ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೧೧: ಭೀಮನು ಏನು ಹೇಳಿ ಮುನ್ನುಗ್ಗಿದನು?

ನಿಲ್ಲು ಕಳಶಜ ತಪ್ಪಿದವ ನಾ
ನಲ್ಲ ಫಲುಗುಣ ಸಾತ್ಯಕಿಯವೋ
ಲಿಲ್ಲ ತನ್ನಲಿ ವಿನಯ ಹಾರದಿರಿಲ್ಲಿ ಮನ್ನಣೆಯ
ಬಿಲ್ಲ ಗುರುವಿನ ಬಿಂಕ ಬಯಲಾ
ಯ್ತಿಲ್ಲಿಯೆಂಬಪಕೀರ್ತಿ ಹೊರುವುದು
ಬಲ್ಲೆನೆನುತುರವಣಿಸಿದನು ಮುಂಗೈಯ ಮರೆವಿಡಿದು (ದ್ರೋಣ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ಉತ್ತರಿಸುತ್ತಾ, ಎಲೈ ಅಚಾರ್ಯರೇ, ನಿಲ್ಲಿ, ನನ್ನಲ್ಲಿ ತಪ್ಪಿಲ್ಲ. ಅರ್ಜುನ, ಸಾತ್ಯಕಿಯರಂತೆ ನನ್ನಲ್ಲಿ ವಿನ್ಯಗವಿಲ್ಲ. ನನ್ನಿಂದ ಗೌರವವನ್ನು ಬಯಸಬೇಡಿ, ಬಿಲ್ಲ ಗುರುವಿನ ನಿಮಗೆ ಹಿರಿಮೆ ಇಲ್ಲಿ ಬಯಲಾಯಿತು, ಎಂಬ ಅಪಕೀರ್ತಿ ನಿಮಗೆ ಬರುತ್ತದೆಂದು ನನಗೆ ತಿಳಿದಿದೆ, ಎನ್ನುತ್ತಾ ದ್ರೋಣನ ಬಾಣಗಳಿಗೆ ಅಡ್ಡವಾಗಿ ಮುಂಗೈಯನ್ನು ಹಿಡಿದು ನುಗ್ಗಿದನು.

ಅರ್ಥ:
ನಿಲ್ಲು: ತಡೆ; ಕಳಶಜ: ದ್ರೋಣ; ತಪ್ಪು: ಸರಿಯಿಲ್ಲದ್ದು; ವಿನಯ: ಸಜ್ಜನಿಕೆ; ಹಾರುವ: ಬ್ರಾಹ್ಮಣ; ಮನ್ನಣೆ: ಗೌರವ; ಬಿಲ್ಲು: ಚಾಪ; ಗುರು: ಆಚಾರ್ಯ; ಬಿಂಕ: ಗರ್ವ, ಜಂಬ; ಬಯಲಾಗು: ಗೊತ್ತುಪಡಿಸು; ಅಪಕೀರ್ತಿ: ಅಪಯಶಸ್ಸು; ಹೊರು:ಭಾರ; ಬಲ್ಲೆ: ತಿಳಿ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಮುಂಗೈ: ಹಸ್ತದ ಮುಂಭಾಗ; ಮರೆವಿಡು: ಆಶ್ರಯ ತೆಗೆದುಕೋ;

ಪದವಿಂಗಡಣೆ:
ನಿಲ್ಲು +ಕಳಶಜ +ತಪ್ಪಿದವ+ ನಾ
ನಲ್ಲ +ಫಲುಗುಣ +ಸಾತ್ಯಕಿಯವೋಲ್
ಇಲ್ಲ +ತನ್ನಲಿ +ವಿನಯ +ಹಾರದಿರಿಲ್ಲಿ+ ಮನ್ನಣೆಯ
ಬಿಲ್ಲ +ಗುರುವಿನ +ಬಿಂಕ +ಬಯಲಾ
ಯ್ತಿಲ್ಲಿ+ಎಂಬ್+ಅಪಕೀರ್ತಿ +ಹೊರುವುದು
ಬಲ್ಲೆನ್+ಎನುತ್+ಉರವಣಿಸಿದನು +ಮುಂಗೈಯ +ಮರೆವಿಡಿದು

ಅಚ್ಚರಿ:
(೧) ದ್ರೋಣರನ್ನು ಕಳಶಜ ಎಂದು ಕರೆದಿರುವುದು
(೨) ಭೀಮನು ತನ್ನ ಗುಣವನ್ನು ತಿಳಿಸಿದ ಪರಿ – ತನ್ನಲಿ ವಿನಯ ಹಾರದಿರಿಲ್ಲಿ

ಪದ್ಯ ೫೫: ಅಭಿಮನ್ಯುವು ಗಾಲಿಯಿಂದ ಹೇಗೆ ಯುದ್ಧ ಮಾಡಿದನು?

ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ (ದ್ರೋಣ ಪರ್ವ, ೬ ಸಂಧಿ, ೫೫ ಪದ್ಯ)

ತಾತ್ಪರ್ಯ:
ಸುರಿಯುತ್ತಿದ್ದ ರಕ್ತವನ್ನು ಸೆರಗಿನಿಂದ ಒರೆಸಿಕೊಂಡು ಕಾಲಿನಿಂದ ತನ್ನ ರಥದ ಗಾಲಿಗಳನ್ನು ಒದೆದು, ಗಾಲಿಯನ್ನು ಮುಂಗೈಯಲ್ಲಿ ತೆಗೆದುಕೊಂಡು ಶತ್ರುಬಲವನ್ನು ಅಪ್ಪಳಿಸಲು ಆನೆ, ಕುದುರೆ, ಯೋಧರು ಕೆಳಗುರುಳಿ ಹೊರಳಿದರು.

ಅರ್ಥ:
ಸುರಿ: ಬೀಳುವ, ವರ್ಷ; ರಕುತ: ನೆತ್ತರು; ಸರಿ: ಹೋಗು, ಗಮಿಸು; ಸೆರಗು: ಬಟ್ಟೆ; ಒರಸು: ಸಾರಿಸು, ಅಳಿಸು; ರಥ: ಬಂಡಿ; ಅಚ್ಚು: ಚಕ್ರ; ಒದೆ: ತಳ್ಳು; ತಿರುಹಿ: ತಿರುಗಿಸು; ಗಾಲಿ: ಚಕ್ರ; ತೆಗೆ: ಹೊರತರು; ಮುಂಗೈ: ಹಸ್ತ; ಕೈಕೊಂಡು: ಧರಿಸು; ನಡೆ: ಚಲಿಸು; ಅರಿ: ವೈರಿ; ಬಲ: ಸೈನ್ಯ; ಮುಗ್ಗು: ಮುನ್ನುಗ್ಗು; ಕೆಡೆ: ಬೀಳು, ಕುಸಿ; ತುರಗ: ಅಶ್ವ; ಇಭ: ಆನೆ; ತತಿ: ಗುಂಪು; ಉರುಳು: ಬೀಳು; ಹೊರಳು: ತಿರುವು, ಬಾಗು; ಹೂಣಿಗ:ಬಾಣವನ್ನು ಹೂಡುವವನು, ಬಿಲ್ಲುಗಾರ; ಸಮರ: ಯುದ್ಧ; ಅಟ್ಟು: ಓಡಿಸು;

ಪದವಿಂಗಡಣೆ:
ಸುರಿವ +ರಕುತದ +ಸರಿಯ +ಸೆರಗಿನೊಳ್
ಒರಸಿ +ರಥದ್+ಅಚ್ಚುಗಳನ್+ಒದೆದನು
ತಿರುಹಿ +ಗಾಲಿಯ +ತೆಗೆದು +ಮುಂಗೈಗೊಂಡು +ನಡೆನಡೆದು
ಅರಿಬಲವನಿಡೆ +ಮುಗ್ಗಿ +ಕೆಡೆದುದು
ತುರಗವ+ಜಿಗಿಜಿಯಾದುದ್+ಇಭ +ತತಿ
ಉರುಳಿದವು +ಹೊರಳಿದವು +ಹೂಣಿಗರಟ್ಟೆ+ ಸಮರದಲಿ

ಅಚ್ಚರಿ:
(೧) ಅಭಿಮನ್ಯುವಿನ ಶೌರ್ಯದ ಪರಾಕಾಷ್ಟೆ – ರಥದಚ್ಚುಗಳನೊದೆದನು ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
(೨) ಉರುಳಿದವು, ಹೊರಳಿದವು – ಪ್ರಾಸ ಪದಗಳು

ಪದ್ಯ ೧೨: ಬಿಲ್ಲುಗಾರರು ಹೇಗೆ ಯುದ್ಧಕ್ಕೆ ಮುಂದಾದರು?

