ಪದ್ಯ ೭: ಊರ್ವಶಿಯ ಸುತ್ತಲೂ ಯಾರಿದ್ದರು?

ಹೆಗಲ ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಸದ ತಾಳ ವೃಂತಕದ
ಮುಗುದೆಯರು ಮನಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ (ಅರಣ್ಯ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ತಾಂಬೂಲದ ಚೀಲವನ್ನು ಹೆಗಲಿಗೆ ಹಾಕಿಕೊಂಡವರು, ಕನ್ನಡಿ ಕಲಶವನ್ನು ಹಿಡಿದವರು, ಚಾಮರವನ್ನು ಹಾಕುವವರು, ಬಂಗಾರದ ಲೇಪವುಳ್ಲ ಪಾದರಕ್ಷೆಯನ್ನು ತೊಟ್ಟವರು, ನೀಳವಾದ ಚೂಚುಕವುಳ್ಳ ಕಲಶಕುಚೆಯರು, ಊರ್ವಶಿಯ ಸುತ್ತಲೂ ಬರುತ್ತಿದ್ದರು. ಮನ್ಮಥನ ಸೈನ್ಯವೇ ಬಂತೋ ಎಂಬಂತೆ ಕಾಣುತ್ತಿತ್ತು, ಅವರೆಲ್ಲರೂ ಊರ್ವಶಿಯ ಪಲ್ಲಕ್ಕಿಯ ಸುತ್ತಲೂ ದೇಹಕಾಂತಿಯ ತೆರೆಗಳನ್ನು ಹರಿಸುತ್ತಿದ್ದರು.

ಅರ್ಥ:
ಹೆಗಲು: ಭುಜ; ಹಡಪ: ಅಡಕೆ ಎಲೆಯ ಚೀಲ; ಹಿಡಿ: ಗ್ರಹಿಸು; ಮುಕುರ: ಕನ್ನಡಿ; ಆಳಿ: ಸಾಲು; ಚಿಮ್ಮು: ಹೊರಬರುವ; ಸೀಗುರಿ: ಚಾಮರ; ಹಾವುಗೆ: ಪಾದುಕೆ; ಹೇಮ: ಚಿನ್ನ; ನಿಬಂಧ: ನಿಮಿತ್ತ; ಕಳಸ: ಕುಂಭ; ತಾಳವೃಂತ: ಬೀಸಣಿಕೆ; ಮುಗುದೆ: ಸುಂದರ ಯುವತಿ; ಮನಮಥ: ಕಾಮ; ಮೊನೆ: ಚೂಪು; ಆಳು: ಸೇವಕ; ಮುಸುಕು: ಆವರಿಸು; ಮಾನಿನಿ: ಹೆಣ್ಣು; ದಂಡಿಗೆ: ಬೆತ್ತ, ಬಡಿಗೆ; ದಂಡಿ: ಹೆಚ್ಚಳ; ಮೈಕಾಂತಿ: ತನುವಿನ ಕಾಂತಿ, ಪ್ರಕಾಶ; ದೂವಾಳಿ: ವೇಗವಾಗಿ ಓಡುವುದು; ಲಹರಿ: ಅಲೆ, ರಭಸ;

ಪದವಿಂಗಡಣೆ:
ಹೆಗಲ +ಹಡಪದ +ಹಿಡಿದ +ಮುಕುರಾ
ಳಿಗಳ +ಚಿಮ್ಮುವ +ಸೀಗುರಿಯ +ಹಾ
ವುಗೆಯ +ಹೇಮ+ನಿಬಂಧ+ ಕಳಸದ +ತಾಳ +ವೃಂತಕದ
ಮುಗುದೆಯರು +ಮನಮಥನ+ ಮೊನೆ
ಆಳುಗಳು +ಮುಸುಕಿತು +ಮಾನಿನಿಯ +ದಂ
ಡಿಗೆಯ +ಮೈಕಾಂತಿಗಳ +ದೂವಾಳಿಗಳ +ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಗಲ ಹಡಪದ ಹಿಡಿದ
(೨) ಮ ಕಾರದ ಸಾಲು ಪದ – ಮುಗುದೆಯರು ಮನಮಥನ ಮೊನೆಯಾಳುಗಳು ಮುಸುಕಿತು ಮಾನಿನಿಯ