ಪದ್ಯ ೧೪: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಹಂಗಿಸಿದನು?

ಅಂಗವಣೆಯೊಳ್ಳಿತು ಮಹಾದೇ
ವಂಗೆ ಮೊಗಸುವಡರಿದು ಮೊದಲಲಿ
ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ
ಭಂಗವಿಲ್ಲದೆ ಬಿದ್ದ ನಿಮ್ಮ
ಯ್ಯಂಗೆ ಹಳಿವನು ಹೊರಿಸದಿಹ ಮನ
ದಂಗವಣಿಯುಂಟಾಗೆ ಮೆಚ್ಚುವೆನೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ದ್ರೋಣನು ಪಾಂಡವರ ಸೈನ್ಯವನ್ನು ಕಂಡು, ಭಲೇ, ಚೆನ್ನಾಗಿ ಜೋಡಿಸಿಕೊಂಡು ಬಂದಿದ್ದೀರಿ, ಶಿವನೂ ನಿಮ್ಮನ್ನು ಇದಿರಿಸಲಾರ ಎನ್ನಿಸುತ್ತದೆ. ಆದರೆ ಸಿಂಹದಂತಹ ಒಂದು ಬಾಣ ನಿಮ್ಮ ಮೇಲೆ ಬಂದರೆ, ಓಟದಲ್ಲಿ ಮೊಲವನ್ನು ಮೀರಿಸುತ್ತೀರಿ, ನಿರಾಯಾಸವಾಗಿ ಸತ್ತು ನಿಮ್ಮ ತಂದೆಗೆ ಅಪಕೀರ್ತಿಯನ್ನು ತರದಂತೆ ಯುದ್ಧಮಾಡುವ ಇಚ್ಛೆ ನಿಮಗಿದ್ದರೆ ಆಗ ಮೆಚ್ಚುತ್ತೇನೆ ಎಂದು ದ್ರೋಣನು ಸೈನಿಕರನ್ನು ಹೀಯಾಳಿಸಿದನು.

ಅರ್ಥ:
ಅಂಗವಣೆ: ರೀತಿ, ಬಯಕೆ; ಒಳ್ಳಿತು: ಚೆನ್ನು; ಮೊಗಸು: ಬಯಕೆ, ಅಪೇಕ್ಷೆ; ಅರಿ: ತಿಳಿ; ಮೊದಲು: ಆದಿ; ಸಿಂಗ: ಸಿಂಹ; ಆಯತ: ವಿಸ್ತಾರ; ಅಂಬು: ಬಾಣ; ಸುಳಿ: ಆವರಿಸು, ಮುತ್ತು; ಮುಂಚು: ಮುಂದೆ; ಭಂಗ: ಮುರಿಯುವಿಕೆ; ಬಿದ್ದು: ಬೀಳು; ಅಯ್ಯ: ತಂದೆ; ಹಳಿ: ದೂಷಿಸು, ನಿಂದಿಸು; ಹೊರಿಸು: ಭಾರವನ್ನು ಹೊರುವಂತೆ ಮಾಡು; ಮನ: ಮನಸ್ಸು; ಮೆಚ್ಚು: ಒಲುಮೆ, ಪ್ರೀತಿ;

ಪದವಿಂಗಡಣೆ:
ಅಂಗವಣೆ+ಒಳ್ಳಿತು +ಮಹಾದೇ
ವಂಗೆ+ ಮೊಗಸುವಡ್+ಅರಿದು+ ಮೊದಲಲಿ
ಸಿಂಗದ್+ಆಯತದ್+ಅಂಬು +ಸುಳಿದರೆ +ಮೊಲನ +ಮುಂಚುವಿರಿ
ಭಂಗವಿಲ್ಲದೆ +ಬಿದ್ದ +ನಿಮ್ಮ್
ಅಯ್ಯಂಗೆ+ಹಳಿವನು +ಹೊರಿಸದಿಹ+ ಮನದ್
ಅಂಗವಣಿ+ಉಂಟಾಗೆ +ಮೆಚ್ಚುವೆನೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಅಂಗವಣೆಯೊಳ್ಳಿತು ಮಹಾದೇವಂಗೆ ಮೊಗಸುವಡರಿದು; ಸಿಂಗದಾಯತದಂಬು ಸುಳಿದರೆ ಮೊಲನ ಮುಂಚುವಿರಿ

ಪದ್ಯ ೧೨: ಭೀಮನು ಧರ್ಮಜನಿಗೆ ಏನೆಂದು ಹೇಳಿದನು?

