದ ಬಲೆ ಇವಳೋ ಏನೋ, ಯೋಗಿಗಳನ್ನು ಯತಿಗಳನ್ನೂ ಘಾತಿಸಲು ಮನ್ಮಥನ ಮಸೆದ ಚೂಪಾದ ಅಲಗೇ ಇವಳೋ, ಕೀಚಕನಿಗೆ ಏನೂ ತೋಚದಂತಾಯಿತು, ಮನ್ಮಥನ ಬಾಣಗಳು ಅವನೆದೆಯಲ್ಲಿ ನಟ್ಟವು, ಅವಳಲ್ಲಿ ನಟ್ಟ ದೃಷ್ಟಿಯನ್ನು ಹಿಂದೆಗೆಯಲು ಅವನು ಅಸಮರ್ಥನಾದನು. ದ್ರೌಪದಿಗೆ ಸೋತ ಕೀಚಕನು ಮನಸ್ಸಿನಲ್ಲಿ ಪಾಪಕೃತ್ಯವನ್ನು ಚಿಂತಿಸಿದನು.

ಅರ್ಥ:
ಜಗ: ಜಗತ್ತು, ಪ್ರಪಂಚ; ಕೆಡಹು: ಹಾಳುಮಾಡು; ಜಲಜ: ತಾವರೆ; ವಿಶಿಖ: ಬಾಣ; ಬಿಗಿ: ಬಂಧಿಸು; ಬಲೆ: ಜಾಲ; ಯೋಗಿ: ಚಿತ್ತವೃತ್ತಿ ನಿರೋಧ ಮಾಡುವವನು; ಯತಿ: ಸಂನ್ಯಾಸಿ; ಕಾಮ: ಮನ್ಮಥ; ಮಸೆ: ಹರಿತವಾದುದು; ಕೂರಲಗು: ಹರಿತವಾದ ಬಾಣ; ಮುಗುದ: ಪಟವನ್ನು ತಿಳಿಯದವನು; ಅಂಬು: ಬಾಣ; ಉಗಿ: ಹೊರಹಾಕು; ಎದೆ: ಹೃದಯ; ದೃಷ್ಟಿ: ನೋಟ; ತೆಗೆ: ಈಚೆಗೆ ತರು, ಹೊರತರು; ಸೋತು: ಪರಾಭವ ಹೊಂದು; ಪಾತಕ: ಕೆಟ್ಟಕೆಲಸ, ಪಾಪ; ನೆನೆ: ಜ್ಞಾಪಿಸಿಕೋ;

ಪದವಿಂಗಡಣೆ:
ಜಗವ +ಕೆಡಹಲು +ಜಲಜ+ ವಿಶಿಖನು
ಬಿಗಿದ+ ಬಲೆಯಿವಳಲ್ಲಲೇ+ ಯೋ
ಗಿಗಳ+ ಯತಿಗಳನೆಸಲು +ಕಾಮನು +ಮಸೆದ +ಕೂರಲಗೋ
ಮುಗುದನಾದನು+ ಕಾಮನ್+ಅಂಬುಗಳ್
ಉಗಿದವ್+ಎದೆಯಲಿ +ನಟ್ಟ+ದೃಷ್ಟಿಯ
ತೆಗೆಯಲಾರದೆ +ಸೋತು +ಕೀಚಕ +ಪಾತಕವ +ನೆನೆದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಜಗವ ಕೆಡಹಲು ಜಲಜ ವಿಶಿಖನು ಬಿಗಿದ ಬಲೆಯಿವಳಲ್ಲಲೇ; ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗೋ – ದ್ರೌಪದಿಯ ಸೌಂದರ್ಯವನ್ನು ವರ್ಣಿಸುವ ಪರಿ

ಪದ್ಯ ೩೨: ಕೃಷ್ಣನನ್ನು ಕಂಡು ಪಾಂಡವರು ಏನು ಮಾಡಿದರು?

ಮುಗುಳು ನಗೆಗಳ ಹೊಂಗುವಂಗದ
ನಗೆ ಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ (ಅರಣ್ಯ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮುಖಗಳು ಮ್ಗುಳು ನಗೆಯಿಂದ ಅರಳಿದವು, ದೇಹವು ಉತ್ಸಾಹ ಭರಿತವಾದವು, ಕಣ್ಣುಗಳಲ್ಲಿ ಆನಂದಬಾಷ್ಪಗಳು ಉದುರಿದವು. ಹರ್ಷವು ಮೈದುಂಬಿತು. ಭಕ್ತಿ ಪರವಶರಾದರು, ಅವರು ಮುಗ್ಧಭಾವದಿಂದ ಧೌಮ್ಯನೇ ಮೊದಲಾದವರೊಡನೆ ಶ್ರೀಕೃಷ್ಣನಿಗೆ ನಮಿಸಿದರು.

