ಪದ್ಯ ೩೬: ಊರ್ವಶಿಯು ತನ್ನ ಕೋಪವನ್ನು ಹೇಗೆ ತೋರ್ಪಡಿಸಿದಳು?

ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲುವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ (ಅರಣ್ಯ ಪರ್ವ, ೯ ಸಂಧಿ, ೩೬ ಪದ್ಯ)

ತಾತ್ಪರ್ಯ:
ಊರ್ವಶಿಯ ಕೋಪವು ಇಮ್ಮಡಿಸಿತು, ಲಜ್ಜೆಯನ್ನು ತೊರೆದಳು, ಹಲವು ರೀತಿಯ ಛಲಗಳು ಆಕೆಯಲ್ಲಿ ಹುಟ್ಟಿದವು, ದುಃಖವು ಕೆರಳಿತು, ಆಶೆ ಜಾರಿ ಹೋಯಿತು, ಉಸಿರು ಬಿಸಿಯಾಗಿ ಅದರ ತಾಪವೇರಿತು, ಕಣ್ಣು ಕೆಂಪಾದವು, ರೋಷವು ಅಧಿಕವಾಯಿತು.

ಅರ್ಥ:
ರೋಷ: ಕೋಪ; ಈರೆಲೆ: ಎರಡು ಎಲೆ, ಇಮ್ಮಡಿಸು; ಲಜ್ಜೆ: ನಾಚಿಕೆ; ಮೀಸಲು: ಪ್ರತ್ಯೇಕ, ತೆಗೆದಿರಿಸು; ಅಳಿ: ನಾಶವಾಗು; ಬಲು: ಹಲವಾರು; ವಿಧ: ರೀತಿ; ಬಹು: ಬಹಳ; ವಾಸಿ: ಛಲ, ಹಠ; ಪಲ್ಲವಿಸು: ಚಿಗುರು; ಕೆಲ್ಲವಿಸು: ಉದ್ರೇಕಗೊಳ್ಳು, ಕೆರಳು; ಅನುತಾಪ: ಪಶ್ಚಾತ್ತಾಪ, ದುಃಖ; ಆಶೆ: ಇಚ್ಛೆ, ಹಂಬಲ; ಪೈಸರ: ಜಾರುವುದು; ಕಡು: ಬಹಳ; ಝಳ:ಶಾಖ, ಉಷ್ಣತೆ; ಸೂಸು: ಹೊರಹೊಮ್ಮು; ಸುಯ್ಲು: ನಿಟ್ಟುಸಿರು; ಕಂಗಳು: ಕಣ್ಣು, ನಯನ; ಕೇಸುರಿ: ಕೆಂಪು; ಮುಕ್ಕುಳಿಸು: ಹೊರಹಾಕು; ಹೆಕ್ಕಳ: ಹೆಚ್ಚಳ, ಅತಿಶಯ; ಕಾಮಿನಿ: ಹೆಣ್ಣು;

ಪದವಿಂಗಡಣೆ:
ರೋಷವ್+ಈರೆಲೆಯಾಯ್ತು +ಲಜ್ಜೆಯ
ಮೀಸಲ್+ಅಳಿದುದು +ಬಲುವಿಧದ+ ಬಹು
ವಾಸಿಗಳು +ಪಲ್ಲವಿಸಿದವು +ಕೆಲ್ಲವಿಸಿತ್+ಅನುತಾಪ
ಆಶೆ +ಪೈಸರವೋಯ್ತು +ಕಡು +ಝಳ
ಸೂಸಿದುದು +ಸುಯ್ಲಿನಲಿ +ಕಂಗಳು
ಕೇಸುರಿಯ +ಮುಕ್ಕುಳಿಸಿದವು+ ಹೆಕ್ಕಳಿಸಿ+ ಕಾಮಿನಿಯ

ಅಚ್ಚರಿ:
(೧) ರೋಷವನ್ನು ಚಿತ್ರಿಸುವ ಪರಿ – ಸುಯ್ಲಿನಲಿ ಕಂಗಳು ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ
(೨) ರೋಷವು ಹೆಚ್ಚಾಯಿತು ಎಂದು ಹೇಳುವ ಪರಿ – ರೋಷವೀರೆಲೆಯಾಯ್ತು

ಪದ್ಯ ೧೬: ಅರ್ಜುನನು ಧರ್ಮಜನ ಬಳಿ ಏನು ಮಾಡುವೆನೆಂದು ಹೇಳಿದನು?