ತಮ್ಮ ಸಂಕಟಕಿವರು ವಿನಯವ
ನೆಮ್ಮಿ ಬಿನ್ನಹ ಮಾಡುತಿರ್ದೊಡೆ
ನಿಮ್ಮಡಿಗೆ ಪರಿತೋಷವೇ ಕರ್ತವ್ಯ ವಿಷಯದಲಿ
ಎಮ್ಮಮನ ಮುಂಚುವುದು ಕಾರ್ಯದ
ಹಮ್ಮುಗೆಯ ನೀವರಿಯಿರೇ ತಮ
ತಮ್ಮ ದುಷ್ಕೃತ ತಮಗೆ ಫಲಿಸಿದರೇನು ನಿಮಗೆಂದ (ಅರಣ್ಯ ಪರ್ವ, ೨೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿದ ಭೀಮನು, ಅಣ್ಣಾ ಭಾನುಮತಿಯಾದಿಯಾಗಿ ಇವರೆಲ್ಲರೂ ಸಂಕಟ ಒದಗಿದಾಗ ನಿಮ್ಮಲ್ಲಿ ವಿನಯದಿಂದ ಬಂದು ಸಹಾಯ ಕೇಳುತ್ತಿದ್ದಾರೆ. ಇದು ನಿಮಗೆ ಸಂತೋಷ ತಂದೀತೇ? ಇದು ನನ್ನ ಕರ್ತವ್ಯ ಪರಧಿಯಲ್ಲಿ ಬಂದಿದ್ದರೆ ನಾನೆ ಮುಂದೆ ಬಿದ್ದು ಹೋಗುತ್ತಿದ್ದೆ. ಅವರು ಮಾಡಿದ ಕರ್ಮ ಅವರಿಗೇ ಫಲ ಕೊಡುತ್ತದೆ. ನಿಮಗೆ ಇದರಲ್ಲಿ ಯಾವ ಸಂಬಂಧ ಎಂದು ಭೀಮನು ಪ್ರಶ್ನಿಸಿದನು.

ಅರ್ಥ:
ಸಂಕಟ: ತೊಂದರೆ; ವಿನಯ: ಸೌಜನ್ಯ; ಬಿನ್ನಹ: ಕೋರಿಕೆ; ಅಡಿ: ಪಾದ; ಪರಿತೋಷ: ಅತಿಯಾದ ಆನಂದ; ಕರ್ತವ್ಯ: ಕೆಲಸ; ವಿಷಯ:ವಿಚಾರ, ಸಂಗತಿ; ಮನ: ಮನಸ್ಸು; ಮುಂಚು: ಮೊದಲು, ಮುಂದು; ಕಾರ್ಯ: ಕೆಲಸ; ಹಮ್ಮುಗೆ: ಕಟ್ಟು, ಬಂಧನ; ಅರಿ: ತಿಳಿ; ದುಷ್ಕೃತ: ಕೆಟ್ಟ ಕೆಲಸ; ಫಲ: ಪರಿಣಾಮ;

ಪದವಿಂಗಡಣೆ:
ತಮ್ಮ +ಸಂಕಟಕ್+ಇವರು +ವಿನಯವ
ನೆಮ್ಮಿ+ ಬಿನ್ನಹ +ಮಾಡುತಿರ್ದೊಡೆ
ನಿಮ್ಮಡಿಗೆ +ಪರಿತೋಷವೇ +ಕರ್ತವ್ಯ +ವಿಷಯದಲಿ
ಎಮ್ಮ+ಮನ +ಮುಂಚುವುದು +ಕಾರ್ಯದ
ಹಮ್ಮುಗೆಯ+ ನೀವ್+ಅರಿಯಿರೇ +ತಮ
ತಮ್ಮ +ದುಷ್ಕೃತ +ತಮಗೆ+ ಫಲಿಸಿದರೇನು +ನಿಮಗೆಂದ

ಅಚ್ಚರಿ:
(೧) ತಮ್ಮ – ೧,೬ ಸಾಲಿನ ಮೊದಲ ಪದ
(೨) ಭೀಮನ ಕರ್ತವ್ಯ ಪ್ರಜ್ಞೆ – ಕರ್ತವ್ಯ ವಿಷಯದಲಿ ಎಮ್ಮಮನ ಮುಂಚುವುದು ಕಾರ್ಯದ
ಹಮ್ಮುಗೆಯ

ಪದ್ಯ ೧೦: ಕರ್ಣಾರ್ಜುನರ ಯುದ್ಧದ ವೇಗೆ ಹೇಗಿತ್ತು?