ಪುಲಿದೊಗಲ ಸೀಸಕದ ಕಿಗ್ಗ
ಟ್ಟೊಲೆವ ಸುರಗಿಯ ಕಾಂಚಿದೋಳರೆ
ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ
ಬಲಿದ ಮುಂಗೈಹೊದೆಯ ಬಿರುದಿನೊ
ಳುಲಿವ ಘಂಟೆಯ ಬೆನ್ನಲೆವ ಬ
ತ್ತಳಿಕೆಗಳಲೈದಿತ್ತು ಬಿಲ್ಲಾಳುಭಯಸೇನೆಯಲಿ (ಭೀಷ್ಮ ಪರ್ವ, ೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ಹುಲಿಯ ಚರ್ಮದ ಶಿರಸ್ತ್ರಾಣ, ಸೋಂಟದಲ್ಲಿ ಜೋಲಾಡುವ ಸುರಗಿ, ಸೊಂಟಕ್ಕೆ ಕಟ್ಟಿದ ಹಗ್ಗದಲ್ಲಿ ಸೇರಿದ ಬಿಗಿಮಾಡಿದ ಹೆದೆ, ಕೈಯಲ್ಲಿ ಹಿಡಿದ ಬಾಣಗಳು, ಮುಂಗೈಯಲ್ಲಿ ತೊಟ್ಟ ಬಿರುದಿನ ಗಂಟೆ, ಬೆನ್ನಲ್ಲಿರುವ ಬತ್ತಳಿಕೆಗಳ ಬಿಲ್ಲುಗಾರರು ಉಭಯ ಸೇನೆಗಳಲ್ಲೂ ಯುದ್ಧಕ್ಕೆ ಮುಂದಾದರು.

ಅರ್ಥ:
ಪುಲಿ: ಹುಲಿ; ದೊಗಲು: ಚರ್ಮ; ಸೀಸಕ: ಶಿರಸ್ತ್ರಾಣ; ಕಿಗ್ಗಟ್ಟು: ಕೆಳಭಾಗದ ಕಟ್ಟು; ಸುರಗಿ: ಸಣ್ಣ ಕತ್ತಿ, ಚೂರಿ; ಕಾಂಚನ: ಚಿನ್ನ; ಬಲಿದ: ಗಟ್ಟಿಯಾದ; ಬಿಲ್ಲು: ಚಾಪ; ತಿರುವು: ಬಿಲ್ಲಿನ ಹಗ್ಗ; ಬೆರಳು: ಅಂಗುಲಿ ಕೋಲು: ಬಾಣ; ಮುಂಗೈ: ಹಸ್ತ; ಬಿರು: ಗಟ್ಟಿಯಾದುದು; ಉಲಿ: ಶಬ್ದ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಐದು: ಬಂದು ಸೇರು; ಬಿಲ್ಲಾಳು: ಬಿಲ್ಲುಗಾರ; ಉಭಯ: ಎರಡು; ಸೇನೆ: ಸೈನ್ಯ; ಬೆನ್ನು: ಹಿಂಭಾಗ;

ಪದವಿಂಗಡಣೆ:
ಪುಲಿದೊಗಲ +ಸೀಸಕದ +ಕಿಗ್ಗ
ಟ್ಟೊಲೆವ +ಸುರಗಿಯ+ ಕಾಂಚಿದೋಳ್+ಅರೆ
ಬಲಿದ+ ಬಿಲ್ಲಿಂ+ ಬಿಗಿದ+ ತಿರುವಿನ +ಬೆರಳ +ಕೋಲುಗಳ
ಬಲಿದ +ಮುಂಗೈ+ಹೊದೆಯ +ಬಿರುದಿನೊಳ್
ಉಲಿವ +ಘಂಟೆಯ +ಬೆನ್ನಲೆವ +ಬ
ತ್ತಳಿಕೆಗಳಲ್+ಐದಿತ್ತು+ ಬಿಲ್ಲಾಳ್+ಉಭಯ+ಸೇನೆಯಲಿ

ಅಚ್ಚರಿ:
(೧) ಬಿಲ್ಲುಗಾರರ ಸೊಬಗು – ಕಾಂಚಿದೋಳರೆ ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ

ಪದ್ಯ ೪೫: ಭೀಮ ದುಶ್ಯಾಸನರ ಯುದ್ಧವನ್ನು ಕಂಡ ದೇವತೆಗಳು ಏನೆಂದರು?