ಈಸು ಪರಿಯಲಿ ನಿಮ್ಮ ಚಿತ್ತದೊ
ಳಾಸರಾಯಿತೆ ನಮ್ಮ ದುಷ್ಕೃತ
ವಾಸನಾ ಫಲವೈಸಲೇ ತಾನಿದ್ದು ಫಲವೇನು
ಆ ಸುಯೋಧನ ವಿಗಡ ಭಟ ವಾ
ರಾಸಿಯನು ಮುಕ್ಕುಳಿಸುವೆನು ಧರ
ಣೀಶ ನಿಮ್ಮಡಿಯಾಣೆ ನೇವಮ ಕೊಂಡೆ ನಾನೆಂದ (ಕರ್ಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಒಡೆಯ ನಿಮ್ಮ ಮನಸ್ಸಿಗೆ ಇಷ್ಟೊಂದು ಬೇಸರವಾಯಿತೇ? ನಿಮಗೆ ಹೀಗಾದ ಮೇಲೆ ನಾನು ಇದ್ದೂ ಏನು ಬಂತು. ಇದೆಲ್ಲಾ ಪಾಪಕರ್ಮಗಳ ವಾಸನೆಯ ಫಲ. ಕುರುಸೇನೆಯ ವೀರರ ಸಮುದ್ರವನ್ನೇ ಮುಕ್ಕಳಿಸಿ ಉಗುಳುತ್ತೇನೆ, ನಿಮ್ಮಾಣೆ, ನನಗೆ ಅಪ್ಪಣೆ ನೀಡಿ ಎಂದು ಅರ್ಜುನನು ಹೇಳಿದನು.

ಅರ್ಥ:
ಈಸು: ಇಷ್ಟು; ಪರಿ: ರೀತಿ; ಚಿತ್ತ: ಮನಸ್ಸು; ಆಸರಾಗು: ಆಶ್ರಯವಾಗು; ದುಷ್ಕೃತ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಫಲ: ಪ್ರಯೋಜನ; ಐಸಲೇ:ಅಲ್ಲವೇ; ಇದ್ದು: ಉಳಿದು; ವಿಗಡ: ಶೌರ್ಯ, ಪರಾಕ್ರಮ; ಭಟ: ಸೈನಿಕ; ವಾರಾಸಿ: ಸಮುದ್ರ; ಮುಕ್ಕುಳಿಸು: ಚೆಲ್ಲು; ಧರಣೀಶ: ರಾಜ; ಆಣೆ: ಪ್ರಮಾಣ; ನೇಮ: ನಿಯಮ; ಕೊಂಡೆ: ತೆಗೆದುಕೊ;

ಪದವಿಂಗಡಣೆ:
ಈಸು+ ಪರಿಯಲಿ +ನಿಮ್ಮ +ಚಿತ್ತದೊಳ್
ಆಸರಾಯಿತೆ +ನಮ್ಮ +ದುಷ್ಕೃತ
ವಾಸನಾ+ ಫಲವೈಸಲೇ +ತಾನಿದ್ದು +ಫಲವೇನು
ಆ +ಸುಯೋಧನ +ವಿಗಡ +ಭಟ +ವಾ
ರಾಸಿಯನು +ಮುಕ್ಕುಳಿಸುವೆನು +ಧರ
ಣೀಶ +ನಿಮ್ಮಡಿಯಾಣೆ+ ನೇವಮ+ ಕೊಂಡೆ +ನಾನೆಂದ

ಅಚ್ಚರಿ:
(೧) ಅರ್ಜುನನು ಕುರುಸೇನೆಯನ್ನು ಸಂಹರಿಸುವ ಬಗೆ (ನೀರನ್ನು ಮುಕ್ಕುಳಿಸಿ ಹೊರಹಾಕುವ ಹಾಗೆ) ಉಪಮಾನದ ಪ್ರಯೋಗ – ಆ ಸುಯೋಧನ ವಿಗಡ ಭಟ ವಾರಾಸಿಯನು ಮುಕ್ಕುಳಿಸುವೆನು

ಪದ್ಯ ೩೭: ಅರ್ಜುನನ ಸಮಾಧಿಸ್ಥಿತಿಯನ್ನು ಕುಮಾರವ್ಯಾಸ ಹೇಗೆ ವರ್ಣಿಸಿದ್ದಾನೆ?