ಅರ್ಥ:
ಮುಗುಳು ನಗೆ: ಮಂದಸ್ಮಿತ; ಹೊಂಗು: ಉತ್ಸಾಹ, ಹುರುಪು; ಅಂಗ: ಅವಯವ; ನಗೆ: ಸಂತಸ; ಮೊಗ: ಮುಖ; ಆನಂದ: ಹರ್ಷ; ಬಿಂದು: ಹನಿ, ತೊಟ್ಟು; ಒಗು: ಹೊರಹೊಮ್ಮುವಿಕೆ; ಕಂಗಳು: ನಯನ; ಹರುಷ: ಆನಂದ; ಸ್ಪಂದ: ಮಿಡಿಯುವಿಕೆ; ಸಂಪುಟ: ಭರಣಿ, ಕರಂಡಕ; ಬಗೆ: ಆಲೋಚನೆ, ಯೋಚನೆ; ಬೆರಸು: ಕೂಡಿರುವಿಕೆ; ಪರವಶ: ಬೇರೆಯವರಿಗೆ ಅಧೀನವಾಗಿರುವಿಕೆ; ಎಡೆಗೊಳ್ಳು: ಅವಕಾಶಮಾಡಿಕೊಡು; ಅಮಳ: ನಿರ್ಮಲ; ಜನ್ಮ: ಹುಟ್ಟು; ಮುಗುದ: ಕಪಟವನ್ನು ತಿಳಿಯದವನು; ಎರಗು: ನಮಸ್ಕರಿಸು; ಆದಿ: ಮುಂತಾದ; ಸಹಿತ: ಜೊತೆ;

ಪದವಿಂಗಡಣೆ:
ಮುಗುಳು +ನಗೆಗಳ +ಹೊಂಗುವ್+ಅಂಗದ
ನಗೆ +ಮೊಗದೊಳ್+ಆನಂದ +ಬಿಂದುಗಳ್
ಒಗುವ +ಕಂಗಳ +ಹೊತ್ತ +ಹರುಷಸ್ಪಂದ +ಸಂಪುಟದ
ಬಗೆಯ+ ಬೆರಸದ+ ಪರವಶದೊಳ್+ಆ
ನಗೆಯೊಳ್+ಎಡಗೊಂಡ್+ಅಮಳ +ಜನ್ಮದ
ಮುಗುದ +ಪಾಂಡವರ್+ಎರಗಿದರು +ಧೌಮ್ಯಾದಿಗಳು +ಸಹಿತ

ಅಚ್ಚರಿ:
(೧) ನಗೆಗಳ ವಿವರಣೆ – ಮುಗುಳು ನಗೆ, ಹೊಂಗುವಂಗದ ನಗೆ, ಮೊಗದೊಳಾನಂದ, ಹೊತ್ತ ಹರುಷಸ್ಪಂದ

ಪದ್ಯ ೪: ಕೃಷ್ಣನ ಯೋಚನೆಗೆ ಕಾರಣವೇನು?

ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪರೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ (ಅರಣ್ಯ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶ್ರೀ ಕೃಷ್ಣನು ಬಹುವಾಗಿ ಚಿಂತೆಯಲ್ಲಿ ಮುಳುಗಿ ಹೋದನು. ಈ ಚಿಂತೆಯು ಏಕಮುಖದಲ್ಲಿ ಪಾಂಡವರ ಸಂಕಟಕ್ಕೆ ಮರುಗುವುದು ಒಂದು ಕಾರಣವಾದರೆ, ಭೂಭಾರವನ್ನು ತಗ್ಗಿಸಲು ಅವತರಿಸಿ ರಾಕ್ಷಸರನ್ನು ಕೊಂದು, ಈಗ್ ಪಾಂಡವ ಕೌರವರ ನಡುವೆ ದ್ವೇಷವನ್ನುಂಟುಮಾಡಿ ದುಷ್ಟಕ್ಷತ್ರಿಯರ ಸಂಹಾರ ಮಾಡಿಸುವುದು ಇನ್ನೊಂದು ಕಾರಣ ಎಂದು ವೈಶಂಪಾಯನರು ತಿಳಿಸಿದರು.

ಅರ್ಥ:
ಹಿರಿದು: ದೊಡ್ಡ; ಹರಿ: ಕೃಷ್ಣ; ಚಿಂತಿಸು: ಯೋಚಿಸು; ವ್ಯತಿಕರ: ಆಪತ್ತು, ಕೇಡು, ಸಂದರ್ಭ; ಅರಿ: ತಿಳಿ; ಮುಗುದೆ: ಮುಗ್ದೆ; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಭಾರ: ಹೊರೆ; ರೋದನ: ಅಳಲು; ಧರಣಿ: ಭೂಮಿ; ಮೈಗೊಂಡು: ಶರೀರವನ್ನು ಪಡೆದು; ದೈತ್ಯ: ರಾಕ್ಷಸ; ಒರಸು: ನಾಶಮಾಡು; ಬಳಿಕ: ನಂತರ; ಉಳಿದ: ಮಿಕ್ಕ; ನೃಪ: ರಾಜ; ಕದಡು: ಕಲುಕು; ಭೂಪಾಲ: ರಾಜ;

ಪದವಿಂಗಡಣೆ:
ಹಿರಿದು +ಹರಿ +ಚಿಂತಿಸಿದನ್+ಈ+ ವ್ಯತಿ
ಕರವನ್+ಅರಿಯದ +ಮುಗುದರ್+ಇದನ್
ಆರ್+ಅರಿವರೈ +ವಿಶ್ವಂಭರಾ +ಭಾರಾಪ+ರೋದನಕೆ
ಧರಣಿಯಲಿ +ಮೈಗೊಂಡು +ದೈತ್ಯರನ್
ಒರಸಿದನು +ಬಳಿಕುಳಿದ +ಪಾಂಡವ
ಕುರುನೃಪರ+ ಕದಡಿಸಿದನ್+ಎಲೆ +ಭೂಪಾಲ +ಕೇಳೆಂದ

ಅಚ್ಚರಿ:
(೧) ಪಾಂಡವರ ಗುಣವನ್ನು ವರ್ಣಿಸುವ ಪರಿ – ವ್ಯತಿಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