ಮೈಗೆ ಮೇಣದ ಹಾಹೆ ಸರಿ ಮುಂ
ಗೈಗೆ ಮೇರುವಿನಿರವು ದೊರೆ ಹೊರ
ಕೈಗೆ ವಜ್ರದ ಹೊಯ್ಲು ಪಡಿಘಟ್ಟಣೆ ಮಹಾದೇವ
ಕೈಗಡಿಯ ಪಟುಭಟರೊಳಗೆ ಬಲು
ಗೈಗಳೆಂದಮರಾಳಿ ಹೊಗಳಲು
ಹೊಯ್ಗುಲಿನ ಹೊಸನಾಟಕವನಭಿನಯಿಸಿ ಕಾದಿದರು (ಕರ್ಣ ಪರ್ವ, ೧೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಇವರು ಮೈಗಳು ಮೇಣದ ಗೊಂಬೆಗಳು, ಮುಂಗೈಗಳು ಮೇರುವಿನಂತೆ, ಹೊಡೆತ ಮರು ಹೊಡೆತಗಳು ವಜ್ರದ ಹೊಡೆತಗಳು ಶಿವ ಶಿವಾ, ಮುಷ್ಟಿ ಯುದ್ಧದ ಜಟ್ಟಿಗಳಲ್ಲಿ ಇವರು ಅತ್ಯುನ್ನತರು, ಎಂದು ದೇವತೆಗಳು ಹೊಗಳಲು ಭೀಮ ದುಶ್ಯಾಸನರು ಒಬ್ಬರೊಡನೊಬ್ಬರು ಹೊಯ್ದಾಡಿದರು.

ಅರ್ಥ:
ಮೈ: ತನು, ಶರೀರ; ಮೇಣ: ಅರಗು, ಲಾಕ್ಷ; ಹಾಹೆ: ಗೊಂಬೆ, ಪುತ್ತಳಿ; ಸರಿ: ಸಮಾನ, ಸದೃಶ, ಸಾಟಿ; ಮುಂಗೈ: ಹಸ್ತ; ಮೇರು: ಪರ್ವತದ ಹೆಸರು; ದೊರೆ: ಹಿರಿಮೆ, ಯೋಗ್ಯತೆ; ಹೊರಕೈ: ಮುಷ್ಟಿ; ವಜ್ರ: ಗಟ್ಟಿಯಾದ; ಹೊಯ್ಲು: ಹೊಡೆತ; ಪಡಿಗಟ್ಟು: ಎದುರಾಗು; ಕೈಗಡಿಯ: ಶೂರ; ಪಟುಭಟ: ಪರಾಕ್ರಮಿ; ಬಲುಗೈ: ಉತ್ತಮ; ಅಮರಾಳಿ: ದೇವತೆಗಳ ಗುಂಪು; ಹೊಗಳು: ಸ್ತುತಿ, ಕೊಂಡಾಟ; ಹೊಯ್ಗಳು: ಹೊಡೆತಗಳು; ಹೊಸ: ನವೀನ; ನಾಟಕ: ಪ್ರದರ್ಶನ; ಅಭಿನಯಿಸು: ನಟಿಸು; ಕಾದಿ: ಹೊಡೆ, ಹೋರಾಡು;

ಪದವಿಂಗಡಣೆ:
ಮೈಗೆ +ಮೇಣದ +ಹಾಹೆ +ಸರಿ +ಮುಂ
ಗೈಗೆ +ಮೇರುವಿನ್+ಇರವು +ದೊರೆ +ಹೊರ
ಕೈಗೆ +ವಜ್ರದ +ಹೊಯ್ಲು +ಪಡಿಘಟ್ಟಣೆ +ಮಹಾದೇವ
ಕೈಗಡಿಯ +ಪಟುಭಟರೊಳಗೆ +ಬಲು
ಗೈಗಳ್+ಎಂದ್+ಅಮರಾಳಿ +ಹೊಗಳಲು
ಹೊಯ್ಗುಲಿನ+ ಹೊಸನಾಟಕವನ್+ಅಭಿನಯಿಸಿ +ಕಾದಿದರು

ಅಚ್ಚರಿ:
(೧) ಯುದ್ಧವನ್ನು ನಾಟಕಕ್ಕೆ ಹೋಲಿಸಿ ಅವರ ವರಸೆಗಳನ್ನು ಅಭಿನಯಿಸುವಂತೆ ಕಂಡ ಕವಿ
(೨) ಮುಂಗೈ, ಹೊರಕೈ, ಬಲುಗೈ – ಪ್ರಾಸ ಪದಗಳ ಪ್ರಯೋಗ