ಮಿಡುಕುವುದು ಬಾಯ್ಚಿತ್ತವವಳಲಿ
ತೊಡಕಿಹುದು ಜಪಮಾಲೆ ಬೆರಳಲಿ
ನಡೆವುತಿಹುದಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ
ಮೃಡನ ಪೂಜೆಗೆ ಕೈ ಸುಭದ್ರೆಯ
ಹಿಡಿಹಿನಲಿ ಮನ ವರ ಸಮಾಧಿಯ
ತೊಡವು ಹೊರಗೊಳಗಿಂದುಮುಖಿ ನರನಾಥ ಕೇಳೆಂದ (ಆದಿ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಅತ್ಯಂತ ಸುಂದರವಾಗಿ ಅರ್ಜುನನು ಪ್ರೇಮಪಾಶದಲ್ಲಿ ಬಂಧಿತನಾಗಿರುವುದನ್ನು ಈ ಪದ್ಯದಲ್ಲಿ ಕಾಣಬಹುದು. ಅರ್ಜುನನ ಬಾಯಿ ಮತ್ತು ತುಟಿಗಳು ಅಲುಗಾಡುತ್ತಿತ್ತು (ಪಿಸುಗುಡುತ್ತಿತ್ತು, ಬಾಯಿ ತನ್ನಪಾಡಿಗೆ ಮಂತ್ರಪಠನೆ ಮಾಡುತ್ತಿತ್ತು), ಮನಸ್ಸು ಮಾತ್ರ ಸುಭದ್ರೆಯಲ್ಲಿ ನೆಲೆಸಿತ್ತು, ಬೆರಳಿನಲ್ಲಿದ್ದ ಜಪಮಾಲೆ ತನ್ನಷ್ಟಿಗೆ ತಾನೆ ವೇಗವಾಗಿ ಓಡುತ್ತಿದ್ದವು, ಕಣ್ಣುಗಳು ಮಾತ್ರ ಸುಭದ್ರೆಯನ್ನೇ ನೋಡುತ್ತಿದ್ದವು, ಕೈಯು ಶಿವನ ಪೂಜೆಯನ್ನು ಮಾಡುತ್ತಿದ್ದರೂ, ಮ ನಸನ್ನು ಸುಭದ್ರೆ ಹಿಡಿದ್ದಿದ್ದಳು, ಹೊರನೋಟಕ್ಕೆ ಸಮಾಧಿಯಲ್ಲಿದ್ದರು, ಒಳನೋಟವು ಸುಭದ್ರೆಯಲ್ಲಿತ್ತು.

ಅರ್ಥ:
ಮಿಡುಕು:ಅಲುಗಾಟ, ಚಲನೆ; ಬಾಯಿ: ತಿನ್ನಲು ಬಳಸುವ ಅಂಗ; ಚಿತ್ತ: ಮನಸ್ಸು; ತೊಡಕು: ಗೊಂದಲ; ಜಪಮಾಲೆ: ಹಾರ; ಬೆರಳು: ಅಂಗುಲಿ; ನಡೆವು: ನಡೆಯುವಿಕೆ; ಅಕ್ಷಿ: ಕಣ್ಣು; ಮುಕ್ಕುಳಿಸು: ಎಡವು; ಮಾನಿನಿ: ಹೆಣ್ಣು; ಮೃಡ:ಶಿವ; ಪೂಜೆ: ಆರಾಧನೆ; ಹಿಡಿ: ಬಂಧನ; ತೊಡವು:ತೊಡಿಗೆ, ಉಡುಗೆ; ನರನಾಥ: ರಾಜ;

ಪದವಿಂಗಡಣೆ:
ಮಿಡುಕುವುದು +ಬಾಯ್+ಚಿತ್ತವ್+ಅವಳಲಿ
ತೊಡಕಿಹುದು +ಜಪಮಾಲೆ +ಬೆರಳಲಿ
ನಡೆವುತಿಹುದ್+ಅಕ್ಷಿಗಳು +ಮುಕ್ಕುಳಿಸಿಹವು+ ಮಾನಿನಿಯ
ಮೃಡನ+ ಪೂಜೆಗೆ+ ಕೈ +ಸುಭದ್ರೆಯ
ಹಿಡಿಹಿನಲಿ+ ಮನ +ವರ+ ಸಮಾಧಿಯ
ತೊಡವು +ಹೊರಗ್+ಒಳಗ್+ಇಂದುಮುಖಿ+ ನರನಾಥ +ಕೇಳೆಂದ

ಅಚ್ಚರಿ:
(೧) ಮಿಡುಕು, ತೊಡಕು, ನಡೆವು, ಮುಕ್ಕುಳಿಸು, ಹಿಡಿ, ತೊಡವು – ಅರ್ಜುನನ ಸ್ಥಿತಿಯನ್ನು ವರ್ಣಿಸುವ ಪದಗಳು
(೨) ಚಿತ್ತ ಅವಳಲಿ, ಅಕ್ಷಿಗಳು ಮುಕ್ಕುಳಿಸಿಹವು ಮಾನಿನಿಯ, ಸುಭದ್ರೆಯ ಹಿಡಿಹಿನಲಿ ಮನ, ಒಳಗ್ ಇಂದುಮುಖಿ – ಸುಭದ್ರೆ ಹೇಗೆ ಅರ್ಜುನನನ್ನು ಆವರಿಸಿದ್ದಳು ಎಂದು ವರ್ಣಿಸಿರುವುದು