ಪದ್ಯ ೧೩: ಶ್ರೀಕೃಷ್ಣ ಮತ್ತು ಪಾಂಡವರ ಮಾತುಕತೆ ಹೇಗಿತ್ತು?

ದೇವನಂಘ್ರಿಯ ಮುಸುಕಿದವು ಮುಕು
ಟಾವಳಿಗಳೈವರ ಸತಿಯ ಸಂ
ಭಾಷಣೆಯ ಮಧುರೋಕ್ತಿರಸದಲಿ ನಗುತ ಮನ್ನಿಸಿದ
ಓವಿದನು ಮುರವೈರಿ ಕಾರು
ಣ್ಯಾವ ಲೋಚನದಿಂದ ನಿನ್ನವ
ರಾವ ಭವದಲಿ ಭಜಿಸಿದರೊ ನಿಷ್ಠೆಯಲಿ ಹರಿಪದವ (ಸಭಾ ಪರ್ವ, ೧೨ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಂಚಪಾಂಡವರು ತಮ್ಮ ಕಿರೀಟವನ್ನು ಶ್ರೀಕೃಷ್ಣನ ಪಾದಗಳಿಗೆ ಸಮರ್ಪಿಸಿ ನಮಸ್ಕರಿಸಿದರು. ದ್ರೌಪದಿಯ ಮಧುರವಾದ ಮಾತುಗಳನ್ನು ಮನ್ನಿಸಿದನು. ಕಾರುಣ್ಯದ ದೃಷ್ಠಿಯಿಂದ ಕೃಷ್ಣನು ಎಲ್ಲರನ್ನು ಆದರಿಸಿದನು. ಎಲೈ ಜನಮೇಜಯ, ನಿನ್ನ ಪೂರ್ವಜರು ಯಾವ ಜನ್ಮದಲ್ಲಿ ಶ್ರೀಕೃಷ್ಣನನ್ನು ನಿಷ್ಠೆಯಿಂದ ಸೇವಿಸಿದ್ದರೋ ಏನೋ ತಿಳಿಯದು.

ಅರ್ಥ:
ದೇವ: ಭಗವಂತ; ಅಂಘ್ರಿ: ಪಾದ; ಮುಸುಕು: ಹೊದಿಕೆ; ಮುಕುಟ: ಕಿರೀಟ; ಆವಳಿ: ಸಾಲು; ಸತಿ: ಹೆಂಡತಿ; ಸಂಭಾಷಣೆ: ಮಾತು; ಮಧುರ: ಸಿಹಿ; ಉಕ್ತಿ: ಮಾತು, ವಾಣಿ; ರಸ: ಸಾರ; ನಗು: ಸಂತಸ; ಮನ್ನಿಸು: ಒಪ್ಪು, ಅಂಗೀಕರಿಸು; ಓವಿ: ಒಲಿದು, ಪ್ರೀತಿಯಿಂದ; ಮುರವೈರಿ: ಕೃಷ್ಣ; ಕಾರುಣ್ಯ: ದಯೆ; ಲೋಚನ:ಕಣ್ಣು; ಭವ: ಜನ್ಮ; ಭಜಿಸು: ಆರಾಧಿಸು; ನಿಷ್ಠೆ: ಸ್ಥಿತಿ; ಶ್ರದ್ಧೆ; ಹರಿ: ಕೃಷ್ಣ; ಪದ: ಪಾದ;

ಪದವಿಂಗಡಣೆ:
ದೇವನ್+ಅಂಘ್ರಿಯ +ಮುಸುಕಿದವು+ ಮುಕು
ಟಾವಳಿಗಳ್+ಐವರ +ಸತಿಯ +ಸಂ
ಭಾಷಣೆಯ +ಮಧುರೋಕ್ತಿ+ರಸದಲಿ +ನಗುತ +ಮನ್ನಿಸಿದ
ಓವಿದನು +ಮುರವೈರಿ +ಕಾರು
ಣ್ಯಾವ +ಲೋಚನದಿಂದ +ನಿನ್ನವರ್
ಆವ +ಭವದಲಿ +ಭಜಿಸಿದರೊ +ನಿಷ್ಠೆಯಲಿ +ಹರಿಪದವ

ಅಚ್ಚರಿ:
(೧) ಹರಿ, ಮುರವೈರಿ, ದೇವ – ಕೃಷ್ಣನನ್ನು ಕರೆದ ಬಗೆ
(೨) ನಮಸ್ಕರಿಸಿದರು ಎಂದು ಹೇಳಲು – ದೇವನಂಘ್ರಿಯ ಮುಸುಕಿದವು ಮುಕುಟಾವಳಿ