ಮುಂಚುವುದು ಕೈಮನವ ಕೈಮೆಯ
ಸಂಚವನು ಮನ ಮುಂಚುವುದು ಮಿಗೆ
ವಂಚಿಸುವುದಂಬುಗಳ ಗತಿ ಕೈಮನದ ಕಲುಹೆಗಳ
ಮುಂಚಿದಂಬುಗಳಾರನೇಳನು
ಹಿಂಚಿದವು ಹೊಂಬರಹದಂಬಿನ
ಮಿಂಚುಗಳಲೆವೆ ಹಳಚಿದವು ಹರಿಹರ ಪುರಂದರರ (ಕರ್ಣ ಪರ್ವ, ೨೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇಬ್ಬರೂ ವೀರರ ಮನಸ್ಸನ್ನು ಒಮ್ಮೆ ಕೈಯೆಸೆತ ಮೀರುವುದು, ಕೈಚಳಕವನ್ನು ಮನಸ್ಸು ಮೀರಿ ಮುಂದುವರಿಯುವುದು, ಕೈಮನಸ್ಸುಗಳ ವೇಗವನ್ನು ಬಾಣಗಳ ವೇಗ ಮೀರಿಸುತ್ತಿತ್ತು. ಮುಂದು ಹೋಗುವ ಆರೇಳು ಬಾಣಗಳನ್ನು ಹಿಂದಿನಿಂದ ಬಿಟ್ಟ ಬಂಗಾರದ ರೇಖೆಯ ಅಂಬುಗಳು ಮೀರಿ ಹೋದವು. ಈ ಅಂಬುಗಳ ಗಮನವನ್ನು ತ್ರಿಮೂರ್ತಿಗಳೇ ಕಷ್ಟಪಟ್ಟು ಗುರುತಿಸಿದರು.

ಅರ್ಥ:
ಮುಂಚು: ಮುಂದೆ; ಕೈ: ಕರ; ಮನ: ಮನಸ್ಸು; ಸಂಚ: ಹಿಡಿತ, ವಶ; ಮಿಗೆ: ಮತ್ತು, ಅಧಿಕವಾದ; ವಂಚಿಸು: ಮೋಸಮಾಡು; ಅಂಬು: ಬಾಣ; ಗತಿ: ವೇಗ; ಕಲುಹೆ: ಜ್ಞಾನ; ಅಂಬು: ಬಾಣ; ಹಿಂಚೆ: ಹಿಂಬದಿ; ಹೊಂಬರ: ಚಿನ್ನದ; ಮಿಂಚು: ಹೊಳಪು, ಕಾಂತಿ; ಹಳಚು: ತಾಗು, ಬಡಿ; ಹರಿ: ವಿಷ್ಣು; ಹರ: ಶಿವ; ಪುರಂದರ: ಇಂದ್ರ;

ಪದವಿಂಗಡಣೆ:
ಮುಂಚುವುದು+ ಕೈ+ಮನವ+ ಕೈ+ಮೆಯ
ಸಂಚವನು +ಮನ +ಮುಂಚುವುದು +ಮಿಗೆ
ವಂಚಿಸುವುದ್+ಅಂಬುಗಳ +ಗತಿ +ಕೈ+ಮನದ+ ಕಲುಹೆಗಳ
ಮುಂಚಿದ್+ಅಂಬುಗಳ್+ಆರನ್+ಏಳನು
ಹಿಂಚಿದವು +ಹೊಂಬರಹದ್+ಅಂಬಿನ
ಮಿಂಚುಗಳಲೆವೆ+ ಹಳಚಿದವು +ಹರಿಹರ+ ಪುರಂದರರ

ಅಚ್ಚರಿ:
(೧) ಯುದ್ಧದ ಗತಿಯನ್ನು ವಿವರಿಸುವ ಕವಿಯ ಕಲ್ಪನೆ