ಪದ್ಯ ೯: ದೂತರನ್ನು ರಾಜನು ಹೇಗೆ ಸನ್ಮಾನಿಸಿದನು?

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ (ವಿರಾಟ ಪರ್ವ, ೧೦ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜನು ಈ ಸುದ್ದಿಯನ್ನು ಕೇಳಿ ವಿರಾಟನು ಬಹಳ ಹಿಗ್ಗಿದನು. ಅವನ ಕಣ್ಣುಗಳು ಅರಳಿದವು. ದೇಹವು ಅತೀವ ರೋಮಾಂಚನಗೊಂಡಿತು, ಹರ್ಷದ ಭರದಲ್ಲಿ ಮನಸ್ಸು ದಿಕ್ಕುತೋಚದಂತಾಯಿತು. ಸುದ್ದಿಯನ್ನು ಕೇಳಿ ಸಂಪೂರ್ಣ ಹರ್ಷದಿಂದ ದೂತರಿಗೆ ಹೇರಳವಾಗಿ ಉಡುಗೊರೆಗಳನ್ನು ನೀಡಿದನು. ದೂತರು ರಾಜನ ಓಲಗವನ್ನೇ ಸೂರೆಗೊಂಡರು.

ಅರ್ಥ:
ಕೇಳು: ಆಲಿಸು; ಮಿಗೆ: ಮತ್ತು, ಅಧಿಕ; ಹಿಗ್ಗು: ಹರ್ಷಿಸು; ತನು: ದೇಹ; ಪುಳಕಾಳಿ: ರೋಮಾಂಚನ; ತಳಿತ: ಚಿಗುರು; ಹರುಷ: ಸಂತಸ; ಬಹಳ: ತುಂಬ; ದಾಳಿ: ಆಕ್ರಮಣ; ಮನ: ಮನಸ್ಸು; ಮುಂದುಗೆಡು: ದಿಕ್ಕು ತೋಚದಂತಾಗು; ಕಂಗಳು: ಕಣ್ಣು; ಅರಳು: ಅಗಲವಾಗು, ಸಂತೋಷಗೊಳ್ಳು; ಲಾಲಿಸು: ಅಕ್ಕರೆಯನ್ನು ತೋರಿಸು; ಸರ್ವಾಂಗ: ಎಲ್ಲಾ; ಆಳೆ: ಪೋಷಿಸು; ಜನಪ: ರಾಜ; ಪಸಾಯ: ಉಡುಗೊರೆ; ದೂತಾಳಿ: ಸೇವಕರ ಗುಂಪು; ಸುಲಿ: ಬಿಚ್ಚು, ತೆಗೆ; ರಾಯ: ರಾಜ; ಓಲಗ: ದರ್ಬಾರು;

ಪದವಿಂಗಡಣೆ:
ಕೇಳಿ+ ಮಿಗೆ +ಹಿಗ್ಗಿದನು +ತನು +ಪುಳ
ಕಾಳಿ+ ತಳಿತುದು +ಬಹಳ +ಹರುಷದ
ದಾಳಿಯಲಿ +ಮನ +ಮುಂದುಗೆಟ್ಟುದು +ಕಂಗಳ್+ಅರಳಿದವು
ಲಾಲಿಸುತ +ಸರ್ವಾಂಗ +ಹರುಷದೊಳ್
ಆಳೆ +ಜನಪ +ಪಸಾಯಿತವ +ದೂ
ತಾಳಿಗಿತ್ತನು +ಸುಲಿದರ್+ಅವದಿರು +ರಾಯನ್+ಓಲಗವ

ಅಚ್ಚರಿ:
(೧) ಪುಳುಕಾಳಿ, ದಾಳಿ, ದೂತಾಳಿ – ಪ್ರಾಸ ಪದಗಳು
(೨) ರಾಜನ ಹರ್ಷದ ಸ್ಥಿತಿಯನ್ನು ಹೇಳುವ ಪರಿ – ಕೇಳಿ ಮಿಗೆ ಹಿಗ್ಗಿದನು ತನು ಪುಳಕಾಳಿ ತಳಿತುದು ಬಹಳ ಹರುಷದ ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು

ಪದ್ಯ ೨೪: ಕರ್ಣನ ನಿಲುವಿಗೆ ಯಾರು ಬಂದರು?

ಸಂಧಿಸಿತು ಪಡೆ ಚಿತ್ರಸೇನನ
ಹಿಂದೆ ನಿಲಿಸಿ ವಿರೋಧಿಶರ ಹತಿ
ಗಂದವಳಿಯದೆ ಮುತ್ತಿದುದು ಕಟ್ಟಲವಿಯಲಿ ರಥವ
ಮುಂದುಗೆಟ್ಟನು ಕರ್ಣನೆನೆ ಕೈ
ಗುಂದಿದರು ಸೌಬಲ ಸುಯೋಧನ
ನಂದನರು ದುಶ್ಯಾಸನಾದಿ ಸಮಸ್ತ ಪರಿವಾರ (ಅರಣ್ಯ ಪರ್ವ, ೨೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ದೊರೆಯನ್ನು ಹಿಂದೆ ನಿಲ್ಲಿಸಿ ಚಿತ್ರಸೇನನ ಸೈನ್ಯವು ಕರ್ಣನ ಹತ್ತಿರಕ್ಕೆ ನುಗ್ಗಿ ಮೇಲೆ ಬಿದ್ದಿತು. ಆ ರಭಸಕ್ಕೆ ಕರ್ಣನು ಆತಂಕಕ್ಕೊಳಗಾಗಿದನೆಂದು ಭಾವಿಸಿ ಶಕುನಿ, ದುರ್ಯೋಧನನ ಮಕ್ಕಳು ಪರಿವಾರದವರು ನಿರ್ಬಲರಾದರು. ಅವರ ಕೈ ಶಕ್ತಿಹೀನವಾಯಿತು.

ಅರ್ಥ:
ಸಂಧಿಸು: ಕೂಡು, ಸೇರು; ಪಡೆ: ಸೈನ್ಯ, ಬಲ; ಹಿಂದೆ: ಹಿಂಭಾಗ; ನಿಲಿಸು: ತಡೆ; ವಿರೋಧ: ವೈರಿ, ಎದುರು ಪಡೆ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಅಂದವಳಿ: ವ್ಯಥೆಗೊಳ್ಳು; ಮುತ್ತು: ಆವರಿಸು; ಕಟ್ಟಳವಿ: ಘೋರ ಕಾಳಗ; ರಥ: ಬಂಡಿ; ಮುಂದುಗೆಡು: ದಾರಿಯನ್ನು ಕಾಣು; ಕೈಗುಂದು: ಶಕ್ತಿ ಕುಂದಿಹೋಗು; ಸೌಬಲ: ಶಕುನಿ; ನಂದನ: ಮಕ್ಕಳು; ಆದಿ: ಮುಂತಾದ; ಸಮಸ್ತ: ಎಲ್ಲಾ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಸಂಧಿಸಿತು +ಪಡೆ +ಚಿತ್ರಸೇನನ
ಹಿಂದೆ +ನಿಲಿಸಿ +ವಿರೋಧಿಶರ+ ಹತಿಗ್
ಅಂದವಳಿಯದೆ +ಮುತ್ತಿದುದು +ಕಟ್ಟಲವಿಯಲಿ +ರಥವ
ಮುಂದುಗೆಟ್ಟನು +ಕರ್ಣನ್+ಎನೆ+ ಕೈ
ಗುಂದಿದರು+ ಸೌಬಲ +ಸುಯೋಧನ
ನಂದನರು +ದುಶ್ಯಾಸನಾದಿ+ ಸಮಸ್ತ +ಪರಿವಾರ

ಅಚ್ಚರಿ:
(೧) ಮುಂದುಗೆಟ್ಟು, ಕೈಗುಂದು, ಹತಿಗಂದವಳಿ – ಪದಗಳ ಬಳಕೆ